Budget Highlights: ಕೇಂದ್ರ ಬಜೆಟ್ ಮಂಡನೆಯಾಯ್ತು, ಯಾವುದು ದುಬಾರಿ, ಯಾವುದು ಅಗ್ಗ? ಮೊಬೈಲ್, ಚಿನ್ನ, ಬೆಳ್ಳಿ ದರ ಇಳಿಕೆಯಾಗುತ್ತೆ ಕಣ್ರೀ
Budget cheaper and costlier list: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಬಜೆಟ್‌ನಲ್ಲಿ ಮೊಬೈಲ್ ಫೋನ್, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳ ದರ ಇಳಿಕೆ ಮಾಡುವ ಪ್ರಸ್ತಾಪವಿದೆ. ಇದೇ ಸಂದರ್ಭದಲ್ಲಿ ಕೆಲವೊಂದು ವಸ್ತುಗಳು ದುಬಾರಿಯಾಗಿವೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-2025ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಿಂದಾಗಿ, ಹಲವಾರು ವಸ್ತುಗಳು ಗ್ರಾಹಕರಿಗೆ ಅಗ್ಗ ಮತ್ತು ದುಬಾರಿಯಾಗಿ ಪರಿಣಮಿಸಲಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ ಬಜೆಟ್ ಭಾರತದ ಆರ್ಥಿಕ ಭೂದೃಶ್ಯವನ್ನು ಮರುರೂಪಿಸುವ ಉದ್ದೇಶವನ್ನು ಹೊಂದಿದೆ. ಇದು ಮೂಲಸೌಕರ್ಯ ಅಭಿವೃದ್ಧಿಯಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳವರೆಗೆ ಎಲ್ಲದರ ಮೇಲೂ ಪರಿಣಾಮ ಬೀರಲಿದೆ.
ಮೊಬೈಲ್ ಫೋನ್, ಚಿನ್ನ, ಬೆಳ್ಳಿ ಮತ್ತು ತಾಮ್ರದ ಬೆಲೆಯನ್ನು ಕಡಿತಗೊಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ.
ಕೇಂದ್ರ ಬಜೆಟ್ 2024: ಅಗ್ಗವಾದ ವಸ್ತುಗಳು
- ಮೊಬೈಲ್ ಫೋನ್‌ಗಳು, ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ಕ್ಕೆ ಇಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ.
- ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಶೇಕಡಾ 6.4 ಕ್ಕೆ ಇಳಿಸಲಾಗಿದೆ.
- ಮೂರು ಕ್ಯಾನ್ಸರ್ ಚಿಕಿತ್ಸಾ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
- ಸೌರ ಫಲಕಗಳ ತಯಾರಿಕೆಯಲ್ಲಿ ಬಳಸುವ ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸುವ ಪ್ರಸ್ತಾಪ ಮಾಡಲಾಗಿದೆ.
- ಇ-ಕಾಮರ್ಸ್ ಮೇಲಿನ ಟಿಡಿಎಸ್ ದರವನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ
- ಫೆರೋನಿಕ್ಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್ ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್; ಇದರಿಂದ ಏನು ಲಾಭ?
ಕೇಂದ್ರ ಬಜೆಟ್ 2024: ದುಬಾರಿಯಾದ ಕೆಲವು ವಸ್ತುಗಳು
- ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 10 ಕ್ಕೆ ಮತ್ತು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ಗಳ ಮೇಲಿನ ಕಸ್ಟಮ್ ಶುಂಕವನ್ನು ಶೇಕಡಾ 25 ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ.
- ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 10 ರಿಂದ 15 ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಕ್ಯಾಮೆರಾ ಲೆನ್ಸ್ ಸೇರಿದಂತೆ ವಿವಿಧ ಘಟಕಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡುವುದಾಗಿ ಹಣಕಾಸು ಸಚಿವರು 2023 ರ ವಾರ್ಷಿಕ ಬಜೆಟ್ನಲ್ಲಿ ಘೋಷಿಸಿದ್ದರು. ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಅಂಶವಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ತೆರಿಗೆ ದರವನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದರು. ಈ ನೀತಿ ಬದಲಾವಣೆಯು ಕಂಪನಿಗಳಿಗೆ ಭಾರತದಲ್ಲಿ ಫೋನ್ ತಯಾರಿಕೆಯನ್ನು ಅಗ್ಗವಾಗಿಸುವ ಗುರಿಯನ್ನು ಹೊಂದಿದೆ.
ಈ ಬಜೆಟ್‌ನಲ್ಲಿ ಉದ್ಯೋಗಿಗಳ ಕಿಸೆಗೆ ಹೆಚ್ಚು ಕತ್ತರಿ ಹಾಕಲಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಇಲ್ಲಿಯವರೆಗೆ ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ 50 ಸಾವಿರ ರೂಪಾಯಿ ಕಡಿತವಾಗುತ್ತಿತ್ತು. ಹೊಸ ತೆರಿಗೆ ಪದ್ಧತಿಯಲ್ಲಿ ಇನ್ಮುಂದೆ ಪ್ರತಿವರ್ಷ 75 ಸಾವಿರ ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ಆಗಲಿದೆ.