ವಿಶ್ವದ 2ನೇ ಅತಿದೊಡ್ಡ ವಜ್ರ ಬೋಟ್ಸ್‌ವಾನಾದಲ್ಲಿ ಸಿಕ್ತು, ಹಾಗಾದ್ರೆ ಮೊದಲನೇಯದ್ದರ ಬಗ್ಗೆ ತಿಳ್ಕೋಬೇಕಲ್ವ-trending news world s 2nd largest diamond found in botswana could fetch over 40 million usd what about 1st one dets uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿಶ್ವದ 2ನೇ ಅತಿದೊಡ್ಡ ವಜ್ರ ಬೋಟ್ಸ್‌ವಾನಾದಲ್ಲಿ ಸಿಕ್ತು, ಹಾಗಾದ್ರೆ ಮೊದಲನೇಯದ್ದರ ಬಗ್ಗೆ ತಿಳ್ಕೋಬೇಕಲ್ವ

ವಿಶ್ವದ 2ನೇ ಅತಿದೊಡ್ಡ ವಜ್ರ ಬೋಟ್ಸ್‌ವಾನಾದಲ್ಲಿ ಸಿಕ್ತು, ಹಾಗಾದ್ರೆ ಮೊದಲನೇಯದ್ದರ ಬಗ್ಗೆ ತಿಳ್ಕೋಬೇಕಲ್ವ

ಆಫ್ರಿಕಾದ ದಕ್ಷಿಣ ಭಾಗದ ರಾಷ್ಟ್ರ ಬೋಟ್ಸ್‌ವಾನಾದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಎಂದು ನಂಬಲಾದ ಕಚ್ಚಾ ವಜ್ರ ಪತ್ತೆಯಾಗಿದೆ. ಇದು 2,492 ಕ್ಯಾರೆಟ್ ಕಚ್ಚಾ ವಜ್ರವಾಗಿದ್ದು, ಲುಕಾರಾ ಡೈಮಂಡ್ ಕಾರ್ಪ್ ಒಡೆತನದಲ್ಲಿದೆ. ಹಾಗಾದ್ರೆ ಮೊದಲನೇಯದ್ದರ ಬಗ್ಗೆ ತಿಳ್ಕೋಬೇಕಲ್ವ - ಇಲ್ಲಿದೆ ಆ ವಿವರ.

ಜಗತ್ತಿನ ಎರಡನೇ ಅತಿದೊಡ್ಡ ಗಾತ್ರದ್ದು ಎನ್ನಲಾದ ವಜ್ರ. ಇದು ಬೋಟ್ಸ್‌ವಾನಾದಲ್ಲಿ ಪತ್ತೆಯಾಗಿದೆ.
ಜಗತ್ತಿನ ಎರಡನೇ ಅತಿದೊಡ್ಡ ಗಾತ್ರದ್ದು ಎನ್ನಲಾದ ವಜ್ರ. ಇದು ಬೋಟ್ಸ್‌ವಾನಾದಲ್ಲಿ ಪತ್ತೆಯಾಗಿದೆ. (Lucara Diamond Corp)

ನವದೆಹಲಿ: ಆಫ್ರಿಕಾದ ದಕ್ಷಿಣ ರಾಷ್ಟ್ರ ಬೋಟ್ಸ್‌ವಾನಾದಲ್ಲಿ ಅತಿದೊಡ್ಡ ಗಾತ್ರದ ಕಚ್ಚಾ ವಜ್ರ ಸಿಕ್ಕಿದ್ದು, ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಇದು ಎಂದು ನಂಬಲಾಗಿದೆ. ಇದು ರತ್ನ ಗುಣಮಟ್ಟವನ್ನು ಹೊಂದಿದ್ದು, ವಿಶ್ವದ ಗಮನಸೆಳೆದಿದೆ.

ಬೋಟ್ಸ್‌ವಾನಾದಲ್ಲಿ ಪತ್ತೆಯಾದ ಕಚ್ಚಾ ವಜ್ರವು 2,492 ಕ್ಯಾರೆಟ್‌ನದ್ದು ಎಂದು ಗುರುತಿಸಲಾಗಿದೆ. ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಾರ್ಪ್ ಒಡೆತನದ ಬೋಟ್ಸ್‌ವಾನಾದ ಕರೋವ್ ವಜ್ರದ ಗಣಿಯಲ್ಲಿ ಈ ದೈತ್ಯ ರತ್ನ ಪತ್ತೆಯಾಗಿದೆ.

"ಈ ಅಸಾಧಾರಣ 2,492 ಕ್ಯಾರೆಟ್ ವಜ್ರವನ್ನು ಮತ್ತೆ ಸಿಕ್ಕಿರುವುದು ನಮಗೆ ಖುಷಿ ತಂದಿದೆ" ಎಂದು ಲುಕಾರಾ ಅಧ್ಯಕ್ಷ ವಿಲಿಯಂ ಲ್ಯಾಂಬ್ ಹೇಳಿದ್ದಾರೆಯೇ ಹೊರತು ವಜ್ರದ ಗುಣಮಟ್ಟ ಅಥವಾ ಅದರ ಮೌಲ್ಯದ ವಿವರಗಳನ್ನು ಲುಕಾರಾ ಬಹಿರಂಗಪಡಿಸಲಿಲ್ಲ. ಆದಾಗ್ಯೂ, ಇದು 40 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯ ಹೊಂದಿರಬಹುದು ಎಂದು ಲುಕಾರಾ ಅವರ ಆಪ್ತರು ತಿಳಿಸಿದ್ದಾಗಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಈ ದೊಡ್ಡ ಗಾತ್ರದ ವಜ್ರ ಪತ್ತೆಯಾದುದು ಹೇಗೆ

ದೊಡ್ಡ ಗಾತ್ರದ ಮತ್ತು ಹೆಚ್ಚಿನ ಮೌಲ್ಯದ ವಜ್ರಗಳನ್ನು ಗುರುತಿಸುವುದಕ್ಕೆ ಮತ್ತು ಸಂರಕ್ಷಿಸುವುದಕ್ಕಾಗಿ 2017ರಲ್ಲಿ ಸ್ಥಾಪಿಸಲಾದ ಕಂಪನಿಯ ಮೆಗಾ ಡೈಮಂಡ್ ರಿಕವರಿ (ಎಂಡಿಆರ್) ಎಕ್ಸ್-ರೇ ಟ್ರಾನ್ಸ್ಮಿಷನ್ (ಎಕ್ಸ್ಆರ್‌ಟಿ) ತಂತ್ರಜ್ಞಾನವನ್ನು ಬಳಸಿಕೊಂಡು ಬೋಟ್ಸ್‌ವಾನಾದ ಈ ದೊಡ್ಡ ಗಾತ್ರದ ವಜ್ರವನ್ನು ಪತ್ತೆ ಹಚ್ಚಿ, ಹೊರತೆಗೆಯಲಾಗಿದೆ.

ಕರೋವ್‌ ಗಣಿಯಲ್ಲಿ ಲುಕಾರಾ ಮಾಡಿರುವ ಹೂಡಿಕೆಗೆ ಫಲ ಸಿಕ್ಕಿದ್ದು, ಇದು ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಭಾರಿ ಸಂಶೋಧನೆ ಮಾಡಿ ವಜ್ರಗಳನ್ನು ಒದಗಿಸಿಕೊಟ್ಟಿದೆ ಎಂದು ವಿಲಿಯಂ ಲ್ಯಾಂಬ್ ವಿವರಿಸಿದ್ದಾರೆ.

"ಇದು ನಿಜವಾಗಿಯೂ ವಿಶ್ವ ದರ್ಜೆಯ ವಜ್ರದ ಗಣಿಯಾಗಿ ಕರೋವ್ ಗಣಿಯ ಸ್ಥಾನವನ್ನು ಬಲಪಡಿಸುತ್ತದೆ. ಅದೇ ರೀತಿ ನಮ್ಮ ಕಾರ್ಯಾಚರಣೆ ಮತ್ತು ಭೂಗತ ಅಭಿವೃದ್ಧಿ ಕಾರ್ಯತಂತ್ರದ ನಿರಂತರ ಯಶಸ್ಸನ್ನು ಎತ್ತಿ ತೋರಿಸುತ್ತದೆ" ಎಂದು ವಿಲಿಯಂ ಲ್ಯಾಂಬ್ ಸಂತಸ ವ್ಯಕ್ತಪಡಿಸಿದರು.

ವಿಶ್ವದ ಮೊದಲನೇ ಅತಿದೊಡ್ಡ ಗಾತ್ರದ ವಜ್ರ ಮತ್ತು ಇತರೆ ದೊಡ್ಡ ಗಾತ್ರದ ವಜ್ರಗಳ ವಿವರ

ಇದಕ್ಕೂ ಮೊದಲು ಗಣಿಯಲ್ಲಿ ಸಿಕ್ಕ 1758 ಕ್ಯಾರೆಟ್ ವಜ್ರವನ್ನು 2019ರಲ್ಲಿ ಐಷಾರಾಮಿ ಫ್ಯಾಷನ್ ಬ್ರಾಂಡ್ ಲೂಯಿಸ್ ವಿಟಾನ್ ಖರೀದಿಸಿತು. ಇನ್ನೂ ಸ್ವಲ್ಪ ವರ್ಷ ಮೊದಲು ಅಂದರೆ 2010ರಲ್ಲಿ ಕರೋವ್‌ ಗಣಿಯಲ್ಲಿ ಪತ್ತೆಯಾಗಿದ್ದ 1,109 ಕ್ಯಾರೆಟ್ ವಜ್ರವನ್ನು 2016ರಲ್ಲಿ ಗ್ರಾಫ್‌ ಡೈಮಂಡ್ಸ್‌ ಕಂಪನಿ 53 ದಶಲಕ್ಷ ಡಾಲರ್‌ಗೆ ಖರೀದಿಸಿತ್ತು.

ಇನ್ನು ವಿಶ್ವದ ಮೊದಲ ಅತಿದೊಡ್ಡ ಗಾತ್ರದ ವಜ್ರದ ವಿಚಾರಕ್ಕೆ ಬರೋಣ. ಈ ಬೃಹತ್ ಗಾತ್ರದ ವಜ್ರ ಬೋಟ್ಸ್‌ವಾನಾದ ಪಕ್ಕದ ರಾಷ್ಟ್ರ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಅದೂ 119 ವರ್ಷ ಹಿಂದೆ. ಅಂದರೆ 1905ರಲ್ಲಿ ಈ ವಜ್ರ ಪತ್ತೆಯಾಗಿದ್ದು 3,106 ಕ್ಯಾರೆಟ್ ಇತ್ತು. ಇದನ್ನು ಹಲವಾರು ಸಣ್ಣ ತುಂಡುಗಳನ್ನು ಕತ್ತರಿಸಿ ಬಳಸಲಾಗಿದೆ. ಇದನ್ನು ಕಲ್ಲಿನನ್ ವಜ್ರ ಎಂದು ಗುರುತಿಸಲಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.