Union Budget 2024: ಕೇಂದ್ರ ಬಜೆಟ್ 2024ಕ್ಕೆ 5 ಸಾಮಾಜಿಕ ಸ್ತಂಭ; ಮಹಿಳೆ, ಬಡವ, ಯುವ, ರೈತ, ಬುಡಕಟ್ಟು ಜನರ ಕಲ್ಯಾಣ
Union Budget 2024: ಕೇಂದ್ರ ಸರ್ಕಾರದ ಈ ಸಲದ ಮುಂಗಡಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಲಿದ್ದಾರೆ. ಈ ಮುಂಗಡಪತ್ರದಲ್ಲಿ ಮಹಿಳೆ, ಬಡ, ಯುವ, ರೈತ ಮತ್ತು ಬುಡಕಟ್ಟು ಜನಾಂಗಗಳ ಕಲ್ಯಾಣಕ್ಕೆ ಒತ್ತು ನೀಡುವ ಸಾಧ್ಯತೆ ಇದೆ. 2019ರ ಬಜೆಟ್‌ಗೂ ಇದೇ ಸೂತ್ರ ಅನುಸರಿಸಲಾಗಿತ್ತು. (ವರದಿ- ಎಚ್.ಮಾರುತಿ, ಬೆಂಗಳೂರು)
ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐದು ಕಲ್ಯಾಣ ಕರ್ಯಕ್ರಮಗಳನ್ನು ಆಧರಿಸಿದ ಬಜೆಟ್ ಮಂಡಿಸಲು ನಿರ್ಧರಿಸಿದ್ದಾರೆ. ಫೆಬ್ರವರಿ 1ರಂದು ಮಂಡಿಸಲಿರುವ ಬಜೆಟ್ ನಲ್ಲಿ ಮಹಿಳೆ, ಬಡ, ಯುವ, ರೈತ ಮತ್ತು ಬುಡಕಟ್ಟು ಜನಾಂಗಗಳ ಕಲ್ಯಾಣ ಕೇಂದ್ರೀಕೃತ ಆಯವ್ಯಯ ಪತ್ರ ಮಂಡಿಸಲಿದ್ದಾರೆ ಎಂದು ಮೂಲಗಳೂ ಹೇಳಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ ಡಿಎ ಸರಕಾರ ಮೂರನೇ ಬಾರಿಗೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಅವರು ಮಂಡಿಸುತ್ತಿವ 6ನೇ ಬಜೆಟ್ ಇದಾಗಿದೆ. ಈ ಎಲ್ಲ ಐದು ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವುದರ ಜೊತೆಗೆ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಭವವಿದೆ.
ಉದಾಹರಣೆಗೆ ಶಿಕ್ಷಣ ಮತ್ತು ಇಲಾಖೆಗಳಿಗೆ ಕೌಶಲ್ಯ ಅಭಿವೃದ್ದಿಗೆ ಒತ್ತು ಸಿಗುವ ಸಾಧ್ಯತೆಗಳಿವೆ. 2023-24ರಿಂದೀಚೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಇಲಾಖೆಗಳಿಗೆ ರೂ.1.12 ಟ್ರಿಲಿಯನ್ ಅನುದಾನ ಒದಗಿಸಿದೆ. ಮಹಿಳಾ ಕೇಂದ್ರೀಕೃತ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ಮಹಿಳಾ ಕಲ್ಯಾಣಕ್ಕೂ ಭರಪೂರ ಕೊಡುಗೆ ಸಿಗುವ ಸಾಧ್ಯತೆಗಳಿವೆ ಎಂದು ಬಜೆಟ್ ವಿಶ್ಲೇಷಣಾಕಾರರುಅಭಿಪ್ರಾಯಪಡುತ್ತಾರೆ.
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಮಹಿಳೆಯರನ್ನೇ ಕೇಂದ್ರೀಕರಿಸಿಪ್ರಚಾರ ಮತ್ತು ಪ್ರಣಾಳಿಕೆಗಳನ್ನು ಸಿದ್ದಪಡಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು.
ಬುಡಕಟ್ಟು ಅಭಿವೃದ್ದಿ ಸಚಿವಾಲಯಕ್ಕೆ 2023-24 ರಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿತ್ತು. 2024-25ರಲ್ಲಿಯೂ ಇದೇ ಮಾದರಿ ಮುಂದುವರೆಯುವ ಎಲ್ಲ ಸಾಧ್ಯತೆಗಳಿವೆ 2023-24ರ ಬಜೆಟ್ ನಲ್ಲಿ ಬುಡಕಟ್ಟು ಅಭಿವೃದ್ದಿಗೆ ಅನುದಾನವನ್ನು ಶೇ.71ರಷ್ಟು ಹೆಚ್ಚಳ ಮಾಡಲಾಗಿತ್ತು. ಇದರಲ್ಲಿ ಹೆಚ್ಚಿನ ಭಾಗ ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆಗೆ ನೀಡಲಾಗಿತ್ತು. ಈ ಶಾಲೆಗಳಲ್ಲಿ 6ರಿಂದ 11ನೇ ತರಗತಿಯವರೆಗೆ ಬುಡಕಟ್ಟು ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡಲಾಗುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ ರೂ.6000 ರೂ ನೇರ ವರ್ಗಾವಣೆ ಮಾಡುತ್ತಿದ್ದು, ಇದರಲ್ಲಿ ಶೇ.33ರಷ್ಟು ಹೆಚ್ಚಳ ಮಾಡುವ ಸಾದ್ಯತೆಗಳಿವೆ ಎಂದು ತಿಳಿದು ಬಂದಿದೆ. 2023-24ರಲ್ಲಿ ಈ ಯೋಜನೆಯಡಿಯಲ್ಲಿ60 ಸಾವಿರ ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಕೃಷಿಕರ ಆದಾಯ ಹೆಚ್ಚಳಕ್ಕೆ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಕೃಷಿ ಇಳುವರಿಯನ್ನು ಹೆಚ್ಚಳ ಮಾಡಲು ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ, ದೂರಸಂವೇದಿ ಆಧಾರಿತ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಉತ್ಪಾದನೆಯಲ್ಲಿ ಭಾರತ ಚೀನಾಗಿಂದ
ಹಿಂದುಳಿದಿದೆ. ಪ್ರತಿ ಹೆಕ್ಟೇರ್ ಗೆ ಭತ್ತ ಚೀನಾದಲ್ಲಿ 6.7 ಟನ್ ಇಳುವರಿಯಾಗಿದ್ದರೆ ಭಾರತದಲ್ಲಿ ಕೇವಲ 2.4 ಟನ್ ಮಾತ್ರ ಇದೆ. ಗೋಧಿ ಉತ್ಪಾದನೆಯಲ್ಲಿ ಚೀನಾ ಪ್ರತಿ ಹೆಕ್ಟೇರ್ ಗೆ 5ಟನ್ ಆಗಿದ್ದರೆ ಭಾರತದಲ್ಲಿ 3 ಟನ್ ನಷ್ಟು ಮಾತ್ರ ಇದೆ. ಆದ್ದರಿಂದ ರೈತರು ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಶೇ.16ರಷ್ಟು ಹಣ್ಣು ತರಕಾರಿ, ಶೇ.9ರಷ್ಟು ದ್ವಿದಳ ಧಾನ್ಯಗಳು, ಶೇ.6ರಷ್ಟು ಧಾನ್ಯಗಳು ಹಾಳಾಗುತ್ತಿವೆ. ಈ ವ್ಯರ್ಥ ಆಆಗುವುದನ್ನು ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಗೋದಾಮುಗಳ ಹೆಚ್ಚಳ, ಪ್ಯಾಕ್ ಹೌಸ್, ಶೀತಲ ಗೃಹಗಳ ಅವಶ್ಯಕತೆ ಇದೆ.
ಜೊತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಪೂರಕ ವ್ಯವಸ್ಥೆ ನಿರ್ಮಿಸುವತ್ತಲೂ ಸರಕಾರ ಚಿಂತನೆ ನಡೆಸಲಿದೆ ಎಂದು ತಿಳಿದು ಬಂದಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)