ಚಂದ್ರಯಾನ ಟೀಕಿಸಿದವರಿಗೆ ರೋಹಿತ್ ಚಕ್ರತೀರ್ಥ ಖಡಕ್ ಉತ್ತರ: ಬಡದೇಶಕ್ಕಿದು ಶೋಕಿ ಎಂದು ಹೀಗಳೆದವರಿಗೆ ಈ ಬರಹ ಶೇರ್ ಮಾಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚಂದ್ರಯಾನ ಟೀಕಿಸಿದವರಿಗೆ ರೋಹಿತ್ ಚಕ್ರತೀರ್ಥ ಖಡಕ್ ಉತ್ತರ: ಬಡದೇಶಕ್ಕಿದು ಶೋಕಿ ಎಂದು ಹೀಗಳೆದವರಿಗೆ ಈ ಬರಹ ಶೇರ್ ಮಾಡಿ

ಚಂದ್ರಯಾನ ಟೀಕಿಸಿದವರಿಗೆ ರೋಹಿತ್ ಚಕ್ರತೀರ್ಥ ಖಡಕ್ ಉತ್ತರ: ಬಡದೇಶಕ್ಕಿದು ಶೋಕಿ ಎಂದು ಹೀಗಳೆದವರಿಗೆ ಈ ಬರಹ ಶೇರ್ ಮಾಡಿ

Chandrayaan 3: ಭಾರತದಂಥ ಬಡದೇಶಕ್ಕೇಕೆ ಚಂದ್ರಯಾನದ ಶೋಕಿ ಎನ್ನುವ ಧಾಟಿಯ ಆಕ್ಷೇಪಗಳಿಗೆ ವಿಜ್ಞಾನ ಲೇಖಕ, ಚಿಂತಕ ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್ ಬರಹದಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಅವರ ಬರಹವನ್ನು ಯಥಾವತ್ತಾಗಿ ಮರುಪ್ರಕಟಿಸಲಾಗಿದೆ.

ಚಂದ್ರಯಾನ ಟೀಕಿಸಿದವರಿಗೆ ರೋಹಿತ್ ಚಕ್ರತೀರ್ಥ ಖಡಕ್ ಉತ್ತರ
ಚಂದ್ರಯಾನ ಟೀಕಿಸಿದವರಿಗೆ ರೋಹಿತ್ ಚಕ್ರತೀರ್ಥ ಖಡಕ್ ಉತ್ತರ

ಈ ದೇಶದಲ್ಲಿ ಒಂದಾನೊಂದು ಕಾಲವಿತ್ತು. ಇಸ್ರೋದಿಂದ ಒಂದು ರಾಕೆಟ್ಟು ಮೇಲೆ ಬಾಹ್ಯಾಕಾಶಕ್ಕೆ ಹಾರಿತೆಂದರೆ ಸಾಕು, ಸಾಲು ಸಾಲು ಲೇಖನಗಳು, ಉಪನ್ಯಾಸಗಳು, ಉಪದೇಶಗಳು. ʼಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆʼ ಎಂಬ ಈ ಶೋಕಿ ಬೇಕಾ? ಕೋಟ್ಯಂತರ ಜನ ಬಡತನದ ರೇಖೆಗಿಂತ ಕೆಳಗೆ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ಟಿಕೊಂಡು ಸೂರಿಲ್ಲದ ಮನೆಗಳಲ್ಲಿ ಆಕಾಶ ನೋಡುತ್ತ ಮಲಗಿರುವಾಗ ಬಾಹ್ಯಾಕಾಶಕ್ಕೆ ರಾಕೆಟ್ ಹಾರಿಸುವ ಈ ಶೋಕಿ ಬೇಕಾ? ಎಂದು ದಂಡಿಯಾಗಿ ಲೇಖನಗಳು, ಭಾಷಣಗಳು ಕಾಣಿಸಿಕೊಳ್ಳುತ್ತಿದ್ದವು. ತಮ್ಮ ಮಾತುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಓದುಗರ ಹೃದಯಗಳಿಗೆ ಇರಿಯಲು ಇವರು ಬಳಸಿಕೊಳ್ಳುತ್ತಿದ್ದ ಫೋಟೋಗಳೂ ಹಾಗೇ ಇದ್ದವು - ಒಂದು ಕಡೆ ಆಕಾಶಕ್ಕೆ ಚಿಮ್ಮುತ್ತಿರುವ ರಾಕೆಟ್, ಅದರ ಪಕ್ಕದಲ್ಲಿ ಖಾಲಿತಟ್ಟೆ ನೆಲಕ್ಕೆ ಬಡಿಯುತ್ತಿರುವ ಚಿಂದಿಬಟ್ಟೆಯ ಮಗು. ಒಂದು ಕಡೆ ಪರಸ್ಪರ ತಬ್ಬಿಕೊಂಡು ಶುಭಾಶಯ ಹೇಳಿಕೊಳ್ಳುತ್ತಿರುವ ವಿಜ್ಞಾನಿಗಳು, ಪಕ್ಕದಲ್ಲಿ ಕಾರಿಂದಿಳಿದು ನಿಂತ ಸಿರಿವಂತನ ಬೂಟು ಪಾಲೀಶು ಮಾಡುತ್ತಿರುವ ಏಳೆಂಟರ ಹುಡುಗ. ಈ ಬರಹಗಳನ್ನು ಓದಿದ, ಈ ಚಿತ್ರಗಳನ್ನು ನೋಡಿದ ಕೆಲವು ಮನಸ್ಸುಗಳಲ್ಲಾದರೂ ಏಳುತ್ತಿದ್ದ ಪ್ರಶ್ನೆ: ʼಹೌದಪ್ಪ, ದೇಶ ಇಂಥ ಬಡತನದಲ್ಲಿ ತೊಳಲಾಡುತ್ತಿರುವಾಗ ಆಕಾಶಕ್ಕೆ ಹಾರುವ ಶೋಕಿ ಬೇಕಾ!ʼ

ಇಸ್ರೋ ಬಾಹ್ಯಾಕಾಶಕ್ಕೆ ಹಾರಿ, ಅತ್ತ ಚಂದ್ರ, ಮಂಗಳರನ್ನೂ ಮಾತಾಡಿಸಿಕೊಂಡು ಬಂದಾಗಿದೆ. ಆದರೆ ನಮ್ಮ ಪರಗತಿಪರರು, ಜೀವಪರರು, ಸಾಕ್ಷಿಪ್ರಜ್ಞೆಗಳು ಮಾತ್ರ ಇನ್ನೂ ಅದೆಲ್ಲಿದ್ದರೋ ಅಲ್ಲೇ ಇದ್ದಾರೆ! ಪ್ರತಿ ಸಲ ಇಸ್ರೋ ರಾಕೆಟ್ ಉಡಾಯಿಸಿದಾಗಲೂ ಇವರ ತಳದಲ್ಲಿ ಸೀದ ವಾಸನೆ, ದ್ವೇಷದ ಭಗಭಗ ಹೊಗೆ! ಪ್ರತಿ ಸಲ ಭಾರತ ವಿಶ್ವಮಟ್ಟದಲ್ಲೊಂದು ಸಾಧನೆ ಮೆರೆದಾಗಲೂ ಅದೇ ಖಾಲಿತಟ್ಟೆ, ಭಿಕ್ಷೆಯ ಡಬ್ಬಿ, ಹರಿದ ಬಟ್ಟೆ, ಚಪ್ಪಲಿಯಿಲ್ಲದ ಕಾಲು, ಒಣಕಲು ಜಡೆಯ ಅವವೇ ಹಳೆ ಫೋಟೋಗಳನ್ನು ಕೊರಳಿಗೆ ನೇತಾಡಿಸಿಕೊಂಡು ಬಂದೇ ಬರುತ್ತಾರೆ ಪರಗತಿಪರರು - ಅವವೇ ಹಳೆ ಪ್ರಶ್ನೆಗಳ ಜೊತೆ. "ರಾಕೆಟ್ ಹಾರಿಸಿದರೆ ಬಡವನ ಹೊಟ್ಟೆ ತುಂಬುತ್ತಾ?" - ಪ್ರಶ್ನೆ ಹಳೆಯದೇ, ಆದರೆ ಅದರ ಭಾವನಾತ್ಮಕ ಕುಣಿಕೆಗೆ ಸಿಗುವ ಬಕರಾಗಳು ಪ್ರತಿವರ್ಷವೂ ಹೊಸಹೊಸಬರೇ.

ಅಹಿಂಸ ಚೇತನ ಹೊಸ ಪ್ರಶ್ನೆಯೊಂದಿಗೆ ಬಂದಿದ್ದಾನೆ. "ನಾವು ಚಂದ್ರನನ್ನು ತಲುಪಿದ್ದೇವೆ, ಆದರೆ ಮಲಗುಂಡಿಗೆ ಇಳಿಯುವುದನ್ನು ಇನ್ನೂ ನಿಲ್ಲಿಸಲಾಗಿಲ್ಲ" ಎಂಬುದು ಇವನ ಅಳಲು. ಇದಕ್ಕೆ ಈತ ಬಳಸಿಕೊಂಡಿರುವ ಚಿತ್ರಗಳು ಕೂಡ, ಈತನ ಎರಡು ತಲೆಮಾರುಗಳಷ್ಟು ಹಿಂದೆ ಪರಗತಿಪರರು ಬಳಸುತ್ತಿದ್ದವೇ: ಇಸ್ರೋ ಉಡಾಯಿಸಿರುವ ರಾಕೆಟ್ಟು, ಪಕ್ಕದಲ್ಲಿ ಮಲಗುಂಡಿಗಿಳಿದಿರುವ ಯುವಕ.

ಹೌದು, ಮಲಗುಂಡಿಗಿಳಿದು ಸ್ವಚ್ಛ ಮಾಡುವ ಕೆಲಸ ನಿಜಕ್ಕೂ ಅಮಾನವೀಯ. ಮನುಷ್ಯತ್ವ ಇರುವವರು ಯಾರೂ ಈ ಕೆಲಸವನ್ನು ಮಾಡಿಸಲೂಬಾರದು, ಮಾಡಲೂಬಾರದು. ಆದರೆ ಚೇತನ ಬಳಸಿಕೊಂಡಿರುವ 'ಮಲಗುಂಡಿಗಿಳಿದಿರುವ ಯುವಕ' ಯಾರು? ಹುಡುಕುತ್ತ ಹೋದರೆ ಆ ಚಿತ್ರವನ್ನು ಮೊನ್ನೆ ಜುಲೈ ೧೬ರ ನಂತರ ಹತ್ತಾರು ಟ್ವಿಟ್ಟರ್ ಹ್ಯಾಂಡಲುಗಳು ಬಳಸಿಕೊಂಡಿರುವುದು ಗೊತ್ತಾಗುತ್ತದೆ - ಎಲ್ಲ ಖಾತೆಗಳಲ್ಲೂ ಪೆರಿಯಾರ್ ಚಿತ್ರ, ದಲಿತರ ದನಿ ತಾವೇ ಎಂಬ ಘೋಷಣೆ, ಮೋದಿಯ ವಿರುದ್ಧ ಅಕರಾಳವಿಕರಾಳ ದ್ವೇಷ, ಭಾರತದ ಸಾಧನೆಗಳೆಲ್ಲದರ ಮೇಲೆ ನಖಶಿಖಾಂತ ಉರಿ. ಇಸ್ರೋ ರಾಕೆಟ್ ಉಡಾಯಿಸುತ್ತಿರುವ, ಪಕ್ಕದಲ್ಲಿ ಮಲಗುಂಡಿಯ ಚಿತ್ರವಿರುವ ಪೋಸ್ಟರನ್ನು ಮೊದಲು ಟ್ವಿಟ್ಟರಲ್ಲಿ ಹರಿಯಬಿಟ್ಟವನು ದ ಪ್ರಿಂಟ್, ಬಿಬಿಸಿ, ಕ್ವಿಂಟ್‌ಗಳಲ್ಲಿ ಭಾರತದ್ವೇಷದ ಉರಿಕಾರಿಕೊಳ್ಳುವ 'ಪತ್ರಕರ್ತ'. ಅಷ್ಟು ಹೇಳಿದರೆ ಸಾಕಲ್ಲ?

ತಮಾಷೆಯೆಂದರೆ, ಮಲಗುಂಡಿಗಿಳಿದ ಅದೇ ಯುವಕನ ಅದೇ ಭಂಗಿಯ ಚಿತ್ರ ಕಳೆದ ಆರೇಳು ವರ್ಷಗಳಿಂದ ಇಂಟರ್ನೆಟ್ಟಲ್ಲಿ ಓಡಾಡುತ್ತಿದೆ. ಒಬ್ಬ ಇದನ್ನು, ಮಂಡ್ಯದ ಮದ್ದೂರಿನಲ್ಲಿ ಮಲಗುಂಡಿಗೆ ಬಲವಂತವಾಗಿ ಇಳಿಸಿದರೆಂದು ಬೇಸರ ಬಂದು ಮರಣಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ಸಫಾಯಿ ನೌಕರನ ಸುದ್ದಿ ಹೇಳುವಾಗ ಹಾಕಿಕೊಂಡಿದ್ದಾನೆ (ಅಂದ ಹಾಗೆ, ಆ ಪತ್ರದಲ್ಲಿ ಆ ನೌಕರ ಉಲ್ಲೇಖಿಸಿದ 'ಬಲವಂತ ಮಾಡಿದವರ' ಹೆಸರು 'ಘಾಸಿಂ ಖಾನ್'. ಈ ಮಾಹಿತಿ, ಆತ್ಮಹತ್ಯೆಯ ಸುದ್ದಿಯನ್ನು ಟ್ವಟ್ಟರಿನಲ್ಲಿ ಹಂಚಿಕೊಂಡ ದಲಿತಪರ ಖಾತೆಯ ಪೋಸ್ಟಿನಲ್ಲಿ ಸಿಗುವುದಿಲ್ಲ!). ಇದೇ ಚಿತ್ರ ನಾಲ್ಕು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಬಂದಿದೆ, 5 ವರ್ಷದ ಹಿಂದೆ ರೆಡಿಟ್‌ನಲ್ಲಿ ಬಂದಿದೆ. ಒಂದು ಬರಹದಲ್ಲಿ ಈ ಮಲಗುಂಡಿಯ ಯುವಕನ ಹೆಸರನ್ನು ಜಾನಿ ಎಂದು ಉಲ್ಲೇಖಿಸಲಾಗಿದೆ. ಇನ್ನೊಬ್ಬ, ಈ ಯುವಕ ಮುಸ್ಲಿಂ ಎಂದಿದ್ದಾನೆ. ಮಾತ್ರವಲ್ಲ, "ಈತ (ಹಾಗೂ ಈತನಂತೆ ಮಲಗುಂಡಿಗಿಳಿಯುವ ನೂರಾರು ಮಂದಿ) ಮೂಲತಃ ಅರಜಲ್ ಮುಸ್ಲಿಮ್ ಸಮುದಾಯದವರು. ಈ ಅರಜಲ್‌ಗಳನ್ನು ಇತರ ಮುಸ್ಲಿಮರು ಅಸ್ಪೃಶ್ಯರಂತೆ ನೋಡುತ್ತಾರೆ. ಅರಜಲ್ ಮುಸ್ಲಿಮರು ಮಲಗುಂಡಿ ಸ್ವಚ್ಛತೆಯ ಕೆಲಸವನ್ನೇ ಶತಮಾನಗಳಿಂದ ಮಾಡುತ್ತ ಬಂದಿದ್ದಾರೆ. ಈ ಕೆಲಸ ನಿಲ್ಲಿಸಲು ಮುಸ್ಲಿಮ್ ಸಮುದಾಯವಾಗಲೀ ಇತರ ಜೀವಪರರಾಗಲೀ ಎಂದಾದರೂ ಶ್ರಮಿಸಿದ್ದನ್ನು ನೋಡಿದ್ದೀರಾ?" ಎಂದೂ ಪ್ರಶ್ನೆ ಮಾಡಿದ್ದಾನೆ.

ಬುದ್ಧಿಜೀವಿಯಾಗುವುದು ಎಷ್ಟು ಸುಲಭ ನೋಡಿ! ಭಾರತದ ಯಾವುದಾದರೂ ಸಾಧನೆ, ಅದರ ಪಕ್ಕದಲ್ಲಿ ಹೀಗೆ ಹಸಿವಿನಿಂದ ಕೂತಿರುವವರ, ಭಿಕ್ಷುಕರ, ಮಲಗುಂಡಿಗಿಳಿದ ಕರ್ಮಚಾರಿಗಳ ಫೋಟೋ ಹಾಕಿ 'ಇದು ನನ್ನ ಭಾರತ' ಎಂದುಬಿಟ್ಟರಾಯಿತು! ನಿಮ್ಮ ಪೋಸ್ಟನ್ನು ಚಪ್ಪರಿಸಿಕೊಂಡು ಶೇರ್ ಮಾಡಲು, ರಿಪೋಸ್ಟ್ ರಿಟ್ವೀಟ್ ಮಾಡಲು ನೂರಾರು ಹಸಿದ ಹೈನಗಳು ಕಾದುಕೂತಿವೆ. "ಇಂತಿಂಥ ಬುದ್ಧಿಜೀವಿ/ಸೆಲೆಬ್ರಿಟಿ ಇಂತಿಂಥ ಪ್ರಶ್ನೆ ಕೇಳಿ ಮೋದಿಯನ್ನು ದಂಗಾಗಿಸಿದ್ದಾರೆ. ಈ ಸೆಲೆಬ್ರಿಟಿಯ ಪ್ರಶ್ನೆಗೆ ಪ್ರಧಾನಿಗಳು ಉತ್ತರಿಸದೆ ಮೌನ ವಹಿಸಿದ್ದಾರೆ" ಎಂದು ಬರೆದು ಪ್ರಕಟಿಸಿ ಪ್ರಚಾರ ಕೊಡಲೆಂದೇ ಒಂದಷ್ಟು 'ವಿಶ್ವಾಸಾರ್ಹ' ಪತ್ರಿಕೆಗಳು ಕೂಡ ಇವೆ. ಪೋಸ್ಟ್ ಮಾಡಿದ ಅಹಿಂಸನಾಗಲೀ ಅವನಂಥ ಸೋಕಾಲ್ಡ್ ಜೀವಪರರಾಗಲೀ "ಭಾರತದಲ್ಲಿ ಮಲಗುಂಡಿ ಸ್ವಚ್ಛಮಾಡುವ ಸಫಾಯಿ ಕರ್ಮಚಾರಿಗಳ ಕುರಿತಾದ ಕಾನೂನು ಜಾರಿಗೆ ಬಂದು ಎರಡು ದಶಕಗಳೇ ಕಳೆದಿವೆ " ಎಂಬ ಸತ್ಯ ಹೇಳುವುದಿಲ್ಲ. "ಯಾರನ್ನಾದರೂ ಮಲಗುಂಡಿಗಿಳಿಸುವುದು ಶಿಕ್ಷಾರ್ಹ ಅಪರಾಧ. ಹಾಗೇನಾದರೂ ಯಾರಾದರೂ ಮಾಡಿದರೆ ಅಂಥವರ ಮೇಲೆ ಕೂಡಲೇ ಪ್ರಕರಣ ದಾಖಲಿಸಿ ಜೈಲಿಗಟ್ಟಬಹುದು. ಭಾರತದಲ್ಲಿ ಕಳೆದ ಹತ್ತು ವರ್ಷಗಳಿಂದ ಅಂಥ ಪ್ರಬಲ ಕಾನೂನಿದೆ" ಎಂಬ ಸತ್ಯವನ್ನು ಅಪ್ಪಿತಪ್ಪಿಯೂ ಹೇಳುವುದಿಲ್ಲ. ಭಾರತದಲ್ಲಿ ಮಲಗುಂಡಿ ಪ್ರಕರಣಗಳಲ್ಲಿ ದುರಂತ ಸಾವಿಗೀಡಾದ 941 ಮಂದಿಯ ಪೈಕಿ 213 ಮಂದಿ ನಮ್ಮ ಪೆರಿಯಾರ್ ರಾಜ್ಯದವರು ಎಂಬ ಸತ್ಯವನ್ನೂ ಅವರು ಹೇಳುವುದಿಲ್ಲ. ಇನ್ನು ಆ ಕರ್ಮಚಾರಿಗಳನ್ನು ಮಲಗುಂಡಿಗಿಳಿಸಿದವರು ಹಿಂದುಗಳೊ, ಅಥವಾ ಅನ್ಯಧರ್ಮೀಯರೋ? ಜನಸಾಮಾನ್ಯರಿಗೆ ಗೊತ್ತೇ ಆಗುವುದಿಲ್ಲ.

"ಮಲಗುಂಡಿಗಿಳಿಯಬೇಕಾದ ಈ ದುರಂತಮಯ ನೌಕರಿಯನ್ನು ಈಗಾದರೂ ನಿಲ್ಲಿಸಬಾರದೆ?" ಎಂದು ಒಬ್ಬ ಕಾಂಗ್ರೆಸ್ಸಿ ಕೂಡ ಕರುಣಾಪೂರ್ಣ ಪೋಸ್ಟ್ ಬರೆದಿದ್ದಾನೆ. "ಇಸ್ರೋಗೆ ಅಡಿಗಲ್ಲು ಹಾಕಿದ್ದೇ ನಮ್ಮ ನೆಹರು" ಎಂದು ಕಾಂಗ್ರೆಸ್ಸಿನ ಅಧಿಕೃತ ಹ್ಯಾಂಡಲ್ ಎದೆತಟ್ಟಿಕೊಂಡಿದೆ. ಇಲ್ಲಿ ಕೇಂದ್ರ ಸರಕಾರದ ಮುಂದಿರುವ ಪ್ರಶ್ನೆ: "ಇಸ್ರೋ ರಾಕೆಟ್ ಹಾರಿಸುವುದಕ್ಕೂ ಸಫಾಯಿ ಕರ್ಮಚಾರಿಗಳಿಗೂ ಇರುವ ಸಂಬಂಧ ಏನು? ಮಲಗುಂಡಿಗಿಳಿಸುವುದು ಶಿಕ್ಷಾರ್ಹ ಅಪರಾಧ ಎಂದು ಕಾಯ್ದೆ ಮಾಡಿದ ಮೇಲೂ ಅಲ್ಲಿಲ್ಲಿ ಇಳಿಸುವವರಿದ್ದಾರೆಂದರೆ ಅದಕ್ಕೆ ಸರಕಾರವಾಗಿ ನಾವೇನು ಮಾಡಬಹುದು? ಹಾಗೆ ಮಲಗುಂಡಿಗಿಳಿಸಿದವರ ವಿರುದ್ಧ ಪ್ರಕರಣ ದಾಖಲಿಸದಂತೆ ನಿಮ್ಮ ಕೈ ಕಟ್ಟಿ ಹಾಕಿರುವವರು ಯಾರು? ಈ ಮಲಗುಂಡಿಗಳ ಸ್ವಚ್ಛತೆಯ ಸಮಸ್ಯೆ ಪೂರ್ಣವಾಗಿ ಪರಿಹಾರವಾಗುವವರೆಗೆ ನಿಮ್ಮ ಮುತ್ತಜ್ಜ ಸ್ಥಾಪಿಸಿದ ಇಸ್ರೋ ಸಂಸ್ಥೆಯನ್ನು ಬೀಗ ಹಾಕಿ ತಿಜೋರಿಯಲ್ಲಿಡೋಣವೆ? ಏನು ಮಾಡಬೇಕು ಹೇಳಿ!"

ಅಂದ ಹಾಗೆ, ಬುದ್ಧಿಜೀವಿಗಳಿಗೊಂದು ಸಾಮಾನ್ಯಜ್ಞಾನದ ಸಣ್ಣ ಗುಟುಕು: 'ಇಸ್ರೋದವರು ರಾಕೆಟ್ ಹಾರಿಸಿ ಏನುಪಯೋಗ?' ಎಂದು ನೀವು ಕೇಳಿದ ಪ್ರಶ್ನೆಯನ್ನು ಲಕ್ಷಾಂತರ ಜನರ ಮೊಬೈಲು ಪರದೆಗಳಲ್ಲಿ ಕಾಣಿಸುವುದಕ್ಕೂ, ಆ ಮೂಲಕ ನಿಮ್ಮ ಇನ್ಸ್ಟಾ ಪೇಜಿಗೆ ಅಥವಾ ಯೂಟ್ಯೂಬ್ ವಿಡಿಯೋಗೆ ಲಕ್ಷಾಂತರ ವ್ಯೂ ಬಂದು ನಿಮ್ಮ ಗಂಜಿ ಸಂಪಾದನೆಯಾಗುವುದಕ್ಕೂ ಸಹಾಯ ಮಾಡುತ್ತಿರುವುದು ಈ ಇಸ್ರೋದವರು ಹಾರಿಬಿಟ್ಟ ಉಪಗ್ರಹಗಳೇ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.