Explained: ವಾಸ್ತುಶಿಲ್ಪದ ಅದ್ಭುತ ಅಯೋಧ್ಯೆ ರಾಮ ಮಂದಿರ, 161 ಅಡಿ ಎತ್ತರ 235 ಅಡಿ ಅಗಲದ ದೇಗುಲ ವಿಶೇಷ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explained: ವಾಸ್ತುಶಿಲ್ಪದ ಅದ್ಭುತ ಅಯೋಧ್ಯೆ ರಾಮ ಮಂದಿರ, 161 ಅಡಿ ಎತ್ತರ 235 ಅಡಿ ಅಗಲದ ದೇಗುಲ ವಿಶೇಷ

Explained: ವಾಸ್ತುಶಿಲ್ಪದ ಅದ್ಭುತ ಅಯೋಧ್ಯೆ ರಾಮ ಮಂದಿರ, 161 ಅಡಿ ಎತ್ತರ 235 ಅಡಿ ಅಗಲದ ದೇಗುಲ ವಿಶೇಷ

Architectural Marvel Ayodhya Ram Mandir: ಅಯೋಧ್ಯೆ ರಾಮ ಮಂದಿರವು ವಾಸ್ತುಶಿಲ್ಪದ ಅದ್ಭುತ ಪ್ರತೀಕವಾಗಿ ಕಾಣತೊಡಗಿದೆ. ಕಬ್ಬಿಣ ಅಥವಾ ಉಕ್ಕು ಬಳಸದೇ ನಿರ್ಮಿಸಲಾಗಿರುವ ಈ ಬೃಹತ್ ದೇವಾಲಯ ನಿರ್ಮಾಣಕ್ಕೆ ಅನುಸರಿಸಿರುವ ತಾಂತ್ರಿಕ ವಿಚಾರಗಳು, ವಾಸ್ತುಶಿಲ್ಪದ ತಂತ್ರಗಾರಿಕೆ ಮುಂತಾದವುಗಳ ವಿವರಣೆ ಇಲ್ಲಿದೆ.

ಅಯೋಧ್ಯೆ ರಾಮ ಮಂದಿರದ ಒಳಾಂಗಣದ ಅತ್ಯಾಕರ್ಷಕ ನೋಟ.
ಅಯೋಧ್ಯೆ ರಾಮ ಮಂದಿರದ ಒಳಾಂಗಣದ ಅತ್ಯಾಕರ್ಷಕ ನೋಟ.

ಭವ್ಯವಾದ ಅಯೋಧ್ಯೆ ರಾಮ ಮಂದಿರವು ಚೆನ್ನಾಗಿ ಯೋಜಿಸಿದ, ವೈಜ್ಞಾನಿಕವಾಗಿ ಕಾರ್ಯಗತಗೊಳಿಸಿದ ಮತ್ತು ಭಾರತೀಯ ಸಾಂಪ್ರದಾಯಿಕ ಪರಂಪರೆಯ ಅದ್ಭುತ ಪ್ರತೀಕವಾಗಿದೆ. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಚಂದ್ರಕಾಂತ್ ಬಿ ಸೋಂಪುರ ಅವರು ತಮ್ಮ ಮಗ ಆಶಿಶ್ ನೆರವಿನೊಂದಿಗೆ ವಿನ್ಯಾಸಗೊಳಿಸಿದರು. 30 ವರ್ಷಗಳ ಹಿಂದೆ ತಾವು ಕಂಡ ಕನಸಿನ ವಿನ್ಯಾಸವನ್ನು ಸಾಕಾರಗೊಳಿಸಿದರು.

ಅಯೋಧ್ಯೆಯ 2.7 ಎಕರೆ ಭೂ ಪ್ರದೇಶದಲ್ಲಿ ನಿಂತಿರುವ ಈ ರಾಮ ಮಂದಿರವು 161 ಅಡಿ ಎತ್ತರ, 235 ಅಡಿ ಅಗಲ ಮತ್ತು ಒಟ್ಟು 360 ಅಡಿ ಉದ್ದವನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಸಂಯೋಜನೆಯ ಜೊತೆಗೆ ಎಲ್ಲಾ ವೈದಿಕ ಆಚರಣೆಗಳನ್ನು ಪಾಲಿಸಿಕೊಂಡು ಅನುಸರಿಸಿ ನಾಗರ ಶೈಲಿಯಲ್ಲಿ ಈ ರಾಮ ಮಂದಿರವನ್ನು ನಿರ್ಮಿಸಲಾಗಿದೆ. ಪ್ರಾಚೀನ ಭಾರತದ ಎರಡು ವಿಶಿಷ್ಟ ದೇವಾಲಯ-ನಿರ್ಮಾಣ ಶೈಲಿಗಳಲ್ಲಿ ಒಂದು ಈ ನಾಗರ ಶೈಲಿ ಎಂಬುದನ್ನು ಗಮನಿಸಬೇಕು.

ಅಯೋಧ್ಯೆ ರಾಮ ಮಂದಿರ ವೈಶಿಷ್ಟ್ಯ

ರಾಮ ಮಂದಿರ ನಿರ್ಮಾಣ ಪ್ರದೇಶವು ಸುಮಾರು 57,000 ಚದರ ಅಡಿ ಆಗಿದ್ದು, ಕಟ್ಟಡವು ಮೂರು ಅಂತಸ್ತಿನ ರಚನೆಯಾಗಿದೆ. ಇದು ಕುತುಬ್ ಮಿನಾರ್‌ಗಿಂತಲೂ ಶೇಕಡ 70 ಹೆಚ್ಚು ಎತ್ತರದ್ದಾಗಿದೆ.

ರಾಮ ಮಂದಿರವು ಬೃಹತ್ ಕಂಬಳ ಮೇಲೆ ನಿಂತಿದ್ದು, ಶ್ರೀ ರಾಮ ದೇವರು ಇರುವ ಅತ್ಯಂತ ಪವಿತ್ರ ಭಾಗವನ್ನು ಗರ್ಭ ಗೃಹ ಅಥವಾ ಗರ್ಭ ಗುಡಿ ಎಂದು ಹೇಳಲಾಗುತ್ತದೆ. ಮಂದಿರದ ಮೂರನೇ ಮಹಡಿಯಲ್ಲಿ ಅತಿ ಎತ್ತರದ ಶಿಖರ ರೂಪದ ಗೋಪುರವಿದೆ. ಐದು ಮಂಟಪಗಳ ಮೇಲೆ ಐದು ಶಿಖರಗಳಿದ್ದು, ಒಟ್ಟು 300 ಕಂಬಗಳು ಮತ್ತು 44 ತೇಗದ ಬಾಗಿಲುಗಳನ್ನು ಹೊಂದಿದೆ.

ರಾಮ ಮಂದಿರ ನಿರ್ಮಾಣದಲ್ಲಿ ಬಳಸುತ್ತಿರುವ ಇಟ್ಟಿಗೆಗಳನ್ನು 30 ವರ್ಷದಿಂದ ಸಂಗ್ರಹಿಸಿದ್ದಾಗಿದ್ದು, ಅವುಗಳ ಮೇಲೆ ವಿವಿಧ ಭಾಷೆಗಳಲ್ಲಿ ರಾಮ ದೇವರ ಹೆಸರನ್ನು ಕೆತ್ತಲಾಗಿದೆ. ಅಂತೆಯೇ, ತಾಜ್‌ಮಹಲ್ ನಿರ್ಮಾಣಕ್ಕೆ ಬಳಸಿದ ಅದೇ ಮಕ್ರಾನಾ ಅಮೃತ ಶಿಲೆಯನ್ನು ಬಳಸಿಕೊಂಡು ಗರ್ಭಗುಡಿಯ ಒಳಭಾಗವನ್ನು ಅಲಂಕರಿಸಲಾಗಿದೆ.

ರಾಮ ಮಂದಿರ ನಿರ್ಮಾಣಕ್ಕೆ ಉಕ್ಕು ಅಥವಾ ಕಬ್ಬಿಣವನ್ನು ಬಳಸಲಾಗಿಲ್ಲ

ಗುಪ್ತರ ಕಾಲದಲ್ಲಿ ಅಂದರೆ ನಾಗರ ಶೈಲಿಯು ಹೊರಹೊಮ್ಮಿದ ಆ ಸಂದರ್ಭದಲ್ಲಿ ದೇವಾಲಯಗಳನ್ನು ನಿರ್ಮಿಸುವಾಗ ಅದಕ್ಕೆ ಕಬ್ಬಿಣ ಅಥವಾ ಉಕ್ಕಿನ ಬಳಕೆಯು ಪ್ರಚಲಿತದಲ್ಲಿ ಇರಲಿಲ್ಲ. ಕಬ್ಬಿಣದ ಬಾಳಿಕೆ ಸುಮಾರು 80-90 ವರ್ಷಗಳು. ಇದನ್ನು ಮನಗಂಡು, ರಾಮ ಮಂದಿರವನ್ನು ಗ್ರಾನೈಟ್, ಮರಳುಗಲ್ಲು ಮತ್ತು ಅಮೃತಶಿಲೆಯನ್ನು ಬಳಸಿ ಅವುಗಳೇ ಪರಸ್ಪರ ಕಚ್ಚಿ ಕೂರುವಂತೆ ಮಾಡುವ ಬೀಗ ಮತ್ತು ಕೀ ಕಾರ್ಯವಿಧಾನದೊಂದಿಗೆ ನಿರ್ಮಿಸಲಾಗಿದೆ. ಇದು ಕಟ್ಟಡಕ್ಕೆ 1,000 ವರ್ಷಗಳವರೆಗಿನ ಜೀವಿತಾವಧಿಯನ್ನು ಖಚಿತಪಡಿಸುತ್ತದೆ. ವಿಶೇಷವೆಂದರೆ, ರಾಮ ಮಂದಿರ ನಿರ್ಮಾಣದಲ್ಲೂ ಯಾವುದೇ ಕಬ್ಬಿಣ ಅಥವಾ ಗಾರೆಯನ್ನು ಸಹ ಬಳಸಲಾಗಿಲ್ಲ.

ರಾಮ ಮಂದಿರ ನಿರ್ಮಾಣಕ್ಕೆ ಮೊದಲು, ಮಂದಿರ ನಿರ್ಮಿಸುವ ಪ್ರದೇಶದಲ್ಲಿ ಮೊದಲು 15 ಮೀಟರ್ ಆಳಕ್ಕೆ ನೆಲವನ್ನು ಅಗೆದು ಮಣ್ಣು ತೆಗೆಯಲಾಗಿತ್ತು. ಘನವಾದ ಬುನಾದಿ ನಿರ್ಮಿಸಲು 47 ಪದರಗಳ ಪರಿಷ್ಕರಿಸಿದ ಮಣ್ಣನ್ನು ಹಾಕಲಾಯಿತು. 1.5 ಮೀಟರ್ ದಪ್ಪದ ಎಂ -35 ದರ್ಜೆಯ ಕಾಂಕ್ರೀಟ್ ಕೂಡ ಹಾಕಲಾಯಿತು ಮತ್ತು ನೆಲವನ್ನು ಗಟ್ಟಿಮುಟ್ಟಾಗಿಸಲು ಅದರ ಮೇಲೆ 6.3 ಮೀಟರ್ ದಪ್ಪದ ಘನ ಗ್ರಾನೈಟ್ ಕಲ್ಲನ್ನು ಇರಿಸಲಾಯಿತು.

ಅಪ್ರತಿಮ ರಾಮ ಮಂದಿರವನ್ನು ನಿರ್ಮಿಸಲು ಭಾರತದ ಕೆಲವು ಉನ್ನತ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ನಿರ್ಮಾಣದಲ್ಲಿ ಇಸ್ರೋ ತಂತ್ರಜ್ಞಾನಗಳನ್ನು ಸಹ ಬಳಸಲಾಗಿದೆ. ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಬಿಆರ್‌ಐ) ನಿರ್ದೇಶಕ ಪ್ರದೀಪ್ ಕುಮಾರ್ ರಾಮಂಚಾರ್ಲಾ ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಿಬಿಆರ್‌ಐ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ವಿಜ್ಞಾನಿಗಳ ತಂಡವು ಲೆನ್ಸ್ ಆಧಾರಿತ ಉಪಕರಣವಾದ ವಿಶೇಷ 'ಸೂರ್ಯ ತಿಲಕ್' ಕನ್ನಡಿಯನ್ನು ವಿನ್ಯಾಸಗೊಳಿಸಿದೆ. ಪ್ರತಿ ರಾಮನವಮಿ ದಿನದಂದು ಮಧ್ಯಾಹ್ನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ತಿಲಕದಂತೆ ಬೀಳಲಿದೆ. ಭಗವಾನ್ ರಾಮನ ಔಪಚಾರಿಕ ಅಭಿಷೇಕಕ್ಕೆ ಇದನ್ನು ಬಳಸಲಾಗುತ್ತದೆ.

ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದ ಆಯ್ದ ತಾಂತ್ರಿಕ ವಿಶೇಷಗಳಿವು. ಇನ್ನಷ್ಟು ವಿಶೇಷಗಳೂ ಇದ್ದು, ಒಟ್ಟಿನಲ್ಲಿ ರಾಮ ಮಂದಿರವು ವಾಸ್ತುಶಾಸ್ತ್ರದ ಒಂದು ಅದ್ಭುತವಾಗಿ ರೂಪುಗೊಂಡಿದೆ.

----------------------------

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.