Shiv Sena Symbol: ಬಿಲ್ಲು ಇಲ್ಲದೇ ಬಾಣ ಬಿಡಲಾಗದ ಸ್ಥಿತಿಯಲ್ಲಿ ಟೀಂ ಠಾಕ್ರೆ: ಮತ್ತೆ ಸೂರ್ಯನಂತೆ ಉದಯಿಸುತ್ತಾರಾ ತ್ರಿಶೂಲ ಸಿಕ್ರೆ?
ಮುಂಬೈನ ಪೂರ್ವ ಅಂಧೇರಿ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಠಾಕ್ರೆ ಮತ್ತು ಶಿಂಧೆ ಬಣ ಶಿವಸೇನೆಯ ಬಿಲ್ಲು ಮತ್ತು ಬಾಣದ ಗುರುತನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬಣದ ಗುರುತಿಸುವಿಕೆಗಾಗಿ ಉದ್ಧವ್ ಠಾಕ್ರೆ ಬಣವು ಮೂರು ಹೊಸ ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಠಾಕ್ರೆ ಬಣ ಆರಿಸಿಕೊಂಡಿರುವ ಹೆಸರು ಮತ್ತು ಚಿಹ್ನೆಯ ಕುರಿತು ಮಾಹಿತಿ ಇಲ್ಲಿದೆ.
ಮುಂಬೈ:ನೈಜ ಶಿವಸೇನೆ ಪಟ್ಟಕ್ಕಾಗಿ ಕಿತ್ತಾಡುತ್ತಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ, ಪಕ್ಷದ ಚಿಹ್ನೆಯನ್ನೂ ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಮುಗ್ಗರಿಸಿವೆ. ಪಕ್ಷದ ಚಿಹ್ನೆಯ ವಿಷಯದಲ್ಲಿ ಮಧ್ಯಂತರ ಆದೇಶ ಹೊರಡಿಸಿರುವ ಕೇಂದ್ರ ಚುನಾವಣಾ ಆಯೋಗ, ಸದ್ಯಕ್ಕೆ ಎರಡೂ ಬಣಗಳು ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣವನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಂಬೈನ ಪೂರ್ವ ಅಂಧೇರಿ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಠಾಕ್ರೆ ಮತ್ತು ಶಿಂಧೆ ಬಣ ಶಿವಸೇನೆಯ ಬಿಲ್ಲು ಮತ್ತು ಬಾಣದ ಗುರುತನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಹೀಗಾಗಿ ಎರಡೂ ಬಣಗಳು ಹೊಸ ಚಿಹ್ನೆಯ ಅಡಿಯಲ್ಲಿ ಉಪಚುನಾವಣೆಯಲ್ಲಿ ಎದುರಿಸುವ ಅನಿವಾರ್ಯತೆಗೆ ಸಿಲುಕಿವೆ.
ಈ ಹಿನ್ನೆಲೆಯಲ್ಲಿ ತಮ್ಮ ಬಣದ ಗುರುತಿಸುವಿಕೆಗಾಗಿ ಉದ್ಧವ್ ಠಾಕ್ರೆ ಬಣವು ಮೂರು ಹೊಸ ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಮೊದಲ ಪ್ರಾಶಸ್ತ್ಯವಾಗಿ 'ಶಿವಸೇನಾ ಭಾಳ್ ಸಾಹೇಬ್ ಠಾಕ್ರೆ', ಎರಡನೇ ಪ್ರಾಶಸ್ತ್ಯವಾಗಿ 'ಶಿವಸೇನಾ ಉದ್ಧವ್ ಭಾಳ್ ಸಾಹೇಬ್ ಠಾಕ್ರೆ' ಹೆಸರಿಗಾಗಿ ಉದ್ಧವ್ ಠಾಕ್ರೆ ಬಣ ಪ್ರಸ್ತಾವನೆ ಸಲ್ಲಿಸಿದೆ.
ಅಲ್ಲದೇ ತ್ರಿಶೂಲ ಚಿಹ್ನೆ ಮೊದಲ ಆಯ್ಕೆಯಾಗಿ ಮತ್ತು ಉದಯಿಸುತ್ತಿರುವ ಸೂರ್ಯ ಎರಡನೇ ಆಯ್ಕೆಯಾಗಿ ಚುನಾವಣಾ ಆಯೋಗಕ್ಕೆ ಉದ್ಧವ್ ಠಾಕ್ರೆ ಬಣ ಮನವಿ ಸಲ್ಲಿಸಿದೆ. ಅಂತಿಮವಾಗಿ ಚುನಾವಣಾ ಆಯೋಗ ಯಾವ ಹೆಸರು ಮತ್ತು ಚಿಹ್ನೆ ಬಳಕೆಗೆ ಅನುಮತಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
1989ರಲ್ಲಿ ಶಿವಸೇನೆಯು ತನ್ನ ನಿಶ್ಚಿತ ಚಿಹ್ನೆಯಾದ ಬಿಲ್ಲು ಮತ್ತು ಬಾಣವನ್ನು ಚುನಾವಣಾ ಆಯೋಗದಿಂದ ಪಡೆದುಕೊಂಡಿತ್ತು. ಅದಕ್ಕೂ ಮೊದಲು ಪಕ್ಷು ಕತ್ತಿ ಮತ್ತು ಗುರಾಣಿ, ತೆಂಗಿನ ಮರ, ರೈಲ್ವೇ ಎಂಜಿನ್, ಕಪ್ ಮತ್ತು ತಟ್ಟೆಯಂತಹ ವಿಭಿನ್ನ ಚಿಹ್ನೆಗಳ ಮೇಲೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು.
ಇದೀಗ ಶಿವಸೇನೆ ಎರಡು ಬಣವಾಗಿ ಒಡೆದಿರುವುದರಿಂದ, ಪಕ್ಷದ ಮೂಲ ಚಿಹ್ನೆಯಾದ ಬಿಲ್ಲು ಮತ್ತು ಬಾಣವನ್ನು ಬಳಸದಂತೆ ಎರಡೂ ಬಣಕ್ಕೆ ಚುನಾವಣಾ ಆಯೋಗ ಸೂಚಿಸಿದೆ. ಅಲ್ಲದೇ ತಮ್ಮ ಬಣಕ್ಕಾಗಿ ಮೂರು ಹೆಸರು ಮತ್ತು ಚಿಹ್ನೆಯನ್ನು ಪ್ರಸ್ತಾವನೆಗಾಗಿ ಕಳುಹಿಸಿಕೊಡುವಂತೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಬಣ ಎರಡು ಹೆಸರು ಮತ್ತು ಎರಡು ಚಿಹ್ನೆಯನ್ನು ಕಳುಹಿಸಿಕೊಟ್ಟಿದೆ.
ಚುನಾವಣಾ ಆಯೋಗದ ಮಧ್ಯಂತರ ಆದೇಶದ ಪ್ರಕಾರ, ಎರಡೂ ಗುಂಪುಗಳು ಈಗ ಹೊಸ ಹೆಸರುಗಳನ್ನು ಆರಿಸಬೇಕಾಗುತ್ತದೆ. ಚಿಹ್ನೆಗಾಗಿ ಬಡಿದಾಡಿದ್ದ ಉದ್ಧವ್ ಮತ್ತು ಶಿಂಧೆ ಬಣ ತೀವ್ರ ಹಗ್ಗಜಗ್ಗಾಟದ ಬಳಿಕ ಬೇರೆ ಹೆಸರು ಮತ್ತು ಚಿಹ್ನೆಯಡಿ ಉಪಚುನಾವಣೆಯನ್ನು ಎದುರಿಸಬೇಕಿದೆ.
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಇಬ್ಬರೂ ಇಂದದು(ಅ.09-ಭಾನುವಾರ) ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ತಮ್ಮ ಬಣದ ಪರವಾಗಿ ಕೆಲಸ ಮಾಡುವಂತೆ ನಾಯಕರಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಶಿವಸೇನೆಯ ನಾಯಕತ್ವ ಯಾರ ಬಣವನ್ನು ಬೆಂಬಲಿಸಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ತಮ್ಮದೇ ನೈಜ ಶಿವಸೇನೆ ಎಂದು ಹೇಳುತ್ತಿದ್ದಾರೆ. ಶಿವಸೇನೆ ಸಂಸ್ಥಾಪಕ ಭಾಳ್ ಸಾಹೇಬ್ ಠಾಕ್ರೆ ಅವರ ಹಿಂದುತ್ವ ಸಿದ್ಧಾಂತದ ನೈಜ ವಾರಸುದಾರರು ನಾವೇ ಎಂದು ಶಿಂಧೆ ಬಣ ವಾದಿಸುತ್ತಿದೆ. ಅಲ್ಲದೇ ಶಿವಸೇನೆಯ ಬಹುತೇಕ ಶಾಸಕರು ತಮ್ಮ ಬಣದಲ್ಲಿದ್ದು, ಉದ್ಧವ್ ಠಾಕ್ರೆ ಬೆಂಬಲ ಕಳೆದುಕೊಂಡಿದ್ದಾರೆ ಎಂದು ಶಿಂಧೆ ಬಣ ಪ್ರತಿಪಾದಿಸುತ್ತಿದೆ.
ವಿಭಾಗ