ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ ಸೀತಾರಾಮನ್; ಸಚಿವೆಗೆ ಸಿಹಿ ತಿನ್ನಿಸಿ ಶುಭಹಾರೈಸಿದ ದ್ರೌಪದಿ ಮುರ್ಮು
ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸತ್ ಭವನಕ್ಕೆ ತೆರಳುವ ಮುನ್ನ ಡಿಜಿಟಲ್ ಬಜೆಟ್ ಪ್ರತಿಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ ಹಣಕಾಸು ಸಚಿವೆಗೆ ಸಿಹಿ ತಿನ್ನಿಸಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಆ ಮೂಲಕ ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. 2019ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಭಾರತದ ಮೊದಲ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡ ನಿರ್ಮಲಾ ಸೀತಾರಾಮನ್, ಅಂದಿನಿಂದ ಈವರೆಗೂ ಮಧ್ಯಂತರ ಬಜೆಟ್ ಸೇರಿದಂತೆ 6 ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಮತ್ತೆ ಪೂರ್ಣಪ್ರಮಾಣದ ಬಜೆಟ್ ಮಂಡಿಸುತ್ತಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ತೆರಳಿದ ಸಚಿವೆ
ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ ಕಚೇರಿಗೆ ಬಂದಿದ್ದ ಸಚಿವೆ, ಅಲ್ಲಿಂದ ಡಿಜಿಟಲ್ ಸ್ವರೂಪದಲ್ಲಿರುವ ಬಜೆಟ್ ಪ್ರತಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ತೆರಳಿದರು. ಈ ವೇಳೆ ತಮ್ಮ ತಂಡದೊಂದಿಗೆ ಕೆಂಪು ಬಣ್ಣದ 'ಬಹಿ ಖಾತಾ' ಡಿಜಿಟಲ್ ಟ್ಯಾಬ್ಲೆಟ್‌ನೊಂದಿಗೆ (ಬಜೆಟ್ ಪ್ರತಿ) ಫೋಟೋಗೆ ಪೋಸ್ ನೀಡಿದರು.
ಸಂಸತ್ತಿನಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿರುವ ವಿತ್ತ ಸಚಿವೆ, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ರಾಷ್ಟ್ರಪತಿ ಹಾಗೂ ಅಧಿಕಾರಿಗಳೊಂದಿಗೆ ನಿಂತು ಬಜೆಟ್ ಪ್ರತಿಯೊಂದಿಗೆ ಪೋಸ್ ನೀಡಿದರು. ಬಳಿಕ ರಾಷ್ಟ್ರಪತಿ ಅವರೊಂದಿಗೆ ಬಜೆಟ್ ವಿಚಾರವಾಗಿ ಚರ್ಚೆ ನಡೆಸಿದರು. ಆ ಬಳಿಕ ಮುರ್ಮು ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ (ಮೊಸರು ಮತ್ತು ಸಕ್ಕರೆ) ತಿನ್ನಿಸಿದರು. ಸಿಹಿ ಸೇವಿಸಿದ ಸಚಿವೆ ಬಜೆಟ್ ಪ್ರತಿಯೊಂದಿಗೆ ಸಂಸತ್ ಭವನಕ್ಕೆ ತೆರಳಿದರು. ಮೊಸರು ಮತ್ತು ಸಕ್ಕರೆ ಶುಭಹಾರೈಕೆಯ ಸಂಕೇತವಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಹಲವು ನಿರೀಕ್ಷೆಗಳಿವೆ. ಈ ಬಜೆಟ್ ವಿಕಸಿತ ಭಾರತ ಧ್ಯೇಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದರೊಂದಿಗೆ ಇದು ಆದಾಯ ತೆರಿಗೆ ರಚನೆಯಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ನ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
