ತಿರುಪತಿ ಕಾಲ್ತುಳಿತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು, ದುರಂತದ 5 ಮುಖ್ಯ ಅಂಶಗಳು, ವಿಡಿಯೋ ವೈರಲ್
Tirupati Stampede: ತಿರುಪತಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 6 ಭಕ್ತರು ಮೃತಪಟ್ಟಿದ್ದಾರೆ. ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು ಉಂಟಾದ ಕಾರಣ ದುರಂತ ಸಂಭವಿಸಿದೆ. ಈ ದುರಂತದ 5 ಮುಖ್ಯ ಅಂಶಗಳು ಮತ್ತು ವೈರಲ್ ವಿಡಿಯೋ ವಿವರ ಇಲ್ಲಿದೆ.
![ತಿರುಪತಿ ಕಾಲ್ತುಳಿತ ದುರಂತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ದುರಂತಕ್ಕೆ ಕನಿಷ್ಠ 6 ಭಕ್ತರು ಮೃತಪಟ್ಟರು. ಈ ದುರಂತದ ವಿಡಿಯೋ ವೈರಲ್ ಆಗಿದೆ. ತಿರುಪತಿ ಕಾಲ್ತುಳಿತ ದುರಂತ; ವೈಕುಂಠ ದರ್ಶನ ಟಿಕೆಟ್‌ಗಾಗಿ ಸರದಿ ನಿಂತಲ್ಲಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ದುರಂತಕ್ಕೆ ಕನಿಷ್ಠ 6 ಭಕ್ತರು ಮೃತಪಟ್ಟರು. ಈ ದುರಂತದ ವಿಡಿಯೋ ವೈರಲ್ ಆಗಿದೆ.](https://images.hindustantimes.com/kannada/img/2025/01/08/550x309/Tirupati_Stampede_1_1736356998467_1736357016060.png)
Tirupati Stampede: ತಿರುಮಲ ತಿರುಪತಿಯಲ್ಲಿ ಗುರುವಾರ (ಜನವರಿ 9) ಬೆಳಗ್ಗೆ ವೈಕುಂಠ ದರ್ಶನ ಟೋಕನ್ ಪಡೆಯಲು ಇಂದೇ (ಜನವರಿ 8) ಸಂಜೆಯಿಂದ ಭಕ್ತರು ಸರದಿ ಸಾಲಲ್ಲಿ ನಿಂತಿದ್ಧಾರೆ. ರಾತ್ರಿ ಸಂಭವಿಸಿದ ನೂಕುನುಗ್ಗಲು ಕಾರಣ ಕಾಲ್ತುಳಿತ ಸಂಭವಿಸಿದ್ದು, ತಮಿಳುನಾಡು ಸೇಲಂನ ಮಹಿಳೆಯೊಬ್ಬರು ಸೇರಿ ಕನಿಷ್ಠ 6 ಭಕ್ತರು ದುರ್ಮರಣಕ್ಕೀಡಾದರು. ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕ ಕಾಡಿದೆ.
ತಿರುಪತಿ ಕಾಲ್ತುಳಿತ ದುರಂತ; ವಿದ್ಯಮಾನದ ಚಿತ್ರಣ ನೀಡುವ 5 ಮುಖ್ಯ ಅಂಶಗಳು
1) ಕನಿಷ್ಠ 6 ಸಾವು: ತಿರುಪತಿಯ ವಿಷ್ಣುನಿವಾಸಂ ಸಮೀಪ ವೈಕುಂಠ ದರ್ಶನ ಟಿಕೆಟ್‌ಗೆ ಸರದಿ ನಿಂತಿದ್ದ ಭಕ್ತರು ನೂಕುನುಗ್ಗಲಿಗೆ ಸಿಲುಕಿದ್ದು, ಈ ಪೈಕಿ ಕನಿಷ್ಠ 6 ಜನ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಅವರನ್ನು ತಿರುಪತಿಯ ರುಯಾ ಆಸ್ಪತ್ರೆಗೆ ರವಾನಿಸಲಾಗಿದೆ.
2) ವೈಕುಂಠ ದರ್ಶನ ಟಿಕೆಟ್ ಸರದಿಯಲ್ಲಿ ದುರಂತ: ತಿರುಪತಿಯ ವೈಕುಂಠ ದರ್ಶನ ಜನವರಿ 10 ರಿಂದ 19ರ ತನಕ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ವೈಕುಂಠ ದರ್ಶನ ಟೋಕನ್‌ಗಳನ್ನು ಗುರುವಾರ (ಜನವರಿ 9) ಮುಂಜಾನೆ 5 ಗಂಟೆಗೆ ವಿತರಿಸುವುದಾಗಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಘೋಷಿಸಿತ್ತು. ಇದರಂತೆ, ಭಕ್ತರು ಇಂದು (ಜನವರಿ 8) ಮುಂಜಾನೆಯಿಂದಲೇ ಕೌಂಟರ್‌ಗಳ ಬಳಿ ಸರದಿ ನಿಂತಿದ್ದರು.
3) ವಿವಿಧ ಕೌಂಟರ್‌ಗಳಲ್ಲಿ ನೂಕುನುಗ್ಗಲು: ವಿಷ್ಣು ನಿವಾಸಂ, ರಾಮನಾಯ್ಡು ಶಾಲೆ ಸೇರಿ ಕೆಲವು ಕೌಂಟರ್‌ಗಳ ಸಮೀಪ ಬುಧವಾರ (ಜನವರಿ 8) ರಾತ್ರಿ ನೂಕು ನುಗ್ಗಲು ಸಂಭವಿಸಿದ್ದು, ಅದರ ಪರಿಣಾಮವಾಗಿ ಕಾಲ್ತುಳಿತ ಉಂಟಾಗಿತ್ತು.
4) ಟಿಟಿಡಿ ಇತಿಹಾಸದಲ್ಲೇ ದೊಡ್ಡ ದುರಂತ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇತಿಹಾಸದಲ್ಲೇ ಅತ್ಯಂತ ಭೀಕರ ಇದಾಗಿದೆ. ಇದುವರೆಗೆ ಮೃತರ ಸಂಖ್ಯೆ 6 ಇದ್ದು, ಇನ್ನಷ್ಟು ಏರಿಕೆಯಾಗುವ ಆತಂಕ ಕಾಡಿದೆ. ರಾಮಾನಾಯ್ಡು ಶಾಲೆಯ ಟೋಕನ್ ವಿತರಣಾ ಕೇಂದ್ರದಲ್ಲಿ ಗೇಟ್ ತೆರೆದ ಕೂಡಲೇ ಹೆಚ್ಚಿನ ಸಂಖ್ಯೆಯ ಭಕ್ತರು ಸ್ಥಳಕ್ಕೆ ಧಾವಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ವೃದ್ಧರು ಕೆಳಗೆ ಬಿದ್ದರು. ಹಾಗೆ ಬಿದ್ದವರಿಗೆ ಮೇಲೇಳಲು ಸಾಧ್ಯವಾಗದ ರೀತಿಯಲ್ಲಿ ಓಡಿದ ಕಾರಣ, ಅನೇಕರು ಪ್ರಜ್ಞಾಹೀನರಾದರು. ಕೆಲವರು ಕೊನೆಯುಸಿರೆಳೆದರು.
5) ಟಿಟಿಡಿ ನಿಲಕ್ಷ್ಯ: ವೈಕುಂಠ ದರ್ಶನ ಟೋಕನ್ ವಿತರಿಸುವ ಕೌಂಟರ್‌ಗಳಿಗೆ ಭಕ್ತರಿಗೆ ಅವಕಾಶ ನೀಡುವ ವಿಚಾರದಲ್ಲಿ ಪೊಲೀಸರು ಮತ್ತು ಟಿಟಿಡಿ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಕಾಡಿದ್ದು ಢಾಳಾಗಿ ಎದ್ದುಕಾಣಿಸಿತು. ಇದ್ದಕ್ಕಿದ್ದಂತೆ ಗೇಟ್ ತೆರೆದುಬಿಟ್ಟಕಾರಣ ಭಕ್ತರು ಓಡಿದ್ದರು. ಇದರಿಂದಾಗಿ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ತಿರುಪತಿಯ ರುಯಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ತಿರುಪತಿ ಕಾಲ್ತುಳಿತದ ಹಿನ್ನೆಲೆಯಲ್ಲಿ ವೈಕುಂಠ ದರ್ಶನ ಟಿಕೆಟ್ ನೀಡಿಕೆಯನ್ನು ಸದ್ಯ ರದ್ದುಗೊಳಿಸಿರುವ ಟಿಟಿಡಿ, ಈ ವಿಚಾರದಲ್ಲಿ ಮುಂಜಾಗ್ರತಾ ಕ್ರಮವಹಿಸುವಲ್ಲಿ ಎಡವಿದ್ದು ಕಂಡಬಂದಿದೆ. ಟೋಕನ್ ನೀಡುವ ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರೂ, ಚಾಲಕರು ತುರ್ತು ಸ್ಪಂದಿಸುವ ಕಡೆಗೆ ಗಮನ ಹರಿಸಲಿಲ್ಲ. ಕಾಲ್ತುಳಿತದಲ್ಲಿ ಬಿದ್ದ ಉಳಿದ ಭಕ್ತರನ್ನು ಆಂಬ್ಯುಲೆನ್ಸ್‌ಗೆ ಕರೆದೊಯ್ಯಲಾಯಿತು. ಆದರೆ ಅವರನ್ನು ಅಲ್ಲಿಂದ ಕರೆದೊಯ್ಯಲು ಚಾಲಕರು ಲಭ್ಯರಿಲ್ಲದ ಇಲ್ಲದ ಕಾರಣ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಅವರು ಆಸ್ಪತ್ರೆಯನ್ನು ತಲುಪುವ ಹೊತ್ತಿಗೆ, ಆರು ಜನರು ಪ್ರಾಣ ಕಳೆದುಕೊಂಡಿದ್ದರು. ಘಟನೆಯಲ್ಲಿ 20 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ. ಗಾಯಾಳುಗಳನ್ನು ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ