Telangana Vote Share: ತೆಲಂಗಾಣದಲ್ಲಿ ಮುಂದಿನ ಸರ್ಕಾರ ರಚನೆಗೆ ಬಹುಮತಕ್ಕೆ 60 ಸ್ಥಾನ ಬೇಕು, ಮತಗಳಿಕೆ ಎಷ್ಟಿರಬೇಕು, ಒಂದು ಲೆಕ್ಕಾಚಾರ
ತೆಲಂಗಾಣ ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ಹೊತ್ತಿನಲ್ಲಿ ಕೆಲವು ರಾಜಕೀಯ ಲೆಕ್ಕಾಚಾರಗಳು ಗಮನಸೆಳೆದಿವೆ. ತೆಲಂಗಾಣದಲ್ಲಿ ಮುಂದಿನ ಸರ್ಕಾರ ರಚನೆ ಆಗಬೇಕು ಎಂದಾದರೆ 119 ಸ್ಥಾನಗಳ ಪೈಕಿ ಯಾವುದೇ ಪಕ್ಷ 60 ಸ್ಥಾನ ಗೆಲ್ಲಬೇಕಾದ್ದು ಅವಶ್ಯ, ಹಾಗಾದರೆ ಸರ್ಕಾರ ರಚನೆ ಮಾಡಬೇಕಾದ ಯಾವುದೇ ಪಕ್ಷದ ಮತಗಳಿಕೆ ಎಷ್ಟಿರಬೇಕು? - ಹೀಗೊಂದು ಲೆಕ್ಕಾಚಾರ..
ತೆಲಂಗಾಣ ರಾಜ್ಯ ರಚನೆಯಾದ ನಂತರದಲ್ಲಿ ಇದು ಮೂರನೇ ಚುನಾವಣೆ. ಈಗಾಗಲೇ ಎರಡು ಚುನಾವಣೆಗಳಲ್ಲಿ ತೆಲಂಗಾಣ ರಾಜ್ಯ ರಚನೆಗೆ ಹೋರಾಟ ಮಾಡಿದ ಕೆ ಚಂದ್ರಶೇಖರ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಭಾರತ ರಾಷ್ಟ್ರ ಸಮಿತಿ) ಬಹುಮತದೊಂದಿಗೆ ಗೆದ್ದು ಸರ್ಕಾರ ರಚನೆ ಮಾಡಿತ್ತು. ಆದರೆ ಮೂರನೇ ಅವಧಿಗೆ ವಿಪಕ್ಷಗಳವಾದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ.
ತೆಲಂಗಾಣ ಚುನಾವಣಾ ಫಲಿತಾಂಶ (Telangana Election Results) ಪ್ರಕಟಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವ ಹೊತ್ತು ಇದು. ಈ ಸನ್ನಿವೇಶದಲ್ಲಿ ತೆಲಂಗಾಣದಲ್ಲಿ ಈ ಸಲ ಸರ್ಕಾರ ರಚನೆ ಮಾಡಬೇಕಾದರೆ ಮತಗಳಿಕೆ ಪ್ರಮಾಣ (Telangana Vote Share) ಎಷ್ಟಿರಬೇಕು ಎಂಬ ಅಂದಾಜು ಲೆಕ್ಕಾಚಾರ ಗಮನಸೆಳೆಯುತ್ತಿದೆ.
ಇದನ್ನೂ ಓದಿ| Assembly Election Results 2023: ಛತ್ತೀಸ್ಗಡದಲ್ಲಿ ಪುಟಿದೆದ್ದ ಬಿಜೆಪಿ, ತೆಲಂಗಾಣದಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ತೆಲಂಗಾಣದಲ್ಲಿ ಮುಂದಿನ ಸರ್ಕಾರ ರಚನೆಗೆ ಮತಗಳಿಕೆ ಪ್ರಮಾಣ ಎಷ್ಟಿರಬೇಕು
ಸದ್ಯದ ಸನ್ನಿವೇಶ ಪ್ರಕಾರ, ಮತದಾರರ ಸಂಖ್ಯೆ ಮತ್ತು ತೆಲಂಗಾಣ ಚುನಾವಣೆ ಗಮನಿಸಿದರೆ ಪಕ್ಷಗಳು ಶೇಕಡ 40 ಮತಗಳಿಕೆಯೊಂದಿಗೆ ಸರ್ಕಾರ ರಚಿಸುವ ಆಶಾಭಾವ ಹೊಂದಿರುವುದು ಕಂಡುಬರುತ್ತದೆ. 2014ರ ತೆಲಂಗಾಣ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಆಶಾಭಾವದಲ್ಲಿ ಸ್ವಲ್ಪ ವ್ಯತ್ಯಾಸವಿದೆ.
ತೆಲಂಗಾಣ ರಾಜ್ಯ ರಚನೆಯಾದ ಸಂದರ್ಭ ಅದು 2014ರ ವಿಧಾನ ಸಭಾ ಚುನಾವಣೆ ತೆಲಂಗಾಣಕ್ಕೆ ಮೊದಲನೇಯದ್ದು. ಶೇಕಡ 34 ಮತಗಳಿಸಿದ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಭಾರತ ರಾಷ್ಟ್ರ ಸಮಿತಿ) ಮ್ಯಾಜಿಕ್ ನಂಬರ್ ದಾಟಿ 63 ಸ್ಥಾನಗಳಲ್ಲಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿದ್ದದ್ದು ಈಗ ಇತಿಹಾಸ. ಕಾಂಗ್ರೆಸ್ ಶೇಕಡ 25 (21 ಸ್ಥಾನ), ಟಿಡಿಪಿ ಶೇಕಡ 14.6 (15 ಸ್ಥಾನ), ಬಿಜೆಪಿ ಶೇಕಡ 7 (5 ಸ್ಥಾನ) ಮತಗಳಿಸಿದ್ದು ಈ ಪಕ್ಷಗಳು 2014ರಲ್ಲಿ ಟಿಆರ್‌ಎಸ್‌ಗೆ ಪ್ರಬಲ ಪೈಪೋಟಿ ನೀಡುವುದು ಸಾಧ್ಯವಾಗಿಲ್ಲ. ಅದು ರಾಜ್ಯ ರಚನೆಯ ಕಾವು ಮತ್ತು ಹೋರಾಟಗಾರರ ಬಲ ಎಲ್ಲವೂ ತೆಲಂಗಾಣ ರಾಷ್ಟ್ರ ಸಮಿತಿ (ಕೆಆರ್‌ಎಸ್) ಜತೆಗಿತ್ತು.
ಇನ್ನು 2018ರ ಚುನಾವಣೆಗೆ ಬಂದರೆ, ಎರಡನೇ ಬಾರಿಗೆ ಅಂದಿನ ಟಿಆರ್‌ಎಸ್ ಶೇಕಡ 46.9 ಮತಗಳಿಕೆಯೊಂದಿಗೆ ಮತ್ತೆ ಅಧಿಕಾರ ಹಿಡಿಯಿತು. ಭರ್ಜರಿ 88 ಸ್ಥಾನಗಳಲ್ಲಿ ಗೆಲುವು ಕಂಡಿತ್ಉತ. ಕಾಂಗ್ರೆಸ್ ಪಕ್ಷ ಶೇಕಡ 28.4 ಮತಗಳಿಕೆಯೊಂದಿಗೆ ಪ್ರಮುಖ ವಿಪಕ್ಷವೆನಿಸಿತು. ಆದರೆ 19 ಸ್ಥಾನಗಳಲ್ಲಿ ಮಾತ್ರವೇ ಗೆಲುವು ಕಂಡಿತು. 2014ಕ್ಕಿಂತ 2 ಸ್ಥಾನ ಕಡಿಮೆ. ಟಿಡಿಪಿ ಪ್ರಭಾವ ಕುಸಿತ (ಮತಗಳಿಕೆ ಶೇಕಡ 3.5) ಕಂಡು 2 ಸ್ಥಾನಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿತ್ತು. ಬಿಜೆಪಿ ಮತಗಳಿಕೆ ಪ್ರಮಾಣ ಶೇಕಡ 7 ಉಳಿಯಿತಾದರೂ, ಸ್ಥಾನಗಳ ಸಂಖ್ಯೆ 5ರಿಂದ 1ಕ್ಕೆ ಇಳಿಯಿತು. ಇದೇ ವೇಳೆ ಎಐಎಂಐಎಂ 7 ಕ್ಷೇತ್ರಗಳಲ್ಲಿ ತನ್ನ ಪಾರಮ್ಯ ಉಳಿಸಿದೆಯಾದರೂ, ಮತ ಗಳಿಕೆ ಪ್ರಮಾಣದಲ್ಲಿ ಏರಿಳಿತ ಇದೆ. 2014ರಲ್ಲಿ ಶೇಕಡ 3.7 ಇದ್ದದ್ದು, 2018ಕ್ಕೆ ಶೇಕಡ 2.7ಕ್ಕೆ ಕುಸಿದಿದೆ.
ಲೋಕಸಭಾ ಚುನಾವಣೆ ಗಮನಿಸಿದರೆ ಯಾರು ಪ್ರಬಲರು
ತೆಲಂಗಾಣಕ್ಕೆ ಸಂಬಂಧಿಸಿದ 2018ರ ವಿಧಾನಸಭೆ ಚುನಾವಣೆಯಲ್ಲಿ, ಬಿಆರ್‌ಎಸ್ ಶೇಕಡಾ 47 ಮತ್ತು ಕಾಂಗ್ರೆಸ್ ಶೇಕಡಾ 29 ರಷ್ಟು ಮತಗಳನ್ನು ಗಳಿಸಿತ್ತು, ಬಿಜೆಪಿ ಶೇಕಡಾ 6.98 ರಷ್ಟು ಮತಗಳನ್ನು ಗಳಿಸಿತ್ತು. ಈ ಅವಧಿಯಲ್ಲಿ ಬಿಆರ್‌ಎಸ್‌ನ ಮತಗಳಿಕೆ ಪ್ರಮಾಣ ಉಳಿದ ಪಕ್ಷಗಳ ಒಟ್ಟು ಮತಗಳಿಕೆಗೆ ಸಮವಾಗಿ ನಿಂತಿತು. ನಂತರದ ಉಪಚುನಾವಣೆಗಳು ಮತ್ತು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿಯ ಉತ್ತಮ ಸಾಧನೆ ಮಾಡಿತು. ಕಾಂಗ್ರೆಸ್ ತನ್ನ ಮತ ಗಳಿಕೆ ಪಾಲನ್ನು ಇನ್ನೂ 18 ಪ್ರತಿಶತದಷ್ಟು ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡಿತು.
ಆದರೆ, ಕೆಲವು ತಿಂಗಳ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಟಿಆರ್‌ಎಸ್ (ಈಗ ಬಿಆರ್‌ಎಸ್) ಮತಗಳಿಕೆ ಪ್ರಮಾಣ ಶೇ.41.29ಕ್ಕೆ ಕುಸಿದಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಅದು ಶೇ.35.77ಕ್ಕೆ ಇಳಿದಿದೆ. ಆದರೆ ಪಕ್ಷವು 2014 ರ ಚುನಾವಣೆಗಿಂತ ಉತ್ತಮವಾದ ಮತ ಗಳಿಕೆಯನ್ನು ಹೊಂದಿದೆ.
ಬಿಜೆಪಿ ವಿಚಾರಕ್ಕೆ ಬಂದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇಕಡ 6.98 ಇದ್ದ ಮತಗಳಿಕೆ ಶೇಕಡ 28.43 ಕ್ಕೆ ಭಾರಿ ಜಿಗಿತವನ್ನು ಕಂಡಿದೆ. ಕಾಂಗ್ರೆಸ್ ಮತ ಗಳಿಕೆ ಕೂಡ ವಿಧಾನಸಭೆ ಚುನಾವಣೆಯಲ್ಲಿ ಶೇ.29 ಇದ್ದದ್ದು, ಲೋಕಸಭೆ ಚುನಾವಣೆಗೆ ಶೇ.29.48ಕ್ಕೆ ಸ್ವಲ್ಪ ಸುಧಾರಿಸಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಶೇಕಡ 6.64ಕ್ಕೆ ಇಳಿದಿತ್ತು.
ಒಟ್ಟಿನಲ್ಲಿ ಈ ಸಲ ವಿಧಾನಸಭೆ ಚುನಾವಣೆ 2014 ಅಥವಾ 2018ರ ರೀತಿ ಇರಲಿಲ್ಲ. ಭಾರತ ರಾಷ್ಟ್ರ ಸಮಿತಿ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ)ಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪ್ರಬಲ ಪೈಪೋಟಿ ಇತ್ತು. ಹೀಗಾಗಿ ಮತ ಗಳಿಕೆ ವಿಚಾರ ಈಗ ಹೆಚ್ಚು ಗಮನಸೆಳೆಯುತ್ತಿದ್ದು ಸಂಜೆ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ.
Assembly Election Results 2023 LIVE Updates: ಎಚ್‌ಟಿ ಯುಟ್ಯೂಬ್ ಚಾನೆಲ್‌ನಲ್ಲಿ ಫಲಿತಾಂಶದ ತಾಜಾ ಮಾಹಿತಿ
ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ ಮತ್ತು ನಿಖರ ವಿಶ್ಲೇಷಣೆ 'ಹಿಂದೂಸ್ತಾನ್ ಟೈಮ್ಸ್' ಯುಟ್ಯೂಬ್ ಚಾನೆಲ್‌ನಲ್ಲಿ ಲಭ್ಯ.