Telangana Election 2023: ತೆಲಂಗಾಣ ವಿಧಾನಸಭೆ ಚುನಾವಣೆಗೆ 4 ತಿಂಗಳು ಬಾಕಿ; ಒಬಿಸಿ ಮತ ಸೆಳೆಯಲು ಬಿಆರ್‌ಎಸ್, ಕಾಂಗ್ರೆಸ್ ಪ್ಲಾನ್ ರೆಡಿ
ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆಗೆ ಹೋಗುವುದಿಲ್ಲ. ನಿಗದಿತ ವೇಳಾಪಟ್ಟಿಯ ಪ್ರಕಾರ 2023ರ ಡಿಸೆಂಬರ್‌ನಲ್ಲಿ ಎಲೆಕ್ಷನ್ ನಡೆಯಲಿದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ತೆಲಂಗಾಣ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಅದರ ಡಿಟೇಲ್ಸ್ ಇಲ್ಲಿದೆ.
ಹೈದರಾಬಾದ್ (ತೆಲಂಗಾಣ): ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲೇ ಪಕ್ಕದ ರಾಜ್ಯ ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Assembly election 2023) ಇನ್ನ ನಾಲ್ಕೇ ತಿಂಗಳು ಬಾಕಿ ಇದ್ದು, ಪ್ರಮುಖ ಆಡಳಿತ ಪಕ್ಷ ಭಾರತ್ ರಾಷ್ಟ್ರ ಸಮಿತಿ (BRS), ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಭರ್ಜರಿ ಕಸರತ್ತು ನಡೆಸುತ್ತಿವೆ.
ಸಿಎಂ ಕೆ ಚಂದ್ರಶೇಖರ್ ರಾವ್ (CM K Chandrashekar Rao) ಹ್ಯಾಟ್ರಿಕ್ ಸರ್ಕಾರ ರಚಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದು ಒಂದೆಡೆಯಾದರೆ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಬಲ ಪೈಪೋಟಿ ನೀಡಲು ತಮ್ಮದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಂಡಿವೆ.
ಪ್ರಮುಖ ಮೂರೂ ಪಕ್ಷಗಳು ತೆಲಂಗಾಣ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಆಡಳಿತಾರೂಢ ಬಿಆರ್‌ಎಸ್ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ತಾನು ಮಾಡಿರುವ ಯೋಜನೆಗಳು ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದು, ಈಗಾಗಲೇ ಸಭೆ, ಸಮಾರಂಭಗಳನ್ನು ನಡೆಸುತ್ತಿದೆ.
ಇದರ ನಡುವೆ ಕಳೆದ ಬಾರಿಯಂತೆ ಈ ಸಲ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವುದಿಲ್ಲ ಎಂದು ಸಿಎಂ ಕೆ ಚಂದ್ರಶೇಖರ್ ರಾವ್ ಸ್ಪಷ್ಟಪಡಿಸಿದ್ದು, ನಿಗದಿಯಂತೆ ಇದೇ ವರ್ಷದ ಡಿಸೆಂಬರ್‌ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಸ್ಫಷ್ಟಪಡಿಸಿದ್ದಾರೆ.
ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಕೆಸಿಆರ್ ಸರ್ಕಾರದ ವೈಫಲ್ಯಗಳನ್ನು ತೆಲುಗು ಮತದಾರರಿಗೆ ಮನವರಿಕೆ ಮಾಡಲು ಸಾಧ್ಯವಾಗುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ತಮ್ಮದೇ ಆದ ಪ್ರತ್ಯೇಕ ಪ್ಲಾನ್‌ಗಳನ್ನು ಸಿದ್ಧಪಡಿಸಿಕೊಂಡಿವೆ.
ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಿಸಿದ ಕರ್ನಾಟಕ ಗೆಲುವು
ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ ತೆಲಂಗಾಣದಲ್ಲೂ ಖಾತೆ ತೆರೆಯಲು ಈಗಾಗಲೇ ಅಖಾಡಕ್ಕೆ ಇಳಿದು ಕೆಲಸ ಶುರುಮಾಡಿದೆ. ಪಕ್ಷದ ನಾಯಕರ ಪಾದಯಾತ್ರೆಗಳನ್ನು ನಡೆಸುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕರ್ನಾಟಕ ಫಲಿತಾಂಶದ ಬಳಿಕ ತೆಲಂಗಾಣದಲ್ಲಿ ಇತರೆ ಪಕ್ಷಗಳಿಂದ ನಾಯಕರು ಕಾಂಗ್ರೆಸ್ ಸೇರ್ಪಡೆಯ ವೇಗವನ್ನು ಪಡೆದುಕೊಂಡಿದೆ.
ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್, ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಆರು ತಿಂಗಳ ವಾಕ್ಸಮರ ನಂತರ ‘ಕೈ’ ಹಿಡಿದಿದ್ದಾರೆ. ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಜಿಲ್ಲೆಗಳಲ್ಲೂ ಸಣ್ಣ ಪುಟ್ಟ ಲೀಡರ್‌ಗಳು ಕೂಡ ಹಸ್ತದತ್ತ ಮುಖ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕರಲ್ಲಿ ದಿನದಿಂದ ದಿನಕ್ಕೆ ಉತ್ಸಾಹ ಹೆಚ್ಚಾಗುತ್ತಲೇ ಇದೆ. ಜುಲೈ 19 ರಂದು ಭುವನಗಿರಿ ಸಂಸದ ಕೋಮಟಿರೆಡ್ಡಿ ಅವರ ಮನೆಯಲ್ಲಿ ಸಭೆ ನಡೆಸಿರುವ ನಾಯಕರು, ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಬಹುತೇಕವಾಗಿ ಅಂತಿಮಗೊಳಿಸಿದ್ದಾರೆ. ಹಂತ ಹಂತವಾಗಿ ರಾಜ್ಯ ಮಟ್ಟದ ಪ್ರಮುಖ ನಾಯಕರು ಬಸ್ ಯಾತ್ರೆ ಆಯೋಜಿಸಲು ನಿರ್ಧರಿಸಿದ್ದಾರೆ. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ವಿಶೇಷವಾಗಿ ಒಬಿಸಿ ಮತಗಳನ್ನು ಸೆಳೆಯಲು ತಂತ್ರಗಳನ್ನು ರೂಪಿಸುತ್ತಿವೆ.
ತೆಲಂಗಾಣದಲ್ಲಿ ಬಿಜೆಪಿ ಪರಿಸ್ಥಿತಿ ಸ್ವಲ್ಪ ವಿಭಿನ್ನ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಯಲ್ಲೂ ಮಿಂಚಿನ ವಿದ್ಯಮಾನಗಳು ನಡೆಯುತ್ತಿದ್ದು, ಭಾರತೀಯ ಜನತಾ ಪಾರ್ಟಿ ಸೇರಿದ್ದ ಬಹುತೇಕ ಮಂದಿ ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಹೊಸದಾಗಿ ಸೇರಿದ್ದವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಜವಾಬ್ದಾರಿ ಎಟಲ ರಾಜೇಂದ್ರ ಅವರದ್ದು.
ಮತ್ತೊಂದೆಡೆ ಹಲವು ವರ್ಷಗಳಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಪಕ್ಕಾ ಹಿಂದುತ್ವವಾದಿ ಶಾಸಕ ರಾಜಾ ಸಿಂಗ್ ತಮಗೆ ವಿಧಿಸಿರುವ ಶಿಕ್ಷೆಯ ತೆರವಿಗಾಗಿ ಕಾದು ಕುಳಿತಿದ್ದಾರೆ. ಇದರ ಜೊತೆಗೆ ಪ್ಲಾನ್ ಬಿ ಎಂಬಂತೆ ಇತ್ತೀಚೆಗೆ ಅಲ್ಲಿನ ಹಣಕಾಸು ಹಾಗೂ ಆರೋಗ್ಯ ಸಚಿವ ಹರೀಶ್ ರಾವ್ ಅವರನ್ನು ಭೇಟಿ ಮಾಡಿದ್ದಾರೆ. ಇದರಿಂದಾಗಿ ರಾಜಾ ಸಿಂಗ್ ಬಿಆರ್‌ಎಸ್ ಬಾಗಿಲು ಬಡಿಯುತ್ತಿದ್ದಾರೆ ಎಂಬುದಕ್ಕೆ ರೆಕ್ಕೆ ಪುಕ್ಕ ಸಿಕ್ಕಂತಾಗಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕ ಈಟಾಲ ರಾಜೇಂದ್ರ, ಗೋಶಾಮಹಲ್ ಕ್ಷೇತ್ರ ಬಿಟ್ಟು ಜಹೀರಾಬಾದ್ ಸಂಸತ್ ಸ್ಥಾನಕ್ಕೆ ಸ್ಪರ್ಧಿಸುವ ಪ್ರಸ್ತಾವನೆಗೆ ರಾಜಾಸಿಂಗ್ ಒಪ್ಪಿದರೆ ಅಮಾನತು ವಾಪಸ್ ಪಡೆಯಲು ಮುಂದಾಗುತ್ತೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಸತ್ ಅಧಿವೇಶನಕ್ಕೂ ಹೋಗದೆ ಹೈದರಾಬಾದ್‌ನಲ್ಲೇ ಮೊಕ್ಕಾಂ ಹೊಡಿದ್ದು, ಕೆಸಿಆರ್ ಸರ್ಕಾರದ ವಿರುದ್ಧ ಹೊಸ ಹೊಸ ತಂತ್ರಗಳನ್ನು ರೂಪಿಸುವ ಜೊತೆಗೆ ಬಿಆರ್‌ಎಸ್ ಸರ್ಕಾರದ ಪರವಾಗಿ ನಾಯಕರು ಮತದಾರರಿಗೆ ನೀಡುತ್ತಿರುವ ಡಬಲ್ ಬೆಡ್ ರೂಂ ಮನೆಗಳ ಭರವಸೆಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.
ಕರ್ನಾಟಕ ಚುನಾವಣೆ ಫಲಿತಾಂಶ ನಂತರ ದಕ್ಷಿಣ ಭಾರತದತ್ತ ಮುಖ ಮಾಡದ ಪ್ರಧಾನಿ ನರೇಂದ್ರ ಮೋದಿ ಫುಲ್ ಸೈಲೆಂಟ್ ಆಗಿದ್ದು, ಮುಂದಿನ ದಿನಗಳಲ್ಲಿ ತೆಲಂಗಾಣಕ್ಕೆ ಆಗಮಿಸಿದ ಕೇಸರಿ ಪಕ್ಷದ ಪರ ಕ್ಯಾಂಪೇನ್, ರೋಡ್ ಶೋಗಳ ಮೂಲಕ ಬಿಜೆಪಿ ಗೆಲ್ಲಿಸಲು ಶ್ರಮಿಸಲಿದ್ದಾರೆ. ಆದ್ರೆ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಆಗಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಭಾರಿ ಮಳೆ ಮುನ್ಸೂಚನೆ