Telangana Election: ತೆಲಂಗಾಣ ಚುನಾವಣೆ ನಾಳೆಯೇ ಮತದಾನ, 3ನೇ ಬಾರಿ ಸಿಎಂ ಆಗೋ ಆಸೆ ಕೆಸಿಆರ್‌ಗೆ, ಮೊದಲ ಸಲ ಅಧಿಕಾರ ಹಿಡಿವಾಸೆ ಕಾಂಗ್ರೆಸ್‌ಗೆ
ತೀವ್ರ ಕುತೂಹಲ ಕೆರಳಿಸಿರುವ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಈ ರಾಜ್ಯದಲ್ಲಿ ನಾಳೆಯೇ ಮತದಾನ. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದಾರೆ ಮುಖ್ಯಮಂತ್ರಿ ಕೆಸಿಆರ್. ಅದೇ ರೀತಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ ಕಾಂಗ್ರೆಸ್. ಈ ವಿದ್ಯಮಾನದ ರಾಜಕೀಯ ವಿಶ್ಲೇಷಣೆ ನೀಡಿದ್ದಾರೆ ಎಚ್.ಮಾರುತಿ.
ಕೇವಲ 10 ವರ್ಷಗಳಷ್ಟು ಹಳೆಯದಾದ ತೆಲಂಗಾಣ ರಾಜ್ಯ ವಿಧಾನಸಭೆಯ 119 ಸ್ಥಾನಗಳಿಗೆ ಒಂದೇ ಹಂತದಲ್ಲಿ ಇದೇ ತಿಂಗಳ 30 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಆಡಳಿತಾರೂಢ ಭಾರತ ರಾಷ್ಟ್ರೀಯ ಸಮಿತಿ (ಬಿಆರ್ ಎಸ್) ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿದ್ದು ಬಿಜೆಪಿ 20-25 ಸ್ಥಾನಗಳನ್ನು ಮಾತ್ರ ಗಂಭೀರವಾಗಿ ಪರಿಣಮಿಸಿದೆ. ಹಾಗಾಗಿ ಎಲ್ಲರ ಕಣ್ಣು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮೂರನೇ ಅಧಿಕಾರ ಹಿಡಿಯಲಿದ್ದಾರೆಯೇ ಅಥವಾ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಯೇ ಎಂಬ ಚರ್ಚೆ ಮಾತ್ರ ನಡೆಯುತ್ತಿದೆ.
2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಆರ್ ಎಸ್ 119 ಸ್ಥಾನಗಳ ಪೈಕಿ 88 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಒಟ್ಟು ಶೇ. 47.4ರಷ್ಟು ಮತ ಪಡೆದು ದಾಖಲೆ ನಿರ್ಮಿಸಿತ್ತು. ಕಾಂಗ್ರೆಸ್ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ ಬಿಜೆಪಿ ಶೂನ್ಯ ಸಂಪಾದನೆ ಮಾಡಿದ್ದರೂ ಶೇ.6.98 ರಷ್ಟು ಮತ ಗಳಿಸಿ ಅಚ್ಚರಿ ಮೂಡಿಸಿತ್ತು. ನಂತರ ನಾಲ್ಕು ತಿಂಗಳಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ 19.65 ರಷ್ಟು ಮತ ಗಳಿಸಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.
ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗಿವೆ. ಕಾಂಗ್ರೆಸ್ ಅಧಿಕಾರ ಹಿಡಿಯುವಷ್ಟರ ಮಟ್ಟಿಗೆ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ. 2018ರಲ್ಲಿ 100 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿಯೂ 20 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಪ್ರಯತ್ನ ನಡೆಸಿದೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಬಿಜೆಪಿ.ಉತ್ತಮ ಸಾಧನೆ ಮಾಡಿತ್ತು. ಮುಖ್ಯಮಂತ್ರಿ ಕೆಸಿಆರ್ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ಈ ಬೆಳವಣಿಗೆಗಳು ಫಲಿತಾಂಶವನ್ನು ಎಲ್ಲಿಗೆ ತಂದು ನಿಲ್ಲಿಸುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.
ಕೆಸಿಆರ್ ಮೂರನೇ ಬಾರಿಗೆ ಗದ್ದುಗೆ ಹಿಡಿಯಲಿದ್ದಾರೆಯೆ?
ಆಡಳಿತ ವಿರೋಧಿ ಅಲೆಯ ನಡುವೆಯೂ ಬಿಆರ್ ಎಸ್ ನೆರವಿಗೆ ಧಾವಿಸುವ ಹಲವು ಸಾಧನೆಗಳಿವೆ. ಇಡೀ ತೆಲಂಗಾಣ ರಾಜ್ಯವನ್ನು ಹಸಿರುವಾಸಿ ಮಾಡಿದ್ದು ಎಲ್ಲೆಲ್ಲೂ ನೀರಾವರಿ ಭೂಮಿ ಎದ್ದು ಕಾಣುತ್ತಿದೆ. ಇದೇ ಕಾರಣಕ್ಕೆ ತೆಲಂಗಾಣ ತಲಾದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಮೂಲಸೌಕರ್ಯ, ಆರೋಗ್ಯ ಕ್ಷೇತ್ರದ ಸಾಧನೆ, ನಿರಂತರ ವಿದ್ಯುತ್ ಪೂರೈಕೆ ಮೊದಲಾದ ಸಾಧನೆಗಳನ್ನು ಮತದಾರರ ಮುಂದಿಡುತ್ತಿದೆ. ಆಗಸ್ಟ್ ತಿಂಗಳಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಪ್ರಚಾರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ. ಪ್ರತ್ಯೇಕ ರಾಜ್ಯಕ್ಕಾಗಿ ಕೆಸಿಆರ್ 2009ರಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಹೋರಾಟ ರಾಜ್ಯದ ಜನಮಾನಸದಿಂದ ಮರೆಯಾಗಿಲ್ಲ.
ಬಿಜೆಪಿ ಬಿಆರ್ ಎಸ್ ಒಳ ಒಪ್ಪಂದ?
ಈ ಮಧ್ಯೆ ಬಿಜೆಪಿ ಮತ್ತು ಬಿಆರ್‌ಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿಂದಿನ ಬಿಜೆಪಿ ರಾಜ್ಯ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿರುವುದೂ ಒಪ್ಪಂದದ ಭಾಗ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಮೇಲಾಗಿ 20 ಸ್ಥಾನಗಳನ್ನು ಹೊರತುಪಡಿಸಿ ಬಿಜೆಪಿ ಬೇರೆ ಯಾವುದೇ ಕ್ಷೇತ್ರಗಳಲ್ಲೂ ಗಂಭೀರವಾಗಿ ಪ್ರಚಾರ ನಡೆಸುತ್ತಿಲ್ಲ. ಅಲ್ಲೆಲ್ಲಾ ಬಿಆರ್ ಎಸ್ ಪರವಾಗಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್ ಗೆಲುವಿನ ದಡ ಮುಟ್ಟಲಿದೆಯೇ?
ಕಾಂಗ್ರೆಸ್ ಹುರುಪಿನಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಅಧಿಕಾರ ಹಿಡಿಯುವ ಛಲದಿಂದ ಹೋರಾಟ ನಡೆಸುತ್ತಿದೆ. ತೆಲಂಗಾಣಕ್ಕೆ ಹೊಂದಿಕೊಂಡಿರುವ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರುವುದು ಒಂದು ಕಾರಣವಾದರೆ ಅಲ್ಲಿಯೂ ಭರಪೂರ ಉಚಿತ ಕೊಡುಗೆಗಳನ್ನು ಘೋಷಿಸಿರುವುದು ಎರಡನೇ ಕಾರಣ. ಸಹಜವಾಗಿಯೇ ನೆರೆ ರಾಜ್ಯದ ಫಲಿತಾಂಶ ಪ್ರಭಾವ
ಬೀರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಕಾಂಗ್ರೆಸ್ ಧುರೀಣರು. ರೇವಂತ್ ರೆಡ್ಡಿ, ವಿಜಯಶಾಂತಿ ಮೊದಲಾದ ನಾಯಕರು ಕೈ ಹಿಡಿದಿರುವುದ ಪ್ಲಸ್ ಪಾಯಿಂಟ್. ಬಿ ಆರ್ ಎಸ್ ಆಡಳಿತಾರೂಢ ವಿರೋಧಿ ಅಲೆ ಎದುರಿಸುತ್ತಿರುವೂ ಸಹಾಯಕ್ಕೆ ಬರಲಿದೆ. ಈ ಬಾರಿ ಅಲ್ಪಸಂಖ್ಯಾತ ಮತಗಳೂ ಕಾಂಗ್ರೆಸ್ ನತ್ತ ವಾಲುತ್ತವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಈ ಬಾರಿ ಬಿ ಆರ್ ಎಸ್ ಮೂವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದರೆ ಕಾಂಗ್ರೆಸ್ ಐವರಿಗೆ ಟಿಕೆಟ್ ನೀಡಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಹೈದರಾಬಾದ್ ನ 9 ಸ್ಥಾನಗಳನ್ನು ಹೊರತುಪಡಿಸಿ ಬೇರೆಲ್ಲೂ ಸ್ಪರ್ಧೆ ಮಾಡಿಲ್ಲ. ರಾಜ್ಯದ ಉಳಿದ ಕ್ಷೇತ್ರಗಳಲ್ಲಿ ಬಿಆರ್ ಎಸ್ ಗೆ ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಎಲ್ಲ ಊಹಾಪೋಹ ಮತ್ತು ಪ್ರಶ್ನೆಗಳಿಗೆ ಡಿಸೆಂಬರ್ 3ರಂದು ಉತ್ತರ ದೊರಕಲಿದೆ.
ವಿಭಾಗ