ಬೆಂಗಳೂರುನಿಂದ ಅಯೋಧ್ಯೆಗೆ ರೈಲು ಸಂಚಾರ; ಟಿಕೆಟ್ ಬೆಲೆ, ಸಮಯ, ಅಂತರ ಸೇರಿ ಪ್ರಮುಖ ಮಾಹಿತಿ ತಿಳಿಯಿರಿ
ಬೆಂಗಳೂರಿನಿಂದ ಅಯೋಧ್ಯೆಗೆ ಬೆಳಗ್ಗೆ 3.10ಕ್ಕೆ ಮೊದಲ ರೈಲು ಇದೆ. ರಾತ್ರಿ 11.40ಕ್ಕೆ ಕೊನೆಯ ರೈಲು ಹೊರಡಲಿದೆ. 840 ರೂಪಾಯಿಯಿಂದ 2,143 ರೂಪಾಯಿ ವರೆಗೆ ಟಿಕೆಟ್ ದರವಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರವನ್ನು 2024ರ ಜನವರಿ 22 ರಂದು ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಉತ್ಸಾಹ ನಿಮ್ಮಲ್ಲಿ ಇದ್ದರೆ, ನೀವೇನಾದರೂ ಅಯೋಧ್ಯೆಗೆ ಭೇಟಿ ನೀಡುವ ಪ್ಲಾನ್ ಮಾಡಿಕೊಂಡಿದ್ದರೆ, ಬೆಂಗಳೂರಿನಿಂದ ರೈಲು ಸೇವೆ ಇದೆ. ಇದರ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ರೈಲಿನ ಮೂಲಕ ಪ್ರಯಾಣ ಮಾಡಬೇಕೆಂದರೆ ನಿಮಗೆ ಒಂದಷ್ಟು ಮಾಹಿತಿ ತಿಳಿದಿರಬೇಕು. ಬೆಂಗಳೂರಿನ ಯಾವ ನಿಲ್ದಾಣದಿಂದ ರೈಲು ಸಂಚಾರ ಆರಂಭವಾಗುತ್ತದೆ, ರೈಲು ಹೊರಡುವ ಸಮಯ, ರೈಲು ಅಯೋಧ್ಯೆಗೆ ತಲುಪುವ ಸಮಯ, ಟಿಕೆಟ್ ದರವನ್ನು ತಿಳಿದುಕೊಂಡರೆ ಪ್ಲಾನ್‌ಗಳನ್ನು ಮಾಡಿಕೊಳ್ಳಲು ಅನುಕೂಲವಾಗಿರುತ್ತದೆ.
ಬೆಂಗಳೂರಿನಿಂದ ಅಯೋಧ್ಯೆಗೆ ಹೊರಡುವ ಮೊದಲ ರೈಲು ಬೆಳಗ್ಗೆ 3.10 ರಿಂದಲೇ ಆರಂಭವಾಗುತ್ತದೆ (ಈ ಸಮಯದ ರೈಲು ಪ್ರಸ್ತುತ ಚಾಲ್ತಿಯಲ್ಲಿ ಇಲ್ಲ). ದಿನದ ಕೊನೆಯ ರೈಲು ರಾತ್ರಿ 11.40ಕ್ಕೆ ಇದೆ. ಟಿಕೆಟ್ ದರ 840 ರೂಪಾಯಿಯಿಂದ 2,183 ರೂಪಾಯಿ ವರೆಗೆ ಇದೆ. ರೈಲು ಸಂಚಾರದ ವಿವರಗಳು ಈ ಕೆಳಗಿನಂತಿವೆ.
- ರೈಲು ಸಂಖ್ಯೆ 15024 - ವೈಪಿಆರ್ ಜಿಕೆಪಿ ಎಕ್ಸ್‌ಪ್ರೆಸ್ - ಈ ರೈಲು ಪ್ರತಿ ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.40ಕ್ಕೆ ಹೊರಟು ಮರು ದಿನ ಸಂಜೆ 4.25ಕ್ಕೆ ಅಯೋಧ್ಯೆಗೆ ತಲುಪುತ್ತದೆ. 1 ದಿನ 16 ಗಂಟೆ, 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. 820 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ರೈಲು ಸಂಚಾರದ ಅಂತರ 1,608 ಕಿಲೋ ಮೀಟರ್.
- ರೈಲು ಸಂಖ್ಯೆ 22534 - ವೈಪಿಆರ್ (ಯಶವಂತಪುರ) ಜಿಕೆಪಿ (ಗೋರಖ್‌ಪುರ) ಎಕ್ಸ್‌ಪ್ರೆಸ್ - ಈ ರೈಲು ಪ್ರತಿ ಬುಧವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.40ಕ್ಕೆ ಹೊರಟು ಮರು ದಿನ ಸಂಜೆ 3.50ಕ್ಕೆ ಗೋಂಡಾ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪುತ್ತದೆ. 1 ದಿನ 16 ಗಂಟೆ, 10 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. 855 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ರೈಲು ಸಂಚಾರದ ಅಂತರ 1,641 ಕಿಲೋ ಮೀಟರ್.
- ರೈಲು ಸಂಖ್ಯೆ 12592 - ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಬೆಳಗ್ಗೆ 5.20ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.52ಕ್ಕೆ ಮಂಕಾಪುರಕ್ಕೆ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 32 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. 865 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ರೈಲು ಸಂಚಾರದ ಅಂತರ 1,636 ಕಿಲೋ ಮೀಟರ್.
- ರೈಲು ಸಂಖ್ಯೆ 06593 - ಯಶವಂತಪುರ (ವೈಪಿಆರ್) ನಿಜಾಮುದ್ದೀನ್ (ಎನ್‌ಝಡ್‌ಎಂ) ಎಕ್ಸ್‌ಪ್ರೆಸ್ ರೈಲು ಪ್ರತಿ ಶನಿವಾರ ಬೆಂಗಳೂರಿನ ಯಶವಂತಪುರದಿಂದ ಹೊರಟು ಮರು ದಿನ ಸಂಜೆ 5.15ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ.
- ರೈಲು ಸಂಖ್ಯೆ 15016 ವೈಎಲ್‌ಕೆ (ಯಲಹಂಕ) ಗೋರಖ್‌ಪುರ್ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ಬೆಳಗ್ಗೆ 7.45ಕ್ಕೆ ಯಲಹಂಕ ರೈಲು ನಿಲ್ದಾಣದಿಂದ ಹೊರಟು ಎರಡನೇ ದಿನದ ಬೆಳಗ್ಗೆ 10.35ಕ್ಕೆ ಗೋಂಡ ರೈಲು ನಿಲ್ದಾಣ ತಲುಪುತ್ತದೆ. (ಈ ನಿಲ್ದಾಣದಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ಈ ರೈಲು 2 ದಿನ 2 ಗಂಟೆ 50 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. 1,629 ಅಂತರ ಇರಲಿದೆ.