Gujarat Assembly Elections 2022 Results: ಗುಜರಾತ್‌ನಲ್ಲಿದ್ದಿದ್ದು ಆಡಳಿತ ಪರ ಅಲೆ: ಐತಿಹಾಸಿಕ ಗೆಲುವು ಸ್ವಾಗತಿಸಿದ ರಾಜನಾಥ್‌ ಸಿಂಗ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gujarat Assembly Elections 2022 Results: ಗುಜರಾತ್‌ನಲ್ಲಿದ್ದಿದ್ದು ಆಡಳಿತ ಪರ ಅಲೆ: ಐತಿಹಾಸಿಕ ಗೆಲುವು ಸ್ವಾಗತಿಸಿದ ರಾಜನಾಥ್‌ ಸಿಂಗ್

Gujarat Assembly Elections 2022 Results: ಗುಜರಾತ್‌ನಲ್ಲಿದ್ದಿದ್ದು ಆಡಳಿತ ಪರ ಅಲೆ: ಐತಿಹಾಸಿಕ ಗೆಲುವು ಸ್ವಾಗತಿಸಿದ ರಾಜನಾಥ್‌ ಸಿಂಗ್

ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದ್ದು, ಈ ಗೆಲುವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸ್ವಾಗತಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌, ನಾವು ಗುಜರಾತ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಗುಜರಾತ್‌ನಲ್ಲಿ ಆಡಳಿತ ಪರ ಅಲೆ ಇದೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ರಾಜನಾಥ್‌ ಸಿಂಗ್‌ (ಸಂಗ್ರಹ ಚಿತ್ರ)
ರಾಜನಾಥ್‌ ಸಿಂಗ್‌ (ಸಂಗ್ರಹ ಚಿತ್ರ) (MINT_PRINT)

ನವದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿರುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ.

ಇನ್ನು ಗುಜರಾತ್‌ನಲ್ಲಿ ಪಕ್ಷದ ಜಯ ಖಚಿತವಾಗುತ್ತಿದ್ದಂತೇ, ಬಿಜೆಪಿ ನಾಯಕರು ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಲಾರಂಭಿಸಿದ್ದಾರೆ. ಈ ಕುರಿತು ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲ್ಲ, ಬದಲಿಗೆ ಆಡಳಿತ ಪರ ಅಲೆ ಇತ್ತು ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ರಾಜನಾಥ್‌ ಸಿಂಗ್‌, ನಾವು ಗುಜರಾತ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಚುನಾವಣೆಗೂ ಮೊದಲು ಎಲ್ಲರೂ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎಂದು ಹೇಳುತ್ತಿದ್ದರು. ಆದರೆ ಗುಜರಾತ್‌ನಲ್ಲಿ ಅಸಲಿಗೆ ಆಡಳಿತ ಪರ ಅಲೆ ಇದೆ ಎಂದು ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟರು.

ಕಳೆದ 27 ವರ್ಷಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಆಡಳಿತದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಲಿದೆ ಎಂದು ಎಲ್ಲರೂ ವಿಶ್ಲೇಷಿಸಿದ್ದರು. ಆದರೆ ರಾಜ್ಯದ ಜನತೆ ಬಿಜೆಪಿ ಮಡಿಲಿಗೆ ಐತಿಹಾಸಿಕ ವಿಜಯವನ್ನು ಹಾಕಿದ್ದಾರೆ ಎಂದು ರಾಜನಾಥ್‌ ಸಿಂಗ್‌ ನುಡಿದರು.

ಗುಜರಾತ್‌ ರಾಜ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಅಭೂತಪೂರ್ವ ವಿಶ್ವಾಸವನ್ನು ಇರಿಸಿಕೊಂಡಿದೆ. ಅವರ ಮೇಲಿನ ನಂಬಿಕೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚಾಗುತ್ತಲೇ ಇದೆ. ಬಿಜೆಪಿ ಪ್ರಸ್ತುತಪಡಿಸಿದ 'ಗುಜರಾತ್‌ ಮಾದರಿ'ಗೆ ರಾಜ್ಯದ ಜನತೆ ಮತ್ತೊಮ್ಮೆ ಅನುಮೋದನೆ ನೀಡಿದ್ದಾರೆ ಎಂದು ರಾಜನಾಥ್‌ ಸಿಂಗ್‌ ಇದೇ ವೇಳೆ ಸಂತಸ ವ್ಯಕ್ತಪಡಿಸಿದರು.

ಅದೇ ರೀತಿ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಅಲ್ಲಿಯೂ ಪಕ್ಷ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆ ಇದೆ. ಏನೇ ಆದರೂ ಅಂತಿಮ ಫಳಿತಾಂಶ ಬಂದ ಬಳಿಕಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ರಾಜನಾಥ್‌ ಸಿಂಗ್‌ ಸ್ಪಷ್ಟಪಡಿಸಿದರು.

ಸದ್ಯದ ಅಂಕಿ ಅಂಶಗಳ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಯು 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಕಳೆದ ಬಾರಿಗಿಂತ 55 ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಿದೆ ಎಂಬುದು ವಿಶೇಷ.

ಅದೇ ರೀತಿ ಕಾಂಗ್ರೆಸ್‌ ಕೇವಲ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದು, ಇದು ಕಳೆದ ಬಾರಿಗಿಂತ 59 ಸೀಟು ಕಡಿಮೆ ಎಂಬುದು ಇಲ್ಲಿ ಉಲ್ಲೇಖನೀಯ. ಆದಾಗ್ಯೂ, ಕಾಂಗ್ರೆಸ್‌ ಗುಜರಾತ್‌ನಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದು ಪಕ್ಷದ ಪಾಲಿಗೆ ಸಮಾಧಾನಕರ ಸಂಗತಿಯಾಗಿದೆ.

ಇನ್ನು ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಆಮ್‌ ಆದ್ಮಿ ಪಕ್ಷ(ಆಪ್‌) ಸದ್ಯ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಶೂನ್ಯ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಆಪ್‌, ಈ ಬಾರಿ ಗುಜರಾತ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ ಎನ್ನಲಾಗಿದೆ. ಇನ್ನುಳಿದಂತೆ ಇತರರು ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಗುಜರಾತ್‌ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲೂ ಸಂಭ್ರಮ ಮನೆ ಮಾಡಿದೆ. ಪಕ್ಷದ ಆವರಣದಲ್ಲಿ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು, ಡೊಳ್ಳು-ಕುಣಿತದ ಮೂಲಕ ಗುಜರಾತ್‌ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

ಪಕ್ಷದ ಪ್ರಧಾನ ಕಚೇರಿಗೆ ಈಗಾಗಲೇ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಮತ್ತು ಇತರ ರಾಜ್ಯ ನಾಯಕರು ಆಗಮಿಸಿದ್ದು, ಇಂದು(ಡಿ.08-ಗುರುವಾರ) ಸಂಜೆ ಪ್ರಧಾನಂತ್ರಿ ನರೇಂದ್ರ ಮೋದಿ ಸಹಿತ ಹಲವು ರಾಷ್ಟ್ರೀಯ ನಾಯಕರು ಗೆಲುವಿನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.