ತಿರುಪತಿ ತಿಮ್ಮಪ್ಪನ ದರ್ಶನಕ್ಕಿನ್ನು 30 ಗಂಟೆ ಕಾಯಬೇಕಾಗಿಲ್ಲ, 3 ಗಂಟೆಗೆ ಇಳಿಸುವುದಾಗಿ ಘೋಷಿಸಿದ ಟಿಟಿಡಿ; ಶ್ರೀನಿವಾಸ ದರ್ಶನಕ್ಕೆ ಎಐ ನೆರವು
ತಿರುಪತಿ ತಿಮ್ಮಪ್ಪನ ದರ್ಶನಕ್ಕಿನ್ನು 30 ಗಂಟೆ ಕಾಯಬೇಕಾಗಿಲ್ಲ, 3 ಗಂಟೆಗೆ ಇಳಿಸುವುದಾಗಿ ಘೋಷಿಸಿದ ಟಿಟಿಡಿ, ಶ್ರೀನಿವಾಸ ದರ್ಶನಕ್ಕೆ ಎಐ ನೆರವು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದಾಗಿ ಹೇಳಿದೆ. ಸೋಮವಾರ ಟಿಟಿಡಿ ಆಡಳಿತ ಮಂಡಳಿ ಸಭೆಯ ಬಳಿಕ ಹಲವು ಮಹತ್ವದ ವಿಷಯಗಳನ್ನು ಅದು ಪ್ರಕಟಿಸಿದೆ. ಅದರ ವಿವರ ಇಲ್ಲಿದೆ.
ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇಗುಲದಲ್ಲಿ ದರ್ಶನ ಪಡೆಯಲು ಅಗತ್ಯವಿರುವ ಸಮಯವನ್ನು ಈಗ ಇರುವಂತಹ 30 ಗಂಟೆಗಳಿಂದ 3 ಗಂಟೆಗೆ ಇಳಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಸಿಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಮಂಡಳಿಯು ತೀರ್ಮಾನಿಸಿದೆ. ಸೋಮವಾರ ಸಭೆ ನಡೆಸಿದ ಟಿಟಿಡಿ ಆಡಳಿತ ಮಂಡಳಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ತಿರುಮಲದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡದಂತೆ ತಡೆಯಲು ಮತ್ತು ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಟಿಡಿ ನಿರ್ಧರಿಸಿದೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಮಂಡಳಿಯು ನಿರ್ಧರಿಸಿದೆ. ಅದರ ಹಿಂದೂಯೇತರ ಉದ್ಯೋಗಿಗಳ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಾಗಿ, ಮಂಡಳಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ತಿಮ್ಮಪ್ಪನ ದರ್ಶನಕ್ಕಿನ್ನು 30 ಗಂಟೆ ಕಾಯಬೇಕಾಗಿಲ್ಲ, 3 ಗಂಟೆಗೆ ಇಳಿಸುವುದಾಗಿ ಘೋಷಿಸಿದ ಟಿಟಿಡಿ
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಕಾಯುವ ಸಮಯವನ್ನು ಈಗ ಇರುವಂತಹ ಸುಮಾರು 30 ಗಂಟೆಗಳಿಂದ 2-3 ಗಂಟೆಗಳವರೆಗೆ ಕಡಿತಗೊಳಿಸುವ ಬಗ್ಗೆ ಮಂಡಳಿಯು ಚರ್ಚಿಸಿದೆ. ವಿಧ ರಾಜ್ಯಗಳ ಪ್ರವಾಸೋದ್ಯಮ ನಿಗಮಗಳಿಗೆ ಈ ಕೋಟಾದಲ್ಲಿ ಅಕ್ರಮಗಳ ದೂರುಗಳು ಹೆಚ್ಚಾಗಿವೆ. ಹೀಗಾಗಿ, ಮಂಡಳಿಯು ಶ್ರೀ ವೆಂಕಟೇಶ್ವರ ದೇವಾಲಯ ನಿರ್ಮಾಣ ಟ್ರಸ್ಟ್ (ಶ್ರೀವಾಣಿ) ಅನ್ನು ಟಿಟಿಡಿಯ ಖಾತೆಯೊಂದಿಗೆ ವಿಲೀನಗೊಳಿಸಲು ಮತ್ತು ದರ್ಶನ ಕೋಟಾವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ವಿತಿರುಮಲದ ಡಂಪಿಂಗ್ ಯಾರ್ಡ್‌ನಲ್ಲಿ ರಾಶಿ ಬಿದ್ದಿರುವ ಕಸವನ್ನು ನಾಲ್ಕು ತಿಂಗಳೊಳಗೆ ತೆರವುಗೊಳಿಸಲು ಮಂಡಳಿ ನಿರ್ಧರಿಸಿದೆ.
ಟಿಟಿಡಿ ಆಡಳಿತ ಮಂಡಳಿಯ ಪ್ರಮುಖ ತೀರ್ಮಾನಗಳು
1) ತಿರುಮಲ ತಿರುಪತಿಯಲ್ಲಿ ಶ್ರೀವೆಂಕಟೇಶ್ವರ ದೇವರ ದರ್ಶನಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದ್ದು, ಪ್ರತಿ ತಿಂಗಳ ಮೊದಲ ಮಂಗಳವಾರ ಅವರಿಗೆ ಮೀಸಲಿಡಲು ಟಿಟಿಡಿ ತೀರ್ಮಾನಿಸಿದೆ.
2) ತಿರುಮಲದಲ್ಲಿ ರಾಜಕೀಯ ಹೇಳಿಕೆಗಳಿಗೆ ಅವಕಾಶ ನೀಡದಿರಲು ತೀರ್ಮಾನಿಸಿದ್ದು, ಅಗತ್ಯವಿದ್ದರೆ ಕಾನೂನು ಕ್ರಮ ಜರುಗಿಸಲು ಟಿಟಿಡಿ ನಿರ್ಧರಿಸಿದೆ.
3) ತಿರುಪತಿ ಲಡ್ಡು ಪ್ರಸಾದಗಳ ಗುಣಮಟ್ಟ ಖಚಿತಪಡಿಸಲು ತೀರ್ಮಾನಿಸಿರುವ ಟಿಟಿಡಿ, ಉತ್ತಮ ಗುಣಮಟ್ಟದ ತುಪ್ಪ ಬಳಸುವುದನ್ನು ಖಚಿತ ಮಾಡಲು ಕ್ರಮ ಜರುಗಿಸುವುದಾಗಿ ಹೇಳಿದೆ.
4) ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿಯ ಠೇವಣಿಗಳನ್ನು ಖಾಸಗಿ ಬ್ಯಾಂಕ್‌ಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಮುಂದಿನ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
5) ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದು. ಅವರಿಗೆ ಸ್ವಯಂ ನಿವೃತ್ತಿ ಅಥವಾ ಬೇರೆ ಸಂಸ್ಥೆಗಳಿಗೆ ವರ್ಗಾವಣೆ ನೀಡುವಂತೆ ಟಿಟಿಡಿ ಶಿಫಾರಸು ಮಾಡಿದೆ.
ಹಿಂದೂಯೇತರ ಉದ್ಯೋಗಿಗಳ ಬಿಡುಗಡೆಗೆ ಚಿಂತನೆ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ಅವರು ಮಂಗಳವಾರ, “ಟಿಟಿಡಿಯಲ್ಲಿ ಹಿಂದೂಯೇತರ ಉದ್ಯೋಗಿಗಳನ್ನು ಗುರುತಿಸಲಾಗಿದೆ. ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಅಥವಾ ಕಂದಾಯ, ಪುರಸಭೆ ಅಥವಾ ನಿಗಮಗಳಂತಹ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾಯಿಸುವಂತೆ ವಿನಂತಿಸುವ ಚಿಂತನೆ ನಡೆದಿದೆ” ಎಂದು ಹೇಳಿದರು.
ಟಿಟಿಡಿ ಮಂಡಳಿಯು ಮಂಡಳಿಯಲ್ಲಿ ನೇಮಕಗೊಂಡ ಹಿಂದೂಯೇತರರು ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕು ಅಥವಾ ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯನ್ನು ಆರಿಸಿಕೊಳ್ಳಬೇಕು ಎಂದು ನಿರ್ಣಯವನ್ನು ಅಂಗೀಕರಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾಗಿ ಎಎನ್ಐ ವರದಿ ಮಾಡಿದೆ.
ಮುಮ್ತಾಜ್ ಹೋಟೆಲ್ ನಿರ್ಮಾಣಕ್ಕಾಗಿ ಅಲಿಪಿರಿ ಬಳಿ ಉದ್ದೇಶಿಸಲಾದ 20 ಎಕರೆ ಭೂಮಿಯನ್ನು ರದ್ದುಗೊಳಿಸುವಂತೆ ಟಿಟಿಡಿ ಮಂಡಳಿಯು ರಾಜ್ಯ ಸರ್ಕಾರವನ್ನು ವಿನಂತಿಸುವ ನಿರ್ಣಯವನ್ನು ಅಂಗೀಕರಿಸಿದೆ. ಏಕೆಂದರೆ ಇದು ದೇವಾಲಯದ ಪಕ್ಕದಲ್ಲಿದೆ. ಹಿಂದೂಗಳಿಂದ ಇದಕ್ಕೆ ಆಕ್ಷೇಪವಿದೆ ಎಂದು ಅವರು ಹೇಳಿದರು.