Drone Paddy Sowing: ಭತ್ತದ ಕೃಷಿಕರಿಗೊಂದು ಶುಭ ಸುದ್ದಿ, ಪ್ರಗತಿಯಲ್ಲಿದೆ ಡ್ರೋನ್ ಭತ್ತ ಬಿತ್ತನೆ ಪ್ರಯೋಗ, ಅನ್ನದಾತರಿಗೆ ಹಲವು ಪ್ರಯೋಜನ
Drone Paddy Sowing: ಭತ್ತದ ಕೃಷಿಕರಿಗೊಂದು ಶುಭ ಸುದ್ದಿ ಇದೆ. ತೆಲಂಗಾಣದಲ್ಲಿ ಡ್ರೋನ್ ಭತ್ತ ಬಿತ್ತನೆ ಪ್ರಯೋಗ ಪ್ರಗತಿಯಲ್ಲಿದೆ. ಆಚಾರ್ಯ ಜಯಶಂಕರ್ ಕೃಷಿ ವಿಶ್ವವಿದ್ಯಾನಿಲಯವು ಇದನ್ನು ಕೈಗೊಂಡಿದ್ದು, ಯಶಸ್ವಿಯಾದರೆ ಭತ್ತದ ಕೃಷಿಕರಿಗೆ ನಾನಾ ರೀತಿಯ ಪ್ರಯೋಜನಗಳಾಗಲಿವೆ.
Drone Paddy Sowing: ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ಭತ್ತದ ಬೇಸಾಯ ತ್ರಾಸದಾಯಕವೆನಿಸಿದೆ. ಸಮಯಕ್ಕೆ ಕೃಷಿ ಕಾರ್ಮಿಕರು ಸಿಗಲ್ಲ, ಉತ್ಪಾದನಾ ವೆಚ್ಚ ಹೆಚ್ಚಳ ಮುಂತಾದ ಸವಾಲುಗಳನ್ನು ಕೃಷಿಕರು ಎದುರಿಸುತ್ತಿದ್ದಾರೆ. ನಿಧಾನವಾಗಿ ಭತ್ತದ ಬೇಸಾಯದಿಂದ ಹಲವು ಕೃಷಿಕರು ವಿಮುಖರಾಗಿರುವುದು ಕಣ್ಣ ಮುಂದೆಯೇ ಇದೆ. ಇನ್ನು ಕೆಲವರು ಅನ್ಯ ರಾಜ್ಯಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಬೇಸಾಯ ಮುಂದುವರಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ತೆಲಂಗಾಣದ ಆಚಾರ್ಯ ಜಯಶಂಕರ್ ಕೃಷಿ ವಿಶ್ವವಿದ್ಯಾನಿಲಯವು ಡ್ರೋನ್ ಮೂಲಕ ಭತ್ತ ಬಿತ್ತನೆ ಮಾಡುವ ವ್ಯವಸ್ಥೆಯನ್ನು ಪರಿಚಯಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಕಾರ್ಯವಿಧಾನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ಈ ಡ್ರೋನ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಈಗ ಕೃಷಿಕರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡ್ರೋನ್ ಮೂಲಕ ಭತ್ತ ಬಿತ್ತನೆ ಪ್ರಯೋಗ
ಜನಗಾಮ ಜಿಲ್ಲೆಯ ರಘುನಾಥಪಲ್ಲಿಯಲ್ಲಿ ರೈತರ ಹೊಲಗಳಲ್ಲಿ ಡ್ರೋನ್‌ಗಳು ನೇರವಾಗಿ ಭತ್ತ ಬಿತ್ತಿದವು. ವಿಶ್ವವಿದ್ಯಾನಿಲಯದ ಡ್ರೋನ್ ವಿಭಾಗದ ನೋಡಲ್ ಅಧಿಕಾರಿ ಪ್ರೊ.ರಾಮ್‌ಗೋಪಾಲ್ ವರ್ಮಾ ಮತ್ತು ವಾರಂಗಲ್ ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಹ ನಿರ್ದೇಶಕ ಪ್ರೊ.ಉಮ್ಮಾರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಪ್ರಯೋಗ ನಡೆಸಲಾಯಿತು. ಸಂಶೋಧಕರ ಪ್ರಕಾರ, ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ಕೂಲಿ ಕಾರ್ಮಿಕರಿಲ್ಲದೆ ನೇರವಾಗಿ ಭತ್ತ ಬಿತ್ತನೆ ಮಾಡಿದರೆ ಎಕರೆಗೆ 6 ಸಾವಿರ ರೂ.ನಿಂದ 8 ಸಾವಿರ ರೂಪಾಯಿ ತನಕ ಖರ್ಚು ತಗ್ಗಿಸಬಹುದು.
ಕೇವಲ ಕಾಲು ಗಂಟೆಯಲ್ಲಿ ಭತ್ತ ಬಿತ್ತನೆ: ಸಾಂಪ್ರದಾಯಿಕ ವಿಧಾನದಲ್ಲಿ ಎಕರೆಗೆ 25 ಕಿಲೋ ಬಿತ್ತನೆ ಬೀಜ ಬಿತ್ತಬೇಕಾಗುತ್ತದೆ. ಇದನ್ನೇ ಡ್ರೋನ್ ಮೂಲಕ ಬಿತ್ತನೆ ಮಾಡಿದರೆ 5 ಸಾಲು 30 ಸೆಂ.ಮೀ ಲೆಕ್ಕಾಚಾರದಲ್ಲಿ ಎಕರೆಗೆ ದಪ್ಪದವಾದರೆ 8 ಕಿಲೋ, ತೆಳುವಿನವಾದರೆ 6 ಕಿಲೋ ಸಾಕಾಗುತ್ತದೆ. ಪ್ರತಿ ಚದರ ಮೀಟರ್‌ನಲ್ಲಿ 59 ಭತ್ತದ ಸಸಿ ನಾಟಿ ಮಾಡಬಹುದು. 10 ರಿಂದ 12 ನಿಮಿಷದಲ್ಲಿ ಎಕರೆ ಜಮೀನಲ್ಲಿ ಭತ್ತ ಭಿತ್ತನೆ ಮಾಡಬಹುದು. ಈ ರೀತಿ ಭತ್ತದ ಕೃಷಿ ಮಾಡಿದರೆ ಉತ್ತಮ ಫಸಲು, ಇಳುವರಿ ಪಡೆಯಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಡ್ರೋನ್ ಭತ್ತ ಬಿತ್ತನೆ ಪ್ರಯೋಗ ಯಶಸ್ವಿಯಾದರೆ…
ಡ್ರೋನ್ ಮೂಲಕ ಭತ್ತ ಬಿತ್ತನೆ ಪ್ರಯೋಗ ಯಶಸ್ವಿಯಾದರೆ ಕೃಷಿಕರಿಗೆ ಹೆಚ್ಚಿನ ಲಾಭವಾಗಲಿದೆ. ವಿಶೇಷವಾಗಿ ಕೃಷಿಕರಿಗೆ ಬಹಳ ಸವಾಲಾಗಿ ಕಾಡುತ್ತಿರುವ ಕೃಷಿ ಕಾರ್ಮಿಕರ ಕೊರತೆಗೆ ಪರಿಹಾರ ಸಿಕ್ಕಲಿದೆ. ಒಂದು ಎಕರೆ ಬಿತ್ತನೆ ಕಾರ್ಯ 15 ನಿಮಿಷದೊಳಗೆ ಮುಗಿಯುವ ಕಾರಣ ಸಮಯ, ಕಡಿಮೆ ಬೀಜ ಸಾಕು. ಇದರಿಂದ ಹಣ ಉಳಿತಾಯವಾಗುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾದೀತು ಎಂಬ ಸಂದೇಹದಲ್ಲಿದ್ದಾರೆ ಕೃಷಿಕರು. ವಿಜ್ಞಾನಿಗಳಂತೂ ಪೂರ್ಣ ಭರವಸೆಯೊಂದಿಗೆ ಪ್ರಯೋಗ ನಡೆಸಿದ್ದಾರೆ.
ಭತ್ತ ಬಿತ್ತನೆ ಡ್ರೋನ್‌ಗೆ ಪೇಟೆಂಟ್
ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆ ಈಗಾಗಲೇ ಹೆಚ್ಚಾಗಿದೆ. ಡ್ರೋನ್ ಬಳಸಿಕೊಂಡು ಕೀಟನಾಶಕ ಸಿಂಪಡಿಸುವ ಕೆಲಸ ಯಶಸ್ವಿಯಾಗಿದ್ದು, ಬಳಕೆಯಲ್ಲಿದೆ. ಈ ಪ್ರಯೋಗ ಈಗ ಹೆಚ್ಚಾಗಿದೆ. ಇದರಿಂದಾಗಿ ವೆಚ್ಚ ಕಡಿಮೆಯಾಗಿರುವುದಲ್ಲದೇ, ಸಮಯ ಉಳಿತಾಯದ ಬಗ್ಗೆಯೂ ಕೃಷಿಕರು ಹೇಳಿಕೊಳ್ಳುತ್ತಿದ್ದಾರೆ. ಈಗ ಭತ್ತ ಬಿತ್ತನೆ ಡ್ರೋನ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ತೆಲಂಗಾಣ ರಾಜೇಂದ್ರ ನಗರದ ಆಚಾರ್ಯ ಜಯಶಂಕರ್ ಕೃಷಿ ವಿಶ್ವವಿದ್ಯಾನಿಲಯ ಮತ್ತು ಮಾರುತ್ ಡ್ರೋನ್ ಟೆಕ್ ಕಂಪನಿ ಜಂಟಿಯಾಗಿ ಈ ಡ್ರೋನ್ ಅನ್ನು ಅಭಿವೃದ್ಧಿ ಪಡಿಸಿದೆ. ಇದರಲ್ಲಿ "ಬಹು ನಳಿಕೆ ವೈಮಾನಿಕ ಬೀಜ ಬಿತ್ತನೆ ಉಪಕರಣ ಅಳವಡಿಸಲಾಗಿದೆ. ಈ ವ್ಯವಸ್ಥೆಗೆ ಕಳೆದ ವರ್ಷ ಜನವರಿ 30ರಂದು ಪೇಟೆಂಟ್ ಕೂಡ ಸಿಕ್ಕಿದೆ. ನಬಾರ್ಡ್ - ಆಚಾರ್ಯ ಜಯಶಂಕರ್ ಕೃಷಿ ವಿಶ್ವವಿದ್ಯಾನಿಲಯ ಡ್ರೋನ್ ಡಿಎಸ್ ಆರ್ ಯೋಜನೆಯಂತೆ ಭತ್ತ ಬಿತ್ತನೆ ಡ್ರೋನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.