Google Turns 25: ಸರ್ಚ್‌ ಇಂಜಿನ್ ದಿಗ್ಗಜ ಕಂಪನಿ ಗೂಗಲ್‌ಗೆ ಇಂದು 25ನೇ ಹುಟ್ಟುಹಬ್ಬ, ಇಲ್ಲಿದೆ ಒಂದು ಹಿನ್ನೋಟ-technology news google doodle celebrates 25th birthday today sundar pichai origin of google explained in kannada uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Google Turns 25: ಸರ್ಚ್‌ ಇಂಜಿನ್ ದಿಗ್ಗಜ ಕಂಪನಿ ಗೂಗಲ್‌ಗೆ ಇಂದು 25ನೇ ಹುಟ್ಟುಹಬ್ಬ, ಇಲ್ಲಿದೆ ಒಂದು ಹಿನ್ನೋಟ

Google Turns 25: ಸರ್ಚ್‌ ಇಂಜಿನ್ ದಿಗ್ಗಜ ಕಂಪನಿ ಗೂಗಲ್‌ಗೆ ಇಂದು 25ನೇ ಹುಟ್ಟುಹಬ್ಬ, ಇಲ್ಲಿದೆ ಒಂದು ಹಿನ್ನೋಟ

ಗೂಗಲ್‌ ಸರ್ಚ್ ಇಂಜಿನ್‌ಗೆ ಇಂದು 25ನೇ ಹುಟ್ಟುಹಬ್ಬ. ಗೂಗಲ್‌ ಇಂದು ಬಹಳ ಜನಪ್ರಿಯ ಸರ್ಚ್‌ ಇಂಜಿನ್, ಉದ್ಯೋಗದಾತ ಕಂಪನಿ ಎಲ್ಲವೂ ಆಗಿದೆ. ಜನ ಜೀವನದ ಭಾಗವೇ ಆಗಿರುವ ಗೂಗಲ್‌ನ ಹುಟ್ಟು, ಏಷ್ಯಾ ಪೆಸಿಫಿಕ್ ಭಾಗದಲ್ಲಿ ಅದರ ಬೆಳವಣಿಗೆ ಕಿರು ಅವಲೋಕನ ಇಲ್ಲಿದೆ.

ಗೂಗಲ್ ತನ್ನ 25 ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್‌ನೊಂದಿಗೆ ಆಚರಿಸಿದೆ.
ಗೂಗಲ್ ತನ್ನ 25 ನೇ ಹುಟ್ಟುಹಬ್ಬವನ್ನು ವಿಶೇಷ ಡೂಡಲ್‌ನೊಂದಿಗೆ ಆಚರಿಸಿದೆ.

ಸರ್ಚ್‌ ಇಂಜಿನ್‌ ದಿಗ್ಗಜ ಕಂಪನಿ ಗೂಗಲ್‌ಗೆ ಇಂದು 25ನೇ ಹುಟ್ಟುಹಬ್ಬದ ಸಂಭ್ರಮ. ವಿಶೇಷ ಗೂಗಲ್ ಡೂಡಲ್ ಇದನ್ನು ಸ್ಮರಣೀಯವಾಗಿಸಿದ್ದು, 25 ವರ್ಷಗಳ ಅವಧಿಯಲ್ಲಾದ ಬದಲಾವಣೆಗಳನ್ನು ಬಿಂಬಿಸಿದೆ. ಗೂಗಲ್‌ ಭವಿಷ್ಯದ ಮೇಲೆ ಶಾಶ್ವತವಾಗಿ ಗಮನಹರಿಸುತ್ತ ಸಾಗಿದೆ. ಆದರೆ ಕಂಪನಿಯ ಪ್ರತಿ ವಾರ್ಷಿಕೋತ್ಸವವನ್ನು ಅದು ತನ್ನ ಸಾಧನೆಗಳನ್ನು ಬಿಂಬಿಸುವುದಕ್ಕೆ ಇರುವ ಅವಕಾಶವನ್ನಾಗಿ ಬಳಸಿಕೊಂಡು ಬಂದಿದೆ.

ಗೂಗಲ್‌ ಮತ್ತು ಆಲ್ಫಾಬೆಟ್‌ ಕಂಪನಿಯ ಸಿಇಒ ಸುಂದರ್ ಪಿಚೈ ಅವರು ಗೂಗಲ್‌ಗೆ ಹ್ಯಾಪಿ ಬರ್ತ್‌ಡೇ ವಿಶ್ ಮಾಡಿದ್ದಾರೆ. ನಮ್ಮ ಉತ್ಪನ್ನಗಳನ್ನು ಬಳಸುತ್ತಿರುವ ಮತ್ತು ನವೋನ್ವೇಷಣೆಯಲ್ಲಿ ನಮ್ಮನ್ನು ತೊಡಗಿಸುವಂತೆ ಮಾಡುತ್ತಿರುವ ಎಲ್ಲ ಗೂಗ್ಲರ್‌ಗಳು ಸೇರಿ ಎಲ್ಲರಿಗೂ ಧನ್ಯವಾದಗಳು ಎಂದು ಸುಂದರ್ ಪಿಚೈ ಎಕ್ಸ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಜತೆಗೆ ಒಂದು ಜಿಫ್ ಫೈಲ್ ಅನ್ನು ಶೇರ್ ಮಾಡಿದ್ದು ಅದರಲ್ಲಿ ಸುಂದರ ಗೂಗಲ್ ಡೂಡ್ಲರ್ ಇದೆ.

ಗೂಗಲ್‌ ಎಂಬ ಸರ್ಚ್‌ ಇಂಜಿನ್‌ನ ಹುಟ್ಟು

ಡಾಕ್ಟರಲ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ 1990 ರ ದಶಕದ ಉತ್ತರಾರ್ಧದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್‌ ಪ್ರೋಗ್ರಾಂ ಕಲಿಯುತ್ತಿರುವಾಗ ಪರಸ್ಪರ ಪರಿಚಿತರಾದರು. ಇಬ್ಬರೂ ಒಂದೇ ದೃಷ್ಟಿಕೋನ ಹೊಂದಿದ ಕಾರಣ ಅದು ವರ್ಲ್ಡ್ ವೈಡ್ ವೆಬ್‌ನ ಪ್ರವೇಶವನ್ನು ಹೆಚ್ಚಿಸುವ ದಾರಿ ಪತ್ತೆಯನ್ನು ಸುಲಭ ಮಾಡಿತು. ಇಬ್ಬರೂ ತಮ್ಮ ಡಾರ್ಮೆಟರಿಯಲ್ಲಿ ದಣಿವರಿಯದೆ ಕೆಲಸ ಮಾಡಿದರು. ಉತ್ತಮ ಸರ್ಚ್ ಇಂಜಿನ್‌ನ ಮೂಲ ಮಾದರಿಯನ್ನು ರಚಿಸಿದರು. ಪ್ರಾಜೆಕ್ಟ್‌ನಲ್ಲಿ ಪ್ರಗತಿ ಹೆಚ್ಚಾದಂತೆ ತಮ್ಮ ಕಾರ್ಯಾಚರಣೆಯನ್ನು ಬಾಡಿಗೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರು. ಅದು ಗೂಗಲ್‌ನ ಮೊದಲ ಕಚೇರಿ ಕಟ್ಟಡವಾಯಿತು. 1998ರ ಸೆಪ್ಟೆಂಬರ್ 27ರಂದು ಗೂಗಲ್‌ ಇಂಕ್ ಅನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.

1998ರಲ್ಲಿ ಆ ದಿನದಿಂದ, ಇಂದಿನ ಡೂಡಲ್‌ನಲ್ಲಿ ಸ್ಪಷ್ಟವಾಗಿ ಕಂಡುಬರುವಂತೆ, Google ನ ಲೋಗೋ ಸೇರಿ ಬಹಳಷ್ಟು ವಿಷಯಗಳು ವಿಕಸನಗೊಂಡಿದೆ. ಆದಾಗ್ಯೂ, ವಿಶ್ವದ ಮಾಹಿತಿಯನ್ನು ಸಂಘಟಿಸಲು ಮತ್ತು ಅದರ ಸಾರ್ವತ್ರಿಕ ಪ್ರವೇಶ ಮತ್ತು ಉಪಯುಕ್ತತೆಯನ್ನು ಖಚಿತಪಡಿಸಿಕೊಳ್ಳುವ ಯೋಜನೆ ಸ್ಥಿರವಾಗಿ ಮುಂದುವರಿದಿದೆ. ಇಂದಿಗೂ ಜಗತ್ತಿನಾದ್ಯಂತ ಶತಕೋಟಿ ಜನರು ಹುಡುಕಲು, ಸಂಪರ್ಕಿಸಲು, ಕೆಲಸ ಮಾಡಲು, ಆಟವಾಡಲು ಮತ್ತು ಹೆಚ್ಚಿನ ವಿಷಯಗಳಿಗಾಗಿ Google ಅನ್ನೇ ಅವಲಂಬಿಸಿದ್ದಾರೆ. ಈ ಡೂಡಲ್ ರಷ್ಯಾ ಸೇರಿ ಕೆಲವು ದೇಶಗಳನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಗೋಚರಿಸುತ್ತದೆ.

ಒಂದೇ ಭಾಷೆಯಲ್ಲಿ ಆರಂಭವಾಗಿದ್ದ ಗೂಗಲ್‌ ಸರ್ಚ್ ಇಂಜಿನ್ ಈಗ ಏಷ್ಯಾಪೆಸಿಫಿಕ್‌ನಲ್ಲಿ 40+ ಭಾಷೆಗಳಿಗೆ ವಿಸ್ತರಣೆ

1998ರಲ್ಲಿ ಇಂಗ್ಲಿಷ್ ಭಾಷೆಯ ಸರ್ಚ್‌ ಇಂಜಿನ್ ಆಗಿದ್ದ ಗೂಗಲ್ ಎರಡೇ ವರ್ಷದಲ್ಲಿ 14 ಭಾಷೆಗಳಿಗೆ ವಿಸ್ತರಣೆಯಾಗಿತ್ತು. ಈಗ ಏಷ್ಯಾಪೆಸಿಫಿಕ್‌ನಲ್ಲಿ 40+ ಭಾಷೆಗಳಲ್ಲಿ ಗೂಗಲ್ ಸರ್ಚ್‌ ಮಾಡುವುದಕ್ಕೆ ಸಾಧ್ಯವಿದೆ.

ಗೂಗಲ್ ಸರ್ಚ್‌ ಇಂಜಿನ್ 2000ನೇ ಇಸವಿಯಲ್ಲಿ ಜಪಾನೀಸ್, ಕೊರಿಯನ್, ಮತ್ತು ಸರಳೀಕೃತ ಮತ್ತು ಸಾಂಪ್ರದಾಯಿಕ ಚೈನೀಸ್ ಸೇರಿ 14 ಭಾಷೆಗಳಲ್ಲಿ ಕಾರ್ಯನಿರ್ವಹಿಸಲು ಶುರುಮಾಡಿತ್ತು. ಈ ವಿಸ್ತರಣೆಯೊಂದಿಗೆ, ಹೆಚ್ಚಿನ ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ವಿಷಯವನ್ನು ಹುಡುಕುವುದು ಸಾಧ್ಯವಾಗಿದೆ. ವಾಸ್ತವವಾಗಿ, ಈ ನಾಲ್ಕು ಏಷ್ಯನ್ ಭಾಷೆಗಳ ಸೇರ್ಪಡೆಯೊಂದಿಗೆ ಪ್ರಪಂಚದಾದ್ಯಂತದ ಇಂಟರ್ನೆಟ್ ಬಳಕೆದಾರು ಏಷ್ಯನ್ ಭಾಷೆಗಳಲ್ಲಿ 75 ಮಿಲಿಯನ್ ವೆಬ್ ಪುಟಗಳಿಗಾಗಿ ಹುಡುಕಾಟ ಲಭ್ಯವಾಯಿತು.

ಸರ್ಚ್‌ ಮಾಡುವುದಕ್ಕೆ ಹೊಸ ಮಾರ್ಗಗಳು

ಟೆಕ್ಸ್ಟ್‌ ಸರ್ಚ್‌ ಅಥವಾ ಪಠ್ಯ ಹುಟುಕಾಟದೊಂದಿಗೆ ಶುರುವಾದ ಗೂಗಲ್‌ ಸರ್ಚ್‌, ಕಾಲಾನುಕ್ರಮದಲ್ಲಿ ಅನೇಕ ಹೊಸತನ್ನು ಪರಿಚಯಿಸುತ್ತ ಬಂದಿದೆ. 2008ರಲ್ಲಿ ವಾಯ್ಸ್ ಸರ್ಚ್‌ ಅಥವಾ ಧ್ವನಿ ಹುಡುಕಾಟವನ್ನು ಪರಿಚಯಿಸಲಾಗಿದೆ. ಇದು ಬಳಕೆದಾರರ ಅನುಕೂಲವನ್ನು ಗಮನಿಸಿಯೇ ಜಾರಿಗೆ ತಂದ ಹೊಸತನವಾಗಿತ್ತು ಎಂದು ಕಂಪನಿ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಭಾರತದಲ್ಲಿ ಇದು ವಿಶೇಷವಾಗಿ ಜನಪ್ರಿಯವಾಗಿದೆ. ಪ್ರತಿ ದಿನ ಧ್ವನಿ ಹುಡುಕಾಟ ಪ್ರಶ್ನೆಗಳನ್ನು ಬಳಸುವ ಶೇಕಡಾವಾರು ಭಾರತೀಯರು ಜಾಗತಿಕ ಸರಾಸರಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ಇದೆ.

ಸರ್ಚ್‌ ರಿಸಲ್ಪಟ್‌ ಅಥವಾ ಹುಡುಕಾಟದ ಫಲಿತಾಂಶವನ್ನು ಕೇಳುವ ಮೂಲಕ ಅರ್ಥಮಾಡಿಕೊಳ್ಳುವ ಫೀಚರ್ ಅನ್ನು ಭಾರತದಲ್ಲೇ ಮೊದಲು ಪರಿಚಯಿಸಲಾಗಿದೆ. 2021ರಲ್ಲಿ ಈ ಫೀಚರ್‌ ಬಳಕೆದಾರರಿಗೆ ಸಿಕ್ಕಿದೆ. ಭಾರತೀಯರು ಹಿಂಗ್ಲಿಷ್‌ ಮತ್ತು ಐದು ಭಾರತೀಯ ಭಾಷೆಗಳಲ್ಲಿ ವಾಯ್ಸ್ ಸರ್ಚ್‌ ಮೂಲಕ ಹುಡುಕಾಟದ ಫಲಿತಾಂಶವನ್ನು ಆಲಿಸಬಹುದು. ಕ್ಯಾಮೆರಾ ಹಿಡಿದು ಸ್ಕ್ಯಾನ್ ಮಾಡಿದರೂ ಅದರ ಸರ್ಚ್‌ ಫಲಿತಾಂಶವನ್ನೂ ಈಗ ನೋಡಬಹುದಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಸೇರಿಸಿದ ಉತ್ಪನ್ನಗಳನ್ನು ಪರಿಚಯಿಸುವ ಕೆಲಸವನ್ನೂ ಮಾಡುತ್ತಿರುವುದಾಗಿ ಗೂಗಲ್‌ ಹೇಳಿಕೊಂಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.