17 ವರ್ಷ ವಯಸ್ಸಿಗೆ ವಿಶ್ವದ 7 ಅತ್ಯುನ್ನತ ಶಿಖರ ಏರಿ ದಾಖಲೆ ಬರೆದ ಭಾರತೀಯ ಬಾಲೆ; ವಿಶಿಷ್ಟ ಸಾಧನೆ ಮೆಟ್ಟಿಲಾದ ಪರ್ವತಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  17 ವರ್ಷ ವಯಸ್ಸಿಗೆ ವಿಶ್ವದ 7 ಅತ್ಯುನ್ನತ ಶಿಖರ ಏರಿ ದಾಖಲೆ ಬರೆದ ಭಾರತೀಯ ಬಾಲೆ; ವಿಶಿಷ್ಟ ಸಾಧನೆ ಮೆಟ್ಟಿಲಾದ ಪರ್ವತಗಳಿವು

17 ವರ್ಷ ವಯಸ್ಸಿಗೆ ವಿಶ್ವದ 7 ಅತ್ಯುನ್ನತ ಶಿಖರ ಏರಿ ದಾಖಲೆ ಬರೆದ ಭಾರತೀಯ ಬಾಲೆ; ವಿಶಿಷ್ಟ ಸಾಧನೆ ಮೆಟ್ಟಿಲಾದ ಪರ್ವತಗಳಿವು

ಸಾಧನೆಗೆ ಅಸಾಧ್ಯವಾದುದು ಏನೂ ಇಲ್ಲ. ಅದಕ್ಕೆ ಪ್ರಯತ್ನ ಮುಖ್ಯ ಎನ್ನುವದಕ್ಕೆ ಮುಂಬೈನ ನೌಕಾ ಶಾಲೆಯ ವಿದ್ಯಾರ್ಥಿನಿ ಸಣ್ಣ ವಯಸ್ಸಿಗೆ ವಿಶ್ವದ ಏಳು ಶಿಖರಗಳನ್ನು ಏರಿ ಕಿರಿ ವಯಸ್ಸಿಗೆ ಮಾಡಿದ ಸಾಧನೆಯೇ ಸಾಕ್ಷಿ.

ಏಳು ಶಿಖರಗಳನ್ನು ಏರಿ ದಾಖಲೆ ನಿರ್ಮಿಸಿದ ಮುಂಬೈನ ಕಾಮ್ಯಾ ಕಾರ್ತಿಕೇಯನ್‌
ಏಳು ಶಿಖರಗಳನ್ನು ಏರಿ ದಾಖಲೆ ನಿರ್ಮಿಸಿದ ಮುಂಬೈನ ಕಾಮ್ಯಾ ಕಾರ್ತಿಕೇಯನ್‌

ಮುಂಬೈ: ಎಲ್ಲರಂತೆ ಆಕೆಯೂ ಸಾಮಾನ್ಯ ವಿದ್ಯಾರ್ಥಿ. ನೌಕಾ ಪಡೆಯ ಅಧಿಕಾರಿಯಾಗಿರುವ, ಚಾರಣಿಗರೂ ಆಗಿರುವ ತಂದೆ ಏನಾದರೂ ಸಾಧನೆ ಮಾಡು ಮಗಳೇ ಎನ್ನುವ ಮಾತು ಆಕೆಯ ಕಿವಿಯಲ್ಲಿ ಗುಂಯ್‌ಗುಡುತ್ತಲೇ ಇತ್ತು. ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡೋಣ. ಅದಕ್ಕಾಗಿ ವಿಶಿಷ್ಟ ಕ್ಷೇತ್ರ ಆಯ್ದುಕೊಳ್ಳೋಣ ಎಂದು ತೀರ್ಮಾನ ಮಾಡಿದಳು. ಏಳು ವರ್ಷದಲ್ಲಿಯೇ ಜಗತ್ತಿನ ಅತ್ಯುನ್ನತ ಶಿಖರಗಳನ್ನು ಏರಿದ ಸಾಧನೆ ಮಾಡಿಯೇ ಬಿಟ್ಟಳು. ಅದೂ ಒಂದಕ್ಕಿಂತ ಒಂದು ಕಠಿಣ ಪರಿಶ್ರಮ ಬೇಡುವ ಶಿಖರಗಳು. ಜಗತ್ತಿನ ಏಳು ಖಂಡಗಳಲ್ಲಿರುವ ಏಳು ಶಿಖರಗಳನ್ನು ಏರಬೇಕು ಎಂದರೆ ಸುಮ್ಮನೇ ಅಲ್ಲವೇ ಅಲ್ಲ. ಅಂತಹ ಸಾಧನೆಯನ್ನು ಮಾಡಿದ ಜಗತ್ತಿನ ಅತ್ಯಂತ ಕಿರಿಯ ಯುವತಿ ಎನ್ನಿಸಿಕೊಂಡಳು. ಅದು ಭಾರತೀಯ ಬಾಲೆಗೆ ಇಂತಹ ಶ್ರೇಯ ಸಿಕ್ಕಿದೆ. ಇಡೀ ಭಾರತವೇ ಹೆಮ್ಮೆ ಪಡುವ ಸಾಧನೆ ಮಾಡಿರುವ ಆಕೆಯ ಹೆಸರು ಕಾಮ್ಯಾ ಕಾರ್ತಿಕೇಯನ್‌.

ತಂದೆಯ ಹಾದಿಯಲ್ಲಿ

ತಮಿಳುನಾಡು ಮೂಲದವಾದರೂ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸದ್ಯ ಮುಂಬೈನಲ್ಲಿರುವ, ಪರ್ವತಾರೋಹಿಯೂ ಆಗಿರುವ ಕಾರ್ತಿಕೇಯನ್‌ ಅವರ ಪುತ್ರಿ ಕಾಮ್ಯಾ. ಈಗಮುಂಬೈನ ನೌಕಾಪಡೆಯ ಶಾಲೆಯ 12 ನೇ ತರಗತಿಯ ವಿದ್ಯಾರ್ಥಿನಿ. ಸತತ ಏಳು ವರ್ಷದಿಂದಲೇ ಒಂದೊಂದೇ ಶಿಖರಗಳನ್ನು ಏರುತ್ತಲೇ ಈ ವರ್ಷ ಏಳನೇ ಶಿಖರವನ್ನೂ ಏರಿದಳು.

ಈ ಮೂಲಕ ತಾನೇ ಕಟ್ಟಿಕೊಂಡ ಕನಸನ್ನು ನನಸು ಮಾಡಿಕೊಂಡಳು. ನಾಲ್ಕು ದಿನದ ಹಿಂದೆ ಆಕೆ ಮಾಡಿದ ಸಾಧನೆ ಈಗ ಇಡೀ ಭಾರತ ಮಾತ್ರವಲ್ಲದೇ ಜಗತ್ತಿನ ಗಮನ ಸೆಳೆದಿದೆ. ಭಾರತೀಯರು ಮನಸು ಮಾಡಿದರೆ ಏನನ್ನಾದರೂ ಮಾಡಿ ತೋರಿಸಬಲ್ಲರು ಎನ್ನುವುದಕ್ಕೆ ಕಾಮ್ಯಾ ಕಾರ್ತಿಕೇಯನ್‌ ಅವರೇ ಸಾಕ್ಷಿಯಾಗಿದ್ದಾರೆ.

ಹೊಸ ಇತಿಹಾಸ ಸೃಷ್ಟಿಸುವ ತವಕ

ಕಾಮ್ಯಾ ಶಾಲಾ ದಿನಗಳಲ್ಲಿದ್ದಾಗಲೇ ಸಾಹಸ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಳು. ಚಾರಣ ಸಹಿತ ಹಲವು ಆಸಕ್ತಿಗಳಲ್ಲು ಆಕೆಯ ಓದಿನ ಭಾಗವಾಗಿಯೇ ಮಾರ್ಪಟ್ಟಿದ್ದವು. ಅಪ್ಪ ನೌಕಾ ಪಡೆಯಲ್ಲಿದ್ದುದರಿಂದ ಕಠಿಣ ಶ್ರಮ ಎನ್ನುವುದು ಎಳವೆಯಿಂದಲೇ ಬಂದಿತ್ತು. ಇದೇ ಉತ್ಸಾಹದಲ್ಲಿ ಅಪ್ಪ ಹೇಳಿದ್ದ ಏನಾದರೂ ಸಾಧಿಸು ಎನ್ನುವ ಅಪೇಕ್ಷೆಯಂತೆಯೇ ಕಾಮ್ಯಾ ರೂಪಿಸಿಕೊಂಡಿದ್ದು ಪರ್ವತಾರೋರಣ. 

ಸಣ್ಣ ವಯಸ್ಸಿನಿಂದಲೇ ಆಕೆ ಪರ್ವತಾರೋಹಣಕ್ಕೆ ಹೋಗತೊಡಗಿದಳು. ಉತ್ತರಾಖಂಡದಲ್ಲಿ ತನ್ನ ಮೊದಲ ಚಾರಣವನ್ನು ಕೈಗೊಂಡಾಗ ತನಗೆ 7 ವರ್ಷ. ಅಲ್ಲಿ ಹೋದಾಗ ಕಾಮ್ಯಾಗೆ ಸಾಧನೆಯ ಹಾದಿ ಇನ್ನೂ ಸ್ಪಷ್ಟವಾಯಿತು.

ಏಳು ಶಿಖಿರಗಳ ಹಾದಿ

ಈವರೆಗೂ ಏಳು ಪರ್ವತಗಳನ್ನು ಹಲವರು ಏರಿದ್ದರೂ ಸಣ್ಣ ವಯಸ್ಸಿಗೆ ಯಾರೂ ಏರಿಲ್ಲ ಎನ್ನುವ ಮಾಹಿತಿಯೂ ತಿಳಿದಿತ್ತು. ಅದರಂತೆ ಹತ್ತು ವರ್ಷದವಳಾಗಿದ್ದಾಗಲೇ ಸಾಧನೆಯ ಗಟ್ಟಿ ಹಾದಿ ಶುರುವಾಗಿಯೇ ಬಿಟ್ಟಿತು. ಆಫ್ರಿಕಾ (ಮೌಂಟ್. ಕಿಲಿಮಂಜಾರೊ), ಯುರೋಪ್ (ಮೌಂಟ್. ಎಲ್ಬ್ರಸ್), ಆಸ್ಟ್ರೇಲಿಯಾ (ಮೌಂಟ್. ಕೊಸ್ಸಿಯುಸ್ಕೊ), ದಕ್ಷಿಣ ಅಮೇರಿಕಾ (ಮೌಂಟ್ ಅಕೊನ್ಕಾಗುವಾ), ಉತ್ತರ ಅಮೇರಿಕಾ (ಮೌಂಟ್ ಡೆನಾಲಿ), ಏಷ್ಯಾ (ಮೌಂಟ್ ಎವರೆಸ್ಟ್) & ಅಂಟಾರ್ಕ್ಟಿಕಾದಲ್ಲಿ ಪ್ರಸ್ತುತ ಆರೋಹಣದೊಂದಿಗೆ ಕಾಮ್ಯಾ ಇಷ್ಟಾರ್ಥಗಳು ಪೂರೈಕೆಯಾದವು. ಇದಕ್ಕೆಲ್ಲಾ ಗಟ್ಟಿ ಬೆಂಬಲ ನೀಡಿದವರು ತಂದೆ. ಅವರೂ ಕೂಡ ಮಗಳೊಂದಿಗೆ ಹೆಜ್ಜೆ ಹಾಕಿ ಆಕೆಯ ಸಾಧನೆಯ ಬೆನ್ನಲುಬಾಗಿ ನಿಂತರು. 2017 ರಲ್ಲಿ ಶುರುವಾದ ಯಾನವು 2024ರಲ್ಲಿನ ಅಂಟಾರ್ಕಿಕದಲ್ಲಿ ಹೆಜ್ಜೆ ಇಟ್ಟು ಭಾರತೀಯ ಬಾವುಟ ಹಾರಿಸುವುದರೊಂದಿಗೆ ಸಂಪೂರ್ಣವಾಯಿತು. ಆಗ ಆಕೆಯ ಖುಷಿಯೇ ಪಾರವೇ ಇರಲಿಲ್ಲ. ಪಕ್ಕದಲ್ಲೇ ಇದ್ದ ಅಪ್ಪನನ್ನು ತಬ್ಬಿ ಭಾರತದ ಬಾವುಟ ಬೀಸುತ್ತಾ ಖುಷಿಗೊಂಡ ಕಾಮ್ಯಾ ಇನ್ನಷ್ಟು ಸಾಧನೆಯ ಸಂಕಲ್ಪದೊಂದಿಗೆ ಪರ್ವತದಿಂದ ಕಳಕ್ಕೆ ಇಳಿದಿದ್ದು.

ತನ್ನ ತಂದೆ ಕಾರ್ತಿಕೇಯನ್ ಅವರೊಂದಿಗೆ ಮೌಂಟ್ ವಿನ್ಸೆಂಟ್ ಅಂಟಾರ್ಕ್ಟಿಕಾದ ಶಿಖರವನ್ನು ಡಿಸೆಂಬರ್ 24 ರಂದು ಸಂಜೆ 5.20 ಗಂಟೆಗಳ ಚಿಲಿಯ ಸ್ಟ್ಯಾಂಡರ್ಡ್ ಸಮಯಕ್ಕೆ ಏಳು ಶೃಂಗಗಳ ಸವಾಲನ್ನು ಪೂರ್ಣಗೊಳಿಸಿದರು ಯುವ ಎವರೆಸ್ಟರ್ ಕಾಮ್ಯಾ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

 

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.