ಕನ್ನಡ ಸುದ್ದಿ  /  Nation And-world  /  Uniform Marriage Age For Men & Women, What Supreme Court Says

Uniform Marriage Age: ಭಾರತದಲ್ಲಿ ಪುರುಷ ಮತ್ತು ಮಹಿಳೆಗೆ ಏಕರೂಪದ ಕನಿಷ್ಠ ಮದುವೆಯ ವಯಸ್ಸು, ಸುಪ್ರೀಂಕೋರ್ಟ್‌ ಹೇಳಿದ್ದೇನು?

ಪುರುಷ ಮತ್ತು ಮಹಿಳೆ ಇಬ್ಬರಿಗೂ ಏಕರೂಪದ ಕನಿಷ್ಠ ಮದುವೆ ವಯಸ್ಸನ್ನು ನಿಗದಿಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

Uniform Marriage Age: ಭಾರತದಲ್ಲಿ ಪುರುಷ ಮತ್ತು ಮಹಿಳೆಗೆ ಏಕರೂಪದ ಕನಿಷ್ಠ ಮದುವೆಯ ವಯಸ್ಸು, ಸುಪ್ರೀಂಕೋರ್ಟ್‌ ಹೇಳಿದ್ದೇನು?
Uniform Marriage Age: ಭಾರತದಲ್ಲಿ ಪುರುಷ ಮತ್ತು ಮಹಿಳೆಗೆ ಏಕರೂಪದ ಕನಿಷ್ಠ ಮದುವೆಯ ವಯಸ್ಸು, ಸುಪ್ರೀಂಕೋರ್ಟ್‌ ಹೇಳಿದ್ದೇನು?

ನವದೆಹಲಿ: ದೇಶದಲ್ಲಿ ಈಗ ಮದುವೆಯಾಗಲು ಪುರುಷರಿಗೆ 21 ವರ್ಷ ಮತ್ತು ಮಹಿಳೆಯರಿಗೆ 18 ವರ್ಷ ಕನಿಷ್ಠ ವಯಸ್ಸು ನಿಗದಿಪಡಿಸಲಾಗಿದೆ. ಇದರ ಬದಲು ಪುರುಷ ಮತ್ತು ಮಹಿಳೆಗೆ ಏಕರೂಪದ ಕನಿಷ್ಠ ವಯಸ್ಸು ನಿಗದಿಪಡಿಸಬಾರದೇಕೆ? ಎಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಇಂತಹದ್ದೇ ಒಂದು ಅರ್ಜಿ ಇಂದು ಸುಪ್ರೀಂಕೋರ್ಟ್‌ನ ಅಂಗಳಕ್ಕೂ ಬಂದಿದೆ.

ಪುರುಷ ಮತ್ತು ಮಹಿಳೆ ಇಬ್ಬರಿಗೂ ಏಕರೂಪದ ಕನಿಷ್ಠ ಮದುವೆ ವಯಸ್ಸನ್ನು ನಿಗದಿಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಿರಸ್ಕರಿಸಿದೆ. "ಕೆಲವು ವಿಷಯಗಳು ಸಂಸತ್ತಿಗೆ ಮೀಸಲಾಗಿವೆ. ನ್ಯಾಯಾಲಯಗಳು ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲʼʼ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

"ಸಂಸತ್ತಿಗೆ ಶಾಸನ ಮಾಡಲು ಸುಪ್ರೀಂಕೋರ್ಟ್‌ ಅಸಾಧಾರಣ ರಿಟ್‌ ಹೊರಡಿಸಲು ಸಾಧ್ಯವಿಲ್ಲʼʼ ಎಂದು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಹೇಳಿದೆ. "ಈ ನಿರ್ಧಾರವನ್ನು ಸಂಸತ್ತು ಮಾಡಬೇಕು. ನಾವು ಇಲ್ಲಿ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ. ನಾವು ಸಂವಿಧಾನದ ವಿಶೇಷ ಪಾಲಕರು ಎಂದು ಗ್ರಹಿಸಬಾರದು. ಸಂಸತ್ತು ಕೂಡ ಇದೇ ರೀತಿ ಪಾಲಕʼʼ ಎಂದು ಪೀಠವು ಅರ್ಜಿಯನ್ನು ತಳ್ಳಿ ಹಾಕಿದ ಬಳಿಕ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.

ಪುರುಷ ಮತ್ತು ಮಹಿಳೆಯ ವಿವಾಹದ ಕಾನೂನುಬದ್ಧ ವಯಸ್ಸಿನಲ್ಲಿ ಸಮಾನತೆ ಕೋರಿ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಈ ರೀತಿ ಕಾನೂನು ತರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತದಲ್ಲಿ ಪುರುಷರಿಗೆ 21 ನೇ ವಯಸ್ಸಿನಲ್ಲಿ ಮದುವೆಯಾಗಲು ಅನುಮತಿ ಇದೆ, ಆದರೆ ಮಹಿಳೆಯರಿಗೆ ಮದುವೆಯ ವಯಸ್ಸು 18 ವರ್ಷ ನಿಗದಿಪಡಿಸಿದೆ. ಇದರ ಬದಲು ಪುರುಷ ಮತ್ತು ಮಹಿಳೆಗೆ ಒಂದೇ ರೀತಿಯ ಸಮಾನ ಕನಿಷ್ಠ ವಯಸ್ಸು ನಿಗದಿಪಡಿಸಬೇಕು ಎಂದು ಕೋರಲಾಗಿತ್ತು.

"ಮಹಿಳೆಯರ ವಿವಾಹದ ವಯಸ್ಸನ್ನು ಪುರುಷರಿಗೆ ಸರಿಸಮಾನವಾಗಿ 21 ಕ್ಕೆ ಹೆಚ್ಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ಅರ್ಜಿ ವಿಚಾರಣೆ ಇಲ್ಲಿ ಸಾಧ್ಯವಿಲ್ಲ. ಈದಕ್ಕೆ ಶಾಸನಾತ್ಮಕ ತಿದ್ದುಪಡಿ ಬೇಕಿರುತ್ತದೆ. ಈ ನ್ಯಾಯಾಲಯವು ಸಂಸತ್ತಿಗೆ ಶಾಸನ ಮಾಡಲು ಆದೇಶವನ್ನು ನೀಡಲು ಸಾಧ್ಯವಿಲ್ಲ, ”ಎಂದು ಕೋರ್ಟ್‌ ತಿಳಿಸಿದೆ.

"ನಾವು ಈ ಅರ್ಜಿಯನ್ನು ತಿರಸ್ಕರಿಸುತ್ತೇವೆ, ಸೂಕ್ತ ನಿರ್ದೇಶನಗಳನ್ನು ಪಡೆಯಲು ಅರ್ಜಿದಾರರಿಗೆ ಮುಕ್ತವಾಗಿ ಬಿಡುತ್ತೇವೆ" ಎಂದು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಹೇಳಿದೆ.

"ಮದುವೆ ವಯಸ್ಸಿನ ವ್ಯತ್ಯಾಸವು ಲಿಂಗ ಸಮಾನತೆ, ಲಿಂಗ ನ್ಯಾಯ, ಮಹಿಳೆಯರ ಘನತೆಯ ತತ್ತ್ವಗಳನ್ನು ಉಲ್ಲಂಘಿಸುತ್ತದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

"ಭಾರತದಲ್ಲಿ ಮದುವೆಗೆ ಪುರುಷ ಮತ್ತು ಮಹಿಳೆಯರಿಗೆ ತಾರತಮ್ಯದ ಕನಿಷ್ಠ ವಯಸ್ಸಿನ ಮಿತಿಯಿದೆ. ಭಾರತದಲ್ಲಿ ಪುರುಷರು 21 ವರ್ಷಕ್ಕೆ ಆದರೆ, ಮಹಿಳೆಯರು 18 ವರ್ಷಕ್ಕೆ ಮದುವೆಯಾಗಬಹುದು. ಈ ವ್ಯತ್ಯಾಸವು ಪಿತೃಪ್ರಭುತ್ವವನ್ನು ಪ್ರತಿಪಾದಿಸುತ್ತದೆ. ಇದಕ್ಕೆ ಯಾವುದೇ ವೈಜ್ಞಾನಿಕ ಬೆಂಬಲವಿಲ್ಲ. ಇದು ಮಹಿಳೆಯರ ವಿರುದ್ಧ ನ್ಯಾಯಸಮತ್ತ, ವಾಸ್ತವಿಕ ಅಸಮಾನತೆ ಉಂಟು ಮಾಡುತ್ತದೆ. ಇದು ಜಾಗತಿಕ ಪ್ರವೃತ್ತಿಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ವಿವಾಹಿತ ಮಹಿಳೆ ಪತಿಗೆ ಅಧೀನ ಪಾತ್ರವಾಗಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಇದರಿಂದ ಸಾಮಾಜಿಕ ಅಸಮಾನತೆ ಹೆಚ್ಚಾಗುತ್ತದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

IPL_Entry_Point