ಕನ್ನಡ ಸುದ್ದಿ  /  Nation And-world  /  Terrorist Attack In Moscow Russia 11 Arrested Including 4 Suspected Gunmen Rmy

Moscow terror attack: ರಷ್ಯಾದ ಮಾಸ್ಕೋದಲ್ಲಿ ಉಗ್ರರ ಗುಂಡಿನ ದಾಳಿ; ಮೃತರ ಸಂಖ್ಯೆ 115ಕ್ಕೆ ಏರಿಕೆ, 11 ಮಂದಿ ಬಂಧನ

Moscow terror attack: ಮಾಸ್ಕೋದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಮೃತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ತನಿಖೆ ತೀವ್ರಗೊಳಿಸಿರುವ ಭದ್ರತಾ ಪಡೆ ನಾಲ್ವರು ಶಂಕಿತ ಗನ್‌ಮ್ಯಾನ್‌ಗಳು ಸೇರಿ 11 ಮಂದಿಯನ್ನ ಅರೆಸ್ಟ್ ಮಾಡಿದೆ.

ಮಾರ್ಚ್ 22ರ ಶುಕ್ರವಾರ ಮಾಸ್ಕೋದ ಹೊರಗಿನ ಕ್ರಾಸ್ನೋಗೊರ್ಸ್ಕ್‌ನಲ್ಲಿ ಉಗ್ರರ ಗುಂಡಿನ ದಾಳಿಯ ನಂತರ ಕ್ರೋಕಸ್ ಸಿಟಿ ಹಾಲ್ ಹೊತ್ತಿ ಉರಿದ ದೃಶ್ಯ.
ಮಾರ್ಚ್ 22ರ ಶುಕ್ರವಾರ ಮಾಸ್ಕೋದ ಹೊರಗಿನ ಕ್ರಾಸ್ನೋಗೊರ್ಸ್ಕ್‌ನಲ್ಲಿ ಉಗ್ರರ ಗುಂಡಿನ ದಾಳಿಯ ನಂತರ ಕ್ರೋಕಸ್ ಸಿಟಿ ಹಾಲ್ ಹೊತ್ತಿ ಉರಿದ ದೃಶ್ಯ. (AFP)

ಮಾಸ್ಕೋ: ರಷ್ಯಾ (Russia) ರಾಜಧಾನಿ ಮಾಸ್ಕೋದ (Moscow) ಹೊರಗಿನ ಕ್ರೋಕಸ್ ಸಿಟಿ ಹಾಲ್‌ವೊಂದಕ್ಕೆ ನುಗ್ಗಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಘಟನೆ ಸಂಬಂಧ ನಾಲ್ವರು ಶಂಕಿತ ಬಂದೂಕುಧಾರಿಗಳು ಸೇರಿದಂತೆ 11 ಮಂದಿಯನ್ನು ಶನಿವಾರ (ಮಾರ್ಚ್ 23) ಬಂಧಿಸಲಾಗಿದೆ ಎಂದು ವರದಿಯಾಗಿದೆ. ಎಫ್ಎಸ್‌ಬಿ ಭದ್ರತಾ ಸೇವೆಯ ಮುಖ್ಯಸ್ಥ ಅಲೆಕ್ಸಾಂಡರ್ ಬೋರ್ಟ್ನಿಕೋವ್ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವರದಿ ನೀಡಿದ್ದು, ಬಂಧಿತರಲ್ಲಿ "ನಾಲ್ವರು ಭಯೋತ್ಪಾದಕರು" ಸೇರಿದ್ದಾರೆ ಮತ್ತು ಅವರ ಸಹಚರರನ್ನು ಗುರುತಿಸುವ ಕೆಲಸ ಮುಂದುವರಿದೆ ಎಂದು ತಿಳಿದುಬಂದಿದೆ. ಉಕ್ರೇನ್ ಗಡಿಗೆ ತೆರಳುತ್ತಿದ್ದಾಗ ನಾಲ್ವರು ಶಂಕಿತ ಬಂದೂಕುಧಾರಿಗಳನ್ನು ಬಂಧಿಸಲಾಗಿದೆ ಮತ್ತು ಅವರು ಉಕ್ರೇನ್‌ನಲ್ಲಿ ಸಂಪರ್ಕ ಹೊಂದಿದ್ದಾರೆ. ಬಂಧಿತರನ್ನು ಮಾಸ್ಕೋಗೆ ವರ್ಗಾಯಿಸಲಾಗುತ್ತಿದೆ ಎಂದು ಇಂಟರ್ ಫ್ಯಾಕ್ಸ್ ಉಲ್ಲೇಖಿಸಿದೆ.

ಉಗ್ರರ ದಾಳಿಯಲ್ಲಿ ಉಕ್ರೇನ್ ಸಂಪರ್ಕದ ಬಗ್ಗೆ ರಷ್ಯಾ ಯಾವುದೇ ಪುರಾವೆಗಳನ್ನು ಬಹಿರಂಗಪಡಿಸಿಲ್ಲ. ಶುಕ್ರವಾರ ನಡೆದಿರುವ ಉಗ್ರರ ದಾಳಿಗೂ ಕೈವ್‌ಗೆ ಯಾವುದೇ ಸಂಬಂಧವಿಲ್ಲ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಶುಕ್ರವಾರ ಹೇಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಮಾಸ್ಕೋ ದಾಳಿಯ ಹೊಣೆ ಹೊತ್ತುಕೊಂಡಿದೆ.

ಶುಕ್ರವಾರ ರಾತ್ರಿ ಮಾಸ್ಕೋದಿಂದ ನೈಋತ್ಯಕ್ಕೆ 340 ಕಿ.ಮೀ (210 ಮೈಲಿ) ದೂರದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಪೊಲೀಸರು ಗುರುತಿಸಿದ ರೆನಾಲ್ಟ್ ವಾಹನದಲ್ಲಿ ದಾಳಿಕೋರರು ಪರಾರಿಯಾಗಿದ್ದಾರೆ. ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಯಮ ಉಲ್ಲಂಘಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದರು ಎಂದು ರಷ್ಯಾದ ಸಂಸದ ಅಲೆಕ್ಸಾಂಡರ್ ಖಿನ್ಶ್ಟೆನ್ ಹೇಳಿದ್ದಾರೆ.

ಕಾರು ಬೆನ್ನಟ್ಟಿದ ನಂತರ ಇಬ್ಬರನ್ನು ಬಂಧಿಸಲಾಗಿದೆ. ಇತರ ಇಬ್ಬರು ಕಾಡಿನೊಳಕ್ಕೆ ಪರಾರಿಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಪರಾರಿಯಾಗಿದ್ದ ಇತರೆ ಇಬ್ಬರನ್ನೂ ಬಂಧಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಕಾರಿನಲ್ಲಿ ಪಿಸ್ತೂಲ್, ಮ್ಯಾಗಜೀನ್ ಮತ್ತು ತಜಕಿಸ್ತಾನದ ಪಾಸ್ಪೋರ್ಟ್‌ಗಳು ಪತ್ತೆಯಾಗಿವೆ ಎಂದು ಖಿನ್ಶೈನ್ ತಿಳಿಸಿದ್ದಾರೆ. ತಜಕಿಸ್ತಾನ್ ಮುಖ್ಯವಾಗಿ ಮುಸ್ಲಿಂ ಮಧ್ಯ ಏಷ್ಯಾದ ರಾಜ್ಯವಾಗಿದ್ದು, ಇದು ಸೋವಿಯತ್ ಒಕ್ಕೂಟದ ಭಾಗವಾಗಿತ್ತು.

ಮಾಸ್ಕೋದ ಹೊರ ವಲಯದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ಸಂಜೆ ರಾಕ್ ಬ್ಯಾಂಡ್ ಪ್ರದರ್ಶನ ನಡೆಯಬೇಕಿತ್ತು. ಆದರೆ ಸಂಗೀತ ಕಾರ್ಯಕ್ರಮಕ್ಕೆ ಆರಂಭಕ್ಕೂ ಮುನ್ನವೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಏಕಾಏಕಿ ನಮ್ಮ ಹಿಂದೆ ಗುಂಡಿನ ಸದ್ದು ಕೇಳಿಸಿತು. ಆ ಕ್ಷಣಕ್ಕೆ ಏದು ಏನು ಅಂತ ತಿಳಿಯಲೇ ಇಲ್ಲ ಎಂದು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆಸ್ಪತ್ರೆಗಳ ಬಳಿ ಸಾರ್ವಜನಿಕರು ಜಯಾಯಿಸಿದ್ದು, ರಕ್ತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ಉಗ್ರರ ದಾಳಿ ಎಫೆಕ್ಟ್; ರಷ್ಯಾದಾದ್ಯಂತ ಬಿಗಿ ಬಂದೋಬಸ್ತ್

ಉಗ್ರರು ಭೀಕರ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ರಷ್ಯಾ ವಿಮಾನ ನಿಲ್ದಾಣಗಳು, ಸಾರಿಗೆ ಕೇಂದ್ರಗಳು ಮತ್ತು ರಾಜಧಾನಿ ಮಾಸ್ಕೋದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದೇಶಾದ್ಯಂತ ಎಲ್ಲಾ ದೊಡ್ಡ ಪ್ರಮಾಣದ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು. ಭಾನುವಾರ ಮತ್ತೊಮ್ಮೆ ಆರು ವರ್ಷಗಳ ಅವಧಿಗೆ ಮರು ಆಯ್ಕೆಯಾದ ಪುಟಿನ್, 2022 ರಲ್ಲಿ ಸಾವಿರಾರು ಸೈನಿಕರನ್ನು ಉಕ್ರೇನ್‌ಗೆ ಕಳುಹಿಸಿದ್ದಾರೆ ಮತ್ತು ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ವಿವಿಧ ಶಕ್ತಿಗಳು ರಷ್ಯಾದೊಳಗೆ ಅವ್ಯವಸ್ಥೆಯನ್ನು ಬಿತ್ತಲು ಪ್ರಯತ್ನಿಸುತ್ತಿವೆ ಎಂದು ಪದೇ ಪದೇ ಎಚ್ಚರಿಸಿದ್ದಾರೆ. ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ.

IPL_Entry_Point

ವಿಭಾಗ