Train Engine Theft in Bihar: ಸುರಂಗ ಕೊರೆದು ರೈಲು ಇಂಜಿನ್‌ ಹೊತ್ತೊಯ್ದ ಕಳ್ಳರು! ದುರಸ್ತಿಗೆ ನಿಲ್ಲಿಸಿದ್ದ ರೈಲು ಇಂಜಿನ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Train Engine Theft In Bihar: ಸುರಂಗ ಕೊರೆದು ರೈಲು ಇಂಜಿನ್‌ ಹೊತ್ತೊಯ್ದ ಕಳ್ಳರು! ದುರಸ್ತಿಗೆ ನಿಲ್ಲಿಸಿದ್ದ ರೈಲು ಇಂಜಿನ್‌

Train Engine Theft in Bihar: ಸುರಂಗ ಕೊರೆದು ರೈಲು ಇಂಜಿನ್‌ ಹೊತ್ತೊಯ್ದ ಕಳ್ಳರು! ದುರಸ್ತಿಗೆ ನಿಲ್ಲಿಸಿದ್ದ ರೈಲು ಇಂಜಿನ್‌

Train Engine Theft in Bihar: ಬಿಹಾರದಲ್ಲಿ ಚೋರದೃಷ್ಟಿ ಭಾರತೀಯ ರೈಲ್ವೆ ಮೇಲೂ ಬಿದ್ದಿದೆ. ದುರಸ್ತಿಗೆ ನಿಲ್ಲಿಸಿದ್ದ ರೈಲು ಇಂಜಿನನ್ನೆ ಹೊತ್ತೊಯ್ದ ಕಳ್ಳರು, ಸರ್ಕಾರಕ್ಕೆ ಗಾಬರಿ ಹುಟ್ಟಿಸಿದ್ದಾರೆ!

ಭಾರತೀಯ ರೈಲ್ವೇಯು ಸ್ಕ್ರ್ಯಾಪ್ ಮಾರಾಟದಿಂದ 2,500 ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತಿದೆ.(File Photo)
ಭಾರತೀಯ ರೈಲ್ವೇಯು ಸ್ಕ್ರ್ಯಾಪ್ ಮಾರಾಟದಿಂದ 2,500 ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತಿದೆ.(File Photo) (MINT_PRINT )

ಪಟನಾ: ಬಿಹಾರದಲ್ಲಿ ಸರ್ಕಾರವನ್ನೂ ಬಿಟ್ಟಿಲ್ಲ ಚೋರ ಭಯ. ಕಳೆದ ವಾರ ಕಳ್ಳರ ತಂಡ ಬಿಹಾರದ ಬೇಗುಸರಾಯ್‌ ಜಿಲ್ಲೆಯ ಗರಹರಾ ರೈಲ್ವೆ ಯಾರ್ಡ್‌ನಲ್ಲಿದ್ದ ರೈಲು ಇಂಜಿನನ್ನೇ ಕಳವು ಮಾಡಿ ಸರ್ಕಾರಕ್ಕೆ ಗಾಬರಿ ಉಂಟುಮಾಡಿದೆ!

ಕಬ್ಬಿಣದ ಸೇತುವೆ ಕಳವು ಪ್ರಕರಣದ ನಂತರ ದೇಶದ ಗಮನಸೆಳೆದಿರುವ ಕಳವು ಪ್ರಕರಣ ಇದು. ಈ ಕಳವು ಪ್ರಸಂಗ ಸಿನಿಮೀಯವಾಗಿದೆ. ಸುರಂಗ ಕೊರೆದು ರೈಲು ಇಂಜಿನ್‌ ಕಳವು ಮಾಡಿದ್ದು ಮತ್ತು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ಇಂಜಿನ್‌ ಕಳವು ಪ್ರಕರಣ ಗೊತ್ತೇ ಇರಲಿಲ್ಲ ಎಂಬುದು ಈಗ ದೊಡ್ಡ ಸುದ್ದಿ!

ಪೊಲೀಸರು ಇತ್ತೀಚೆಗೆ ಮೂವರು ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ರೈಲು ಇಂಜಿನ್‌ ಕಳವು ಮಾಡಿದ ವಿಚಾರ ಬೆಳಕಿಗೆ ಬಂದಿದೆ. ಇದರಂತೆ, ಮುಜಾಫರಪುರದ ಪ್ರಭಾತ್‌ ಕಾಲನಿಗೆ ಪೊಲೀಸರು ಶೋಧಕ್ಕೆ ತೆರಳಿದ್ದರು. ಅಲ್ಲಿ 13 ಚೀಲಗಳಲ್ಲಿ ತುಂಬಿಟ್ಟಿದ್ದ ರೈಲು ಇಂಜಿನ್‌ನ ಬಿಡಿಭಾಗಗಳು ಸಿಕ್ಕಿವೆ. ಇನ್ನಷ್ಟು ಶೋಧ ನಡೆಸಿದಾಗ, ಸುರಂಗ ಮಾರ್ಗದ ಮೂಲಕ ಇಂಜಿನ್‌ ಸಾಗಿಸಿದ್ದು ಬೆಳಕಿಗೆ ಬಂದಿದೆ.

ಕಳ್ಳರ ತಂಡ, ಬೇಗುಸರಾಯ್‌ಯ ಬರೌನಿಯಿಂದ ಗರಹರಾ ರೈಲ್ವೆ ಯಾರ್ಡ್‌ಗೆ ಸುರಂಗ ಕೊರೆದಿತ್ತು. ರೈಲ್ವೆ ಇಂಜಿನ್‌ನ ಬಿಡಿ ಭಾಗಗಳನ್ನು ಕದ್ದು ಈ ಸುರಂಗ ಮಾರ್ಗದ ಮೂಲಕ ಸ್ಕ್ರ್ಯಾಪ್‌ ಗೋಡೌನ್‌ಗೆ ವಾಪಸ್‌ ಆಗುತ್ತಿತ್ತು ಈ ತಂಡ. ಇತ್ತೀಚೆಗೆ ಇಡೀ ರೈಲು ಇಂಜಿನನ್ನೇ ಕಳವು ಮಾಡಿ ತಂದಿತ್ತು.

ಬರೌನಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ ಬಳಿಕ ಇದು ರೈಲ್ವೆ ಪೊಲೀಸರ ಗಮನಕ್ಕೆ ಬಂದಿದೆ. ಅವರು ಕೂಡ ಈಗ ಕಳವು ಮಾಡಲಾದ ಇಂಜಿನ್‌ ಮತ್ತು ಬಿಡಿಭಾಗಗಳೆಷ್ಟು ಎಂಬುದರ ತನಿಖೆ ಶುರುಮಾಡಿದ್ದಾರೆ.

ಕಬ್ಬಿಣದ ಸೇತುವೆಗಳನ್ನೇ ಹೊತ್ತೊಯ್ಯುತ್ತಿರುವ ಕಳ್ಳರು

ಬಿಹಾರದಲ್ಲಿ ಈ ವರ್ಷ ಬಹಳ ದೊಡ್ಡ ದೊಡ್ಡ ರೀತಿ ಕಳವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಏಪ್ರಿಲ್‌, ಮೇ ತಿಂಗಳ ಅವಧಿಯಲ್ಲಿ ರೋಹ್ತಾಸ್‌, ಜಹಾನಾಬಾದ್‌, ಬಂಕಾ ಜಿಲ್ಲೆಗಳಲ್ಲಿದ್ದ ಕಬ್ಬಿಣದ ಸೇತುವೆಗಳನ್ನೇ ಕಳ್ಳರು ಹೊತ್ತೊಯ್ದು ಆಡಳಿತ ವ್ಯವಸ್ಥೆಯನ್ನು ಗಾಬರಿಗೀಡುಮಾಡಿದ್ದಾರೆ.

ಆರಂಭದಲ್ಲಿ 60 ಅಡಿ ಉದ್ದದ ಸೇತುವೆ, ನಂತರ 80 ಅಡಿ ಉದ್ದ ಸೇತುವೆಗಳನ್ನು ಹೊತ್ತೊಯ್ದು ಗಮನಸೆಳೆದ ಕಳ್ಳರು, ಬಂಕಾ ಜಿಲ್ಲೆಯಲ್ಲೂ ಒಂದು ಸೇತುವೆ ಹೊತ್ತೊಯ್ದಿದ್ದಾರೆ. ಗ್ಯಾಸ್‌ ಕಟ್ಟರ್‌ ತಂದು ಕಬ್ಬಿಣದ ಸೇತುವೆಯನ್ನು ತುಂಡರಿಸಿ ಕೊಂಡೊಯ್ದಿದ್ದಾರೆ.

ಈ ವರ್ಷ ಏಪ್ರಿಲ್‌ನಲ್ಲಿ, ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ 60 ಅಡಿ ಉದ್ದದ ಬಳಕೆಯಲ್ಲ ಇಲ್ಲದ ಕಬ್ಬಿಣದ ಸೇತುವೆಯನ್ನು ಹಗಲು ಹೊತ್ತಿನಲ್ಲಿ ಕಳ್ಳರ ತಂಡವು ಸ್ಥಳೀಯ ಕೆಲವು ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಕಳವು ಮಾಡುವಲ್ಲಿ ಯಶಸ್ವಿ ಆಗಿತ್ತು.

ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳಂತೆ ಸೋಗು ಹಾಕಿರುವ ಕಳ್ಳರು ಗ್ಯಾಸ್ ಕಟ್ಟರ್ ಮತ್ತು ಮಣ್ಣು ಮೂವರ್ ಯಂತ್ರಗಳನ್ನು ಬಳಸಿ ಸೇತುವೆಯನ್ನು ಕೆಡವಿ ಮೂರು ದಿನಗಳಲ್ಲಿ ಸ್ಕ್ರ್ಯಾಪ್ ಲೋಹವನ್ನು ತೆಗೆದುಕೊಂಡು ಹೋಗಿದ್ದಾರೆ.

80 ಅಡಿ ಉದ್ದ ಮತ್ತು 15 ಅಡಿ ಅಗಲದ ಸೇತುವೆಯನ್ನು ಬಿಹಾರದ ಸುಲ್ತಂಗಂಜ್‌ನಿಂದ ಜಾರ್ಖಂಡ್‌ನ ದೇವಗಢಕ್ಕೆ ತೆರಳಲು 45 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆ ಸೇತುವೆಯನ್ನು ಕೆಡವಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗಿತ್ತು ಎಂದು ಮಾಧ್ಯಮ ವರದಿ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.