ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪ: ಟ್ರಾವೆಲ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪ: ಟ್ರಾವೆಲ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನ

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪ: ಟ್ರಾವೆಲ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನ

ಬೇಹುಗಾರಿಕೆ ಮತ್ತು ದೇಶದ ಸೇನೆಯ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಗೆ ರವಾನಿಸಿದ ಆರೋಪದ ಮೇಲೆ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಹಿಸಾರ್ ಪೊಲೀಸರು ಬಂಧಿಸಿದ್ದಾರೆ.

ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ
ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ

ನವದೆಹಲಿ: ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಹಿಸಾರ್‌ನ ಟ್ರಾವೆಲ್ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ಪೊಲೀಸರು ಬಂಧಿಸಿದ್ದಾರೆ. ಯುಟ್ಯೂಬ್‌ನಲ್ಲಿ 3,77,000 ಕ್ಕೂ ಹೆಚ್ಚಿನ ಚಂದಾದಾರರನ್ನು ಹೊಂದಿರುವ ತನ್ನ ಯೂಟ್ಯೂಬ್‌ ಟ್ರಾವೆಲ್ ಚಾನೆಲ್ ಟ್ರಾವೆಲ್ ವಿತ್ ಜೋ ಮೂಲಕ ಜ್ಯೋತಿ ಜನಪ್ರಿಯತೆ ಗಳಿಸಿದ್ದರು. ಪಾಕಿಸ್ತಾನ ಪರ ಬೇಹುಗಾರಿಕೆ ಮತ್ತು ದೇಶದ ರಹಸ್ಯ ಮಾಹಿತಿಯನ್ನು ಪಾಕ್ ಏಜೆಂಟರಿಗೆ ನೀಡಿರುವ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಜ್ಯೋತಿ ಕುರಿತು ಪೊಲೀಸರು ಹಲವು ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಜ್ಯೋತಿ ಮಲ್ಹೋತ್ರಾ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ, 1923 ರ ಸೆಕ್ಷನ್ 3, 4 ಮತ್ತು 5 ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಿಸಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಸಂಜಯ್ ದಾಖಲಿಸಿರುವ ಎಫ್ಐಆರ್ ಪ್ರಕಾರ, ಜ್ಯೋತಿ ಮಲ್ಹೋತ್ರಾ 2023 ರಲ್ಲಿ ನವದೆಹಲಿಯ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ದಾನಿಶ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದಳು. ಡ್ಯಾನಿಶ್ ಆಕೆಯ ಹ್ಯಾಂಡ್ಲರ್ ಆಗಿ ಕಾರ್ಯನಿರ್ವಹಿಸಿ, ಪಾಕಿಸ್ತಾನಿ ಇಂಟೆಲಿಜೆನ್ಸ್ ಆಪರೇಟಿವ್ಸ್‌ಗೆ ಆಕೆಯನ್ನು ಪರಿಚಯಿಸಿದ್ದನು ಮತ್ತು ಎನ್ಕ್ರಿಪ್ಟ್ ಮಾಡಿದ ಆನ್‌ಲೈನ್ ಪ್ಲಾಟ್‌ಫಾರ್ಮ್, ಅಪ್ಲಿಕೇಶನ್‌ಗಳ ಮೂಲಕ ಅವಳೊಂದಿಗೆ ನಿಯಮಿತ ಸಂವಹನವನ್ನು ನಿರ್ವಹಿಸುತ್ತಿದ್ದನು ಎಂದು ಆರೋಪಿಸಲಾಗಿದೆ.

ಜ್ಯೋತಿ ಮಲ್ಹೋತ್ರಾ 2023 ರಲ್ಲಿ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಆಕೆ ಅಲಿ ಎಹ್ವಾನ್, ಶಕೀರ್ ಮತ್ತು ರಾಣಾ ಶಹಬಾಜ್ ಸೇರಿದಂತೆ ಹಲವು ಗುಪ್ತಚರ ಏಜೆಂಟರನ್ನು ಭೇಟಿಯಾಗಿದ್ದಾಳೆ. ತನ್ನ ಬಗ್ಗೆ ಅನುಮಾನ ಬಾರದಿರಲು ಆಕೆ ಮತ್ತು ಏಜೆಂಟರ ಹೆಸರುಗಳನ್ನು ಜಟ್ ರಾಂಧವನಂತಹ ರಹಸ್ಯ ಹೆಸರುಗಳನ್ನು ಬಳಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಜ್ಯೋತಿ, ಹರಿಯಾಣ, ಪಂಜಾಬ್‌ ಸಹಿತ ವಿವಿಧ ಕಡೆ ಪಾಕಿಸ್ತಾನ ಏಜೆಂಟರೊಂದಿಗೆ ಸಂಪರ್ಕ ಹೊಂದಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿ, ಜ್ಯೋತಿ ಸಹಿತ ಆರು ಜನರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.

ಟ್ರಾವೆಲ್ ವಿತ್ ಜೋ ಯೂಟ್ಯೂಬ್ ಚಾನೆಲ್ ಮೂಲಕ ತನ್ನನ್ನು ಟ್ರಾವೆಲ್ ಬ್ಲಾಗರ್ ಎಂದು ಬಿಂಬಿಸಿಕೊಳ್ಳುತ್ತಿದ್ದ ಜ್ಯೋತಿ, ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ಕುರಿತು ಸಕಾರಾತ್ಮಕ ಚಿತ್ರಣವನ್ನು ಪ್ರದರ್ಶಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.