Tirupati News: ಕುರುಕ್ಷೇತ್ರ ದೇಗುಲದಲ್ಲಿ ತಿರುಪತಿ ತಿರುಮಲ ದೇವಸ್ಥಾನಂನಿಂದ 9 ದಿನಗಳ ಕಾಲ ಬ್ರಹ್ಮೋತ್ಸವಂ
Tirupati Tirumala Devasthanams: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯು ಒಂಬತ್ತು ದಿನಗಳ ಕಾಲ ಹರ್ಯಾಣದ ಕುರುಕ್ಷೇತ್ರ ದೇಗುಲದಲ್ಲಿ ವಾರ್ಷಿಕ ಬ್ರಹ್ಮೋತ್ಸವ ಆಯೋಜಿಸಿದೆ. ಮೇ 31ರಿಂದ ಜೂನ್ 8ರವರೆಗೆ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ.
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯು ಒಂಬತ್ತು ದಿನಗಳ ಕಾಲ ಹರ್ಯಾಣದ ಕುರುಕ್ಷೇತ್ರ ದೇಗುಲದಲ್ಲಿ ವಾರ್ಷಿಕ ಬ್ರಹ್ಮೋತ್ಸವ ಆಯೋಜಿಸಿದೆ. ಮೇ 31ರಿಂದ ಜೂನ್ 8ರವರೆಗೆ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದೆ. ಉತ್ತರ ಭಾರತದ ರಾಜ್ಯದಲ್ಲಿ ಬ್ರಹ್ಮೋತ್ಸವ ಆಯೋಜಿಸಲು ಆಂಧ್ರಪ್ರದೇಶದ ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗಿದೆ.
ಮೇ 31ರಂದು ಕುರುಕ್ಷೇತ್ರ ದೇಗುಲದಲ್ಲಿ ಧ್ವಜಾರೋಹಣ ಮತ್ತು ಪೆದ್ದ ಶೇಷ ವಾಹನ ನಡೆಯಲಿದೆ ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲಾ ವಾಹನ ಸೇವೆಗಳು ಮುಂಜಾನೆ 8 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಸಂಜೆ 8ರಿಂದ 9ಗಂಟೆಯವರೆಗೆ ನಡೆಯಲಿದೆ. ಜೂನ್ 4ರ ಸಂಜೆ ಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. ಜೂನ್ 9ರಂದು ಸಂಜೆ ಪುಷ್ಪಯಾಗಂ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.
ತಿರುಪತಿ ದರ್ಶನ ನಿಯಮ ಬದಲು
ಈ ಬೇಸಿಗೆಯಲ್ಲಿ ತಿರುಪತಿ ತಿರುಮಲ ದೇಗುಲಕ್ಕೆ ಅತ್ಯಧಿಕ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದಾರೆ. ಭಕ್ತರ ಸುರಕ್ಷತೆ ಮತ್ತು ಅನುಕೂಲತೆಗಾಗಿ ಟಿಟಿಡಿಯು ದರ್ಶನ ಕಾರ್ಯವಿಧಾನದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಈ ಬದಲಾವಣೆಯು ಜೂನ್ 30ರವರೆಗೆ ಇರಲಿದೆ. ಅರ್ಜಿತಾ ಸೇವೆ ಮತ್ತು ವಿಐಪಿ ಬ್ರೇಕ್ ದರ್ಶನದಲ್ಲಿ ಮಾರ್ಪಾಡು ಮಾಡಲಾಗಿದೆ.
ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುಪ್ರಭಾತ ಸೇವೆಯ ಕೋಟಾ ಇರುವುದಿಲ್ಲ. ಇದರಿಂದ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಹೆಚ್ಚುವರಿಯಾಗಿ 20 ನಿಮಿಷ ದೊರಕಲಿದೆ. ಹೆಚ್ಚುವರಿಯಾಗಿ, ತಿರುಪವಡ ಸೇವೆಯನ್ನು ಏಕಾಂತದಲ್ಲಿ ಗುರುವಾರ ನಡೆಸಲಾಗುತ್ತದೆ. ಇದರಿಂದ ಸುಮಾರು 30 ನಿಮಿಷ ಉಳಿತಾಯವಾಗಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಐಪಿ ಶಿಫಾರಸು ಪತ್ರಗಳನ್ನು ಅನುಮತಿಸಲಾಗುವುದಿಲ್ಲ. ಇದರಿಂದ ಸುಮಾರು ಮೂರು ಗಂಟೆಗಳ ಕಾಲ ಉಳಿತಾಯವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ಪಡೆಯಲು ಸಾಮಾನ್ಯ ಭಕ್ತರಿಗೆ ಅನುಕೂಲವಾಗಲಿದೆ.
ಎಲ್ಲರಿಗೂ ಶ್ರಿವಾರಿ ದರ್ಶನ ಸುಗಮವಾಗುವಂತೆ ನೋಡಿಕೊಳ್ಳಲು ನೆರವಾಗುವಂತೆ ವಿಐಪಿಗಳಿಗೆ ಮತ್ತು ಇತರೆ ಭಕ್ತರಿಗೆ ಟಿಟಿಡಿ ಮನವಿ ಮಾಡಿದೆ. ಈ ದೇವಾಲಯದಲ್ಲಿ ದಿನದಲ್ಲಿ ಮೂರು ಬಾರಿ ನಿತ್ಯ ಪೂಜೆ ನಡೆಸಲಾಗುತ್ತದೆ. ಮುಂಜಾನೆಯ ಪೂಜೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಅಪರಾಹ್ನ ಮತ್ತು ರಾತ್ರಿ ಪೂಜೆ ದರ್ಶನಕ್ಕೆ ಮಿತಿ ಹಾಕಲಾಗಿದೆ.