Budget Responses: ಕೇಂದ್ರ ಬಜೆಟ್‌ ಬಗ್ಗೆ ಯಾರು ಏನಂದರು?: ಇಲ್ಲಿದೆ ಪ್ರಮುಖ ನಾಯಕರ ಪ್ರತಿಕ್ರಿಯೆ..
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget Responses: ಕೇಂದ್ರ ಬಜೆಟ್‌ ಬಗ್ಗೆ ಯಾರು ಏನಂದರು?: ಇಲ್ಲಿದೆ ಪ್ರಮುಖ ನಾಯಕರ ಪ್ರತಿಕ್ರಿಯೆ..

Budget Responses: ಕೇಂದ್ರ ಬಜೆಟ್‌ ಬಗ್ಗೆ ಯಾರು ಏನಂದರು?: ಇಲ್ಲಿದೆ ಪ್ರಮುಖ ನಾಯಕರ ಪ್ರತಿಕ್ರಿಯೆ..

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ಇಂದು(ಫೆ.01-ಬುಧವಾರ) ಕೇಂದ್ರ ಬಜೆಟ್‌ 2023ರನ್ನು ಮಂಡಿಸಿದ್ದಾರೆ. ತೆರಿಗೆ ಮಿತಿ ಹೆಚ್ಚಳ ಈ ಬಾರಿಯ ಬಜೆಟ್‌ನ ಪ್ರಮುಖ ಅಂಶವಾಗಿದೆ. ಅಲ್ಲದೇ ಹಲವು ಜನಪರ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಈ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಕುರಿತು ಇಲ್ಲಿದೆ ಮಾಹಿತಿ..

ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (PTI)

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ಇಂದು(ಫೆ.01-ಬುಧವಾರ) ಕೇಂದ್ರ ಬಜೆಟ್‌ 2023ರನ್ನು ಮಂಡಿಸಿದ್ದಾರೆ. ತೆರಿಗೆ ಮಿತಿ ಹೆಚ್ಚಳ ಈ ಬಾರಿಯ ಬಜೆಟ್‌ನ ಪ್ರಮುಖ ಅಂಶವಾಗಿದೆ. ಅಲ್ಲದೇ ಹಲವು ಜನಪರ ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಈ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಾಯಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸಹಜವಾಗಿ ಕೇಂದ್ರ ಬಜೆಟ್‌ನ್ನು ಆಡಳಿತಾರೂಢ ಮೈತ್ರಿಕೂಟದ ನಾಯಕರು ಸ್ವಾಗತಿಸಿದ್ದರೆ, ಕಾಂಗ್ರೆಸ್‌ ಸೇರಿದಂತೆ ಇತರ ವಿಪಕ್ಷ ನಾಯಕರು ಟೀಕಿಸಿದ್ದಾರೆ.

ಈ ವರ್ಷದ ಬಜೆಟ್ ಭಾರತದ ಅಭಿವೃದ್ಧಿ ಪಥಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಈ ಬಾರಿಯ ಬಜೆಟ್‌ನಲ್ಲಿ ಕೆಲವು ಉತ್ತಮ ವಿಷಯಗಳಿವೆ ಎಂದಿದ್ದಾರೆ. ಆದರೆ MNREGA, ಬಡ ಗ್ರಾಮೀಣ ಕಾರ್ಮಿಕರು, ಉದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕದ ಮೇಲ್ಮಟ್ಟದ ಭದ್ರಾ ಪ್ರದೇಶಕ್ಕೆ 5,000 ಕೋಟಿ ರೂ.ಗೂ ಹೆಚ್ಚು ನೀರಾವರಿ ಯೋಜನೆಯನ್ನು ಘೋಷಿಸಿದ್ದಕ್ಕಾಗಿ ನಾನು ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಯೋಜನೆ ರಾಜ್ಯಕ್ಕೆ ದೊಡ್ಡ ಬದಲಾವಣೆ ತರಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಮಾತನಾಡಿ, ನಾನು ಕಡಿಮೆ ತೆರಿಗೆ ಪದ್ಧತಿಯಲ್ಲಿ ನಂಬಿಕೆಯುಳ್ಳವನು. ಆದ್ದರಿಂದ, ಯಾವುದೇ ತೆರಿಗೆ ಕಡಿತವನ್ನು ಸ್ವಾಗತಾರ್ಹ ಎಂದು ನಾನು ಹೇಳುತ್ತೇನೆ. ಏಕೆಂದರೆ ಜನರ ಕೈಗೆ ಹೆಚ್ಚಿನ ಹಣವನ್ನು ನೀಡುವುದು ಆರ್ಥಿಕತೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ ಎಂದು ನುಡಿದರು.

ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಇದನ್ನು ಮಧ್ಯಮ ವರ್ಗದ ಪರ ಬಜೆಟ್‌ ಎಂದು ಬಣ್ಣಿಸಿದ್ದಾರೆ. ಪ್ರಧಾನಮಂತ್ರಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ. ಇದು ಎಲ್ಲರನ್ನೂ ಒಳಗೊಂಡ ಬಜೆಟ್ ಆಗಿದೆ. SC, ST, OBC, ಮಹಿಳೆಯರು ಮತ್ತು ಹಿರಿಯರಿಗೆ ಹೀಗೆ ಎಲ್ಲರಿಗೂ ಈ ಬಜೆಟ್‌ನಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಇದೊಂದು ಕ್ರಾಂತಿಕಾರಿ ಬಜೆಟ್ ಆಗಿದ್ದು, ಸಮಾಜದ ಪ್ರತಿಯೊಂದು ವರ್ಗಕ್ಕೂ ಪರಿಹಾರ ನೀಡಲಿದೆ. ಹೊಸ ಆದಾಯ ತೆರಿಗೆ ದರಗಳು ವ್ಯಕ್ತಿಗಳಿಗೆ ಪರಿಹಾರ ನೀಡುತ್ತವೆ. ಈ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶೇ.66ರಷ್ಟು ವೆಚ್ಚವನ್ನು ಹೆಚ್ಚಿಸಲಾಗಿದೆ, ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಹೇಳಿದ್ದಾರೆ.

ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗಕ್ಕೆ ಪರಿಹಾರವಿಲ್ಲ. ಬಡವರು ಕೇವಲ ಪದಗಳ ಲಾಭವನ್ನಷ್ಟೇ ಪಡೆದುಕೊಂಡಿದ್ದಾರೆ. ಬಜೆಟ್ ಲಾಭ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಮಾತ್ರ. ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ಪರಿಗಣಿಸಿ 7 ಲಕ್ಷ ರೂ.ವರೆಗಿನ ತೆರಿಗೆ ರಿಯಾಯಿತಿ ಅತ್ಯಲ್ಪ. ಮಧ್ಯಮ ವರ್ಗದವರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್‌ ಸಂಸದ ಗೌರವ್ ಗೊಗೊಯ್ ಅಸಮಾಧಾನ ಹೊರಹಾಕಿದ್ದಾರೆ.

ತಂತ್ರಜ್ಞಾನ, ಆರೋಗ್ಯ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ ಗಣನೀಯ ಕೊಡುಗೆ ನೀಡಿದೆ. ICMR ಲ್ಯಾಬ್‌ಗಳ ಅಭಿವೃದ್ಧಿ ಮತ್ತು ಹೊಸ ತಂತ್ರಜ್ಞಾನದ ಮೇಲೆಯೂ ಗಮನಹರಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಬಜೆಟ್ 2023 ರಲ್ಲಿ ಏನೂ ಇಲ್ಲ. ಅದು ‘ಸಪ್ನೋ ಕಾ ಸೌದಾಗರ್’ ಎಂಬಂತೆ - ಕನಸು ಕಂಡ ನಂತರ ಎಚ್ಚರವಾದಾಗ ಯಾವುದೂ ನಿಜವಾಗುವುದಿಲ್ಲ. ಅಲ್ಲದೆ, ಹಣದುಬ್ಬರ ಮತ್ತು ನಿರುದ್ಯೋಗವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ಏನನ್ನೂ ಉಲ್ಲೇಖಿಸಲಾಗಿಲ್ಲ ಎಂದು ಜೆಡಿಯು ಸಂಸದ ರಾಜೀವ್ ರಂಜನ್ ಕಿಡಿಕಾರಿದ್ದಾರೆ.

ಇದು ಕಾರ್ಪೊರೇಟ್ ಪರ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಅದಾನಿಯ ಎಲ್ಲಾ ಹಿತಾಸಕ್ತಿಗಳನ್ನು ಈಡೇರಿಸಲಾಗಿದೆ. ಆದರೆ ಸಾಮಾನ್ಯ ಜನರನ್ನು ಕಡೆಗಣಿಸಲಾಗಿದೆ. ಈ ಬಜೆಟ್ ಅದಾನಿ, ಅಂಬಾನಿ ಪರವಾಗಿದೆ ಎಂದು ಗುಜರಾತ್ ಕಾಂಗ್ರೆಸ್‌ ಸಂಸದ ಕೆ. ಸುರೇಶ್ ಹರಿಹಾಯ್ದಿದ್ದಾರೆ.

ಸಾಮಾನ್ಯ ಜನರಿಗೆ ಅನುಕೂಲವಾಗುವ ಕಲ್ಯಾಣ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ರದ್ದುಗೊಳಿಸಲಾಗುತ್ತಿದೆ. ಬಡತನ ಮಟ್ಟದಿಂದ ಮೇಲಕ್ಕೆ ಏರಿದ ಜನರು ಮತ್ತೆ ಬಡತನದ ಮಟ್ಟಕ್ಕಿಂತ ಕೆಳಕ್ಕೆ ಇಳಿದಿದ್ದಾರೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬಜೆಟ್‌ನ್ನು ವಿರೋಧಿಸಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.