ಕೇಂದ್ರ ಬಜೆಟ್ 2025 ಮಂಡನೆ ಫೆ 1ಕ್ಕೆ ಅಂತಿದ್ದಾರೆ, ನಂದೂ ಒಂದು ಸಲಹೆ ಇದೆ, ತಿಳಿಸೋದು ಹೇಗೆ ಅಂತ ಚಿಂತೆ ಮಾಡ್ತಾ ಕೂರಬೇಡಿ, ಇಂದೇ ತಿಳಿಸಿ
Union Budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದ್ದಾರೆ. ಅಂದ ಹಾಗೆ, ಕೇಂದ್ರ ಬಜೆಟ್ 2025 ಮಂಡನೆ ಫೆ 1ಕ್ಕೆ ಅಂತಿದ್ದಾರೆ, ನಂದೂ ಒಂದು ಸಲಹೆ ಇದೆ, ತಿಳಿಸೋದು ಹೇಗೆ ಅಂತ ಚಿಂತೆ ಮಾಡ್ತಾ ಕೂರಬೇಡಿ. ಅದು ಹೇಗೆ ಅಂತ ಇಲ್ಲಿದೆ ವಿವರ.

Union Budget 2025: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಭಾಷಣಕ್ಕೆ ಸಿದ್ಧತೆ ನಡೆಸಿದ್ದಾರೆ. ಕೇಂದ್ರ ಬಜೆಟ್ 2025 ಮಂಡನೆ ಫೆಬ್ರವರಿ 1ಕ್ಕೆ ಅಂತಿದ್ದಾರೆ. ನಂದೂ ಒಂದು ಸಲಹೆ ಇತ್ತು. ಹೇಗೆ ಕೇಂದ್ರ ಸರ್ಕಾರಕ್ಕೆ ತಿಳಿಸೋದು, ವಿತ್ತ ಸಚಿವರು ಅದನ್ನು ಪರಿಗಣಿಸಿದರೆ ಚೆನ್ನಾಗಿತ್ತು ಎಂಬ ಆಲೋಚನೆ ನಿಮಗಿದ್ದರೆ ತಡ ಮಾಡಬೇಡಿ. ಕೂಡಲೇ ಟಿಪ್ಪಣಿ ಬರೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿ. ಹೀಗೆ ಹೇಳೋದು ಬಹಳ ಸುಲಭ. ಕಳುಹಿಸುವುದು ಹೇಗೆ, ಯಾರಿಗೆ ಕಳುಹಿಸಬೇಕು ತಿಳಿಸಿ ಅಂತ ವಾಪಸ್ ಕೇಳಿಯೇ ಕೇಳ್ತೀರಿ ಅಲ್ವ, ಇಲ್ಲಿದೆ ನೀವು ಕೇಳುವ ಮಾಹಿತಿ.
ಕೇಂದ್ರ ಬಜೆಟ್‌ಗೆ ನಂದೂ ಒಂದು ಸಲಹೆ ಇದೆ, ತಿಳಿಸೋದು ಹೇಗೆ
ನಿಮಗೆ ನೆನಪಿರಬಹುದು. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಜನರ ಸಹಭಾಗಿತ್ವದ ಆಡಳಿತ ನೀಡುವುದಕ್ಕಾಗಿ ಮೈ ಗೌ ಅಂತ ಒಂದು ವೇದಿಕೆಯನ್ನು ಶುರುಮಾಡಿತ್ತು. ಅದೇ ವೇದಿಕೆಯಲ್ಲಿ ಈಗ ಕೇಂದ್ರ ಬಜೆಟ್‌ಗೆ ಜನಸಾಮಾನ್ಯರಾದ ನಾವು, ನೀವು ಸಲಹೆ ನೀಡಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ ಕಾಲಾವಕಾಶವನ್ನು ಅಂದರೆ ಸಮಯಮಿತಿಯನ್ನೂ ಪ್ರಕಟಿಸಿದೆ.
ಹಣಕಾಸು ಸಚಿವಾಲಯವು 2025-26ರ ಕೇಂದ್ರ ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಯೋಗ್ಯವಾದ ಚಿಂತನಶೀಲ ಆಲೋಚನೆಗಳನ್ನು ಬಯಸುತ್ತಿದೆ. ಈ ಆಲೋಚನೆಗಳು ಜನರ ಆಕಾಂಕ್ಷೆಗಳನ್ನು ಮತ್ತು ಅಗತ್ಯಗಳನ್ನು ಪ್ರತಿಬಿಂಬಿಸುವಂತೆ ಇರಲಿ. ವಿದ್ಯಾರ್ಥಿಗಳಾಗಿರಬಹುದು, ವೃತ್ತಿಪರರೇ ಇರಬಹುದು, ಗೃಹಿಣಿಯೇ ಇರಬಹುದು ಅಥವಾ ನಿವೃತ್ತರೇ ಆಗಿರಬಹುದು ನೀವು ಕೊಡುವ ಸಲಹೆಗಳು ಜನಪರ ಆಡಳಿತಕ್ಕೆ ಮುಖ್ಯವಾಗುತ್ತದೆ. ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿ ನಿಮ್ಮ ಆಲೋಚನೆಗಳಿಗೆ ಇರುತ್ತವೆ. ಅವುಗಳನ್ನು ಹಂಚಿಕೊಳ್ಳಿ ಎಂದು ಹಣಕಾಸು ಸಚಿವಾಲಯವು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಕೇಂದ್ರ ಬಜೆಟ್‌ಗೆ ಸಲಹೆ ನೀಡುವುದಕ್ಕೆ ನೀವು ಮಾಡಬೇಕಾದ್ದು ಇಷ್ಟೆ
ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ಮೈ ಗೌ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ. ಅಲ್ಲಿ ನಿಮ್ಮ ಸಲಹೆಗಳನ್ನು ನೀಡಬಹುದು. ಇದಕ್ಕಾಗಿ ಹೀಗೆ ಮಾಡಿ.
1) ಕೇಂದ್ರ ಸರ್ಕಾರದ ಮೈ ಗೌ ವೆಬ್‌ಸೈಟ್‌ಗೆ (mygov.in) ಭೇಟಿ ಕೊಡಿ.
2) ಬಲ ಬದಿಗೆ ಮೇಲ್ತುದಿಯಲ್ಲಿ ಇರುವ ಲಾಗಿನ್ ಬಟನ್ ಕ್ಲಿಕ್ ಮಾಡಿ. ಮೊದಲ ಬಾರಿಗೆ ಲಾಗಿನ್ ಆಗುವವರಾದರೆ ನಿಮ್ಮ ಹೆಸರು ವಿಳಾಸ, ಮೊಬೈಲ್ ನಂಬರ್ ವಿವರ ಕೊಟ್ಟು ರಿಜಿಸ್ಟರ್ ಆಗಿ. ನಂತರ ಲಾಗಿನ್ ಆಗಿ.
3) ಲಾಗಿನ್ ಇನ್ ಆಗಲು ನೋಂದಾಯಿತ ಮೊಬೈಲ್ ನಂಬರ್ ಬಳಸಿ. ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ.
4) ಮೈ ಗೌ ವೆಬ್‌ಸೈಟ್‌ನ ಡ್ಯಾಶ್‌ಬೋರ್ಡ್ ತೆರೆದುಕೊಳ್ಳುತ್ತದೆ. ಅದರಲ್ಲಿ, “Inviting Ideas and Suggestions for Union Budget 2025-2026” ಮೇಲೆ ಕ್ಲಿಕ್ ಮಾಡಬೇಕು.
5) ಆಗ, ಸಲಹೆ ನೀಡಬೇಕಾದ ಪುಟ ತೆರೆದುಕೊಳ್ಳುತ್ತದೆ. ಅದರ ನೇರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿದರೆ ಲಾಗಿನ್ ಆಗಿ ಬಳಸಬಹುದು. ಇಷ್ಟಾದ ಬಳಿಕ ಚರ್ಚೆಯ ಅಂದರೆ ನೀವು ಸಲಹೆ ನೀಡಬೇಕಾದ ಪುಟ ತೆರೆದುಕೊಳ್ಳುತ್ತದೆ.
ಪುಟ ತೆರೆದ ಬಳಿಕ ಅಲ್ಲಿ ಕಾಮೆಂಟ್ ಮಾಡುವುದಕ್ಕೆ ಒಂದು ಆಯತಾಕಾರದ ಪುಟ್ಟ ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮ್ಮ ಸಲಹೆಯನ್ನು ಟೈಪ್ ಮಾಡಬಹುದು. ಮೊದಲೇ ಸಿದ್ಧ ಮಾಡಿ ಇಟ್ಟುಕೊಂಡಿದ್ದರೆ ಅದಕ್ಕೆ ಪೇಸ್ಟ್ ಮಾಡಿ. ಸೇವ್ ಕೊಡಿ. 1000 ಅಕ್ಷರಗಳನ್ನು ಟೈಪ್ ಮಾಡಲು ಸ್ಥಳಾವಕಾಶ ಇದೆ. ವಿಸ್ತೃತ ವಿವರವಾದ ಸಲಹೆ ನೀಡುವುದಾದರೆ, 1000 ಅಕ್ಷರಗಳಲ್ಲಿ ಸಲಹೆಯ ಸಾರಾಂಶ ಕೊಟ್ಟು, ಸಲಹೆ ಬರೆದಿಟ್ಟ ಪೇಪರ್‌ನ ಇಮೇಜ್ ಅಥವಾ ಪಿಡಿಎಫ್ ಅನ್ನು ಅಟ್ಯಾಚ್ ಕೂಡ ಮಾಡಬಹುದು. ಇದಕ್ಕೂ ಮೊದಲು ಬೇರೆಯವರು ಕೊಟ್ಟಿರುವ ಸಲಹೆಗಳ ಕಡೆಗೂ ಕಣ್ಣು ಹಾಯಿಸಬಹುದು.
ಗಮನಿಸಿ: ಇನ್ನೇಕೆ ತಡ, ಕೇಂದ್ರ ಬಜೆಟ್ 2025 ಮಂಡನೆ ಫೆ 1ಕ್ಕೆ ಅಂತಿದ್ದಾರೆ, ನಂದೂ ಒಂದು ಸಲಹೆ ಇದೆ, ತಿಳಿಸೋದು ಹೇಗೆ ಅಂತ ಚಿಂತೆ ಮಾಡ್ತಾ ಕೂರಬೇಡಿ, ಕೇಂದ್ರ ಸರ್ಕಾರಕ್ಕೆ ಇಂದೇ ನಿಮ್ಮ ಸಲಹೆ ತಿಳಿಸಿ. ನಾಳೆಯೇ (ಜನವರಿ 16) ಡೆಡ್‌ಲೈನ್.
