Political Analysis: ಕೆಸಿಆರ್ ಕೈ ತಪ್ಪುತ್ತಿದೆಯಾ ತೆಲಂಗಾಣ, ಮೋದಿ ಇಮೇಜ್ ಅನ್ನೇ ನಂಬಿದೆ ಬಿಜೆಪಿ, ಕಾಂಗ್ರೆಸ್ ಜಾಣ ನಡೆ, ಗಮನಿಸಿ ಈ 15 ಅಂಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Political Analysis: ಕೆಸಿಆರ್ ಕೈ ತಪ್ಪುತ್ತಿದೆಯಾ ತೆಲಂಗಾಣ, ಮೋದಿ ಇಮೇಜ್ ಅನ್ನೇ ನಂಬಿದೆ ಬಿಜೆಪಿ, ಕಾಂಗ್ರೆಸ್ ಜಾಣ ನಡೆ, ಗಮನಿಸಿ ಈ 15 ಅಂಶ

Political Analysis: ಕೆಸಿಆರ್ ಕೈ ತಪ್ಪುತ್ತಿದೆಯಾ ತೆಲಂಗಾಣ, ಮೋದಿ ಇಮೇಜ್ ಅನ್ನೇ ನಂಬಿದೆ ಬಿಜೆಪಿ, ಕಾಂಗ್ರೆಸ್ ಜಾಣ ನಡೆ, ಗಮನಿಸಿ ಈ 15 ಅಂಶ

ತೆಲಂಗಾಣ ವಿಧಾನ ಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಫಲಿತಾಂಶ (Telangana Assembly Election Exit Poll Result 2023) ಪ್ರಕಟವಾಗಿದೆ. ಆಡಳಿತಾರೂಢ ಬಿಆರ್‌ಎಸ್‌ಗೆ ಹಿನ್ನಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್‌ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಿದ್ದು, ಬಿಜೆಪಿ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ.

ತೆಲಂಗಾಣ ವಿಧಾನ ಸಭಾ ಚುನಾವಣೆ 2023ರ ಮತದಾನ ಮುಕ್ತಾಯವಾಗಿದ್ದು, ಡಿಸೆಂಬರ್ 3ರ ಫಲಿತಾಂಶವನ್ನು ಜನ ಎದುರುನೋಡುತ್ತಿದ್ದಾರೆ. (ಸಾಂಕೇತಿಕ ಚಿತ್ರ)
ತೆಲಂಗಾಣ ವಿಧಾನ ಸಭಾ ಚುನಾವಣೆ 2023ರ ಮತದಾನ ಮುಕ್ತಾಯವಾಗಿದ್ದು, ಡಿಸೆಂಬರ್ 3ರ ಫಲಿತಾಂಶವನ್ನು ಜನ ಎದುರುನೋಡುತ್ತಿದ್ದಾರೆ. (ಸಾಂಕೇತಿಕ ಚಿತ್ರ)

ತೆಲಂಗಾಣದಲ್ಲಿ ವಿಧಾನ ಸಭೆ ಚುನಾವಣೆ (telangana assembly elections 2023 ) ಯ ಮತದಾನ ಬಹುತೇಕ ಶಾಂತಿಯುತವಾಗಿ ಪೂರ್ಣವಾಗಿದೆ. ಮತದಾನ ಮುಕ್ತಾಯವಾದ ಬಳಿಕ ಮತಗಟ್ಟೆ ಸಮೀಕ್ಷೆ ಫಲಿತಾಂಶವೂ ಪ್ರಕಟವಾಗಿದೆ. ತೆಲಂಗಾಣ ರಾಜ್ಯ ರಚನೆಯಾದ ಬಳಿಕ ಎರಡು ಅವಧಿಗೆ ಪೂರ್ಣ ಬಹುಮತದೊಂದಿಗೆ ರಾಜ್ಯಭಾರ ಮಾಡಿದ್ದ ಕೆ ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ ಸರ್ಕಾರ ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿಯುವುದು ಕಷ್ಟ ಎಂಬ ಸುಳಿವು ಸಿಕ್ಕಿದೆ.

ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌)ಗೆ ಹಿನ್ನಡೆಯಾದ ಅಂಶಗಳೇನು, ಬಿಜೆಪಿ ಯಾಕೆ ಚೇತರಿಸಿಕೊಂಡಿಲ್ಲ? ಕಾಂಗ್ರೆಸ್ ಮ್ಯಾಜಿಕ್ ನಡೆಯಲು ಏನು ಕಾರಣ ಎಂಬಿತ್ಯಾದಿ ವಿಶ್ಲೇಷಣೆಗಳು ಶುರುವಾಗಿವೆ. ಹಾಗೆ ನೋಡಿದರೆ, ತೆಲಂಗಾಣ ರಾಜ್ಯ ರಚನೆಗೆ ಶ್ರಮಿಸಿದ ಕೆ ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ಗೆ ಮತದಾರರು ಎರಡು ಅವಧಿಗೆ ಆಡಳಿತದ ಅವಕಾಶ ನೀಡಿದ್ದ. ಈಗ ಮೂರನೇ ಅವಧಿ ಕೂಡ ಸಿಗುವುದೇ ಎಂಬ ಕುತೂಹಲವಿದೆ.

ಆದಾಗ್ಯೂ, ಮತಗಟ್ಟೆ ಸಮೀಕ್ಷೆ ಫಲಿತಾಂಶ ಗಮನಿಸಿ ಪಕ್ಷಗಳ ಹಿನ್ನಡೆ ಮತ್ತು ಮುನ್ನಡೆಗಳನ್ನು ಅವಲೋಕಿಸುವುದಾದರೆ ಕೆಲವು ಅಂಶಗಳನ್ನು ಉಲ್ಲೇಖಿಸಬಹುದು.

ಬಿಆರ್‌ಎಸ್‌ ಹಿನ್ನಡೆಗೆ ಕಾರಣವಾಗಬಹುದಾದ 5 ಅಂಶಗಳು

1. ತೆಲಂಗಾಣ ರಾಜ್ಯ ರಚನೆ ಬಳಿಕ ಎರಡು ಅವಧಿಯಲ್ಲಿ ಆಡಳಿತ, ಮೂಲಸೌಕರ್ಯ ಮತ್ತು ಜನಪರ ಕಾರ್ಯಗಳ ಕಡೆಗೆ ಗಮನ ಕೊಡದೇ ಇದ್ದದ್ದು.

2. ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಗಳು ಪ್ರತಿಪಕ್ಷಗಳಿಗೆ ವಿಶೇಷವಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಸ್ತ್ರವಾಗಿದ್ದು.

3. ಪ್ರಮುಖ ಭ್ರಷ್ಟಾಚಾರದ ಹಗರಣಗಳು - ಕಾಳೇಶ್ವರಂ ಏತ ನೀರಾವರಿ ಯೋಜನೆ, ಮಿಯಾಪುರ ಜಮೀನು ಹಗರಣ, ಮಿಷನ್ ಕಾಕತೀಯ ಮತ್ತು ಮಿಷನ್ ಭಗೀರಥ, ಹೈದರಾಬಾದ್ ಹೊರ ವರ್ತುಲ ರಸ್ತೆ ಹಗರಣ,

4. ಕುಟುಂಬ ರಾಜಕಾರಣ ಮತ್ತು ಪಕ್ಷದೊಳಗೆ ನಾಯಕರು ಮತ್ತು ಕೆಸಿಆರ್ ಕುಟುಂಬ ಸದಸ್ಯರ ಅಸಮಾಧಾನ

5. ಎರಡನೇ ಅವಧಿಯಲ್ಲಿ ಆಡಳಿತ ಮೊನಚು ಕಳೆದುಕೊಂಡಿದ್ದು, ಹಲವು ಹಗರಣಗಳು ಬೆಳಕಿಗೆ ಬಂದವು.

ಕಾಂಗ್ರೆಸ್‌ ಮುನ್ನಡೆಗೆ ಕಾರಣವಾಗಬಹುದಾದ 5 ಅಂಶಗಳು

1. ಕಾಂಗ್ರೆಸ್‌ ಪಕ್ಷದ ಕೇಂದ್ರ ನಾಯಕತ್ವದಲ್ಲಿ ಬದಲಾವಣೆ ಮತ್ತು ತೆಲಂಗಾಣದಲ್ಲೂ ಪಕ್ಷ ಮರು ಸಂಘಟಿಸಿದ್ದು. ಎ. ರೇವಂತ ರೆಡ್ಡಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಸಿಆರ್ ಸರ್ಕಾರದ ಲೋಪಗಳನ್ನು ಜನರಿಗೆ ತೋರಿಸುತ್ತ ಬಂದದ್ದು.

2. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕಾರಣ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ್ದು.

3. ಕರ್ನಾಟಕ ಮಾದರಿಯಲ್ಲಿ ಚುನಾವಣೆಗೆ ಮುನ್ನ 6 ಗ್ಯಾರೆಂಟಿಗಳನ್ನು ಘೋಷಿಸಿದ್ದು, ಮಹಿಳೆಯರು ಮತ್ತು ಎಲ್ಲ ಸಮುದಾಯದವರನ್ನು ತಲುಪುವುದಕ್ಕೆ ಅಗತ್ಯ ಭರವಸೆ ನೀಡಿದ್ದು.

4. ಚುನಾವಣಾ ತಂತ್ರಗಾರರ ನೆರವಿನೊಂದಿಗೆ ಯೋಜಿತ ರೀತಿಯಲ್ಲಿ ಪ್ರಚಾರ ನಡೆಸಿದ್ದಲ್ಲದೆ, ಮತದಾರರನ್ನು ಓಲೈಸುವಲ್ಲಿ ಯಶಸ್ವಿಯಾಗಿರುವುದು.

5. ಎಲ್ಲದಕ್ಕೂ ಮಿಗಿಲಾಗಿ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಮಾದರಿಯಾಗಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದು, ಕರ್ನಾಟಕ ಸರ್ಕಾರದ ಜಾಹೀರಾತನ್ನು ತೆಲಂಗಾಣದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದು.

ಬಿಜೆಪಿ ಹಿಂದೆ ಬಿದ್ದದ್ದು ಎಲ್ಲಿ - ಗಮನಿಸಬಹುದಾದ 5 ಅಂಶಗಳು

1. ತೆಲಂಗಾಣದಲ್ಲಿ ಬಿಜೆಪಿಯೊಳಗಿನ ಭಿನ್ನಮತವನ್ನು ಶಮನಗೊಳಿಸುವುದು ತಡವಾಗಿದ್ದು, 2014 ರಲ್ಲಿ 5 ಸ್ಥಾನ ಗೆದ್ದಿದ್ದ ಬಿಜೆಪಿ 2018ರ ಚುನಾವಣೆಯಲ್ಲಿ 1 ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಸುಧಾರಿಸುವ ಲಕ್ಷಣಗಳನ್ನು ಮತಗಟ್ಟೆ ಸಮೀಕ್ಷೆ ಫಲಿತಾಂಶ ನೀಡಿದೆಯಾದರೂ ಅದು ಖಚಿತವಲ್ಲ.

2. ಸಮರ್ಥ ನಾಯಕತ್ವದ ಕೊರತೆ, ತೆಲಂಗಾಣ ಸರ್ಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತವನ್ನು ಬಿಂಬಿಸಿದ್ದಷ್ಟೇ ಹೊರತು, ಮತದಾರರನ್ನು ಒಲಿಸುವ ಯಾವ ಕೆಲಸವೂ ಆಗಲಿಲ್ಲ.

3. ಕಾಂಗ್ರೆಸ್‌ ಪಕ್ಷದ ಗ್ಯಾರೆಂಟಿ ಯೋಜನೆಗಳನ್ನು ಗಮನಿಸಿ ಒಂದಿಷ್ಟು ಉಚಿತ ಕೊಡುಗೆಗಳನ್ನು ಭರವಸೆಯಾಗಿ ನೀಡಿದರೂ, ತೆಲಂಗಾಣದ ರಾಜಕಾರಣದ ಮೇಲೆ ಪ್ರಭಾವ ಬೀರಬಲ್ಲ ಕರ್ನಾಟಕದಲ್ಲಿ ಮಾದರಿ ಸರ್ಕಾರ ರಚಿಸಿ ತೋರಿಸುವುದು ಬಿಜೆಪಿಗೆ ಸಾಧ್ಯವಾಗದೇ ಇರುವುದು.

4. ಕರ್ನಾಟಕದಂತೆಯೇ ಪ್ರಚಾರಕ್ಕೆ ಕೇಂದ್ರ ನಾಯಕತ್ವವನ್ನೇ ಅವಲಂಬಿಸಿದ್ದು. ಡಬಲ್ ಎಂಜಿನ್ ಸರ್ಕಾರದ ಮಾರಾಟವಾಗದ ಹಳಸಲು ಸರಕನ್ನೇ ಮತದಾರರಿಗೆ ಬಿಕರಿ ಮಾಡಲು ಪ್ರಯತ್ನಿಸಿದ್ದು.

5. ಇದುವರೆಗಿನ ಪ್ರಮುಖ ರಾಜ್ಯಗಳಲ್ಲಿ ಮಾಡಿದಂತೆಯೇ ರಾಜ್ಯ ನಾಯಕತ್ವ ಬೆಳೆಸುವುದಕ್ಕೆ, ಅವಕಾಶ ಇಲ್ಲದಂತೆ ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ಮತಗಳಿಸುವುದಕ್ಕೆ ಪ್ರಯತ್ನಿಸಿ ಹಿನ್ನಡೆ ಅನುಭವಿಸಿರುವಂಥದ್ದು

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.