Mobile Security: ಮೊಬೈಲ್ ಭದ್ರತೆ ಕುರಿತು ಆಲೋಚಿಸಿದ್ದೀರಾ, ಮೊಬೈಲ್ ಸಾಧನ ಸುರಕ್ಷತೆಗೆ 2023ರಲ್ಲಿ ಪಾಲಿಸಬೇಕಾದ ಅತ್ಯುತ್ತಮ ಅಭ್ಯಾಸಗಳಿವು
Mobile Device Security Best Practices: ಈಗ ಮೊಬೈಲ್ ಫೋನ್‌ನ ಭದ್ರತೆ ಕುರಿತು ಎಲ್ಲರೂ ಆಲೋಚಿಸುತ್ತಿದ್ದಾರೆ. ಮೊಬೈಲ್ ಭದ್ರತೆ ಎಂದರೆ ಮೊಬೈಲ್ ಕಳ್ಳರಿಂದ ಸ್ಮಾರ್ಟ್‌ಫೋನ್ ರಕ್ಷಣೆ ಮಾಡುವುದಲ್ಲ. ನಿಮ್ಮ ಮೊಬೈಲ್‌ನೊಳಗೆ ಕನ್ನ ಹಾಕುವ ಸೈಬರ್ ಖದೀಮರಿಂದ ಪಾರಾಗುವುದು.
ನಾವು ಡಿಜಿಟಲ್ ಜಗತ್ತಿನಲ್ಲಿದ್ದೇವೆ. ಇದು ಒಂದು ಸುಂದರ ಜಗತ್ತೂ ಹೌದು. ಹಾಗಂತ, ಮೈಮರೆಯುವಂತೆ ಇಲ್ಲ. ಇಲ್ಲಿ ಡಿಜಿಟಲ್ ಭದ್ರತೆಗೆ ಕನ್ನ ಹಾಕಲು ಖದೀಮರು ಕಾಯುತ್ತ ಇರುತ್ತಾರೆ. ನಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್ ಕೂಡ ನಮಗೆ ತಿಳಿಯದಂತೆ ಪತ್ತೆದಾರಿಕೆ ಮಾಡಬಹುದು ಎಂದು ಡಿಜಿಟಲ್ ಜಗತ್ತು ಅಂಕಣದಲ್ಲಿ ಈಗಾಗಲೇ ಓದಿರುವಿರಿ. ಸ್ಮಾರ್ಟ್‌ಫೋನ್‌ನಲ್ಲಿ ನಮ್ಮ ಮಾಹಿತಿ ಕಳ್ಳತನ ಮಾಡಿ ನಮಗೇ ಫ್ಲಿಪ್‌ಕಾರ್ಟ್, ಅಮೇಜಾನ್ ಆರ್ಡರ್ ಎಂದು ಫೋನ್ ಮಾಡಿ ನಮ್ಮ ಫೋನ್‌ಗೆ ಯಾವುದೋ ಲಿಂಕ್ ಕಳುಹಿಸಿ ನಮ್ಮ ಬ್ಯಾಂಕ್ ಖಾತೆಯನ್ನೂ ಖಾಲಿ ಮಾಡುವವರಿದ್ದಾರೆ. ನಮ್ಮ ಮೊಬೈಲ್ ಫೋನ್ ಅನ್ನು ನಮಗೆ ತಿಳಿಯದಂತೆ ಹಿಡಿತಕ್ಕೆ ತೆಗೆದುಕೊಳ್ಳುವುದು ನಿಜಕ್ಕೂ ಆತಂಕದ ವಿಷಯ. ಇಂತಹ ತೊಂದರೆಯಿಂದ ಪಾರಾಗಲು ಏನು ದಾರಿಯಿದೆ ಎಂದು ಡಿಜಿಟಲ್ ಜಗತ್ತಿನಲ್ಲಿ ಹುಡುಕುವವರಿಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಒಂದು ವಿಷಯ ನೆನಪಿಡಿ, ನಿಮ್ಮ ಮೊಬೈಲ್‌ಗೆ ಸೈಬರ್ ಕಳ್ಳರು ಕನ್ನ ಹಾಕಿದರೆ ನಿಮಗೆ ಮಾತ್ರ ತೊಂದರೆಯಾಗುವುದಲ್ಲ. ನಿಮ್ಮ ಬ್ಯಾಂಕ್ ಖಾತೆಗೆ ಮಾತ್ರ ಅಪಾಯವಾಗುವುದಲ್ಲ. ನೀವು ಕೆಲಸ ಮಾಡುವ ಕಂಪನಿಗೂ ತೊಂದರೆಯಾಗಬಹುದು. ನಿಮ್ಮ ಫೋನ್‌ನಲ್ಲಿ ನೀವು ಉದ್ಯೋಗ ಮಾಡುವ ಕಂಪನಿಯ ಲಾಗಿನ್‌ಗಳು, ಪ್ರಮುಖ ಮಾಹಿತಿಗಳು ಇರಬಹುದು. ಇದು ಕೂಡ ಸೈಬರ್ ಕಳ್ಳರ ಪಾಲಾಗಬಹುದು.
ಮೊಬೈಲ್ ಸಾಧನದ ಭದ್ರತೆಗೆ ಅತ್ಯುತ್ತಮ ಅಭ್ಯಾಸಗಳು (Mobile Device Security Best Practices) ಯಾವುದು ಇದೆ ಎಂದು ಎಲ್ಲರೂ ಹುಡುಕುತ್ತ ಇರುತ್ತಾರೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಓದುಗರು ಡಿಜಿಟಲ್ ಜಗತ್ತಿನಲ್ಲಿ ಸದಾ ಸುರಕ್ಷಿತವಾಗಿರಬೇಕೆಂಬ ಕಾಳಜಿಯಿಂದ ಮೊಬೈಲ್ ಸುರಕ್ಷತೆಗೆ 2023ರಲ್ಲಿ ಪಾಲಿಸಬೇಕಾದ ಅತ್ಯುತ್ತಮ ಅಭ್ಯಾಸಗಳ ವಿವರವನ್ನು ಆನ್‌ಲೈನ್‌ನಲ್ಲಿ ಹುಡುಕಿ ಇಲ್ಲಿ ನೀಡಲಾಗಿದೆ. ಅಂದರೆ, ಸೈಬರ್ ಭದ್ರತೆಗೆ ಸಂಬಂಧಪಟ್ಟಂತೆ ವಿವಿಧ ತಜ್ಞರು ನೀಡಿದ ಸಲಹೆಗಳ ಆಧಾರದಲ್ಲಿ ಆನ್‌ಲೈನ್‌ನಲ್ಲಿ ಈಗ "ಮೊಬೈಲ್ ಸುರಕ್ಷತೆಗೆ 2023ರಲ್ಲಿ ಪಾಲಿಸಬೇಕಾದ ಅತ್ಯುತ್ತಮ ಅಭ್ಯಾಸಗಳು" ಎಂದು ಖ್ಯಾತವಾದ ಈ ಸಲಹೆಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ.
ಬಳಕೆದಾರರ ದೃಢೀಕರಣ ಆನ್ ಮಾಡಿಡಿ
User Authentication ಎಂಬ ಫೀಚರ್ ಅನ್ನು ಎಲ್ಲರೂ ಈಗ ಬಳಸಬೇಕು. ಮೊಬೈಲ್ ಮಾತ್ರವಲ್ಲದೆ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳಲ್ಲಿಯೂ ಬಳಕೆದಾರರ ದೃಢೀಕರಣ ಆಯ್ಕೆಯನ್ನು ಸಕ್ರೀಯಗೊಳಿಸಿ. ನಿಮ್ಮ ಮೊಬೈಲ್‌ಗೆ ಸ್ಕ್ರೀನ್‌ಲಾಕ್ ಹಾಕಲು ಮರೆಯಬೇಡಿ. ಅದು ಪಾಸ್‌ವರ್ಡ್ ಅಥವಾ ಸ್ಕ್ರೀನ್‌ಲಾಕ್ ಆಧರಿತವಾಗಿರಲಿ. ಫೇಸ್ ಐಡಿ ಮತ್ತು ಟಚ್ ಐಡಿಯಂತಹ ಫೀಚರ್‌ಗಳನ್ನು ಬಳಸಿ. ಆದರೆ, ಈಗ ಇಷ್ಟು ಫೀಚರ್‌ಗಳು ಸಾಕಾಗುವುದಿಲ್ಲ. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ (multifactor authentication) ಆಯ್ಕೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇದು ನಿಮ್ಮ ಸಾಧನಕ್ಕೆ ಹೆಚ್ಚುವರಿ ಭದ್ರತಾ ಪದರವನ್ನು ನೀಡುತ್ತದೆ.
ಪಾಸ್‌ವರ್ಡ್ ಮ್ಯಾನೇಜರ್ ಬಳಕೆ
ನೀವು ಏನೋ ನೆನಪು ಮಾಡಿಕೊಂಡು ಪಾಸ್‌ವರ್ಡ್ ರಚಿಸುವಿರಿ. ನಿಮ್ಮ ಮಕ್ಕಳ ಹೆಸರೋ, ಗರ್ಲ್ ಫ್ರೆಂಡ್ ಹೆಸರೋ ಅದಕ್ಕೆ ಒಂದಿಷ್ಟು ಕಠಿಣ ಚಿಹ್ನೆಗಳನ್ನು ಹಾಕಿ ಸದೃಢ ಪಾಸ್‌ವರ್ಡ್ ಎಂದು ಬೀಗಬಹುದು. ಆದರೆ, ಆನ್‌ಲೈನ್‌ನಲ್ಲಿ ಪಾಸ್ವರ್ಡ್ ಮ್ಯಾನೇಜರ್ ಎಂಬ ಆಯ್ಕೆ ದೊರಕುತ್ತದೆ. ಅದು ನಿಮಗೆ ಕಠಿಣ ಪಾಸ್‌ವರ್ಡ್ ಸಿದ್ಧಪಡಿಸಿಕೊಡುತ್ತದೆ. ಅಂತಹ ಪಾಸ್‌ವರ್ಡ್ ಬಳಸಿ. ಜತೆಗೆ, ಆಗಾಗ ಹೊಸ ಪಾಸ್‌ವರ್ಡ್ ನೀಡುತ್ತ ಇರಿ. ಪಾಸ್‌ವರ್ಡ್ ತಿಂಗಳಿಗೆ ಎರಡು ಬಾರಿ ಚೇಂಜ್ ಮಾಡಿ.
ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್ ಮಾಡಿ
ನಿಮ್ಮ ಮೊಬೈಲ್‌ನ ಸೆಟ್ಟಿಂಗ್‌ಗೆ ಹೋಗಿ ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್ ಇದ್ದರೆ ಅಪ್‌ಡೇಟ್ ಮಾಡಿ. ಇದೇ ರೀತಿ ಮೊಬೈಲ್‌ನಲ್ಲಿರುವ ಆಪ್‌ಗಳು ಸದಾ ಅಪ್‌ಡೇಟ್ ಆಗಿರಲಿ. ಈ ರೀತಿ ಅಪ್‌ಡೇಟ್ ಆದ ಸಾಫ್ಟ್‌ವೇರ್ ಹೆಚ್ಚು ಸುರಕ್ಷಿತವಾಗಿರುತ್ತದೆ. ಮೊಬೈಲ್‌ನಲ್ಲಿ ಸ್ಟೋರೇಜ್ ಖಾಲಿಯಾಗುತ್ತದೆ ಎಂದು ಹಳೆಯ ಆಪ್‌ಗಳನ್ನು ಬಳಸುವ ಅಭ್ಯಾಸ ಬಿಟ್ಟುಬಿಡಿ. ಆಪ್‌ಗಳು ಅಪ್‌ಡೇಟ್ ಆದಷ್ಟು ಹೊಸ ಫೀಚರ್‌ಗಳು ದೊರಕುತ್ತದೆ, ಹೆಚ್ಚು ಸುರಕ್ಷಿತವಾಗಿರುತ್ತವೆ.
ಸಾರ್ವಜನಿಕ ವೈಫೈ ಬಳಸಿ
ಎಲ್ಲಾದರೂ ಕಾಫಿ ಶಾಪ್‌ಗೆ, ಏರ್‌ಪೋರ್ಟ್‌ಗೆ, ಹೋಟೆಲ್ ಲಾಬಿಗೆ ಹೋದಾಗ ಉಚಿತ ವೈಫೈ ಇರುವುದೇ ಎಂದು ಹುಡುಕುವಿರಿ. ಆದರೆ, ಈ ರೀತಿ ಮಾಡಬೇಡಿ, ಬೇಕಿದ್ದರೆ ನಿಮ್ಮ ಮೊಬೈಲ್‌ನಲ್ಲಿರುವ ಡೇಟಾವನ್ನೇ ಬಳಸಿ. ಉಚಿತ ವೈಫೈ ಮಾತ್ರ ಬಳಸಬೇಡಿ. ನೀವು ಈ ರೀತಿ ಬೇರೆ ಕಂಪನಿಯ ನೆಟ್‌ವರ್ಕ್‌ಗೆ ಕನೆಕ್ಟ್ ಆದಾಗ ಮಾಲ್‌ವೇರ್ ಮತ್ತು ಹ್ಯಾಕರ್‌ಗಳ ದಾಳಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.
ರಿಮೋಟ್ ಲಾಕ್ ಬಳಸಿ
ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಕಳೆದು ಹೋದಾಗ ಅದರಲ್ಲಿರುವ ಡೇಟಾವನ್ನು ಸುಲಭವಾಗಿ ಅಳಿಸಿ ಹಾಕುವಂತೆ ಇರಬೇಕು. ಇದಕ್ಕಾಗಿ ರಿಮೋಟ್ ಲಾಕ್ ಮತ್ತು ಡೇಟಾ ವೈಪ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ. ಮೊಬೈಲ್ ಕಳ್ಳತನವಾಗಿದೆ ಎಂದು ತಿಳಿದಾಗ ಗೂಗಲ್‌ನ ಫೈಂಡ್ ಮೈ ಫೋನ್ ವಿಭಾಗಕ್ಕೆ ಹೋಗಿ ಸೂಕ್ತ ಕ್ರಮ ಕೈಗೊಳ್ಳಿ. ಅಲ್ಲಿ ಫೋನ್ ಲಾಕ್ ಮಾಡುವ ಆಯ್ಕೆಯೂ ಇರುತ್ತದೆ.
ಸ್ನೇಹಿತರೇ ಇವಿಷ್ಟು ಟೆಕ್ ತಜ್ಞರು ನೀಡಿರುವಂತಹ ಸಲಹೆಗಳು. ಡಿಜಿಟಲ್ ಜಗತ್ತು ಅಂಕಣದಲ್ಲಿ ನನ್ನ ಅಭಿಪ್ರಾಯವೂ ಇದೇ. ಇದಕ್ಕೆ ಹೆಚ್ಚುವರಿಯಾಗಿ ನಾನೂ ಕೆಲವು ಕಿವಿಮಾತುಗಳನ್ನು ಹೇಳಲು ಬಯಸುವೆ.
- ಮನೆಯಲ್ಲಿ ಮಕ್ಕಳು ಮೊಬೈಲ್ ಬಳಸುತ್ತಿದ್ದರೆ ಅವರು ಡೌನ್‌ಲೋಡ್ ಮಾಡುವ ಆಪ್‌ಗಳ ಮೇಲೆ ನಿಗಾ ಇಡಿ. ಅವರು ಯೂಟ್ಯೂಬ್ ನೋಡುತ್ತ, ಗೇಮ್ ಬಳಸುತ್ತ ಇರುವಾಗ ಜಾಹೀರಾತಿನಲ್ಲಿ ಕಾಣಿಸುವ ಬೇರೆ ಆಪ್‌ಗಳನ್ನು ಡೌನ್‌ಲೋಡ್ ಮಾಡಿರಬಹುದು. ಅವರಿಗೆ ತಿಳಿಯದಂತೆ ಬೇರೆ ಆಪ್‌ಗಳು, ಸಾಫ್ಟ್‌ವೇರ್‌ಗಳು, ಮಾಲ್‌ವೇರ್‌ಗಳು ಇನ್‌ಸ್ಟಾಲ್ ಆಗಿರಬಹುದು. ದಿನಕ್ಕೆ ಒಮ್ಮೆ ನಿಮ್ಮ ಮೊಬೈಲ್‌ನ ಸೆಟ್ಟಿಂಗ್‌ನ ಆಪ್ಸ್ ವಿಭಾಗಕ್ಕೆ ಹೋಗಿ ಈ ರೀತಿ ಅನಧಿಕೃತ ಆಪ್‌ಗಳು ಇವೆಯೇ ಎಂದು ಹುಡುಕಿ. ಇದ್ದರೆ ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿ.
- ವಾಟ್ಸಪ್‌ನಲ್ಲಿ ಬರುವ ಅನಧಿಕೃತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಎಂದು ಈ ಹಿಂದೆಯೂ ಹಲವು ಬಾರಿ ಹೇಳಿದ್ದೇನೆ. ಹೀಗಿದ್ದರೂ ಹಲವು ಲಿಂಕ್‌ಗಳು ಈಗಲೂ ವಾಟ್ಸಪ್‌ನಲ್ಲಿ ಹರಿದಾಡುತ್ತಿರುವುದರಿಂದ ಇನ್ನೊಮ್ಮೆ ಹೇಳುವೆ, "ದಯವಿಟ್ಟು ವಾಟ್ಸಪ್‌ನಲ್ಲಿ ಐಫೋನ್ ಗೆಲ್ಲಿರಿ, ಸ್ಪಿನ್ ಮಾಡಿ ಗೆಲುವು ಪಡೆಯಿರಿ" ಇತ್ಯಾದಿ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ಯಾರಾದರೂ ಒಟಿಪಿ ಕೇಳಿದರೆ ನೀಡಬೇಡಿ. ಇದೇ ರೀತಿ ನಿಮಗೆ ಯಾರಾದರೂ ಮೊಬೈಲ್‌ನಲ್ಲಿ ಅಪರಿಚಿತರು ಅನುಮಾನಸ್ಪದವಾಗಿ ವರ್ತಿಸುವುದು ಕಂಡರೆ ಅಂತವರ ಜತೆ ವ್ಯವಹಾರ ಮುಂದುವರೆಸಬೇಡಿ. ಒಂದು ಲಿಂಕ್ ಕಳುಹಿಸುವೆ, ಅಲ್ಲಿ ನಿಮ್ಮ ವಿವರ ನಮೂದಿಸಿ ಎಂದು ಹೇಳಿದರೂ ಭರ್ತಿ ಮಾಡಬೇಡಿ. ಇತ್ತೀಚೆಗೆ ವೈದ್ಯರೊಬ್ಬರು ಸಮೋಸ ಆರ್ಡರ್ ಮಾಡಿದ ಬಳಿಕ ಸ"ಮೋಸ"ದಂಗಡಿಯವ ಕಳುಹಿಸಿದ ಲಿಂಕ್‌ನಲ್ಲಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ ಸಂಖ್ಯೆಯನ್ನು ನಮೂದಿಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇಂತಹ ಉದಾಹರಣೆ ಪ್ರತಿನಿತ್ಯ ಸುದ್ದಿಯಾಗುತ್ತಿದೆ.
ನನ್ನ ಮೊಬೈಲ್ ಸುರಕ್ಷಿತವಾಗಿದೆ ಎಂದು ತಪ್ಪಾಗಿ ಅಂದಾಜಿಸಬೇಡಿ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಡೀಪ್ ವೆಬ್ ಇತ್ಯಾದಿ ಹಲವು ಹೊಸ ತಂತ್ರಜ್ಞಾನ ಜಗತ್ತಿಗೆ ಜಗತ್ತು ತೆರೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ತಪ್ಪದೇ ಮೊಬೈಲ್ ಸುರಕ್ಷತೆಗೆ 2023ರಲ್ಲಿ ಪಾಲಿಸಬೇಕಾದ ಅತ್ಯುತ್ತಮ ಅಭ್ಯಾಸಗಳನ್ನು ಪಾಲಿಸಿ, ಈ ನಿಯಮಗಳ ಕುರಿತು ಇತರರಿಗೂ ತಿಳಿಸಿ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in