ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಕಳೆದುಕೊಂಡಿದ್ದ 22 ಕೋಟಿ ರೂಗಳನ್ನ ಮೂರೇ ತಿಂಗಳಲ್ಲಿ ಉಳಿಸಿದ್ದು ಈ ಸಹಾಯವಾಣಿ ಸಂಖ್ಯೆ
Online Frauds: ಆನ್‌ಲೈನ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಗ್ರಾಹಕರ ಹಣ ರಕ್ಷಿಸಲು ಸೈಬರ್ ಪೊಲೀಸರು ಕೂಡ ಅಷ್ಟೇ ವೇಗವಾಗಿ ಕಾರ್ಯಪ್ರವೃತ್ತವಾಗುತ್ತಿದ್ದಾರೆ. ಇದಕ್ಕೆ ಈ ಸಹಾಯವಾಣಿ ನೆರವಾಗುತ್ತಿದೆ.

ಮುಂಬೈ: ತಂತ್ರಜ್ಞಾನ ಬೆಳೆದಷ್ಟೂ ಅನುಕೂಲಗಳ ಜೊತೆ ಜೊತೆಗೆ ಅನಾನುಕೂಲಗಳು ಇದ್ದೇ ಇರುತ್ತವೆ. ಅದರಲ್ಲೂ ಡಿಜಿಟಲ್ ಪೇಮೆಂಟ್‌ಗಳ ಪ್ರಮುಖ ಭಾಗವಾಗಿರುವ ಆನ್‌ಲೈನ್ ವಹಿವಾಟುಗಳಲ್ಲಿ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆದರೆ ಸೈಬರ್ ಪೊಲೀಸರು ಕೂಡ ಮೊದಲಿಗಿಂತಲೂ ಚುರುಕವಾಗಿ ಇಂ ವಂಚನೆಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದಕ್ಕೆ ಪ್ರಮುಖವಾಗಿ ನೆರವಾಗುತ್ತಿರುವುದು ಸಹಾಯವಾಣಿ ಸಂಖ್ಯೆ.
ಸೈಬರ್ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಜನರು ಕಳೆದುಕೊಳ್ಳುವ ಹಣವನ್ನು ಪತ್ತೆಹಚ್ಚಲು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ (National Cyber Crime Helpline Number) ಸಂಖ್ಯೆ '1930' ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸಂಖ್ಯೆ ಆರ್ಥಿಕ ನಷ್ಟಗಳನ್ನು ತಡೆಯುವಲ್ಲಿ ಹೇಗೆ ಸಹಾಯವಾಗುತ್ತಿದೆ ಅನ್ನೋದನ್ನು ಮುಂಬೈ ಸೈಬರ್ ಪೊಲೀಸರು ವಿವರಿಸಿದ್ದಾರೆ.
2022ರ ಮೇ ನಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ '1930' ಆರಂಭಿಸಲಾಯಿತು. ಆರಂಭದಲ್ಲಿ ಈ ಸಂಖ್ಯೆಗೆ ಬರುತ್ತಿದ್ದ ದೂರುಗಳನ್ನು ಉತ್ತರಿಸಲು ಸಿಬ್ಬಂದಿ ಹೆಣಗಾಡುತ್ತಿದ್ದರು. ಆದರೆ ಇದಕ್ಕೆ ಮೂಲಸೌಕರ್ಯ, ಅಪ್‌ಡೇಟ್ ಹಾಗೂ ಹೆಚ್ಚುವರಿ ಸಿಬ್ಬಂದಿ ವಹಿಸಿದ ಬಳಿಕ ನಾಗರಿಕರ ಆರ್ಥಿಕ ನಷ್ಟಗಳನ್ನು ತಡೆಯುವಲ್ಲಿ ನಿರ್ಮಾಣಕವಾಗಿ ಕೆಲಸ ಮಾಡುತ್ತಿದೆ.
ಮುಂಬೈ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2024ರ ಮೊದಲ ಮೂರು ತಿಂಗಳಲ್ಲೇ (ಜನವರಿಯಿಂದ ಮಾರ್ಚ್*) ಈ ಸಹಾಯವಾಣಿ ಮುಂಬೈ ನಗರವೊಂದರಲ್ಲಿ ಬರೋಬ್ಬರಿ 22 ಕೋಟಿ ರೂಪಾಯಿಗಳ ಮೋಸದ ವಹಿಟುಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದೆಯಂತೆ. ಆದರೆ 2023ರಲ್ಲಿ ಇಡೀ ವರ್ಷದಲ್ಲಿ ಹೀಗೆ ಕಾರ್ಯನಿರ್ವಹಿಸಿ ವಂಚನೆ ವಹಿವಾಟುಗಳನ್ನು ಪತ್ತೆಹಚ್ಚಿ ಅವುಗಳನ್ನು ನಿರ್ಬಂಧಿಸಿರುವ ಮೊತ್ತ 26.5 ಕೋಟಿ ರೂಪಾಯಿ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2024ರ ಆರಂಭದಲ್ಲೇ ನಾಲ್ಕು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋದನ್ನು ಈ ಅಂಕಿ ಅಂಶಗಳು ಹೇಳುತ್ತಿವೆ.
2022ರ ಮೇ ನಲ್ಲಿ ಈ ಸಹಾಯವಾಣಿ ಆರಂಭಿಸಿದಾಗ ಇದಕ್ಕೆ ಇಬ್ಬರು ಅಧಿಕಾರಿಗಳು ಹಾಗೂ 6 ಮಂದಿ ಕಾನ್ಸ್‌ಟೇಬಲ್‌ಗಳ ಸಣ್ಣ ತಂಡವನ್ನು ನೀಡಲಾಗಿತ್ತು. ಆದರೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಕೇಸ್‌ಗಳನ್ನು ಪತ್ತೆ ಹಚ್ಚುವುದು ಈ ಸಣ್ಣ ತಂಡಕ್ಕೆ ಹೆಚ್ಚು ಸಮಯ ಹಿಡಿಯುತ್ತಿತ್ತು. ಇದನ್ನು ಅರಿತ ಉನ್ನತ ಪೊಲೀಸ್ ಅಧಿಕಾರಿಗಳು 2023ರ ಮೇ ನಲ್ಲಿ ಈ ತಂಡದ ಪ್ರಮಾಣವನ್ನು ಮೂವರು ಅಧಿಕಾರಿಗಳು ಹಾಗೂ 20 ಕಾನ್ಸ್‌ಟೇಬಲ್‌ಗಳಿಗೆ ಹೆಚ್ಚಿಸಲಾಗಿದೆ. 2023ರ ಡಿಸೆಂಬರ್ ವೇಳೆಗೆ ತಂಡದಲ್ಲಿ ಕಾನ್ಸ್‌ಟೇಬಲ್‌ಗಳ ಸಂಖ್ಯೆ 50ಕ್ಕೆ ವಿಸ್ತರಿಸಲಾಗಿದೆ. ಜೊತೆಗೆ ರಜಾದಿನಗಳನ್ನು ಸೇರಿದಂತೆ ಸಹಾಯವಾಣಿ 24/7 ಕಾರ್ಯನಿರ್ವಹಿಸುತ್ತಿದೆ.
ಆನ್‌ಲೈನ್ ವಹಿವಾಟುಗಳ ಸಂದರ್ಭದಲ್ಲಿ ಹಣವನ್ನು ಕಳೆದುಕೊಂಡ ಕೂಡಲೇ ದೂರು ನೀಡಿದರೆ ಅಂತಹ ವಂಚನೆಯನ್ನು ಪತ್ತೆ ಹಚ್ಚಿ ಜನರಿಗೆ ಆಗುವ ಆರ್ಥಿಕ ನಷ್ಟವನ್ನು ತಡೆಯಬಹುದು. ಹೀಗಾಗಿ ವಂಚನೆಗೊಳಗಾದವರು ಕೂಡಲೇ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಬೇಕೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆನ್‌ಲೈನ್ ವಹಿವಾಟುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಅಪರಿಚಿತ ವ್ಯಕ್ತಿಗಳು, ಸಂಸ್ಥೆಗಳು, ಬ್ಯಾಂಕ್‌ನವರು ಎಂದು ಹೇಳಿಕೊಂಡು ಕರೆ ಮಾಡುವವರಿಗೆ ಎಂದಿಗೂ ಒಟಿಪಿಯಂತಹ ವೈಯಕ್ತಿಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ನೀವೇನಾದರೂ ಇಂತಹ ಆನ್‌ಲೈನ್ ವಂಚನೆಗೊಳಗಾಗಿದ್ದರೆ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ. ಇಲ್ಲವೆ ಕರ್ನಾಟಕದಲ್ಲಿ ದೂರ ದಾಖಲಿಸಲು ಲ್ಯಾಂಡ್‌ಲೈನ್ ಸಂಖ್ಯೆ 080-22942475 ಗೆ ಕರೆ ಮಾಡಬಹುದು.
