Uddhav Thackeray: ಗಡಿ ವಿವಾದದ ಅಖಾಡಕ್ಕೆ ಧುಮುಕಿದ ಉದ್ಧವ್:‌ ಬೊಮ್ಮಾಯಿ 'ಜತ್‌ ಪ್ರೇಮ' ಪ್ರಶ್ನಾರ್ಹ ಎಂದ ಠಾಕ್ರೆ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uddhav Thackeray: ಗಡಿ ವಿವಾದದ ಅಖಾಡಕ್ಕೆ ಧುಮುಕಿದ ಉದ್ಧವ್:‌ ಬೊಮ್ಮಾಯಿ 'ಜತ್‌ ಪ್ರೇಮ' ಪ್ರಶ್ನಾರ್ಹ ಎಂದ ಠಾಕ್ರೆ!

Uddhav Thackeray: ಗಡಿ ವಿವಾದದ ಅಖಾಡಕ್ಕೆ ಧುಮುಕಿದ ಉದ್ಧವ್:‌ ಬೊಮ್ಮಾಯಿ 'ಜತ್‌ ಪ್ರೇಮ' ಪ್ರಶ್ನಾರ್ಹ ಎಂದ ಠಾಕ್ರೆ!

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಅಖಾಡಕ್ಕೆ ಧುಮುಕಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜತ್‌ ಬಗೆಗಿನ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಮಹಾರಾಷ್ಟ್ರದ 40 ಹಳ್ಳಿಗಳ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಏಕಾಏಕಿ ಹಕ್ಕು ಚಲಾಯಿಸುತ್ತಿರುವುದು ಖಂಡನೀಯ ಎಂದು ಉದ್ಧವ್‌ ಠಾಕ್ರೆ ಕಿಡಿಕಾರಿದ್ದಾರೆ.

ಉದ್ಧವ್‌ ಠಾಕ್ರೆ (ಸಂಗ್ರಹ ಚಿತ್ರ)
ಉದ್ಧವ್‌ ಠಾಕ್ರೆ (ಸಂಗ್ರಹ ಚಿತ್ರ) (ANI)

ಮುಂಬೈ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಅಖಾಡಕ್ಕೆ ಧುಮುಕಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜತ್‌ ಬಗೆಗಿನ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿಗಳು ಗಡಿ ವಿವಾದದ ಬಗ್ಗೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರದ 40 ಹಳ್ಳಿಗಳ ಮೇಲೆ ಅವರು ಏಕಾಏಕಿ ಹಕ್ಕು ಚಲಾಯಿಸುತ್ತಿರುವುದು ಖಂಡನೀಯ ಎಂದು ಉದ್ಧವ್‌ ಠಾಕ್ರೆ ಕಿಡಿಕಾರಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಸಿಎಂ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ, ವಿವಾದವನ್ನು ಮತ್ತಷ್ಟು ಕಗ್ಗಂಟುಗೊಳಿಸುತ್ತಿದ್ದಾರೆ ಎಂದು ಉದ್ಧವ್‌ ಠಾಕ್ರೆ ಆರೋಪಿಸಿದ್ಧಾರೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುತ್ತಿರುವ ಹೇಳಿಕೆಗಳು ಖಂಡನೀಯ. ಸಿಎಂ ಏಕನಾಥ್‌ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಬೊಮ್ಮಾಯಿ ಅವರಿಗೆ ಕಠಿಣ ಉತ್ತರ ನೀಡಬೇಕು ಎಂದು ಆಗ್ರಹಿಸುವುದಾಗಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಹಳ್ಳಿಗಳ ಮೇಲೆ ಹಕ್ಕು ಸಾಧಿಸಿದ ನಂತರ ಈಗ ಕರ್ನಾಟಕದ ಮುಖ್ಯಮಂತ್ರಿ ಅಕ್ಕಲಕೋಟ ಮತ್ತು ಸೊಲ್ಲಾಪುರದ ಮೇಲೂ ಹಕ್ಕು ಚಲಾಯಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಗುಡುಗಿದ್ದಾರೆ.

ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಕರ್ನಾಟಕ ಮುಖ್ಯಮಂತ್ರಿಗೆ ದಿಟ್ಟ ಉತ್ತರ ನೀಡಬೇಕು. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಕರ್ನಾಟಕದ ಉದ್ಧಟತನವನ್ನು ನಿಯಂತ್ರಿಸಬೇಕು ಎಂದು ಅಜಿಲ್‌ ಪವಾರ್‌ ಇದೇ ವೇಳೆ ಆಗ್ರಹಿಸಿದ್ದಾರೆ.

ಕರ್ನಾಟಕ ಮಖ್ಯಮಂತ್ರಿ ಎಲ್ಲವೂ ತಮ್ಮದೆಂದು ಹೇಳುತ್ತಿರುವುದನ್ನು ನೋಡಿದರೆ, ಮುಂದೊಂದು ದಿನ ಮಹಾರಾಷ್ಟ್ರರಾಜಧಾನಿ ಮುಂಬೈ ಕೂಡ ತಮ್ಮದೆಂದು ಹೇಳಬಹುದು. ಹೀಗಾಗಿ ಕರ್ನಾಟಕದ ಉದ್ಧಟತನಕ್ಕೆ ಶಾಶ್ವತವಾಗಿ ಬ್ರೇಕ್‌ ಹಾಕುವ ಅವಶ್ಯಕತೆ ಇದೆ ಎಂದು ಅಜಿತ್‌ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಸಲಿಗೆ ಯಾರು ಉದ್ಧಟತನ ಮಾಡುತ್ತಿದ್ದಾರೆ ಎಂಬುದನ್ನು ಅಜಿತ್‌ ಪವಾರ್‌ ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದ್ದಾರೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿಕೆಯನ್ನು ಖಂಡಿಸಿದ್ದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ನಾಯಕರು "ಪ್ರಚೋದನಕಾರಿ" ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಎಂದು ಕರೆದ ನಂತರ ಇದು ಸಂಭವಿಸುತ್ತದೆ.

"ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗುವುದಿಲ್ಲ. ದೇಶದ ನೆಲ, ಜಲ ಮತ್ತು ಗಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ.." ಎಂದು ಬೊಮ್ಮಾಯಿ ಟ್ವೀಟ್‌ ಮಾಡಿದ್ದರು.

ಮಹಾರಾಷ್ಟ್ರದ ಯಾವುದೇ ಗ್ರಾಮ ಕರ್ನಾಟಕಕ್ಕೆ ಹೋಗುವುದಿಲ್ಲ. ಆದರೆ ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಪ್ರದೇಶಗಳಾದ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯನ್ನು ಮರಳಿ ಪಡೆಯಲು, ಮಹಾರಾಷ್ಟ್ರ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಬಲ ಹೋರಾಟ ನಡೆಸಲಿದೆ" ಎಂದು ದೇವೇಂದ್ರ ಫಡ್ನವೀಸ್‌ ಟ್ವೀಟ್ ಮಾಡಿದ್ದರು.

ಮಹಾರಾಷ್ಟ್ರದಲ್ಲಿ ಗಡಿ ವಿವಾದ ರಾಜಕೀಯ ಅಸ್ತ್ರವಾಗಿ ಮಾರ್ಪಟ್ಟಿದ್ದು, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರಾಜಕೀಯ ಉದ್ದೇಶಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸುತ್ತದೆ ಎಂದು ಕರ್ನಾಟಕ ಸಿಎಂ ಬೊಮ್ಮಾಯಿ ಈ ಹಿಂದೆ ಹೇಳಿದ್ದರು. ನನ್ನ ಸರ್ಕಾರವು ಕರ್ನಾಟಕದ ಗಡಿಗಳನ್ನು ರಕ್ಷಿಸಲು ಸಮರ್ಥವಾಗಿದೆ ಮತ್ತು ಕಾನೂನು ಹೋರಾಟಕ್ಕೆ ಸಜ್ಜಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.