Munnar Travel: ಮುನ್ನಾರ್‌ಗೆ ಪ್ರವಾಸ ಹೋದ್ರೆ ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣ ಮಾಡೋದು ಮರಿಬೇಡಿ; ಖಂಡಿತ ಸ್ವರ್ಗ ಕಾಣ್ತೀರಿ
Double Decker Bus for munnar: ಪ್ರವಾಸಿಗರ ಸ್ವರ್ಗ ಮುನ್ನಾರ್‌ಗೆ ಹೋಗಬೇಕು ಎಂದುಕೊಂಡಿದ್ದರೆ ಗಮನಿಸಿ, ಪ್ರವಾಸಿಗರಿಗಾಗಿ ಹೊಸ ಡಬ್ಬಲ್ ಡೆಕ್ಕರ್ ಬಸ್ ಪರಿಚಯಿಸಿದೆ ಕೇರಳ ಸಾರಿಗೆ. ಇದರ ರೂಟ್ ಹಾಗೂ ದರ ವಿವರ ಇಲ್ಲಿದೆ.

Double Decker Bus for Munnar: ದೇವರನಾಡು ಎಂದೇ ಖ್ಯಾತಿ ಗಳಿಸಿರುವ ಕೇರಳ ಪ್ರವಾಸಿಗರಿಗೆ ಸ್ವರ್ಗ. ಅದರಲ್ಲೂ ಮುನ್ನಾರ್ ಗಿರಿಧಾಮಗಳು ಕೇವಲ ಭಾರತೀಯರನ್ನು ಮಾತ್ರವಲ್ಲ ವಿದೇಶಿಗರನ್ನೂ ಸೆಳೆಯುತ್ತಿದೆ. ಇಲ್ಲಿನ ಸುಂದರ ಕಾಫಿ ತೋಟಗಳು, ಮಂಜಿನಿಂದ ಆವೃತವಾಗಿರುವ ಪ್ರಶಾಂತ ಪರಿಸರ, ಹಸಿರು ಹಾಸಿದಂತಿರುವ ಭೂ ದೃಶ್ಯಗಳು ಪ್ರವಾಸಿಗರಿಗರಿಗೆ ಸ್ವರ್ಗಕ್ಕೆ ಬಂದಂತಹ ಅನುಭವ ಕೊಡುವುದು ಸುಳ್ಳಲ್ಲ. ಇದೀಗ ಕೇರಳ ಸಾರಿಗೆ ಮುನ್ನಾರ್‌ನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಪರಿಚಯಿಸುವ ಮೂಲಕ ಪ್ರವಾಸೋದ್ಯಮಕ್ಕೆ ಇನ್ನೊಂದು ಗರಿ ಮೂಡುವಂತೆ ಮಾಡಿದೆ.
ಮುನ್ನಾರ್ ಬಸ್ ನಿಲ್ದಾಣ ಹಾಗೂ ಅನೈರಂಗಲ್ ಅಣೆಕಟ್ಟು ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿದೆ. ಈಗಾಗಲೇ ಸಾವಿರಾರು ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡಿದ್ದು, ಇದರಿಂದ ಕೇರಳ ಸಾರಿಗೆಗೆ ಉತ್ತ ಲಾಭವಾಗುತ್ತಿದೆ. ಬಜೆಟ್ ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವ ಈ ಯೋಜನೆಯು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಇಲೆಕ್ಟ್ರಿಕ್ ಬಸ್ ಬಿಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಅಲ್ಲದೇ ಡಬ್ಬಲ್ ಡೆಕ್ಕರ್ ಬಸ್ ಸೇವೆಯನ್ನು ಬೋಡಿಮೆಟ್ಟುವರೆಗೆ ವಿಸ್ತರಿಸುವ ಚಿಂತನೆ ಕೂಡ ನಡೆದಿದೆ.
ಬಸ್ ಪ್ರಯಾಣದ ವಿವರ
ಮುನ್ನಾರ್ ಬಸ್ ನಿಲ್ದಾಣದಿಂದ ಅನೈರಂಗಲ್ ನಡುವೆ ಮೂರು ಗಂಟೆಗಳ ಪ್ರಯಾಣವಿದೆ. ಮಾರ್ಗ ಮಧ್ಯದಲ್ಲಿ 5 ಮಧ್ಯಂತರ ನಿಲ್ದಾಣಗಳು ಬರುತ್ತವೆ. ಈ ಬಸ್‌ನಲ್ಲಿ ಪ್ರಯಾಣ ಮಾಡುವವರು ಕಣ್ಣನ್ ದೇವನ್ ಟೀ ಎಸ್ಟೇಟ್‌ಗಳು, ಮಲೈಕಲ್ಲನ್ ರಾಕ್ ಗುಹೆ, ಸಿಗ್ನಲ್ ಪಾಯಿಂಟ್, ಪೆರಿಯಕನಾಲ್ ಜಲಪಾತ, ಲಾಕ್‌ಹಾರ್ಟ್ ಎಸ್ಟೇಟ್ ವ್ಯೂ, ಚೋಕ್ರಮಲ ಬೆಟ್ಟ, ಆರೆಂಜ್ ಫಾರ್ಮ್ ಮತ್ತು ಅನೈರಂಗಲ್ ಅಣೆಕಟ್ಟ ಈ ಎಲ್ಲವನ್ನೂ ಎಂಜಾಯ್ ಮಾಡಬಹುದು. ಈ ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ಮೇಲಿನ ಡೆಕ್‌ನ ಪ್ರತಿ ಸೀಟಿಗೆ 400 ರೂ ಹಾಗೂ ಕೆಳಗಿನ ಸೀಟ್ ಪ್ರತಿ ಸೀಟಿಗೆ 200 ರೂ ನಿಗದಿ ಮಾಡಲಾಗಿದೆ. ಮೇಲ್ಭಾಗದಲ್ಲಿ 38 ಸೀಟುಗಳು ಮತ್ತು ಕೆಳಗಿನ ಡೆಕ್‌ನಲ್ಲಿ 12 ಸೀಟುಗಳಿವೆ. ಬೆಳಿಗ್ಗೆ 9, ಮಧ್ಯಾಹ್ನ 12.30 ಮತ್ತು ಸಂಜೆ 4 ಈ ಮೂರು ಸಮಯದಲ್ಲಿ ಬಸ್ ವ್ಯವಸ್ಥೆ ಇರುತ್ತದೆ.
ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗೆ ಆಗ್ರಹಿಸಲಾಗಿದ್ದು, ಈ ಸೇವೆ ಆರಂಭವಾದರೆ ಪೂಪ್ಪರ ಟೀ ಎಸ್ಟೇಟ್ ಮತ್ತು ದೇವಿಕುಲಂ ಸರೋವರದಂತಹ ಸ್ಥಳಗಳನ್ನು ಸಹ ಪ್ರಯಾಣ ಪಟ್ಟಿಯಲ್ಲಿ ಸೇರಿಸಬಹುದು. ನೀವು ಕೇರಳಕ್ಕೆ ಹೋಗುತ್ತಿದ್ದು ಈ ಬಸ್‌ನಲ್ಲಿ ಪ್ರಯಾಣ ಮಾಡಬೇಕು ಅಂತಿದ್ದರೆ https://onlineksrtcswift.com/ ಈ ವೆಬ್‌ಸೈಟ್‌ಗೆ ಹೋಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಬಸ್ ಟಿಕೆಟ್ ಬುಕ್ ಮಾಡುವ ವಿಧಾನ
ವೆಬ್‌ಸೈಟ್‌ನಲ್ಲಿ ಮುನ್ನಾರ್ KSRTC ರಾಯಲ್ ವ್ಯೂ ಡಬಲ್ ಡೆಕ್ ಅನ್ನು ಹುಡುಕಿ. ಅಲ್ಲಿ ಸೈಟ್ ಸೀಯಿಂಗ್ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ನಿಮ್ಮ ಪ್ರಯಾಣದ ದಿನಾಂಕವನ್ನು ಆರಿಸಿ. ನಿಮಗೆ ಯಾವ ಸೀಟ್ ಬೇಕು ಎಂಬುದನ್ನು ಆಯ್ಕೆ ಮಾಡಿ. ಪ್ರಯಾಣಿಕರ ವಿವರ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ. ಒಂದು ಬಾರಿಗೆ ಗರಿಷ್ಠ 6 ಸೀಟುಗಳನ್ನು ಬುಕ್ ಮಾಡಬಹುದು.
