Telangana Poll Strategists: ತೆಲಂಗಾಣ ಚುನಾವಣೆ ರಾಜಕಾರಣಿಗಳಿಗಷ್ಟೇ ಅಲ್ಲ, 20ಕ್ಕೂ ಹೆಚ್ಚು ಚುನಾವಣಾ ತಂತ್ರಗಾರರಿಗೂ ಸವಾಲು
ತೆಲಂಗಾಣ ಚುನಾವಣೆ ಹಲವರಿಗೆ ಪ್ರತಿಷ್ಠೆಯ ವಿಚಾರ. ಇಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ರಾಜಕಾರಣಿಗಳಿಗಷ್ಟೇ ಅಲ್ಲ, ರಾಜಕೀಯ ಸಲಹೆಗಾರರು, ಚುನಾವಣಾ ತಂತ್ರಗಾರರಿಗೂ ಅಷ್ಟೇ ಮುಖ್ಯ.
ತೆಲಂಗಾಣ ಚುನಾವಣೆ ರಾಜಕಾರಣಿಗಳಿಗೆ ಮಾತ್ರವಲ್ಲ, 20ಕ್ಕೂ ಹೆಚ್ಚು ಚುನಾವಣಾ ತಂತ್ರಗಾರರಿಗೂ ಸವಾಲು. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷ ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸಿದೆ. ಹೀಗಾಗಿ ಅದು ಕೂಡ ಚುನಾವಣಾ ತಂತ್ರಗಾರರ ಮೊರೆ ಹೋಗಿದೆ.
ತೆಲಂಗಾಣ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಸಿಆರ್‌ಗೆ ಈ ಬಾರಿ ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿಯಿಂದ ಪ್ರಬಲ ಸ್ಪರ್ಧೆ ಎದುರಾಗಿದೆ. ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿರುವ ಕಾರಣ, ಗೆಲ್ಲಬೇಕಾದ ಅನಿವಾರ್ಯತೆ ಅವರದ್ದು. ಹೀಗಾಗಿ ಚುನಾವಣಾ ತಂತ್ರಗಾರಿಕೆ ಸಂಸ್ಥೆಯ ಉದ್ಯೋಗಿಯೊಬ್ಬರು ಮಾಧ್ಯಮಕ್ಕೆ ನೀಡಿದ ಮಾಹಿತಿ ಪ್ರಕಾರ, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಗೆ ಗ್ರಾಮ ಪಂಚಾಯತ್ ಸ್ತರದ ತನಕವೂ ಜಾರಿಗೊಳಿಸಬಲ್ಲ ಅಂಶಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಅದು ರಾಜಕೀಯ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳು.
ಒಂದು ಚುನಾವಣಾ ತಂತ್ರಗಾರಿಕೆ ಸಂಸ್ಥೆಯು 50 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಆರ್‌ಎಸ್‌ಗೆ ನೆರವಾಗುತ್ತಿರುವ ಅಂಶ ಬಹಿರಂಗವಾಗಿದೆ. ಈ 50 ಕ್ಷೇತ್ರಗಳಲ್ಲಿ ಪಕ್ಷದ ಸೋಲು ಗೆಲುವು ಶೇಕಡ 10ರ ಆಸುಪಾಸಿನಲ್ಲಿದೆ. ಇಲ್ಲಿ 300ಕ್ಕೂ ಹೆಚ್ಚು ಪರಿಣತರು ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ.
ಇದಕ್ಕೂ ಮೊದಲು ಪ್ರಶಾಂತ್ ಕಿಶೋರ್ ಅವರ ಐ- ಪಿಎಸಿ ತಂಡವು ಬಿಆರ್‌ಎಸ್ ಜತೆಗೆ ಕೈ ಜೋಡಿಸಿತ್ತು. ಅಭ್ಯರ್ಥಿಗಳ ಆಯ್ಕೆಯಲ್ಲಿ ಅದು ನೆರವು ನೀಡಿತ್ತು. ಅಲ್ಲದೆ, ಗೆಲುವಿಗೆ ಬೇಕಾದ ನೀಲ ನಕಾಶೆಯನ್ನು ಸಿದ್ಧಪಡಿಸಿತ್ತು. ಆದರೆ, ಬಳಿಕ ಈ ಸಂಸ್ಥೆ ಜತೆಗಿನ ಒಪ್ಪಂದ ರದ್ದುಗೊಳಿಸಿ ಪಕ್ಷದ ಹಿಡಿತವನ್ನು ಐ-ಪಿಎಸಿ ಬಯಸಿತ್ತು ಎಂದು ಬಿಆರ್‌ಎಸ್ ಆರೋಪಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ತೀನ್ ಬಂದರ್ ನೆರವು
ರಾಹುಲ್ ಗಾಂಧಿಯ ಪ್ರಚಾರ ತಂಡದ ಸದಸ್ಯರೊಬ್ಬರು ನೀಡಿದ ಮಾಹಿತಿ ಪ್ರಕಾರ, ಕಾಂಗ್ರೆಸ್ ಪಕ್ಷಕ್ಕೆ ತೀನ್ ಬಂದರ್ ಕಂಪನಿ ನೆರವು ನೀಡುತ್ತಿದೆ. ಇದು ರಾಹುಲ್ ಗಾಂಧಿ ಅವರಿಗೆ ಎಲ್ಲ ರೀತಿಯ ಮಾಹಿತಿ ಒದಗಿಸುತ್ತಿದೆ. ಪ್ರಚಾರ ಅಭಿಯಾನದ ಸಾಮಗ್ರಿಗಳನ್ನು ಪೂರೈಸುತ್ತಿದೆ. ಪ್ರಚಾರ ಅಭಿಯಾನದ ರೂಪುರೇಷೆ ಸಿದ್ಧಪಡಿಸುವುದು ಇದರ ಹೊಣೆಗಾರಿಕೆ.
ಬಹುತೇಕ ಅಭ್ಯರ್ಥಿಗಳಿಗೆ ವೃತ್ತಿಪರರ ನೆರವು ಲಭ್ಯವಾಗಿದೆ. ಇವರು ಬಹುತೇಕ ರಾಜಕೀಯ ನಾಯಕರ ಪರ್ಸನಲ್ ಅಸಿಸ್ಟೆಂಟ್‌ಗಳು. ಸೋಷಿಯಲ್ ಮೀಡಿಯಾ ಮ್ಯಾನೇಜರ್‌ಗಳು. ಇವರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಕಾರಣ ಇವರ ತೀರ್ಮಾನಗಳು, ಸಲಹೆಗಳು ಕೂಡ ಅದೇ ರೀತಿ ಇರುತ್ತವೆ ಎಂಬ ನಂಬಿಕೆ ಅವರದ್ದು.
ಈ ಚುನಾವಣಾ ತಂತ್ರಗಾರರ ಕೆಲಸಗಳೇನು
ಕಾಂಗ್ರೆಸ್ ಮತ್ತು ಪಕ್ಷದ ಅಭ್ಯರ್ಥಿಗಳ ಜತೆಗೆ ಕೆಲಸ ಮಾಡುವ ರಾಜಕೀಯ ಸಲಹೆಗಾರರೊಬ್ಬರು ನೀಡಿದ ಮಾಹತಿ ಪ್ರಕಾರ,
1. ಅಭ್ಯರ್ಥಿ ಅಥವಾ ಪಕ್ಷದ ಸಂದೇಶವನ್ನು ತಳಮಟ್ಟಕ್ಕೆ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಅವರ ಮತದಾರರ ನೆಲೆಯನ್ನು ಮೀರಿ ವಿಸ್ತರಿಸುವುದನ್ನು ಖಚಿತಪಡಿಸಿಕೊಳ್ಳುವುದು ರಾಜಕೀಯ ಸಮಾಲೋಚನೆಯ ಪ್ರಾಥಮಿಕ ಕೆಲಸ.
2. ಪಕ್ಷ ಅಥವಾ ಅಭ್ಯರ್ಥಿಯು ಒಂದು ತಮ್ಮ ಪ್ರಚಾರಕ್ಕೆ ಒಂದು ನಿರೂಪಣೆಯನ್ನು ಹೊಂದಬೇಕು. ಅದನ್ನು ಪಕ್ಷದ ಸಿದ್ಧಾಂತಕ್ಕೆ ತಕ್ಕಂತೆ ರೂಪಿಸುವ ಹೊಣೆಗಾರಿಕೆ
3. ಮತದಾರರೊಂದಿಗೆ ವೈಯಕ್ತಿಕ ಸಂಪರ್ಕ ಸಾಧಿಸುವುದು. ಆ ಮೂಲಕ ಚುನಾವಣೆ ಗೆಲ್ಲುವ ಅವಕಾಶ ಹೆಚ್ಚಿಸುವುದು
4. ರಾಜಕೀಯ ವಿದ್ಯಮಾನಗಳ ಕಡೆಗೊಂದು ಪಕ್ಷಿ ನೋಟ ಹೊಂದಿರುವುದು, ಅದರಿಂದ ತಮಗೆ ಬೇಕಾದುದನ್ನು ಬಳಸಿಕೊಂಡು ಅಭ್ಯರ್ಥಿಗೆ, ಪಕ್ಷಕ್ಕೆ ನೆರವಾಗುವುದು.
5. ಪಕ್ಷದ ಬ್ರಾಂಡಿಂಗ್ ಮತ್ತು ಅಭ್ಯರ್ಥಿಯ ವೈಯಕ್ತಿಕ ಬ್ರಾಂಡಿಂಗ್ ಕಡೆಗೆ ಗಮನಹರಿಸುವುದು