ಕನ್ನಡ ಸುದ್ದಿ  /  Nation And-world  /  Telangana Cm Kcr To Launch New National Political Party On Dussehra

KCR To Launch New Party: ದಸರಾ ಬಳಿಕ ರಾಷ್ಟ್ರೀಯ ಪಕ್ಷ ಘೋಷಣೆ ಮಾಡಲಿರುವ ಕೆಸಿಆರ್: ಟಿಆರ್‌ಎಸ್‌ ಇನ್ಮುಂದೆ...!

ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ದಸರಾ ಹಬ್ಬದ ದಿನದಂದು ತಮ್ಮ ನೂತನ ರಾಷ್ಟ್ರೀಯ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ. ನಾಳೆ(ಅ.5 ರಂದು-ಬುಧವಾರ) ಮಧ್ಯಾಹ್ನ 1:19 ಕ್ಕೆ ಹೊಸ ರಾಜಕೀಯ ಪಕ್ಷ ಘೋಷಣೆಯ ಮುಹೂರ್ತವನ್ನು ನಿಗದಿಪಡಿಸಲಾಗಿದೆ. ನೂತನ ರಾಷ್ಟ್ರೀಯ ಪಕ್ಷವನ್ನು ಭಾರತೀಯ ರಾಷ್ಟ್ರ ಸಮಿತಿ ಅಥವಾ BRS ಎಂದು ಕರೆಯುವ ಸಾಧ್ಯತೆಯಿದೆ.

ಕೆಸಿಆರ್‌ (ಸಂಗ್ರಹ ಚಿತ್ರ)
ಕೆಸಿಆರ್‌ (ಸಂಗ್ರಹ ಚಿತ್ರ) (PTI)

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ದಸರಾ ಹಬ್ಬದ ದಿನದಂದು ತಮ್ಮ ನೂತನ ರಾಷ್ಟ್ರೀಯ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ. ನಾಳೆ(ಅ.5 ರಂದು-ಬುಧವಾರ) ಮಧ್ಯಾಹ್ನ 1:19 ಕ್ಕೆ ಹೊಸ ರಾಜಕೀಯ ಪಕ್ಷ ಘೋಷಣೆಯ ಮುಹೂರ್ತವನ್ನು ನಿಗದಿಪಡಿಸಲಾಗಿದೆ.

ಕೆಸಿಆರ್‌ ಕಳೆದ ಭಾನುವಾರ (ಅ.೦2) ತಮ್ಮ ಸಂಪುಟ ಸಹೋದ್ಯೋಗಿಗಳು ಮತ್ತು ಪಕ್ಷದ ಎಲ್ಲಾ 33 ಜಿಲ್ಲಾಧ್ಯಕ್ಷರೊಂದಿಗೆ ಉಪಾಹಾರ ಕೂಟವನ್ನು ನಡೆಸಿದ್ದು, ರಾಷ್ಟ್ರೀಯ ಪಕ್ಷ ಆರಂಭಿಸುವ ಮಾರ್ಗಸೂಚಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಟಿಆರ್‌ಎಸ್ ಶಾಸಕಾಂಗ ಪಕ್ಷ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ವಿಸ್ತೃತ ಸಭೆ ನಾಳೆ(ಅ.5 ರಂದು-ಬುಧವಾರ) ಬುಧವಾರ ತೆಲಂಗಾಣ ಭವನದಲ್ಲಿ ನಡೆಯುವ ನಿರೀಕ್ಷೆಯಿದೆ. ಇದರಲ್ಲಿ ಟಿಆರ್‌ಎಸ್ ರಾಷ್ಟ್ರೀಯ ಪಕ್ಷವಾಗುವ ಬಗ್ಗೆ ನಿರ್ಣಯವನ್ನು ಮಂಡಿಸಲಾಗುವುದು. ನೂತನ ರಾಷ್ಟ್ರೀಯ ಪಕ್ಷವನ್ನು ಭಾರತೀಯ ರಾಷ್ಟ್ರ ಸಮಿತಿ ಅಥವಾ BRS ಎಂದು ಕರೆಯುವ ಸಾಧ್ಯತೆಯಿದೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

ಸಂಸತ್ತಿನ ಮತ್ತು ವಿಧಾನಸಭೆಯ ಚುನಾಯಿತ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ಜಿಲ್ಲಾ ಪರಿಷತ್ತಿನ ಅಧ್ಯಕ್ಷರು, ಮೇಯರ್‌ಗಳು ಮತ್ತು ಪುರಸಭೆಯ ಅಧ್ಯಕ್ಷರು ಸೇರಿ 283 ಮಂದಿ ಆರ್‌ಎಸ್ ಶಾಸಕಾಂಗ ಪಕ್ಷ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ವಿಸ್ತೃತ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಟಿಆರ್‌ಎಸ್‌ಗೆ ಮರುನಾಮಕರಣ ಮಾಡುವ ನಿರ್ಣಯವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು. ರಾಜ್ಯ ಮಾನ್ಯತೆ ಪಡೆದ ಪಕ್ಷವಾಗಿ ಟಿಆರ್‌ಎಸ್ ಯಾವುದೇ ರಾಜ್ಯದಲ್ಲಿ ಸ್ಪರ್ಧಿಸಬಹುದು.ಮುಂಬರುವ 2024ರ ರಾಷ್ಟ್ರೀಯ ಚುನಾವಣೆಯಲ್ಲಿ ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ, ಟಿಆರ್‌ಎಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆಯಬಹುದು. ಅದಕ್ಕೂ ಮುನ್ನ ವಿಧಾನಸಭೆ ಚುನಾವಣೆಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶೇ.6ರಷ್ಟು ಮತಗಳನ್ನು ಪಡೆಯುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಬಹುದು.

ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಬಿಆರ್‌ಎಸ್ ಹೊರಹೊಮ್ಮಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಬಿಆರ್‌ಎಸ್‌ ನಡುವೆ ನೇರ ಹೋರಾಟ ನಡೆಯಲಿದೆ ಎಂದು ಕೆಸಿಆರ್‌ ಈಗಾಗಲೇ ಘೋಷಿಸಿದ್ದಾರೆ. ಪಕ್ಷವು ತನ್ನ ಚುನಾವಣಾ ಚಿಹ್ನೆಯಾದ ಅಂಬಾಸಿಡರ್ ಕಾರು ಮತ್ತು ಅದರ ಗುಲಾಬಿ ಬಣ್ಣವನ್ನು ಉಳಿಸಿಕೊಳ್ಳಲು ಬಯಸಿದ್ದು, ಅಧಿಕೃತವಾಗಿ ರಾಷ್ಟ್ರೀಯ ಪಕ್ಷವಾಗುವ ಪ್ರಕ್ರಿಯೆಗೆ ಇನ್ನೂ ಸಮಯವಿರುವುದರಿಂದ ಈ ಕುರಿತು ಮತ್ತಷ್ಟು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಟಿಆರ್‌ಎಸ್‌ನ ರಾಷ್ಟ್ರೀಯ ಸ್ವರೂಪದ ಪಕ್ಷವು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಅದಕ್ಕೂ ಮೊದಲು ನವೆಂಬರ್ 4 ರಂದು ನಡೆಯಲಿರುವ ತೆಲಂಗಾಣದ ಮುನುಗೋಡು ಉಪಚುನಾವಣೆಯಲ್ಲೂ ಟಿಆರ್‌ಎಸ್‌ ರಾಷ್ಟ್ರೀಯ ಪಕ್ಷವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಡಿಸೆಂಬರ್ 9 ರಂದು ಕೆಸಿಆರ್ ದೆಹಲಿಯಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಲು ಬಯಿಸಿದ್ಧಾರೆ ಎನ್ನಲಾಗಿದೆ. ತಮ್ಮನ್ನು ಬೆಂಬಲಿಸುವ ಸಂಘಟನೆಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ BRS ಪಕ್ಷವನ್ನು ಆರಂಭಿಸುವುದು ಕೆಸಿಆರ್‌ ಉದ್ದೇಶವಾಗಿದೆ. ವಿಶೇಷ ವಿಮಾನದಲ್ಲಿ ದೇಶಾದ್ಯಂತ ಸಂಚರಿಸಿ ಪಕ್ಷದ ಪರ ಪ್ರಚಾರ ಮಾಡಲು ಕೆಸಿಆರ್‌ ಸಿದ್ದರಾಗಿದ್ದಾರೆ.

ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಹಾಗೂ ಇತರ ಕೆಲವು ನಾಯಕರು, ದೆಹಲಿಯಲ್ಲಿ ಕೆಸಿಆರ್‌ ಆಯೋಜಿಸಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶಿಸುವುದು ಕೆಸಿಆರ್ ಗುರಿಯಾಗಿದೆ ಎನ್ನುವುದು ಗುಟ್ಟಾಗಿ ಉಳಿದ ಸಂಗತಿ ಏನಲ್ಲ.

ಪಕ್ಷದ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಕಳೆದ ಎಂಟು ವರ್ಷಗಳಿಂದ ತೆಲಂಗಾಣದಲ್ಲಿ ಜಾರಿಗೊಳಿಸಲಾದ ಅತ್ಯಂತ ಯಶಸ್ವಿ ಕಲ್ಯಾಣ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಕೆಸಿಆರ್‌ ಪಕ್ಷದ ನಾಯಕರಿಗೆ ಆದೇಶ ನೀಡಿದ್ದಾರೆ. ದೇಶದ ಎಲ್ಲಾ ರಾಜ್ಯಗಳಿಗೆ ಪ್ರವಾಸ ಮಾಡಿ ತೆಲಂಗಾಣದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಕೆಸಿಆರ್‌ ಪಕ್ಷದ ನಾಯಕರಿಗೆ ಸಲಹೆ ನೀಡಿದ್ದಾರೆ.

ಪರ್ಯಾಯ ರಾಜಕೀಯ, ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಜನರ ಮುಂದೆ ಪ್ರಸ್ತುತಪಡಿಸುವುದು ಹೆಚ್ಚು ಮುಖ್ಯ ಎಂದು ಕೆಸಿಆರ್‌ ನಂಬಿದ್ಧಾರೆ. ಕೆಸಿಆರ್ ಸ್ವತಃ ದಸರಾ‌ ಹಬ್ಬದ ನಂತರ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಂತಹ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡಲು ಉದ್ದೇಶಿಸಿದ್ದಾರೆ, ಸಮಾನ ಮನಸ್ಕ ರಾಜಕೀಯ ನಾಯಕರನ್ನು ಮಾತ್ರವಲ್ಲದೆ, ರೈತ ಸಂಘಗಳು, ಕಾರ್ಮಿಕ ಸಂಘಗಳು ಮತ್ತು ನಾಗರಿಕ ಸಮಾಜದ ಗುಂಪುಗಳನ್ನು ಕೆಸಿಆರ್‌ ತಲುಪಲಿದ್ಧಾರೆ ಎನ್ನಲಾಗಿದೆ.

ವಿಭಾಗ