ಕನ್ನಡ ಸುದ್ದಿ  /  Nation And-world  /  The Leaders Of The Muslim League Are Accused Behind Badiyadka Dr. Krishnamurthy's Death - Says Adv K Shreekanth

Dr.Krishnamurthy death: ಮುಸ್ಲಿಂ ಲೀಗ್‌ನ ಮುಖಂಡರೇ ಬದಿಯಡ್ಕದ ಡಾ. ಕೃಷ್ಣಮೂರ್ತಿ ಸಾವಿನ ಹಿಂದಿನ ಆರೋಪಿಗಳು - ಅಡ್ವ. ಕೆ ಶ್ರೀಕಾಂತ್ ಆರೋಪ

ಮುಸ್ಲಿಂ ಲೀಗ್‌ನ ಮುಖಂಡರೇ ಬದಿಯಡ್ಕದ ಪ್ರಸಿದ್ಧ ದಂತವೈದ್ಯ ಡಾ.ಕೃಷ್ಣಮೂರ್ತಿ. ಎಸ್‌ (57) ಅವರ ಸಾವಿನ ಹಿಂದಿನ ಆರೋಪಿಗಳು ಎಂದು ಬಿಜೆಪಿ ರಾಜ್ಯ (ಕೇರಳ) ಕಾರ್ಯದರ್ಶಿ ಅಡ್ವ. ಕೆ ಶ್ರೀಕಾಂತ್ ಆರೋಪಿಸಿದ್ದಾರೆ.

ಬದಿಯಡ್ಕದ ಡಾ. ಕೃಷ್ಣಮೂರ್ತಿ ಸಾವು ಖಂಡಿಸಿ ಹಿಂದು ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು
ಬದಿಯಡ್ಕದ ಡಾ. ಕೃಷ್ಣಮೂರ್ತಿ ಸಾವು ಖಂಡಿಸಿ ಹಿಂದು ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರು

ಕಾಸರಗೋಡು (ಕೇರಳ): ನಾಪತ್ತೆಯಾಗಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪ್ರಸಿದ್ಧ ದಂತವೈದ್ಯ ಡಾ.ಕೃಷ್ಣಮೂರ್ತಿ. ಎಸ್‌ (57) ಅವರು ನವೆಂಬರ್​ 10 ರಂದು ಕುಂದಾಪುರದಲ್ಲಿ ಶವವಾಗಿ ಪತ್ತೆಯಾಗಿದ್ದರು. ಕುಂದಾಪುರ ಸಮೀಪ ತಲ್ಲೂರು- ಹಟ್ಟಿಯಂಗಡಿಯ ಕಾಡು ಅಜ್ಜಿಮನೆ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. ಇವರಿಗೆ ಬೆದರಿಕೆ ಒಡ್ಡಲಾಗಿತ್ತು, ಹೀಗಾಗಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಈ ಬಗ್ಗೆ ಕಾಸರಗೋಡು ಪ್ರೆಸ್ ಕ್ಲಬಿನಲ್ಲಿ ಬಿಜೆಪಿ ರಾಜ್ಯ (ಕೇರಳ) ಕಾರ್ಯದರ್ಶಿ ಅಡ್ವ.​​ ಕೆ ಶ್ರೀಕಾಂತ್ ಪತ್ರಿಕಾಗೋಷ್ಠಿ ನಡೆಸಿ ಮುಸ್ಲಿಂ ಲೀಗ್‌ನ ಮುಖಂಡರೇ ಇದರ ಹಿಂದಿನ ಆರೋಪಿಗಳು ಎಂದು ಆರೋಪಿಸಿದ್ದಾರೆ.

ಬದಿಯಡ್ಕದ ಖ್ಯಾತ ದಂತ ವೈದ್ಯ ಡಾ. ಕೃಷ್ಣಮೂರ್ತಿ ಅವರದ್ದು ಆತ್ಮಹತ್ಯೆ ಅಲ್ಲ ಅದು ಕೊಲೆ ಎಂದು ಕೇಳಿ ಬರುತ್ತಿದೆ. ಈ ಬಗ್ಗೆ ಅವರ ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆಗ್ರಹಿಸಿದ್ದಾರೆ.

ಮುಸ್ಲಿಂ ಲೀಗ್‌ನ ಮುಖಂಡರೇ ಇದರ ಹಿಂದಿನ ಆರೋಪಿಗಳು

ಮುಸ್ಲಿಂ ಲೀಗ್ ನಾಯಕರ ವೈಯಕ್ತಿಕ ಹಿತಾಸಕ್ತಿ ಅನುಷ್ಠಾನಗೊಳಿಸಲು ಓರ್ವ ಮಹಿಳೆಯನ್ನು ಬಳಸಿ ಡಾಕ್ಟರ್ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಕ್ಲಿನಿಕ್ ನಲ್ಲಿ ಬೆದರಿಸಿ ಹಣದ ಬೇಡಿಕೆ ಇಟ್ಟ ಮುಸ್ಲಿಂ ಲೀಗ್ ನಾಯಕರಿಗೆ ಡಾಕ್ಟರ್ ಮಣಿಯಲಿಲ್ಲ, ಆದರೆ ಘಟನೆ ನಡೆದ ನಂತರ ಡಾಕ್ಟರ್ ನಾಪತ್ತೆಯಾದರು. ಡಾ. ಕೃಷ್ಣಮೂರ್ತಿ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಪೊಲೀಸರ ಮೊರೆ ಹೋದಾಗ ಮುಸ್ಲಿಂ ಲೀಗ್ ಮುಖಂಡರು ಡಾ.ಕೃಷ್ಣಮೂರ್ತಿ ವಿರುದ್ಧ ಸುಳ್ಳು ದೂರಿಗೆ ಮುಂದಾಗಿದ್ದು ಇದರ ಹಿಂದೆ ಷಡ್ಯಂತ್ರ ಅಡಗಿದೆ. ಮುಸ್ಲಿಂ ಲೀಗ್‌ನ ಮುಖಂಡರೇ ಇದರ ಹಿಂದಿನ ಆರೋಪಿಗಳು, ಆದುದರಿಂದ ಇದರ ಹಿಂದಿನ ಸತ್ಯ ಇನ್ನಷ್ಟು ಹೊರಬರಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಶ್ರೀಕಾಂತ್ ಹೇಳಿದರು.

ಡಾಕ್ಟರ್ ಕಾಣೆ ಆದ ನಂತರ ಅವರ ದ್ವಿಚಕ್ರ ವಾಹನವು ಕುಂಬಳೆಯಲ್ಲಿ ಪತ್ತೆಯಾಗಿದೆ ಮತ್ತು ಅವರ ಮೃತದೇಹವು ಕರ್ನಾಟಕದ ಕುಂದಾಪುರ ರೈಲು ನಿಲ್ದಾಣದಿಂದ ಐದು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಪತ್ತೆಯಾದ ಶರೀರದಲ್ಲಿ ಡಾಕ್ಟರ್ ಧರಿಸಿದ ಅಂಗಿ ಬದಲಿಗೆ ಬೇರೆ ಬನಿಯನ್ ಕಾಣಿಸುತ್ತಿದೆ ಹಾಗೂ ಡಾಕ್ಟರ್ ಎಂದೂ ಧರಿಸದ ರೀತಿಯ ಬಟ್ಟೆ ಇದಾಗಿದ್ದು ಚಪ್ಪಲಿ, ಬೆಲ್ಟ್, ಐಡಿ ಕಾರ್ಡ್, ಪರ್ಸ್ ಇಂತಹ ಯಾವುದೇ ವಸ್ತುಗಳು ಮೃತ ಶರೀರದ ಬಳಿ ಪತ್ತೆ ಆಗಿಲ್ಲ. ಸಾಧಾರಣವಾಗಿ ಆತ್ಮಹತ್ಯೆ ನಡೆದ ಸಂಧರ್ಭದಲ್ಲಿ ಇವೆಲ್ಲವೂ ಸಹಜವಾಗಿ ಕಾಣ ಸಿಗುತ್ತದೆ, ಆದರೆ ಇಲ್ಲಿ ನಡೆದಿರುವುದೇ ಬೇರೆ ಎಂಬ ರೀತಿಯ ಸಂಶಯ ಸ್ಪಷ್ಟವಾಗಿ ಕಾಣುತ್ತದೆ ಎಂದು ಅಡ್ವ. ಕೆ ಶ್ರೀಕಾಂತ್ ಆರೋಪಿಸಿದ್ದಾರೆ. ತಜ್ಞರುಗಳ ಅಭಿಪ್ರಾಯ ಪ್ರಕಾರ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಲು ನಿರ್ಧರಿಸಿದರೆ ಆತನ ಭೌತಿಕ ಕಾರ್ಯಗಳ ಬಗ್ಗೆ ಗಮನ ಕೊಡುವುದಿಲ್ಲ. ಹಾಗೇನಾದರೂ ಗಮನಕೊಟ್ಟರೆ ಅತ ಆತ್ಮಹತ್ಯೆಯ ನಿರ್ಧಾರದಿಂದ ಹಿಂಜರಿದು ಬದುಕುವ ಬಗ್ಗೆ ಚಿಂತೆ ಮಾಡುತ್ತಾನೆ. ಜೊತೆಗೆ ವ್ಯವಹಾರ ಮುಂತಾದವುಗಳ ಬಗ್ಗೆ ಚಿಂತಿಸಿದರೆ ಆತ ಪ್ರಾಣ ತ್ಯಾಗ ತೀರ್ಮಾನ ಕೈ ಬಿಡುತ್ತಾನೆ. ಆದುದರಿಂದ ಡಾಕ್ಟರ್ ಸ್ವತಃ ಇಲ್ಲಿ ಅಂಗಿ ಬದಲಿಸಲು ಸಾಧ್ಯತೆ ಇಲ್ಲ ಎಂದರು.

ಖ್ಯಾತ ವೈದ್ಯರ ಮರಣದ ನಂತರ, ಕೆಲವು ಕಡೆಯಿಂದ ಅವರನ್ನು ಮತ್ತು ಅವರ ಕುಟುಂಬವನ್ನು ಇಲ್ಲ ಸಲ್ಲದ ಆರೋಪ ಹೊರಿಸಿ ಅವಮಾನಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ಸಮಾಜ ಎಂದೂ ಡಾ. ಕೃಷ್ಣಮೂರ್ತಿ ಅವರ ಕುಟುಂಬದ ಜೊತೆ ಇದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಡಾ. ಕೃಷ್ಣಮೂರ್ತಿ ವಿರುದ್ಧ ಕಿರುಕಳದ ಆರೋಪ ಒಂದು ಕಟ್ಟುಕಥೆ

ಡಾ. ಕೃಷ್ಣಮೂರ್ತಿ ವಿರುದ್ಧ ದಾಖಲಾಗಿರುವ ದೂರಿನಲ್ಲಿನ ಕಿರುಕಳದ ಆರೋಪ ಒಂದು ಕಟ್ಟುಕಥೆ. ಡಾ. ಕೃಷ್ಣಮೂರ್ತಿ ಅವರ ಕ್ಲಿನಿಕ್ ಗೆ ಓರ್ವ ಮಹಿಳೆ ಅಕ್ಟೋಬರ್ 26ರಂದು ಚಿಕಿತ್ಸೆಗೆಂದು ತೆರಳಿದ್ದು ಆಕೆಗೆ ವೈದ್ಯರು ಕಿರುಕುಳ ನೀಡಲು ಯತ್ನಿಸಿದ್ದರೆಂದು ಆರೋಪಿಸಲಾಗಿದೆ . ಆದರೆ ಅಂದು ಕಿರುಕುಳಕೊಳ್ಳಗಾದೆ ಎಂದು ಆರೋಪಿಸಿರುವ ಮಹಿಳೆ ಪುನಃ ಚಿಕಿತ್ಸೆಗೆಂದು ನ.5 ರಂದು ಮತ್ತೆ ಅದೇ ವೈದ್ಯರ ಬಳಿ ಕ್ಲಿನಿಕ್ ಗೆ ಹೋಗಿರುತ್ತಾರಂತೆ. ಹೋದಾಗ ಮತ್ತೆ ಕಿರುಕುಳ ನೀಡಿದ್ದಾರೆ ಎಂಬುದು ಇನ್ನೊಂದು ಆರೋಪ. ದೌರ್ಜನ್ಯವೆಸಗಿದ ವೈದ್ಯರ ಕ್ಲಿನಿಕ್ ಗೆ ಅದೇ ಮಹಿಳೆ ಚಿಕಿತ್ಸೆಗಾಗಿ ವಾಪಸ್ ಹೋಗಿದ್ದಾರೆ ಎಂದರೆ ಅದು ನಂಬಲಸಾಧ್ಯ. ಎರಡು ಬಾರಿ ದೌರ್ಜನ್ಯಕೊಳಗಾದೆ ಎನ್ನುವವರು ಕೇಸು ದಾಖಲಿಸಿದ್ದು ಮಾತ್ರ ನವೆಂಬರ್ 9ಕ್ಕೆ. ಮಾತ್ರವಲ್ಲ ಮಹಿಳೆ ದೂರು ನೀಡಿದ್ದು ಡಾಕ್ಟರ್ ಪತ್ನಿ ಡಾಕ್ಟರ್ ಕೃಷ್ಣಮೂರ್ತಿ ಕಾಣೆಯಾಗಿದ್ದಾರೆ ಎಂಬ ದೂರು ನೀಡಿದ ನಂತರ ಎಂದು ಶ್ರೀಕಾಂತ್​ ವಿವರಿಸಿದರು.

ಈ ಸುಳ್ಳು ಆರೋಪಗಳನ್ನು ನಂಬುವವರು ಯಾರು?

ಅಸಲಿ ಸತ್ಯ ಏನೆಂದರೆ ನವೆಂಬರ್ 7 ಮತ್ತು 8 ರಂದು ಮುಸ್ಲಿಂ ಲೀಗ್ ಮುಖಂಡರು ಡಾಕ್ಟರ್ ವಿರುದ್ಧ ಸುಳ್ಳು ಆರೋಪ ಹೊರಿಸಿ ಬೆದರಿಕೆ ಹಾಗೂ ಹಣದ ಬೇಡಿಕೆ ಮುಂದಿಟ್ಟರು. ಇದು ಮುಂದುವರಿದು ಡಾಕ್ಟರ್ ಮೇಲೆ ಹಲ್ಲೆ ನಡೆಸುವ ಹಂತಕ್ಕೆ ಬೆಳೆಯಿತು, ಇದರಲ್ಲಿ ಆರೋಪಿಗಳ ಸ್ಥಾಪಿತ ಹಿತಾಸಕ್ತಿ ಹಾಗೂ ಒಳಸಂಚು ಅಡಗಿದೆ. ಈ ಬಗ್ಗೆ ತನಿಖೆ ಅಗತ್ಯವಿದೆ. ನಂತರ ಕಾಣೆಯಾದ ಡಾಕ್ಟರ್ ಬಗ್ಗೆ ಪತ್ನಿ ನವಂಬರ್ 8ರಂದೇ ಪೋಲಿಸರ ಮೊರೆ ಹೋಗಿದ್ದರು. ಆದರೆ ಅಂದು ಪೋಲಿಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೊನೆಗೆ ನವಂಬರ್ 9 ರಂದು ಪೊಲೀಸರು ಡಾಕ್ಟರ್ ಕೃಷ್ಣಮೂರ್ತಿ ನಾಪತ್ತೆ ಪ್ರಕರಣ ಸಂಬಂಧ ದೂರು ದಖಾಲಿಸಿಕೊಂಡರು. ತನ್ಮಧ್ಯೆ ಘಟನೆ ಕೈ ಮೀರುತ್ತಿರುವುದನ್ನು ಮನಗಂಡ ಮುಸ್ಲಿಂ ಲೀಗ್ ಮುಖಂಡರು ಡಾಕ್ಟರ್ ವಿರುದ್ಧ ಪೊಲೀಸರಿಗೆ ಮಹಿಳೆ ಮೂಲಕ ಕಿರುಕುಳದ ಸುಳ್ಳು ದೂರು ದಾಖಲಿಸಿಕೊಳ್ಳುತ್ತಾರೆ.. ಮುಸ್ಲಿಂ ಲೀಗ್ ನಾಯಕರ ನೈತಿಕ ಪೊಲೀಸ್ ಗಿರಿ ಮತ್ತು ರಹಸ್ಯ ಅಜೆಂಡಕ್ಕೆ ಬಲಿಯಾಗಿ ಕೃಷ್ಣಮೂರ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಸಮಾಜದಲ್ಲಿ ಮನ್ನಣೆ ಪಡೆದಿರುವ ವೈದ್ಯರ ಕುಟುಂಬಕ್ಕೆ ಅವಮಾನ ಮಾಡುವ ಯತ್ನ ನಡೆಯುತ್ತಿದೆ . ಇದನ್ನು ಒಪ್ಪಲು ಸಾಧ್ಯವಿಲ್ಲ.ಈ ಘಟನೆಗಳು ವೈದ್ಯರ ಹತ್ಯೆಯ ಷಡ್ಯಂತ್ರದ ಭಾಗವಾಗಿದೆ ಮತ್ತು ಇದರಲ್ಲಿ ಮುಸ್ಲಿಂ ಲೀಗ್ ನಾಯಕರ ಸ್ಪಷ್ಟ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿದೆ.

ಕೃಷ್ಣಮೂರ್ತಿಯವರ ನಿಗೂಢ ಸಾವಿನ ಬಗ್ಗೆ ಸರಿಯಾದ ತನಿಖೆ ಆಗಬೇಕು. ಈ ಪ್ರಕರಣವನ್ನು ಡಾಕ್ಟರ್ ಮಹಿಳೆಯ ವಿರುದ್ಧ ದೌರ್ಜನ್ಯವೆಸಗಿದ್ದು ಬೆಳಕಿಗೆ ಬರುತ್ತದೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಿತ್ರಿಸಲು ದೊಡ್ಡ ಪ್ರಯತ್ನ ನಡೆಯುತ್ತಿದೆ. ಕೇರಳದ ಕೆಲವು ಮಾಧ್ಯಮಗಳು ಈ ಬಗ್ಗೆ ಸತ್ಯವನ್ನ ಮರೆಮಾಚುವ ಪ್ರಯತ್ನ ನಡೆಸುತ್ತಿದೆ. ಇದು ಸರಿಯಲ್ಲ. ಒಂದು ವೇಳೆ ಈ ಆರೋಪಿಗಳು ಇನ್ನೊಂದು ಕೋಮಿನವರಿರುತ್ತಿದ್ದರೆ ಕೇರಳದಲ್ಲಿ ಯಾವ ತರದಲ್ಲಿ ಚರ್ಚೆ ನಡೆಯುತ್ತಿತ್ತು? ಈ ಘಟನೆ ಉತ್ತರ ಭಾರತದಲ್ಲಿ ನಡೆಯುತ್ತಿದ್ದರೆ ಕೇರಳದಲ್ಲಿ ಹೇಗೆ ವಿವಾದವನ್ನು ಮಾಡುತ್ತಿದ್ದರು? ಯಾವ ರೀತಿಯಲ್ಲಿ ಮಲಯಾಳ ಮಾಧ್ಯಮಗಳು ಪ್ರಚಾರ ಕೊಡುತ್ತಿದ್ದರು? ಡಾಕ್ಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯವನ್ನು ಜನರಿಗೆ ತಿಳಿಯಪಡಿಸುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ಈ ವಿಷಯದಲ್ಲಿ ಬಿಜೆಪಿ ಯಾಕೆ ಮಧ್ಯ ಪ್ರವೇಶಿಸುತ್ತಿದೆ ಎಂದು ಒಬ್ಬ ಪತ್ರಕರ್ತನ ಪ್ರಶ್ನೆಗೆ ಶ್ರೀಕಾಂತ್, ಒಬ್ಬ ನಿಷ್ಠಾವಂತ ಮತ್ತು ಪ್ರಾಮಾಣಿಕ ವೈದ್ಯನನ್ನು ಮುಸ್ಲಿಂ ಲೀಗಿನ ರಹಸ್ಯ ಅಜೆಂಡ ಕಾರ್ಯಗತಗೊಳಿಸಲು ಬಲಿಕೊಡಲಾಯಿತು. ಡಾಕ್ಟರ್ ಕೃಷ್ಣಮೂರ್ತಿ ಮತ್ತು ಕುಟುಂಬದವರನ್ನು ಅವಮಾನಿಸಲು ದೊಡ್ಡ ಷಡ್ಯಂತ್ರ ನಡೆದಿದೆ. ಸತ್ಯವನ್ನ ಮರೆಮಾಚುವ ಪ್ರಯತ್ನ ನಡೆಯುತ್ತಿದೆ. ಸರಿಯಾದ ಸಮಯಕ್ಕೆ ಕೇಸು ದಾಖಲಿಸಿ ಡಾಕ್ಟರರನ್ನು. ಪತ್ತೆಹಚ್ಚಲು ಪೊಲೀಸರು ವಿಫಲಗೊಂಡರು. ಒಂದು ವೇಳೆ ಮೃತರ ಪತ್ನಿ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮವನ್ನು ಕೂಡಲೇ ಕೈಗೊಳ್ಳುತ್ತಿದ್ದರೆ ಡಾಕ್ಟರ್ ಅವರ ಪ್ರಾಣವನ್ನು ರಕ್ಷಿಸಬಹುದಿತ್ತು. ಇದೆಲ್ಲವನ್ನು ಕಂಡು ಬಿಜೆಪಿ ಸುಮ್ಮನೆ ಕುಳಿತುಕೊಳ್ಳಬೇಕೆ? ಸತ್ಯವನ್ನ ಬೆಳಕಿಗೆ ತರಲು ಬಿಜೆಪಿ ಪ್ರತಿಜ್ಞಾಬದ್ಧವಾಗಿದೆ. ಸಮಾಜದಲ್ಲಾಗುವ ಅನ್ಯಾಯದ ವಿರುದ್ಧ ಎಂದಿಗೂ ಬಿಜೆಪಿ ಹೋರಾಟ ಮಾಡುತ್ತಾ ಬಂದಿದೆ.. ಮಾಧ್ಯಮಗಳು ಪಕ್ಷಪಾತ ಧೊರಣೆಯನ್ನು ನಡೆಸದೆ ಸತ್ಯಶೋಧನೆ ನಡೆಸಿ ಸತ್ಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಡ್ವ. ಕೆ ಶ್ರೀಕಾಂತ್ ಜೊತೆ ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಹಾಗೂ ಬಿಜೆಪಿ ಬದಿಯಡ್ಕ ಮಂಡಲದ ಅಧ್ಯಕ್ಷ ಹರೀಶ್ ನಾರಂಪಾಡಿ ಉಪಸ್ಥಿತರಿದ್ದರು.

IPL_Entry_Point