ತಿರುಮಲದಲ್ಲಿ ಫೆಬ್ರುವರಿ ತಿಂಗಳ ಆರ್ಜಿತ ಸೇವಾ ನೋಂದಣಿ ನಾಳೆಯಿಂದ ಆರಂಭ; ಸಮಯ, ಕೊನೆಯ ದಿನ ಯಾವಾಗ ನೋಡಿ
2025ರ ಫೆಬ್ರವರಿ ತಿಂಗಳಿಗೆ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನ, ಸೇವೆ ಮತ್ತು ವಸತಿ ಟಿಕೆಟ್‌ಗಳ ಬುಕಿಂಗ್ ದಿನಾಂಕಗಳನ್ನು ಟಿಟಿಡಿ ಪ್ರಕಟಿಸಿದೆ. ನವೆಂಬರ್ 18ರಿಂದ ಮೂರು ದಿನಗಳ ಕಾಲ ಅವಕಾಶ ನೀಡಲಾಗಿದೆ.
ತಿರುಮಲ: ತಿರುಪತಿ ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಆರ್ಜಿತ ಸೇವೆಯ ನೋಂದಣಿಗೆ ನಾಳೆಯಿಂದ ಮೂರು ದಿನಗಳ ಅವಕಾಶ ನೀಡಲಾಗಿದೆ. ಟಿಟಿಡಿಯು 2025ರ ಫೆಬ್ರವರಿ ತಿಂಗಳಿಗೆ ಆನ್‌ಲೈನ್ ಕೋಟಾ ಬಿಡುಗಡೆ ಮಾಡಿದ್ದು, ಆರ್ಜಿತ ಸೇವೆಯ ಎಲೆಕ್ಟ್ರಾನಿಕ್ ಡಿಪ್ ನೋಂದಣಿ ನವೆಂಬರ್ 18ರಂದು ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಲಕ್ಕಿ ಡಿಪ್ ಟಿಕೆಟ್‌ಗಳನ್ನು ನವೆಂಬರ್ 18ರ ಸೋಮವಾರ ಬೆಳಗ್ಗೆ 10ರಿಂದ ನವೆಂಬರ್ 20ರ ಬೆಳಿಗ್ಗೆ 10ರವರೆಗೆ ಟಿಕೆಟ್ ನೀಡಲಾಗುವುದು. ಆ ಬಳಿಕ ನವೆಂಬರ್ 20ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಮೂರು ದಿನ ನೋಂದಣಿಗೆ ಅವಕಾಶ ಸಿಗಲಿದೆ.
2025ರ ಫೆಬ್ರುವರಿ ತಿಂಗಳಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಮತ್ತು ವಸತಿಗೆ ಸಂಬಂಧಿಸಿದಂತೆ ಟಿಟಿಡಿ ಆನ್‌ಲೈನ್ ಟಿಕೆಟ್‌ಗಳ ಮಾರಾಟ ನವೆಂಬರ್ 18ರಿಂದ ಲಭ್ಯವಾಗಲಿವೆ. ವಿಶೇಷ ಪ್ರವೇಶ ದರ್ಶನ (ಎಸ್‌ಇಡಿ) ಕೋಟಾ ನವೆಂಬರ್ 25ರಂದು ಬೆಳಿಗ್ಗೆ 10ರಿಂದ ಮತ್ತು ನವೆಂಬರ್ 25ರಂದು ಮಧ್ಯಾಹ್ನ 3ರಿಂದ ವಸತಿ ಕೋಟಾ ಬಿಡುಗಡೆ ಮಾಡಲಾಗುತ್ತದೆ.
ಆರ್ಜಿತ ಸೇವೆ, ಸಹಸ್ರ ದೀಪಾಲಂಕಾರದ ಟಿಕೆಟ್‌ಗಳನ್ನು ನವೆಂಬರ್ 21 ರಂದು ಬೆಳಗ್ಗೆ 10 ಗಂಟೆಗೆ ನೀಡಲಾಗುತ್ತದೆ. ಶ್ರೀವಾಣಿ ಟ್ರಸ್ಟ್ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ನವೆಂಬರ್ 22ರಂದು ಮಧ್ಯಾಹ್ನ 3 ಗಂಟೆಗೆ ನೀಡಲಾಗುತ್ತದೆ. ನವೆಂಬರ್ 22ರಂದು ಬೆಳಗ್ಗೆ 11 ಗಂಟೆಗೆ ಅಂಗಪ್ರಧಿಕ್ಷಣದ ಟಿಕೆಟ್‌ಗಳ ವಿತರಣೆಯಾಗಲಿದೆ. ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕೋಟಾವನ್ನು ನವೆಂಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.
ಪದ್ಮಾವತಿ ಅಮ್ಮನವರ ದರ್ಶನ ಕೋಟಾ ಟಿಕೆಟ್
ಡಿಸೆಂಬರ್ ತಿಂಗಳ ಪದ್ಮಾವತಿ ಅಮ್ಮನವರ ದರ್ಶನ ಕೋಟಾ ಟಿಕೆಟ್‌ಗಳು ನವೆಂಬರ್ 26ರಂದು ಬಿಡುಗಡೆಯಾಗಲಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಶ್ರೀವಾರಿ ಸೇವಕರ ಕೋಟಾ ನವೆಂಬರ್ 27ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಆಗಲಿದೆ. ಉಳಿದಂತೆ ನವೆಂಬರ್ 27ರಂದು ಮಧ್ಯಾಹ್ನ 12ರಿಂದ ನವನೀತ ಸೇವೆ ಮತ್ತು ನವೆಂಬರ್ 27ರಂದು ಮಧ್ಯಾಹ್ನ 1 ಗಂಟೆಗೆ ಪರಕಾಮಣಿ ಸೇವೆ ಟಿಕೆಟ್ ಬಿಡುಗಡೆ ಮಾಡಲಾಗುತ್ತದೆ.