KCR Launches National Party: ರಾಷ್ಟ್ರೀಯ ಪಕ್ಷ ಸ್ಥಾಪಿಸಿದ ಕೆಸಿಆರ್: 2024ರಲ್ಲಿ ಮೋದಿ ವಿರುದ್ಧ ವಾರ್!
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಇದೀಗ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಿದ್ದು, ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಎಂದು ಮರುನಾಮಕರಣ ಮಾಡಲಾಗಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿರುವ ʼತೆಲಂಗಾಣ ಭವನʼದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ, ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ನೂತನ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಿದರು.

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಇದೀಗ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಿದ್ದು, ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಎಂದು ಮರುನಾಮಕರಣ ಮಾಡಲಾಗಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿರುವ ʼತೆಲಂಗಾಣ ಭವನʼದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ, ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ನೂತನ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಿದರು.
ಟ್ರೆಂಡಿಂಗ್ ಸುದ್ದಿ
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೆಸಿಆರ್, ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್)ಯು ಭಾರತದ ರಾಜಕಾರಣದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. 2024ರ ಲೋಕಸಭೆ ಚುನಾವಣೆ ಭಾರತದ ರಾಜಕಾರಣ ಇತಿಹಾಸದಲ್ಲಿ ಅತ್ಯಂತ ಮಹತ್ವದ ಚುನಾವಣೆಯಾಗಲಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅಳಿವು-ಉಳಿವು ಈ ಚುನಾವಣೆಯ ಮೇಲೆ ಅವಲಂಬಿತವಾಗಿದೆ ಎಂದು ಕೆಸಿಆರ್ ಅಭಿಪ್ರಾಯಪಟ್ಟರು.
2024ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲೇಬೇಕಿದೆ. ಇಲ್ಲದಿದ್ದರೆ ದೇಶದಿಂದ ಪ್ರಜಾಪ್ರಭುತ್ವ ಮಾಯವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳೆಲ್ಲಾ ಒಂದೇ ವೇದಿಕೆಯಡಿ ಬರುವುದು ಅನಿವಾರ್ಯ ಎಂದು ಇದೇ ವೇಳೆ ಕೆಸಿಆರ್ ಹೇಳಿದರು.
ಬಿಆರ್‌ಎಸ್ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಬಿಜೆಪಿ ವಿರುದ್ಧ ಸಂಘಟಿತ ಹೋರಾಟಕ್ಕೆ ಬಿಆರ್‌ಎಸ್ ಮುನ್ನುಡಿ ಬರೆಯಲಿದೆ. ಧರ್ಮಾಧಾರಿತ ರಾಜಕಾರಣ, ಕೋಮು ವಿಷಬೀಜ, ಸಂವಿಧಾನದ ಮೇಲೆ ನಿರಂತರ ದಾಳಿ, ವಿಪಕ್ಷಗಳ ಧ್ವನಿ ಅಡಗಿಸುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಬಿಆರ್‌ಎಸ್ ಧ್ವನಿ ಎತ್ತಲಿದೆ ಎಂದು ಕೆಸಿಆರ್ ಸ್ಪಷ್ಟಪಡಿಸಿದರು.
ಟಿಆರ್‌ಎಸ್ ಈಗ ಬಿಆರ್‌ಎಸ್ ಹೆಸರಿನಲ್ಲಿ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಗೊಂಡಿದೆ. ಟಿಆರ್‌ಎಸ್ ತೆಲಂಗಾಣದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯಲಾಗುವುದು. ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು. ಮುಂದುನ ದಿನಗಳಲ್ಲಿ ತಾವು ದೇಶಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಕೆಸಿಆರ್ ಘೋಷಿಸಿದರು.
2024ರ ಸಾರ್ವತ್ರಿಕ ಚುನಾವಣೆಗಾಗಿ ನಾವು ಸಿದ್ಧತೆಯನ್ನು ಆರಂಭಿಸಿದ್ದೇವೆ. ಬಿಜೆಪಿ ವಿರೋಧಿ ಮಹಾ ಮೈತ್ರಿಕೂಟ ರಚಿಸಲು ನಾವು ಸರ್ವ ಪ್ರಯತ್ನವನ್ನು ಮಾಡಲಿದ್ದೇವೆ. ದೇಶದ ಜನರು ಎದುರಿಸುತ್ತಿರು ಜ್ವಲಂತ ಸಮಸ್ಯೆಗಳು ಮತ್ತು ಬಿಜೆಪಿಯ ವೈಫಲ್ಯವನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸಲಿದ್ದೇವೆ. ಭಾರತ ಸಾಗಬೇಕಾದ ದಾರಿ ಯಾವುದು ಎಂಬುದನ್ನು ಈ ದೇಶದ ಜನರು ತೀರ್ಮಾನ ಮಾಡಲಿದ್ದಾರೆ ಎಂದು ಕೆಸಿಆರ್ ಹೇಳಿದರು.
ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಭಾವ ಹೊಂದಿರುವ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಯಡಿ ತರುವುದು ಕೆಸಿಆರ್ ಉದ್ದೇಶವಾಗಿದೆ. ಪಶ್ಚಿಮ ಬಂಗಾಳದ ಟಿಎಂಸಿ, ಬಿಹಾರದ ಜೆಡಿಯು, ಅರ್‌ಜೆಡಿ, ಉತ್ತರ ಪ್ರದೇಶದ ಸಮಾಕವಾದಿ ಪಕ್ಷ, ತಮಿಳುನಾಡಿನ ಡಿಎಂಕೆ ಹಾಗೂ ಕರ್ನಾಟಕದ ಜೆಡಿಎಸ್ ಪಕ್ಷಗಳನ್ನು ಒಳಗೊಂಡ ಒಂದು ವಿಶಾಲ ಮೈತ್ರಿಕೂಟ ರಚಿಸುವುದು ತೆಲಂಗಾಣ ಮುಖ್ಯಮಂತ್ರಿ ಕನಸು.
ಈಗಾಗಲೇ ಈ ರಾಜಕೀಯ ಪಕ್ಷಗಳೊಂದಿಗೆ ಒಂದು ಸುತ್ತು ಮಾತುಕತೆ ನಡೆಸಿರುವ ಕೆಸಿಆರ್, ಇದೀಗ ನೂತನ ರಾಷ್ಟ್ರೀಯ ಪಕ್ಷದ ನೆರವಿನೊಂದಿಗೆ ತಮ್ಮ ಪ್ರಯತ್ನವನ್ನು ಮತ್ತಷ್ಟು ಚುರುಕುಗೊಳಿಸಲು ಸಜ್ಜಾಗಿದ್ದಾರೆ. ಕೆಸಿಆರ್ ಅವರ ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಇದಕ್ಕೂ ಮುನ್ನ ನೂತನ ರಾಷ್ಟ್ರೀಯ ಪಕ್ಷ ಘೋಷಣೆಗಾಗಿ ತೆಲಂಗಾಣ ಭವನಕ್ಕೆ ಆಗಮಿಸಿದ ಕೆಸಿಆರ್ ಮತ್ತು ಇತರ ಟಿಆರ್‌ಎಸ್ ನಾಯಕರನ್ನು, ಕಾರ್ಯಕರ್ತರು ಹಾಗೂ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ, ಹೈದರಾಬಾದ್‌ನಾದ್ಯಂತ ಸಂಭ್ರಮ ಮನೆ ಮಾಡಿತ್ತು. ಈ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದದಲ್ಲಿ ಜೆಡಿಎಸ್ ಪಕ್ಷದ 20 ಶಾಸಕರೂ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು.
ಸಂಬಂಧಿತ ಲೇಖನ
ವಿಭಾಗ