Tirupati Stampede: ತಿರುಪತಿ ವಿಷ್ಣುನಿವಾಸದ ಬಳಿ ಕಾಲ್ತುಳಿತಕ್ಕೆ ಕನಿಷ್ಠ 4 ಸಾವು, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ಸಂಭವಿಸಿದ ದುರಂತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tirupati Stampede: ತಿರುಪತಿ ವಿಷ್ಣುನಿವಾಸದ ಬಳಿ ಕಾಲ್ತುಳಿತಕ್ಕೆ ಕನಿಷ್ಠ 4 ಸಾವು, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ಸಂಭವಿಸಿದ ದುರಂತ

Tirupati Stampede: ತಿರುಪತಿ ವಿಷ್ಣುನಿವಾಸದ ಬಳಿ ಕಾಲ್ತುಳಿತಕ್ಕೆ ಕನಿಷ್ಠ 4 ಸಾವು, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ಸಂಭವಿಸಿದ ದುರಂತ

Tirupati stampede: ತಿರುಪತಿ ವಿಷ್ಣು ನಿವಾಸದಲ್ಲಿ ಬುಧವಾರ (ಜನವರಿ 8) ಸಂಜೆ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ ನಾಲ್ವರು ಭಕ್ತರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

ತಿರುಪತಿ ವಿಷ್ಣುನಿವಾಸದ ಬಳಿಕ ಕಾಲ್ತುಳಿತಕ್ಕೆ ನಾಲ್ವರ ದುರ್ಮರಣ, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ದುರಂತ ಸಂಭವಿಸಿದೆ.
ತಿರುಪತಿ ವಿಷ್ಣುನಿವಾಸದ ಬಳಿಕ ಕಾಲ್ತುಳಿತಕ್ಕೆ ನಾಲ್ವರ ದುರ್ಮರಣ, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ದುರಂತ ಸಂಭವಿಸಿದೆ.

Tirupati stampede: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಬುಧವಾರ (ಜನವರಿ 8) ರಾತ್ರಿ ಭಾರಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ ನಾಲ್ವರು ಭಕ್ತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ. ವೈಕುಂಠ ಏಕಾದಶಿ ಟೋಕನ್ ಪಡೆಯಲು ನಿಂತಿದ್ದ ವೇಳೆ, ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿರುವುದಾಗಿ ಸ್ಥಳೀಯ ಮೂಲಗಳು ಹೇಳಿವೆ. ತಮಿಳುನಾಡು ಸೇಲಂನ ಮಹಿಳೆಯೊಬ್ಬರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ತಿರುಪತಿ ಕಾಲ್ತುಳಿತ; ವಿಷ್ಣುನಿವಾಸಂ ಬಳಿ ಕಾಲ್ತುಳಿತ ಸಂಭವಿಸಿದ್ದು ಹೇಗೆ

ವೈಕುಂಠ ಏಕಾದಶಿ ನಿಮಿತ್ತ ತಿರುಪತಿಯಲ್ಲಿ ಜನವರಿ 10 ರಿಂದ ಜನವರಿ 19ರ ತನಕ ವೆಂಕಟೇಶ್ವರ ದೇವರ ವೈಕುಂಠ ದ್ವಾರ ದರ್ಶನಕ್ಕಾಗಿ ಸಾವಿರಾರು ಭಕ್ತರು ಕಾತರರಾಗಿದ್ದಾರೆ. ಹೀಗಾಗಿ ವೈಕುಂಠ ಏಕಾದಶಿ ಟೋಕನ್ ಪಡೆಯಲು ಕೌಂಟರ್‌ಗಳ ಎದುರು ಜಮಾಯಿಸಿದ್ದರು. ಗುರುವಾರ (ಜನವರಿ 9) ಬೆಳಗಿನ ಜಾವ 5 ಗಂಟೆಗೆ ಕೌಂಟರ್ ತೆರೆಯುವುದಾದರೂ, ಬುಧವಾರ (ಜನವರಿ 8) ರಾತ್ರಿಯೇ ಭಕ್ತರು ಸರದಿ ನಿಂತಿದ್ದರು. ಹೀಗಾಗಿ ಭಕ್ತ ಜನದಟ್ಟಣೆ ಹೆಚ್ಚಾದಾಗ ನೂಕು ನುಗ್ಗಲು ಸಂಭವಿಸಿ ಈ ದುರಂತ ಸಂಭವಿಸಿದೆ.

ಶ್ರೀನಿವಾಸಂ, ಬೈರಾಗಿಪಟ್ಟೇಡ ರಾಮನಾಯ್ಡು ಶಾಲೆ, ಸತ್ಯನಾರಾಯಣಪುರಂ ಮುಂತಾದ ಕಡೆ ಕಾಲ್ತುಳಿತ ಸಂಭವಿಸಿದೆ. ಶ್ರೀನಿವಾಸಂನಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಹಲವರು ಪ್ರಜ್ಞಾಹೀನರಾಗಿದ್ದಾರೆ. ಗಾಯಗೊಂಡ ಭಕ್ತರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಿರುಮಲದ ವಿವಿಧ ಕೌಂಟರ್‌ಗಳ ಸಮೀಪ ಬುಧವಾರ ಸಂಜೆಯಿಂದಲೇ ಭಕ್ತರು ವೈಕುಂಠ ದರ್ಶನದ ಟೋಕನ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಶ್ರೀನಿವಾಸಂನಲ್ಲಿ ಭಕ್ತರ ಸರತಿ ಸಾಲಿನಲ್ಲಿ ಇದ್ದಕ್ಕಿದ್ದಂತೆ ನೂಕುನುಗ್ಗಲು ಉಂಟಾಗಿದೆ. ಗಲಾಟೆ ನಡೆದ ಕೂಡಲೇ ಅಲ್ಲಿ ಕಾಲ್ತುಳಿತ ಸಂಭವಿಸಿದೆ. ಇದೇ ರೀತಿ ಘಟನೆ ಕೆಲವು ಕಡೆ ಆಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

ತಿರುಪತಿ ಕಾಲ್ತುಳಿತ; ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿರುವುದಿಷ್ಟು

ತಿರುಮಲ ಶ್ರೀವಾರಿ ವೈಕುಂಠ ದ್ವಾರದ ದರ್ಶನಕ್ಕಾಗಿ ತಿರುಪತಿಯಲ್ಲಿರುವ ವಿಷ್ಣು ನಿವಾಸದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಭಕ್ತರು ಸಾವನ್ನಪ್ಪಿರುವ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಟೋಕನ್ ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ನಾಲ್ವರು ಪ್ರಾಣ ಕಳೆದುಕೊಂಡಿರುವುದು ತೀವ್ರ ಸಂತಾಪ ತಂದಿದೆ ಎಂದು ಸಿಎಂ ಹೇಳಿದರು.

ದುರಂತದಲ್ಲಿ ಗಾಯಗೊಂಡವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಳ್ಳಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೂರವಾಣಿ ಮೂಲಕವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಕಾಲಕಾಲಕ್ಕೆ ಜಿಲ್ಲಾಧಿಕಾರಿ ಹಾಗೂ ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡಿ ಸದ್ಯದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶಿಸಿದರು.

ವೈಕುಂಠ ಏಕಾದಶಿ ನಿಮಿತ್ತ ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನವು ಜನವರಿ 10, 11 ಮತ್ತು 12 ರಂದು ನಡೆಯಲಿದೆ. ಮೊದಲ ಮೂರು ದಿನಗಳ 1.20 ಲಕ್ಷ ಟೋಕನ್‌ಗಳ ವಿತರಣೆ ಗುರುವಾರ (ಜನವರಿ 5) ಬೆಳಿಗ್ಗೆ ವಿತರಿಸಲಾಗುವುದು. ಉಳಿದ ದಿನಗಳನ್ನು ತಿರುಪತಿಯ ವಿಷ್ಣು ನಿವಾಸ್, ಶ್ರೀನಿವಾಸಂ ಮತ್ತು ಭೂದೇವಿ ಸಂಕೀರ್ಣಗಳಲ್ಲಿ ಯಾವುದೇ ದಿನ ನೀಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್ ಆಡಳಿತ ಮಂಡಳಿಯು ಘೋಷಿಸಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.