Karnataka Next CM Twitter poll: ರಾಜ್ಯದ ಮುಂದಿನ ಸಿಎಂ ಯಾರಾಗಬೇಕು? ಟ್ವಿಟ್ಟರ್ ಮತಗಣನೆಯಲ್ಲಿ ಸಿದ್ದರಾಮಯ್ಯ ಫಸ್ಟ್, ಬೊಮ್ಮಾಯಿ ಲಾಸ್ಟ್
Karnataka Next CM: ಈ ಮತಗಣನೆಯಲ್ಲಿ ಮೊದಲ ಮೂರು ಹೆಸರುಗಳಿಗೆ ಅತ್ಯಧಿಕ ಮತಗಳು ಬಿದ್ದಿವೆ. ಸಿದ್ದರಾಮಯ್ಯನವರು ಶೇಕಡ 35.4 ಮತ ಪಡೆದಿದ್ದಾರೆ.
ಬೆಂಗಳೂರು: ಟ್ವಿಟ್ಟರ್‌ನಲ್ಲಿ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ಎಂದು ಇತ್ತೀಚೆಗೆ ಮತಗಣನೆ ನಡೆದಿತ್ತು. ಪಿಎಲ್‌ಇ ಕರ್ನಾಟಕದ ಖಾತೆಯಿಂದ ನಡೆದ ಈ ಜನ ಮತಗಣನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಧಿಕ ಜನರು ಒಲವು ತೋರಿದ್ದಾರೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರಿಗೆ ಅತ್ಯಂತ ಕಡಿಮೆ ಮತಗಳು ಬಿದ್ದಿವೆ.
ಫೆಬ್ರವರಿ 3ರಂದು ಪಿಎಲ್‌ಇ ಕರ್ನಾಟಕ ಆರಂಭಿಸಿದ ಈ ಮತಗಣನೆಯಲ್ಲಿ ಬಹುತೇಕರು ಸಿದ್ದರಾಮಯ್ಯ ಪರ ಒಲವು ತೋರಿದ್ದಾರೆ. ಈ ಖಾತೆಗೆ ಹತ್ತು ಸಾವಿರ ಫಾಲೋವರ್ಸ್ ಇದ್ದು, ಸುಮಾರು 2 ಸಾವಿರ ಜನರು ಮತ ಚಲಾವಣೆ ಮಾಡಿದ್ದಾರೆ. ಅಂದಹಾಗೆ ಪಿಎಲ್‌ಇ ಕರ್ನಾಟಕ ಅಂದ್ರೆ ಪ್ರಮೋಟ್ ಲಿಂಗ್ವಿಸ್ಟಿಕ್ ಈಕ್ವಾಲಿಟಿ ಎಂದಾಗಿದ್ದು, ಕನ್ನಡವನ್ನು ಸಹ ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡುವುದು ನಮ್ಮ ಗುರಿ ಎಂದು ವಿವರಣೆ ನೀಡಲಾಗಿದೆ.
ಮುಂದಿನ ಸಿಎಂ ಯಾರಾಗಬೇಕು ಎಂಬ ಮತಗಣನೆಯಲ್ಲಿ ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು. ಈ ಖಾತೆ ಬೆಂಬಲಿಸುತ್ತ ಬಂದಿರುವ ಕರ್ನಾಟಕ ರಾಷ್ಟ್ರ ಸಮಿತಿಯ ರವಿ ಕೃಷ್ಣ ರೆಡ್ಡಿಗೆ ಮತಗಣನೆಯಲ್ಲಿ ಮೊದಲ ಸ್ಥಾನ ನೀಡಲಾಗಿತ್ತು. ಎರಡನೇ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಗೆ ನೀಡಲಾಗಿತ್ತು. ಮೂರನೇ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಲಾಗಿದ್ದು. ಕೊನೆಯ ಸ್ಥಾನವನ್ನು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೀಡಲಾಗಿತ್ತು.
ಈ ಮತಗಣನೆಯಲ್ಲಿ ಮೊದಲ ಮೂರು ಹೆಸರುಗಳಿಗೆ ಅತ್ಯಧಿಕ ಮತಗಳು ಬಿದ್ದಿವೆ. ಸಿದ್ದರಾಮಯ್ಯನವರು ಶೇಕಡ 35.4 ಮತ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಶೇಕಡ 29.5 ಮತದಿಂದ ಕುಮಾರಸ್ವಾಮಿ ಪಡೆದಿದ್ದಾರೆ. ಈ ಖಾತೆ ಬೆಂಬಲಿಸುತ್ತ ಬಂದಿರುವ ರವಿ ಕೃಷ್ಣಾ ರೆಡ್ಡಿಯವರು ಶೇಕಡ 26.5 ಮತ ಪಡೆದಿದ್ದಾರೆ. ಬಿಜೆಪಿಯ ಬೊಮ್ಮಾಯಿಗೆ ಶೇಕಡ 8.6 ಮತ ದೊರಕಿದೆ.
ಕೋಲಾರದಲ್ಲಿ ಸಿದ್ದರಾಮಯ್ಯನವರಿಗೆ ವಾರ್‌ರೂಂ
ಚುನಾವಣಾ ಕಾರ್ಯತಂತ್ರ, ಪ್ರಚಾರದ ರೂಪುರೇಷೆ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಾರ್ ರೂಮ್ ಕೋಲಾರದಲ್ಲಿ ಕಾರ್ಯಾರಂಭ ಮಾಡಿದೆ. ಟೇಕಲ್ ರಸ್ತೆಯಲ್ಲಿ ಆರಂಭವಾಗಿರುವ ವಾರ್ ರೂಮ್ ನ್ನು ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಾರ್ ರೂಮ್ ಕಾರ್ಯಾರಂಭ ಮಾಡಿದೆ. ವಾರ್ ರೂಮ್ ಉದ್ಘಾಟನೆ ವೇಳೆ ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಶ್ರೀನಿವಾಸಗೌಡ, ನಂಜೇಗೌಡ, ಬೈರತಿ ಸುರೇಶ್, ಅನಿಲ್ ಕುಮಾರ್, ನಸೀರ್ ಅಹಮದ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಬೆಂಗಳೂರಿನ ಚುನಾವಣಾ ತಂತ್ರಗಾರಿಕೆ ತಂಡ ಪೋಲ್ ಹೌಸ್ ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಮುಂದಿನ ಮೂರು ತಿಂಗಳು ಕೋಲಾರದ ವಾರ್ ರೂಮ್ ಅನ್ನು ನಿರ್ವಹಿಸಲಿದೆ.
ವಿಭಾಗ