New Tax Regime: ಹೊಸ ತೆರಿಗೆ ಪದ್ಧತಿ ಪ್ರೋತ್ಸಾಹಕ್ಕೆ ಮತ್ತೊಂದು ಹೆಜ್ಜೆ, ಸ್ಲಾಬ್ ಲೆಕ್ಕಾಚಾರದಲ್ಲಿ ಬದಲಾವಣೆ
New tax regime slabs revised in Budget: ಕೇಂದ್ರ ಸರಕಾರವು 2024-25ರ ಸಾಲಿನ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡಿದೆ. ಇದೇ ಸಮಯದಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 25 ಸಾವಿರ ರೂಪಾಯಿಯಷ್ಟು ಏರಿಕೆ ಮಾಡಿದೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಇದೀಗ ಈ ಬಜೆಟ್ ಪರ ಮತ್ತು ವಿರೋಧ ಚರ್ಚೆಯಾಗುತ್ತಿದೆ. ಇದೇ ಸಮಯದಲ್ಲಿ ವೇತನ ಪಡೆಯುವ ಉದ್ಯೋಗಿಗಳು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಈ ಬಜೆಟ್‌ನಿಂದ ನಮಗೆ ಒಳಿತಾಗಿರುವುದೇ? ಒಂದು ಕಡೆ ಕೊಟ್ಟು ಇನ್ನೊಂದು ಕಡೆಯಿಂದ ವಾಫಸ್ ಪಡೆಯಲಾಗಿದೆಯೇ? ಹದಿನೇಳುವರೆ ಸಾವಿರ ರೂಪಾಯಿ ವಿನಾಯಿತಿ ನೀಡಿ 25 ಸಾವಿರ ರೂಪಾಯಿ ಕಸಿದುಕೊಂಡಿರುವವರೇ? ಎಂದೆಲ್ಲ ಚಿಂತಿಸುತ್ತಿದ್ದಾರೆ. ಆದರೆ, ಈ ಬಜೆಟ್ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವಂತೆ ವೇತನ ಪಡೆಯುವವರನ್ನು ಪ್ರೋತ್ಸಾಹಿಸುವ ಕ್ರಮದಂತೆ ಕಾಣಿಸುತ್ತಿದೆ. ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವವರಿಗೆ ಸ್ಟಾಂಡರ್ಡ್ ಡಿಡಕ್ಷನ್ (ಪ್ರಮಾಣೀತ ತೆರಿಗೆ ಕಡಿತ) 25 ಸಾವಿರ ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ.
ಸ್ಲಾಬ್ ಲೆಕ್ಕಾಚಾರದಲ್ಲಿ ಬದಲಾವಣೆ
ಬಜೆಟ್‌ನಲ್ಲಿ ಘೋಷಿಸಲಾದ ಸ್ಲಾಬ್ ಲೆಕ್ಕಾಚಾರದಲ್ಲಿ ಬದಲಾವಣೆ ಕ್ರಮವು ದೇಶದ 4 ಕೋಟಿಯಷ್ಟು ವೇತನ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನ ನೀಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದಾಯ ತೆರಿಗೆಯ ಪರಿಷ್ಕೃತ ಸ್ಲ್ಯಾಬ್ ಇಲ್ಲಿದೆ ನೋಡಿ.
- 3 ಲಕ್ಷ ರೂಪಾಯಿಗೂ ಕಡಿಮೆ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ.
- 3ಲಕ್ಷ ಮೇಲ್ಪಟ್ಟು 7 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಶೇಕಡ 5 ತೆರಿಗೆ
- 7,00,001 ರಿಂದ 10,00,000 ರೂ.ವರೆಗೆ ಶೇಕಡ 10 ತೆರಿಗೆ
- 10,00,001 ರಿಂದ 12,00,000 ರೂ.ವರೆಗೆ ಶೇಕಡ 15 ತೆರಿಗೆ
- 12 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರು ಶೇಕಡ 20 ತೆರಿಗೆ ಪಾವತಿಸಬೇಕು.
ಇದನ್ನೂ ಓದಿ: NPS Vatsalya: ಏನಿದು ಎನ್‌ಪಿಎಸ್ ವಾತ್ಸಲ್ಯ? ಅಪ್ರಾಪ್ತ ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಆರಂಭವಾಗಿದೆ ಹೊಸ ಉಳಿತಾಯ ಯೋಜನೆ
ಈ ಕಾರಣದಿಂದ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುವವರಿಗೆ 17,500 ರೂ. ಉಳಿತಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಆಡಳಿತವನ್ನು ಸರಳಗೊಳಿಸುವ ಭರವಸೆಯನ್ನು ಅವರು ನೀಡಿದ್ದಾರೆ. ತೆರಿಗೆ ರಚನೆಗಳು ಮತ್ತು ನಿಯಮಗಳನ್ನು ಸರಳೀಕರಿಸಲು ಸರಕಾರ ಆದ್ಯತೆ ನೀಡುವುದಾಗಿ ಪುನರುಚ್ಚರಿಸಿದ್ದಾರೆ. 2023-24ರ ಹಣಕಾಸು ವರ್ಷದಲ್ಲಿ ಮೂರನೇ ಎರಡರಷ್ಟು ವೈಯಕ್ತಿಕ ತೆರಿಗೆ ಪಾವತಿದಾರರು ಹೊಸ ತೆರಿಗೆ ಪದ್ಧತಿಗೆ ಬಂದಿದ್ದಾರೆ ಎಂಬ ವಿವರವನ್ನು ಅವರು ನೀಡಿದ್ದಾರೆ.
ನೌಕರರ ಮೂಲ ವೇತನಕ್ಕೆ ಉದ್ಯೋಗದಾತರ ಕೊಡುಗೆಯ ಮೇಲೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಕಡಿತವನ್ನು ಶೇಕಡಾ 10 ರಿಂದ 14 ಕ್ಕೆ ಹೆಚ್ಚಿಸಲಾಗಿದೆ. ಹೊಸ ಆಡಳಿತದ ಅಡಿಯಲ್ಲಿ ಇದು ಸಾರ್ವಜನಿಕ ವಲಯದ ಕಂಪನಿಗಳು, ಖಾಸಗಿ ವಲಯಕ್ಕೆ ಅನ್ವಯಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.