Kannada News  /  Nation And-world  /  Trainee Female Pilot, Instructor Killed In Plane Crash In Mp S Balaghat
ಮಧ್ಯಪ್ರದೇಶದಲ್ಲಿ ವಿಮಾನ ಪತನ
ಮಧ್ಯಪ್ರದೇಶದಲ್ಲಿ ವಿಮಾನ ಪತನ

Plane crash: ಮಧ್ಯಪ್ರದೇಶದಲ್ಲಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್​ ಸೇರಿ ಇಬ್ಬರು ಸಾವು

19 March 2023, 6:16 ISTHT Kannada Desk
19 March 2023, 6:16 IST

ಚಾರ್ಟರ್ ವಿಮಾನವೊಂದು ಪತನಗೊಂಡು ಮಹಿಳಾ ಟ್ರೈನಿ ಪೈಲಟ್ ಮತ್ತು ತರಬೇತಿ ನೀಡುತ್ತಿದ್ದ ಪೈಲಟ್​ ಇಬ್ಬರೂ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ಶನಿವಾರ ನಡೆದಿದೆ.

ಬಾಲಾಘಾಟ್‌ (ಮಧ್ಯಪ್ರದೇಶ): ಚಾರ್ಟರ್ ವಿಮಾನವೊಂದು ಪತನಗೊಂಡು ಮಹಿಳಾ ಟ್ರೈನಿ ಪೈಲಟ್ ಮತ್ತು ತರಬೇತಿ ನೀಡುತ್ತಿದ್ದ ಪೈಲಟ್​ ಇಬ್ಬರೂ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ಶನಿವಾರ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಬಾಲಾಘಾಟ್‌ನ ಕಿರ್ನಾಪುರ ಬೆಟ್ಟಗಳ ಭಕ್ಕು ತೋಲಾ ಗ್ರಾಮದಲ್ಲಿ ವಿಮಾನ ಪತನಗೊಂಡಿದ್ದು, ಪರ್ವತಗಳ ಮಧ್ಯದಲ್ಲಿರುವ 100 ಅಡಿ ಆಳದ ಕಮರಿಯಲ್ಲಿ ವಿಮಾನದ ಅವಶೇಷಗಳು ಹಾಗೂ ಮೃತದೇಹಗಳು ಪತ್ತೆಯಾಗಿವೆ. ವಿಮಾನ ಪತನಗೊಂಡ ಭಕ್ಕು ತೋಲಾ ಗ್ರಾಮವು ನಕ್ಷಲ್​ ಪೀಡಿತ ಪ್ರದೇಶವಾಗಿದೆ.

ಮೃತರನ್ನು ಟ್ರೈನಿ ಮಹಿಳಾ ಪೈಲಟ್ ರುಕ್ಷಾಂಕಾ ಮತ್ತು ತರಬೇತಿ ನೀಡುತ್ತಿದ್ದ ಪೈಲಟ್ ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಅಪಘಾತದ ಸ್ಥಳಕ್ಕೆ ತಲುಪಿ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಾಲಘಾಟ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಮೀರ್ ಸೌರಭ್ ಹೇಳಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಶನಿವಾರ ಮಧ್ಯಾಹ್ನ ಈ ವಿಮಾನ ಟೇಕಾಫ್ ಆಗಿದೆ. ಬಾಲಘಾಟ್‌ನ ಕಿರ್ನಾಪುರದಲ್ಲಿ ಮಧ್ಯಾಹ್ನ 3.45 ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಬಿರ್ಸಿ ಏರ್‌ಸ್ಟ್ರಿಪ್ ಕಂಟ್ರೋಲರ್ ಕಮಲೇಶ್ ಮೆಶ್ರಮ್ ಹೇಳಿದ್ದಾರೆ.

ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ಶನಿವಾರ ಆಲಿಕಲ್ಲು ಚಂಡಮಾರುತವು ಬಾಲಾಘಾಟ್​ಗೆ ಅಪ್ಪಳಿಸಿದ್ದು ಪ್ರತಿಕೂಲ ಹವಾಮಾನದಿಂದಾಗಿ ಇದು ಸಂಭವಿಸಿರಬಹುದು ಎಂದು ಕಮಲೇಶ್ ಮೆಶ್ರಮ್ ಹೇಳಿದ್ದಾರೆ.

ಈ ವರ್ಷ ಮಧ್ಯಪ್ರದೇಶದಲ್ಲಿ ಸಂಭವಿಸಿದ ಮೂರನೇ ವಿಮಾನ ಅಪಘಾತ ಇದಾಗಿದೆ. ಜನವರಿ 6 ರಂದು, ತರಬೇತಿ ವಿಮಾನವು ದೇವಸ್ಥಾನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಪೈಲಟ್ ಸಾವನ್ನಪ್ಪಿದರು ಮತ್ತು ಟ್ರೈನಿ ಪೈಲಟ್​ ಗಾಯಗೊಂಡಿ್ದರು. ಜನವರಿ 22 ರಂದು, ಮಿರಾಜ್ -2000 ಮತ್ತು ಸುಖೋಯ್ -30 ವಿಮಾನಗಳು ತರಬೇತಿ ವ್ಯಾಯಾಮದ ಸಮಯದಲ್ಲಿ ಆಗಸದಲ್ಲಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಮೂವರು ಪೈಲಟ್‌ಗಳ ಪೈಕಿ ಒಬ್ಬರು ಮೃತಪಟ್ಟಿದ್ದರು.

ಮೊನ್ನೆಯಷ್ಟೇ (ಮಾರ್ಚ್​ 16) ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಪ್ರದೇಶದ ಬಳಿ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರೂ ಪೈಲಟ್​ಗಳು ಹುತಾತ್ಮರಾಗಿದ್ದರು. ಹುತಾತ್ಮ ಪೈಲಟ್​ಗಳನ್ನು ಲೆಫ್ಟಿನೆಂಟ್ ಕರ್ನಲ್ ವಿವಿಬಿ ರೆಡ್ಡಿ ಮತ್ತು ಮೇಜರ್ ಜಯಂತ್ ಎ ಎಂದು ಗುರುತಿಸಲಾಗಿದೆ.

ಮಂಡಲದ ಪೂರ್ವ ಬಾಂಗ್ಲಾಜಾಪ್ ಗ್ರಾಮದ ಬಳಿ ವಿಮಾನದ ಅವಶೇಷಗಳು ಹಾಗೂ ಪೈಲಟ್​ಗಳ ಮೃತದೇಹಗಳು ಪತ್ತೆಯಾಗಿತ್ತು. ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದೆ. ಬೊಮ್ಡಿಲಾ ಪಶ್ಚಿಮದ ಮಂಡಲ ಹಿಲ್ಸ್ ಪ್ರದೇಶದ ಬಳಿ ಅಪಘಾತ ಸಂಭವಿಸಿತ್ತು.

ಸೆಂಗೆ ಗ್ರಾಮದಿಂದ ಮಿಸ್ಸಮರಿಗೆ ಹೆಲಿಕಾಪ್ಟರ್ ತೆರಳುತ್ತಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ಬಂಗ್ಜಲೇಪ್ ಮತ್ತು ದಿರಾಂಗ್ ಪಿಎಸ್ ಗ್ರಾಮಸ್ಥರು ನೋಡಿದ್ದರು.ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಗುವಾಹಟಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.

ವಿಭಾಗ