Uddhav Thackeray: ಮತ್ತೆ ಕೇಂದ್ರಾಡಳಿತ ಪ್ರದೇಶದ ಕನವರಿಕೆ: ಉದ್ಧವ್‌ ಠಾಕ್ರೆ ಅವರಿಗೆ ಆಗುತ್ತಿಲ್ಲವೇಕೆ ಮನವರಿಕೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uddhav Thackeray: ಮತ್ತೆ ಕೇಂದ್ರಾಡಳಿತ ಪ್ರದೇಶದ ಕನವರಿಕೆ: ಉದ್ಧವ್‌ ಠಾಕ್ರೆ ಅವರಿಗೆ ಆಗುತ್ತಿಲ್ಲವೇಕೆ ಮನವರಿಕೆ?

Uddhav Thackeray: ಮತ್ತೆ ಕೇಂದ್ರಾಡಳಿತ ಪ್ರದೇಶದ ಕನವರಿಕೆ: ಉದ್ಧವ್‌ ಠಾಕ್ರೆ ಅವರಿಗೆ ಆಗುತ್ತಿಲ್ಲವೇಕೆ ಮನವರಿಕೆ?

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಧಾರವನ್ನು ಉದ್ಧವ್‌ ಠಾಕ್ರೆ ಸ್ವಾಗತಿಸಿದ್ದಾರೆ. ಆದರೆ ವಿವಾದಿತ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಮತ್ತೆ ಉದ್ಧವ್‌ ಠಾಕ್ರೆ ತಮ್ಮ ವರಸೆ ಆರಂಭಿಸಿದ್ದರೆ. ಈ ಕುರಿತು ಇಲ್ಲಿದೆ ಮಾಹಿತಿ.

ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ (PTI)

ನಾಗ್ಪುರ್: ಕರ್ನಾಟಕ ಗಡಿ ಸಮಸ್ಯೆಯು ತನ್ನ ಮುಂದೆ ಬಾಕಿ ಇರುವವರೆಗೂ ಎಲ್ಲಾ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ‌, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮನವಿ ಮಾಡಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್‌ ಠಾಕ್ರೆ, ರಾಜ್ಯ ವಿಧಾನಮಂಡಲದ ಎರಡೂ ಸದನಗಳು, ಗಡಿ ವಿವಾದದ ಬಗ್ಗೆ ಕೈಗೊಂಡ ಸರ್ಬಾನುಮತದ ನಿರ್ಣಯಗಳನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯು ಗಡಿ ಸಮಸ್ಯೆ ಬಗ್ಗೆ ಇಂದು(ಡಿ.೨೭-ಮಂಗಳವಾರ) ಅವಿರೋಧ ನಿರ್ಣಯವನ್ನು ಅಂಗೀಕರಿಸಿದೆ. ಇದನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಮಹಾರಾಷ್ಟ್ರದ ಹಿತಾಸಕ್ತಿಯಲ್ಲಿರುವ ಪ್ರತಿಯೊಂದು ಕ್ರಮವನ್ನೂ ನಾವು ಬೆಂಬಲಿಸುತ್ತೇವೆ ಎಂದು ಉದ್ಧವ್‌ ಠಾಕ್ರೆ ಸ್ಪಷ್ಟಪಡಿಸಿದರು.

ಆದರೆ ಕೇವಲ ನಿರ್ಣಯ ಅಂಗೀಕರಿಸಿ ಸುಮ್ಮನಾಗದೇ, ಎಲ್ಲಾ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ‌ ಮಹಾರಾಷ್ಟ್ರ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನ್ನು ಆಗ್ರಹಿಸಬೇಕು ಎಂದು ಉದ್ಧವ್‌ ಠಾಕ್ರೆ ಒತ್ತಾಯಿಸಿದರು.

ಇದೇ ವಿಷಯವನ್ನು ನಾವು ಇಂದು ಸದನದಲ್ಲೂ ಪ್ರಸ್ತಾಪಿಸಿದೆವು. ಆದರೆ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಬೇಕು ಎಂಬ ಮಹಾರಾಷ್ಟ್ರದ ಮನವಿಯನ್ನು 2008ರಲ್ಲೇ ಸುಪ್ರೀಂಕೋರ್ಟ್ ತಿರಸ್ಕರಿಸಿದೆ‌ ಎಂದು ಸರ್ಕಾರ ಉತ್ತರ ನೀಡಿತು. ಆದರೆ ಈಗ ಪರಿಸ್ಥಿತಿ 2008ರಂತಿಲ್ಲ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಉದ್ಧವ್‌ ಠಾಕ್ರೆ ಸೂಚ್ಯವಾಗಿ ಹೇಳಿದರು.

2008ರ ನಂತರ ಕರ್ನಾಟಕವು ಬೆಳಗಾಂ ಅನ್ನು ಬೆಳಗಾವಿ ಎಂದು ಮರುನಾಮಕರಣ ಮಾಡಿತು. ಅಲ್ಲದೇ ಬೆಳಗಾವಿಗೆ ಎರಡನೇ ರಾಜಧಾನಿಯ ಸ್ಥಾನಮಾನವನ್ನು ನೀಡಿತು. ಇದು ಸುಪ್ರೀಂಕೋರ್ಟ್‌ನ ನಿರ್ದೇಶನಗಳ ಉಲ್ಲಂಘನೆಯೇ ಆಗಿದೆ ಎಂದು ಉದ್ಧವ್‌ ಠಾಕ್ರೆ ಇದೇ ವೇಳೆ ಕಿಡಿಕಾರಿದರು.

ಆದ್ದರಿಂದ ಮಹಾರಾಷ್ಟ್ರ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಹೊಸ ರಿಟ್ ಅರ್ಜಿಯನ್ನು ಸಲ್ಲಿಸಬೇಕು. ಕಾನೂನು ನಿರ್ಣಯ ಬಾಕಿ ಇರುವ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಮನವಿ ಮಾಡಿಕೊಳ್ಳಬೇಕು ಎಂದು ಉದ್ಧವ್‌ ಠಾಕ್ರೆ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಹಾರಾಷ್ಟ್ರದ ದಕ್ಷಿಣದ ಗಡಿ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನರಿಗೆ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಶಿಂಧೆ ಸರ್ಕಾರ ಘೋಷಿಸಿದೆ. ಆದರೆ ಮಹಾರಾಷ್ಟ್ರದ ನಾಯಕರ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡದ ಕರ್ನಾಟಕ ಸರ್ಕಾರ, ಇದಕ್ಕೆ ಅನುಮತಿ ನೀಡುತ್ತದೆಯೇ ಎಂದು ಉದ್ಧವ್‌ ಠಾಕ್ರೆ ಇದೇ ವೇಳೆ ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿ ಭಾಷಿಕ ಜನತೆಗೆ ಆಗುತ್ತಿರುವ ಅನ್ಯಾಯಕ್ಕೆ ಸಮರ್ಥವಾಗಿ ಸ್ಪಂದಿಸುವಲ್ಲಿ ಏಕನಾಥ್ ಶಿಂಧೆ ಸರಕಾರ ವಿಫಲವಾಗಿದೆ. ಆದಾಗ್ಯೂ, ಈ ಜನಸಂಖ್ಯೆಯ ಭಾವನೆಗಳನ್ನು ಪರಿಗಣಿಸಿ ಪ್ರತಿಪಕ್ಷಗಳು ನಿರ್ಣಯವನ್ನು ಬೆಂಬಲಿಸಿದವು ಎಂದು ಸ್ಪಷ್ಟಪಡಿಸಿದರು.

"ಪ್ರಸ್ತುತ ವಿವಾದದ ಭಾಗವಾಗಿರುವ 865 ಮರಾಠಿ ಭಾಷಿಕ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ತನ್ನ ಆಗ್ರಹವನ್ನು, ರಾಜ್ಯವು ಕಾನೂನುಬದ್ಧವಾಗಿ ಮುಂದುವರಿಸುತ್ತದೆ.." ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಡಿಸಿದ ನಿರ್ಣಯವನ್ನು, ಉಭಯ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದವು.

ಸಂಬಂಧಿತ ಸುದ್ದಿ

Border Dispute: ಕರ್ನಾಟಕದ 'ಮರಾಠಿ ವಿರೋಧಿ' ನೀತಿಗೆ ಖಂಡನೆ: ಮಹಾರಾಷ್ಟ್ರ ಅಸೆಂಬ್ಲಿ ನಿರ್ಣಯವೆಂಬ ರೋದನೆ..!

ಕರ್ನಾಟಕದ 'ಮರಾಠಿ ವಿರೋಧಿ' ನಿಲುವನ್ನು ಖಂಡಿಸಿ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೇ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವ ಭರವಸೆಯನ್ನೂ ನೀಡಲಾಗಿದೆ. ಈ ನಿರ್ಣಯವನ್ನು ಸರ್ವಾನುಮತದಿಂದ ಅನುಮೋದಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.