ತಿರುಪತಿಯಲ್ಲಿ ಶುರುವಾಯ್ತು ಶುದ್ದೀಕರಣ ಚಟುವಟಿಕೆ, ಶಾಂತಿ ಹೋಮ; ಲಡ್ಡು ವಿವಾದ ನಂತರ ವೆಂಕಟೇಶ್ವರ ಸನ್ನಿಧಿಯಲ್ಲಿ ಧಾರ್ಮಿಕ ಸ್ವಚ್ಛತಾ ಅಭಿಯಾನ
ಲಡ್ಡು ಪ್ರಸಾದ ವಿವಾದದ ಬಳಿಕ ಆಂಧ್ರ ಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶಾಂತಿ ಹೋಮ, ಶುದ್ದೀಕರಣ ಧಾರ್ಮಿಕ ಚಟುವಟಿಕೆಗಳು ಶುರುವಾಗಿವೆ.
ತಿರುಪತಿ: ಕೋಟ್ಯಂತರ ಭಕ್ತರ ಆರಾಧ್ಯದೈವವಾದ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ವಸ್ತುಗಳ ಬಳಕೆ ವಿವಾದದ ಬೆನ್ನಲ್ಲೇ ತಿರುಪತಿಯಲ್ಲಿ ಶುದ್ದೀಕರಣದ ಧಾರ್ಮಿಕ ಚಟುವಟಿಕೆಗಳು ಶುರುವಾಗಿವೆ. ಸೋಮವಾರ ಬೆಳಗಿನ ಜಾವದಿಂದಲೇ ತಿರುಪತಿ ತಿರುಮಲ ಕ್ಷೇತ್ರವನ್ನು ಶುದ್ದೀಕರಿಸುವ ಚಟುವಟಿಕೆಗಳು ನಡೆಯತ್ತಿವೆ. ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳಲ್ಲಿ ಪ್ರಮುಖರು ಭಾಗಿಯಾಗಿದ್ದು,. ಮಧ್ಯಾಹ್ನದವರೆಗೂ ಇದು ಮುಂದುವರಿಯಲಿದೆ.
ತಿರುಪತಿ ದೇವಸ್ಥಾನದ ಲಡ್ಡು ದೇಗುಲದಷ್ಟೇ ಪ್ರಸಿದ್ದಿ. ಭಕ್ತರು ಇಲ್ಲಿಗೆ ಬಂದರೆ ಲಡ್ಡು ತೆಗೆದುಕೊಂಡು ಹೋಗುವುದೇ ಇಲ್ಲ. ತಿರುಪತಿಗೆ ಹೋಗಿ ಬಂದ ಸಂಕೇತವೂ ಈ ಲಡ್ಡುವೇ. ಆದರೆ ಈ ಲಡ್ಡು ಉತ್ಪಾದನೆಯಲ್ಲಿ ಪ್ರಾಣಿ ಜನ್ಯ ಕೊಬ್ಬಿನಂಶವನ್ನು ಬಳಸಲಾಗಿದೆ ಎನ್ನುವ ಅಂಶವನ್ನು ಖುದ್ದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೇ ಬಹಿರಂಗಪಡಿಸಿದ್ದರು. ಇದು ಸಾಕಷ್ಟು ವಿವಾದಕ್ಕೂ ಎಡೆ ಮಾಡಿದೆ.
ಹಿಂದಿನ ಜಗಮೋಹನ್ ರೆಡ್ಡಿ ಸರ್ಕಾರ ಇದನ್ನು ಮಾಡಿದೆ ಎನ್ನುವುದು ಗಂಭೀರ ಆರೋಪ. ಇದರ ತನಿಖೆಗೂ ಆದೇಶಿಸಿದ್ದರೂ ತಿರುಪತಿ ತಿರುಮಲ ಕ್ಷೇತ್ರವನ್ನು ಶುದ್ದೀಕರಣ ಮಾಡಬೇಕು. ಇದಕ್ಕೆ ಬೇಕಾದ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಬೇಕು ಎಂದು ಚಂದ್ರ ಬಾಬು ನಾಯ್ಡು ಆದೇಶಿಸಿದ್ದರು. ಆಗಮ ಶಾಸ್ತ್ರ ಸಲಹೆಗಾರರೊಂದಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರವನ್ನು ಪ್ರಕಟಿಸಿ ಅಧಿಕೃತ ಆದೇಶವನ್ನೂ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಸಿದ್ದತೆಗಳನ್ನು ತಿರುಪತಿಯಲ್ಲಿ ಮಾಡಿಕೊಳ್ಳಲಾಗಿತ್ತು.
ಬೆಳಗ್ಗೆ 6 ರಿಂದ 10 ರವರೆಗೆ ದೇವಸ್ಥಾನದಲ್ಲಿ ಶಾಂತಿ ಹೋಮ, ಪಂಚಗವ್ಯಂ ಬಳಸಿ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆ.. ಬೆಳಗ್ಗೆ 6 ರಿಂದ 10 ರವರೆಗೆ ಬಂಗಾರು ಬಳಿ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆಸಲಾಗುತ್ತಿದೆ. ತಿರುಪತಿ ದೇವಸ್ಥಾನದ ಯಜ್ಞಶಾಲೆಯಲ್ಲಿ ಧಾರ್ಮಿಕ ಪ್ರಮುಖರ ತಂಡ ಹೋಮ ಹವನಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಟಿಟಿಡಿಗೆ ಸಂಬಂಧಿಸಿದ ಪ್ರಮುಖರು ಪಾಲ್ಗೊಂಡಿದ್ದಾರೆ.
ಅಲ್ಲದೇ ಭಕ್ತರು ಕೂಡ ಪಾಲ್ಗೊಂಡಿದ್ದಾರೆ.ಲಡ್ಡು ಪ್ರಸಾದದ ಪಾವಿತ್ರ್ಯ ಮತ್ತು ದೈವತ್ವವನ್ನು ಪುನಃಸ್ಥಾಪಿಸಲು ತಿರುಮಲ ದೇವಾಲಯದಲ್ಲಿ ಶಾಂತಿ ಹೋಮ ಹಮ್ಮಿಕೊಂಡಿದ್ದೇವೆ. ಎನ್ನುವುದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ವಿವರಣೆ.
ಟಿಟಿಡಿ ಇಒ ಮತ್ತು ಹೆಚ್ಚುವರಿ ಸಿಎಚ್ ವೆಂಕಯ್ಯ ಚೌಧರಿ ಅವರು ಹೇಳುವಂತೆ, ವಿಶ್ವದಾದ್ಯಂತ ಲಕ್ಷಾಂತರ ಭಕ್ತರ ಭಾವನೆಗಳನ್ನು ಘಾಸಿಗೊಳಿಸಲು ಶ್ರೀವರಿಯ ನೈವೇದ್ಯದಲ್ಲಿ ಬಳಸುವ ತುಪ್ಪದಲ್ಲಿ ಇದ್ದಿಲು ಇರುವುದನ್ನು ನಾವು ಪತ್ತೆ ಮಾಡಿದ್ದೇವೆ. ಲಡ್ಡುವಿನಲ್ಲೂ ಕೊಬ್ಬಿವಂಶ ಇರುವುದು ವರದಿಗಳಿಂದ ಬಯಲಾಗಿದೆ. ಈ ಎಲ್ಲಾ ಪಾಪಗಳ ಪರಿಹಾರ ಮತ್ತು ಭಕ್ತರ ಯೋಗಕ್ಷೇಮಕ್ಕಾಗಿ ಟಿಟಿಡಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದಲೇ ತಿರುಮಲದಲ್ಲಿ ಶಾಂತಿ ಹೋಮವನ್ನು ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ.
ಟಿಟಿಡಿ ಈಗಾಗಲೇ ಆಗಸ್ಟ್ 15 ರಿಂದ 17 ರವರೆಗೆ ಮೂರು ದಿನಗಳ 'ಸೇವಾ ಉತ್ಸವ' ಗಳನ್ನು ನಡೆಸಿದೆ. ಆದಾಗ್ಯೂ, 'ಶ್ರೀವಾರಿ' ನೈವೇದ್ಯ 'ನಲ್ಲಿ ಕಲಬೆರಕೆ ಕಂಡುಬಂದಿರುವುದರಿಂದ ಪರಿಹಾರವಾಗಿ ಶಾಂತಿ ಹೋಮವನ್ನು ನಡೆಸಲು ಆಗಮ ಸಲಹಾ ಮಂಡಳಿಯು ನಿರ್ಧರಿಸಿತು. ಇದಕ್ಕೆ ಸರ್ಕಾರವೂ ಅನುಮೋದನೆ ನೀಡಿದೆ ಎಂದು ಹೇಳಿದರು.
ಲಡ್ಡುಗಳ ರುಚಿಯನ್ನು ಸುಧಾರಿಸಲು ಟಿಟಿಡಿ ಕೈಗೊಂಡ ಕ್ರಮಗಳನ್ನು ವಿವರಿಸಿದ ವೆಂಕಯ್ಯ ಅವರು, ಟಿಟಿಡಿ ಹಸುವಿನ ತುಪ್ಪದ ಖರೀದಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಶುದ್ಧ ತುಪ್ಪವನ್ನು ಅತ್ಯಂತ ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಈ ಸುಧಾರಣೆಗಳೊಂದಿಗೆ, ಲಡ್ಡು ಪ್ರಸಾದದ ರುಚಿ ಅನೇಕ ಪಟ್ಟು ಸುಧಾರಿಸಿದೆ ಮತ್ತು ಭಕ್ತರು ಅಪಾರ ತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.