ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತೆಲಂಗಾಣ ಫೋನ್ ಕದ್ದಾಲಿಕೆ; ಬಿಜೆಪಿ ನಾಯಕ ಬಿಎಲ್ ಸಂತೋಷ್ ಬಂಧನಕ್ಕೆ ಯೋಜನೆ ರೂಪಿಸಿದ್ದ ಕೆಸಿಆರ್‌, ನಿವೃತ್ತ ಡಿಸಿಪಿ ಹೇಳಿಕೆ 5 ಮುಖ್ಯ ಅಂಶಗಳು

ತೆಲಂಗಾಣ ಫೋನ್ ಕದ್ದಾಲಿಕೆ; ಬಿಜೆಪಿ ನಾಯಕ ಬಿಎಲ್ ಸಂತೋಷ್ ಬಂಧನಕ್ಕೆ ಯೋಜನೆ ರೂಪಿಸಿದ್ದ ಕೆಸಿಆರ್‌, ನಿವೃತ್ತ ಡಿಸಿಪಿ ಹೇಳಿಕೆ 5 ಮುಖ್ಯ ಅಂಶಗಳು

ತೆಲಂಗಾಣ ಫೋನ್ ಕದ್ದಾಲಿಕೆ ಕೇಸ್‌ ತನಿಖೆ ಮುಂದುವರಿದಂತೆ, ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಕೇಸ್‌ನಿಂದ ಬಿಡಿಸಲು, ಬಿಜೆಪಿ ನಾಯಕ ಬಿಎಲ್ ಸಂತೋಷ್ ಬಂಧನಕ್ಕೆ ಯೋಜನೆಯನ್ನು ಕೆಸಿಆರ್‌ ರೂಪಿಸಿದ್ದರು ಎಂದು ನಿವೃತ್ತ ಡಿಸಿಪಿ ರಾಧಾಕೃಷ್ಣ ರಾವ್ ಹೇಳಿದ್ದಾರೆ. ಅವರ ಹೇಳಿಕೆ 5 ಮುಖ್ಯ ಅಂಶಗಳು ಹೀಗಿವೆ.

ತೆಲಂಗಾಣ ಫೋನ್ ಕದ್ದಾಲಿಕೆ; ಬಿಜೆಪಿ ನಾಯಕ ಬಿಎಲ್ ಸಂತೋಷ್ (ಎಡ ಚಿತ್ರ) ಬಂಧನಕ್ಕೆ ಯೋಜನೆಯನ್ನು ಕೆಸಿ ಚಂದ್ರಶೇಖರ ರಾವ್ (ಬಲಚಿತ್ರ) ರೂಪಿಸಿದ್ದರು ಎಂದು ನಿವೃತ್ತ ಡಿಸಿಪಿ ಪಿ ರಾಧಾಕೃಷ್ಣ ರಾವ್ (ಮಧ್ಯದವರು) ಹೇಳಿದ್ದಾರೆ.
ತೆಲಂಗಾಣ ಫೋನ್ ಕದ್ದಾಲಿಕೆ; ಬಿಜೆಪಿ ನಾಯಕ ಬಿಎಲ್ ಸಂತೋಷ್ (ಎಡ ಚಿತ್ರ) ಬಂಧನಕ್ಕೆ ಯೋಜನೆಯನ್ನು ಕೆಸಿ ಚಂದ್ರಶೇಖರ ರಾವ್ (ಬಲಚಿತ್ರ) ರೂಪಿಸಿದ್ದರು ಎಂದು ನಿವೃತ್ತ ಡಿಸಿಪಿ ಪಿ ರಾಧಾಕೃಷ್ಣ ರಾವ್ (ಮಧ್ಯದವರು) ಹೇಳಿದ್ದಾರೆ.

ಹೈದರಾಬಾದ್‌: ತೆಲಂಗಾಣದ ಫೋನ್ ಕದ್ದಾಲಿಕೆ ಕೇಸ್‌ ಪ್ರಕರಣದಲ್ಲಿ ಆರೋಪಿಯಾಗಿರುವ ನಿವೃತ್ತ ಡಿಸಿಪಿ ಪಿ ರಾಧಾಕೃಷ್ಣ ರಾವ್ ನೀಡಿರುವ ಹೇಳಿಕೆ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಸಿ ಚಂದ್ರಶೇಖರ ರಾವ್ ಅವರು 2022ರ 'ಬಿಆರ್‌ಎಸ್ ಶಾಸಕರ ಖರೀದಿ ಪ್ರಕರಣ'ವನ್ನು ಬಳಸಿಕೊಂಡು ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರನ್ನು ಬಂಧಿಸಿ, ಬಿಜೆಪಿಯನ್ನು ಬ್ಲ್ಯಾಕ್ ಮೇಲ್ ಮಾಡಿ “ಸಂಧಾನ” ಮಾಡಲು ಮುಂದಾಗಿದ್ದರು ಎಂದು ರಾಧಾಕೃಷ್ಣ ರಾವ್ ಹೇಳಿರುವುದು ಇದಕ್ಕೆ ಕಾರಣ.

ಟ್ರೆಂಡಿಂಗ್​ ಸುದ್ದಿ

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲಿಸಿದ್ದ ದೆಹಲಿ ಅಬಕಾರಿ ಕೇಸ್‌ನಲ್ಲಿ ಸಿಲುಕಿದ್ದ ತಮ್ಮ ಪುತ್ರಿ ಕೆ. ಕವಿತಾ ಅವರನ್ನು ಅದರಿಂದ ಮುಕ್ತಗೊಳಿಸಿದರೆ, ಬಿಜೆಪಿ ನಾಯಕರ ವಿರುದ್ಧದ ಶಾಸಕರ ಖರೀದಿ ಪ್ರಕರಣವನ್ನೂ ಕೈಬಿಡಲು ಕೆಸಿಆರ್ ಮುಂದಾಗಿದ್ದರು ಎಂದು ನಿವೃತ್ತ ಡಿಸಿಪಿ ಪಿ ರಾಧಾಕೃಷ್ಣ ರಾವ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

ನಿವೃತ್ತ ಡಿಸಿಪಿ ಪಿ ರಾಧಾಕೃಷ್ಣ ರಾವ್ ಹೇಳಿಕೆಯ 5 ಮುಖ್ಯ ಅಂಶಗಳು

1) ತೆಲಂಗಾಣದಲ್ಲಿ 2023ರ ವಿಧಾನ ಸಭಾ ಚುನಾವಣೆಗೆ ಮೊದಲು ಅಕ್ಟೋಬರ್ ಕೊನೆಯ ವಾರದಲ್ಲಿ, ಒಂದು ದಿನ ವಿಶೇಷ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರಭಾಕರ ರಾವ್ ಅವರು ನನ್ನನ್ನು ಬರಮಾಡಿಕೊಂಡು, ಬಿಜೆಪಿಯಲ್ಲಿ ಪ್ರಭಾವಿ ಎಂದು ಹೇಳಿಕೊಳ್ಳುವ ಕೆಲವು ವ್ಯಕ್ತಿಗಳು ಬಿಆರ್‌ಎಸ್ ತೊರೆದು ಬಿಜೆಪಿಯನ್ನು ಸೇರಲು ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರು ಶಾಸಕರಿಂದ ಮಾಹಿತಿ ಪಡೆದು ಹೇಳಿದ್ದಾಗಿ ಎಂದು ನನಗೆ ಹೇಳಿದರು. ಇದರ ಮುಂದುವರಿದ ಭಾಗವಾಗಿ ಕೇಸ್ ದಾಖಲಾಯಿತು.

2) ತೆಲಂಗಾಣದಲ್ಲಿ ಬಿಆರ್‌ಎಸ್‌ ಶಾಸಕರ ಖರೀದಿ ಹಗರಣದಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನೂ ಬಂಧಿಸಲು ಕೆಸಿಆರ್ ಪ್ಲಾನ್ ಮಾಡಿದ್ದರು. ಹೀಗೆ ಮಾಡಿದರೆ ಬಿಜೆಪಿ ವರಿಷ್ಠರು ತಮ್ಮ ಜೊತೆಗೆ ಸಂಧಾನಕ್ಕೆ ಬರಲಿದ್ದಾರೆ. ಆಗ ಪುತ್ರಿ ಕವಿತಾ ವಿರುದ್ಧದ ಪ್ರಕರಣವನ್ನೂ ರದ್ದುಗೊಳಿಸುವುದಕ್ಕೆ ಒತ್ತಡ ಹೇರಬಹುದು ಎಂದು ಯೋಚಿಸಿದ್ದರು.

3) ಕೆಸಿಆರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಬಿಆರ್‌ಎಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಕೇಸ್ ದಾಖಲಿಸಲಾಗಿತ್ತು. ಇದರ ತನಿಖೆಗೆ ಕೆಸಿಆರ್ ಸರ್ಕಾರ ಎಸ್‌ಐಟಿಯನ್ನು ರಚಿಸಿತ್ತು. ಬಿಆರ್‌ಎಸ್ ಶಾಸಕರ ಖರೀದಿ ಪ್ರಕ್ರಿಯೆಯನ್ನು ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಆದೇಶದಂತೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪವನ್ನು ಇಟ್ಟುಕೊಂಡು ಅವರ ಬಂಧನಕ್ಕೆ ಯೋಜನೆ ರೂಪಿಸಲಾಗಿತ್ತು.

4) ಆದರೆ, ಬಿಆರ್‌ಎಸ್ ಶಾಸಕರ ಖರೀದಿ ಹಗರಣದ ತನಿಖೆಯ ವೇಳೆ ಪೊಲೀಸರು ಕೆಲವು ಲೋಪ ಎಸಗಿದರು. ಹಗರಣದ ಪ್ರಮುಖ ವ್ಯಕ್ತಿಯೊಬ್ಬ ಪೊಲೀಸರಿಂದ ಕೈಗೆ ಸಿಗದೆ ತಪ್ಪಿಸಿಕೊಂಡ. ಇದರ ಪರಿಣಾಮ, ಈ ಕೇಸ್ ಹೈಕೋರ್ಟ್‌ ಮೆಟ್ಟಿಲೇರಿತು. ಯಾರನ್ನೂ ಬಂಧಿಸಬೇಡಿ ಎಂದು ಕೋರ್ಟ್ ಆದೇಶ ನೀಡಿತು. ಇದರಿಂದಾಗಿ ಕೆಸಿಆರ್ ಲೆಕ್ಕಾಚಾರ ತಲೆಕೆಳಗಾಯಿತು. ಆ ಸಂದರ್ಭದಲ್ಲಿ ಆದ ಹಿನ್ನಡೆಗಾಗಿ ಅವರು ನಮ್ಮ ಮೇಲೆ ಕೂಗಾಡಿದ್ದರು.

5) ಕೆಸಿಆರ್ ಅವರು ನನ್ನ ನಿವೃತ್ತಿಯ ಬಳಿಕವೂ ಸೇವೆ ವಿಸ್ತರಣೆ ಮಾಡಿ ಹೈದರಾಬಾದ್‌ ಪೊಲೀಸ್‌ನ 2 ಮಹತ್ವದ ಹೊಣೆಗಾರಿಕೆ ನೀಡಿದ್ದರು. ಆ ಋಣದ ಕಾರಣಕ್ಕೆ ಇಷ್ಟು ದಿನ ಈ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ.

ಫೋನ್ ಕದ್ದಾಲಿಕೆ ಮತ್ತು ಇತರೆ ವಿಚಾರ

ದೆಹಲಿ ಅಬಕಾರಿ ಕೇಸ್‌ನಲ್ಲಿ ಪುತ್ರಿ ಕೆ.ಕವಿತಾ ಅವರು ಸಿಲುಕಿದ್ದು ಕೆಸಿಆರ್‌ ಅವರನ್ನು ಕಂಗೆಡಿಸಿತ್ತು. ಪುತ್ರಿ ಕೆ. ಕವಿತಾ ಅವರ ಮೇಲೆ ಇ.ಡಿ. ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿತ್ತು. ಇದರಿಂದ ಅವರನ್ನು ಹೊರತರುವ ಅವರ ಪ್ರಯತ್ನದಲ್ಲಿ ಭಾಗಿಯಾಗಿರುವುದಾಗಿ ರಾಧಾಕೃಷ್ಣ ರಾವ್ ಹೇಳಿದ್ದಾರೆ. ಕೆಸಿಆರ್ ಅವರನ್ನು ರಾಧಾಕೃಷ್ಣ ರಾವ್ ಪೆದ್ದಾಯನ (ಹಿರಿಯವರು) ಎಂದು ಸಂಬೋಧಿಸಿದ್ದಾರೆ.

ವಿಶೇಷ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಟಿ ಪ್ರಭಾಕರ್ ರಾವ್ ಅವರಿಗೆ ಅಕ್ರಮ ಫೋನ್ ಕದ್ದಾಲಿಕೆ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಮಾಜಿ ಮುಖ್ಯಮಂತ್ರಿ ವಹಿಸಿದ್ದರು ಎಂದು ವರದಿಯಾಗಿದೆ. ಪ್ರಭಾಕರ್ ರಾವ್ ಸದ್ಯ ಅಮೆರಿಕದಲ್ಲಿದ್ದು, ಶೀಘ್ರದಲ್ಲೇ ಹಿಂತಿರುಗುವ ನಿರೀಕ್ಷೆಯಿದೆ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ 'ಆರೋಪಿ ನಂ 1' ಇವರೇ ಇದ್ದಾರೆ.

ಟಿ20 ವರ್ಲ್ಡ್‌ಕಪ್ 2024