Tamil Nadu News: ಬಂಧಿತ ಡಿಎಂಕೆ ಸಚಿವನ ಖಾತೆ ಮರು ಹಂಚಿಕೆಗೆ ರಾಜ್ಯಪಾಲರ ನಕಾರ: ತಮಿಳುನಾಡಿನಲ್ಲಿ ರಾಜಕೀಯ ಸಂಘರ್ಷ
ಸೇಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ಪ್ರತಿಪಕ್ಷ ಒತ್ತಾಯಿಸುತ್ತಿವೆ. ಆದರೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೇಂಥಿಲ್ ಅವರ ಬಳಿ ಇರುವ ಇಂಧನ ಹಾಗೂ ಪಾನ ನಿಷೇಧ ಖಾತೆಗಳನ್ನು ತಂಗಮ್ ತೆನ್ನರಸು ಹಾಗೂ ಎಸ್.,ಮುತ್ತುಸ್ವಾಮಿ ಅವರಿಗೆ ಮರು ಹಂಚಿಕೆ ಮಾಡುವಂತೆ ಪತ್ರ ಬರೆದಿದ್ದಾರೆ. ಆದರೆ ರಾಜ್ಯಪಾಲ ರವಿ ಅವರು ಇದಕ್ಕೆ ಅನುಮತಿ ನೀಡಿಲ್ಲ.
ಚೆನ್ನೈ: ಇಡಿಯಿಂದ ಬಂಧನಕ್ಕೊಳಗಾಗಿ ಆಸ್ಪತ್ರೆ ಸೇರಿರುವ ತಮಿಳುನಾಡು ಸಚಿವ ಸೇಂಥಿಲ್ ಬಾಲಾಜಿ ಖಾತೆಗಳ ಮರು ಹಂಚಿಕೆ ಪ್ರಸ್ತಾವವನ್ನು ರಾಜ್ಯಪಾಲರು ತಿರಸ್ಕರಿಸಿದ್ದು,ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಭ್ರಷ್ಟಾಚಾರದ ಕಾರಣದಿಂದ ದಾಳಿಗೊಳಗಾಗಿರುವ ಸೇಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ಪ್ರತಿಪಕ್ಷಗಳಾದ ಎಐಎಡಿಎಂಕೆ ಹಾಗೂ ಬಿಜೆಪಿ ಒತ್ತಾಯಿಸುತ್ತಿವೆ.
ಆದರೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೇಂಥಿಲ್ ಅವರ ಬಳಿ ಇರುವ ಇಂಧನ ಹಾಗೂ ಪಾನ ನಿಷೇಧ ಖಾತೆಗಳನ್ನು ತಂಗಮ್ ತೆನ್ನರಸು ಹಾಗೂ ಎಸ್.,ಮುತ್ತುಸ್ವಾಮಿ ಅವರಿಗೆ ಮರು ಹಂಚಿಕೆ ಮಾಡುವಂತೆ ಪತ್ರ ಬರೆದಿದ್ದಾರೆ. ರಾಜ್ಯಪಾಲ ರವಿ ಅವರು ಇದಕ್ಕೆ ಅನುಮತಿ ನೀಡಿಲ್ಲ. ಕೆಲ ದಿನಗಳ ಹಿಂದೆಯೇ ಸೇಂಥಿಲ್ ನಿವಾಸಿಗಳ ಮೇಲೆ ದಾಳಿ ನಡೆದಾಗಲೇ ಅವರನ್ನು ಸಂಪುಟದಿಂದ ಕೈ ಬಿಡುವಂತೆ ರಾಜ್ಯಪಾಲರು ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿಯೇ ಖಾತೆ ಹಂಚಿಕೆಗೆ ಅನುಮತಿಯನ್ನು ರಾಜ್ಯಪಾಲರು ನೀಡಿಲ್ಲ ಎನ್ನಲಾಗುತ್ತಿದೆ.
ಖಾತೆ ಮರು ಹಂಚಿಕೆ ಮಾಡುವಂತೆ ಸೂಚಿಸಿರುವ ಪತ್ರ ಸರಿಯಾಗಿಲ್ಲ ಎಂದು ರಾಜ್ಯಪಾಲರು ಪತ್ರ ವಾಪಾಸ್ ಕಳುಹಿಸಿದ್ದಾರೆ. ಇದೆಲ್ಲವೂ ಮುಖ್ಯಮಂತ್ರಿಗಳ ಪರಮಾಧಿಕಾರ. ರಾಜ್ಯಪಾಲರು ಅನುಮತಿ ನೀಡಬೇಕಷ್ಟೇ ಎಂದು ಸಚಿವ ಪೊನ್‌ಮುಡಿ ರಾಜ್ಯಪಾಲರ ಕ್ರಮಕ್ಕೆ ತಿರುಗೇಟು ನೀಡಿದ್ದಾರೆ.
ಸಚಿವರನ್ನು ಸಂಪುಟದಿಂದ ಕೈಬಿಡಬೇಕೋ, ಖಾತೆ ಬದಲಾಯಿಸಬೇಕೋ ಎನ್ನುವುದನ್ನು ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ರಾಜ್ಯಪಾಲರು ಮೊದಲು ಸಂವಿಧಾನವನ್ನು ತಿಳಿದುಕೊಳ್ಳಲಿ. ರಾಜ್ಯಪಾಲರು ಸಿಎಂ ಪತ್ರಕ್ಕೆ ಅನುಮತಿ ನೀಡುವ ಬದಲು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಪೊನ್‌ಮುಡಿ ಆರೋಪ.
ಹಿಂದೆ ಕೇಂದ್ರ ಸಚಿವ ಅಮಿತ್ ಶಾ ವಿರುದ್ದ ಪ್ರಕರಣ ದಾಖಲಾದಾಗ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತೆ?. ಎಐಎಡಿಎಂಕೆ ಸರ್ಕಾರದಲ್ಲಿ ಹಲವು ಸಚಿವರ ವಿರುದ್ದ ಆಪಾದನೆ ಕೇಳಿ ಬಂದಾಗಲೂ ಯಾರನ್ನು ಸಂಪುಟದಿಂದ ಕೈ ಬಿಡಲಾಗಿತ್ತು ಎನ್ನುವುದನ್ನು ತಿಳಿಸಲಿ ಎಂದು ಪ್ರಶ್ನಿಸಿದರು.
ಈಗಾಗಲೇ ದಿಲ್ಲಿ, ಪಶ್ಚಿ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಮುಂದುವರೆದಿದೆ. ತಮಿಳುನಾಡಿನಲ್ಲೂ ಈಗಾಗಲೇ ಹಲವು ವಿಚಾರವಾಗಿ ರಾಜ್ಯಪಾಲರು ಹಾಗೂ ಸ್ಥಳೀಯ ಸರ್ಕಾರ ನಡುವೆ ಸಂಘರ್ಷ ನಡೆದೇ ಇದೆ. ಸಚಿವರ ಖಾತೆ ಹಂಚಿಕೆ ಹೊಸ ಸೇರ್ಪಡೆ.
ಜಯಲಲಿತಾ ಸಂಪುಟದಲ್ಲಿ ಸಚಿವರಾಗಿದ್ದ ಸೇಂಥಿಲ್ ಬಾಲಾಜಿ ಅವರ ವಿರುದ್ದ ಉದ್ಯೋಗ ನೀಡಲು ವಂಚಿಸಿದ ಆರೋಪಗಳು ಕೇಳಿ ಬಂದಿದ್ದವು. ಡಿಎಂಕೆ ಸೇರಿ ಸಚಿವರಾಗಿರುವ ಬಾಲಾಜಿ ವಿರುದ್ದ ಕಳೆದವಾರ ಆದಾಯ ತೆರಿಗೆ ಇಲಾಖೆ ತಪಾಸಣೆ ನಡೆಸಿತ್ತು. ಬುಧವಾರ ಇಡಿ ದಾಳಿ ನಡೆಸಿ ಬಂಧಿಸಿದೆ. ಅನಾರೋಗ್ಯದ ಕಾರಣದಿಂದ ಬಾಲಾಜಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿರಿ
ವಿಭಾಗ