ಕೇಂದ್ರ ಬಜೆಟ್ 2024; ಆದಾಯ ತೆರಿಗೆ ರಿಟರ್ನ್ಸ್ ರೀ ಅಸೆಸ್ಮೆಂಟ್ ಅವಧಿ ಇಳಿಕೆ, 5 ಮತ್ತೊಂದು ವರ್ಷ ಅಷ್ಟೆ
ಕೇಂದ್ರ ಬಜೆಟ್ 2024 ಇಂದು (ಜುಲೈ 23) ಮಂಡನೆಯಾಗಿದ್ದು, ಆದಾಯ ತೆರಿಗೆ ರಿಟರ್ನ್ಸ್ ರೀ ಅಸೆಸ್ಮೆಂಟ್ ಅವಧಿ ಇಳಿಕೆ ಮಾಡಲಾಗಿದೆ. ಈಗ 10 ವರ್ಷ ಇದ್ದು, ಇನ್ನು ಮರು ಮೌಲ್ಯಮಾಪನದ ಅವಧಿಯು 5 ಮತ್ತೊಂದು ವರ್ಷ ಅಷ್ಟೆ ಸಿಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಿಷ್ಟು.
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಕೇಂದ್ರ ಬಜೆಟ್ 2024 - 25 (Union Budget 2024 25) ಮಂಡಿಸಿದ್ದು, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ರೀ ಅಸೆಸ್ಮೆಂಟ್ ಅವಧಿಯಲ್ಲೂ ಪರಿಷ್ಕರಣೆ ಘೋಷಿಸಿದ್ದಾರೆ. ಇದರಂತೆ ಈಗ ಚಾಲ್ತಿಯಲ್ಲಿರುವ ರೀ ಅಸೆಸ್ಮೆಂಟ್‌ನ 10 ವರ್ಷದ ಅವಧಿಯನ್ನು 5 ವರ್ಷ ಮತ್ತು ಇನ್ನೊಂದು ವರ್ಷ ಹೆಚ್ಚುವರಿ ನೀಡುವ ಪ್ರಸ್ತಾವನೆಯನ್ನು ಅವರು ಪ್ರಕಟಿಸಿದರು.
ತೆರಿಗೆ ರಿಟರ್ನ್ಸ್ ದಾಖಲೆ ಸಲ್ಲಿಕೆ ಮತ್ತು ಮರುಮೌಲ್ಯಮಾಪನದ ಸರಳೀಕರಣ ಮತ್ತು ಅದನ್ನು ಪುನಃ ತೆರೆಯುವ ನಿಬಂಧನೆಗಳನ್ನು ಪ್ರಸ್ತಾಪಿಸಿದರು. ಮೌಲ್ಯಮಾಪನ ವರ್ಷದ ಅಂತ್ಯದಿಂದ ಮೂರು ವರ್ಷಗಳ ನಂತರ ಹೆಚ್ಚಿನ ಆದಾಯದ ಪ್ರಕರಣಗಳನ್ನು ಮಾತ್ರ ಈ ರೀತಿ ಮರು ತೆರೆಯಲು, ಪರಿಶೀಲಿಸಲು ಅವಕಾಶ ನೀಡಲಾಗಿದೆ. ತೆರಿಗೆಯಿಂದ ತಪ್ಪಿಸಿಕೊಂಡ ಆದಾಯ 50 ಲಕ್ಷಕ್ಕಿಂತ ಹೆಚ್ಚಿದ್ದರೆ ಮಾತ್ರವೇ ಮರು ಮೌಲ್ಯಮಾಪನಕ್ಕೆ ಕಡತವನ್ನು ತೆರೆಯಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಆದಾಯ ತೆರಿಗೆ ರಿಟರ್ನ್ಸ್; ಮರು ಮೌಲ್ಯಮಾಪನ
ಹೆಚ್ಚುವರಿಯಾಗಿ ಮೌಲ್ಯಮಾಪನ ವರ್ಷದ ಅಂತ್ಯದಿಂದ ಗರಿಷ್ಠ ಐದು ವರ್ಷಗಳವರೆಗೆ ಮಾತ್ರ ಮರು-ಮೌಲ್ಯಮಾಪನವನ್ನು ತೆರೆಯುವ ಮಿತಿಯನ್ನು ಪರಿಚಯಿಸಲಾಗಿದೆ. ತೆರಿಗೆ ಅನಿಶ್ಚಿತತೆ ಮತ್ತು ವಿವಾದಗಳನ್ನು ಕಡಿಮೆ ಮಾಡಲು, ಒಂದು ಪ್ರಕರಣವನ್ನು ಒಮ್ಮೆ ಶೋಧಿಸಿದರೆ ಮತ್ತು ಸಂಶೋಧನೆಯ ವರ್ಷದ ಮೊದಲು ಸೀಮಿತ ಆರು ವರ್ಷಗಳವರೆಗೆ ವಿಚಾರಣೆ ನಡೆಸಬಹುದಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಈ ಉಪಕ್ರಮವು ಮರು-ಮೌಲ್ಯಮಾಪನದ ಅವಕಾಶವನ್ನು ಈಗ ಇರುವಂತಹ 10 ವರ್ಷಗಳ ಮಿತಿಯಿಂದ ಆರು ವರ್ಷಗಳವರೆಗೆ ಕಡಿಮೆ ಮಾಡುತ್ತದೆ. ತೆರಿಗೆ ದಾವೆಗಳನ್ನು ಪರಿಹರಿಸುವುದಕ್ಕೆ ಇರುವ ತ್ರಾಸವನ್ನು ಮತ್ತಷ್ಟು ಕಡಿಮೆ ಮಾಡಲು ಆದಾಯ ತೆರಿಗೆ ಕಾಯಿದೆ 1961 ಅನ್ನು ಇನ್ನಷ್ಟು ಸರಳಗೊಳಿಸಲಾಗುತ್ತದೆ ಎಂದು ಸಚಿವರು ಹೇಳಿದರು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)
ವಿಭಾಗ