Income Tax Rules: ಮಧ್ಯಮ ವರ್ಗಕ್ಕೆ ಭರ್ಜರಿ ಗಿಫ್ಟ್‌; 12 ಲಕ್ಷದವರೆಗೂ ತೆರಿಗೆ ಇಲ್ಲ; ಇಲ್ಲಿದೆ ಕೇಂದ್ರ ಬಜೆಟ್‌ ಹೈಲೈಟ್ಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Income Tax Rules: ಮಧ್ಯಮ ವರ್ಗಕ್ಕೆ ಭರ್ಜರಿ ಗಿಫ್ಟ್‌; 12 ಲಕ್ಷದವರೆಗೂ ತೆರಿಗೆ ಇಲ್ಲ; ಇಲ್ಲಿದೆ ಕೇಂದ್ರ ಬಜೆಟ್‌ ಹೈಲೈಟ್ಸ್

Union budget live updates: ಕೇಂದ್ರ ಬಜೆಟ್‌ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ -ಹೈಲೈಟ್ಸ್

Income Tax Rules: ಮಧ್ಯಮ ವರ್ಗಕ್ಕೆ ಭರ್ಜರಿ ಗಿಫ್ಟ್‌; 12 ಲಕ್ಷದವರೆಗೂ ತೆರಿಗೆ ಇಲ್ಲ; ಇಲ್ಲಿದೆ ಕೇಂದ್ರ ಬಜೆಟ್‌ ಹೈಲೈಟ್ಸ್

11:19 AM ISTFeb 01, 2025 04:49 PM Jayaraj
  • twitter
  • Share on Facebook
11:19 AM IST

Union Budget 2025 Live Updates: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025-26 ಮಂಡಿಸಿದ್ದಾರೆ. ಸತತ 8ನೇ ಬಜೆಟ್ ಮಂಡಿಸಿದ ಸಚಿವೆ, ಮಧ್ಯಮ ವರ್ಗದ ಜನರಿಗೆ ಬಂಪರ್‌ ಘೋಷಿಸಿದ್ದಾರೆ. ಭಾರಿ ತೆರಿಗೆ ವಿನಾಯಿತಿಯೊಂದಿಗೆ, 12 ಲಕ್ಷದವರೆಗೆ ಆದಾಯವಿದ್ದರೆ ತೆರೆಗೆ ಪಾವತಿಸಬೇಕಿಲ್ಲ ಎಂದು ಹೇಳಿದ್ದಾರೆ. ಮುಂಗಡಪತ್ರದ ಹೈಲೈಟ್ಸ್ ಇಲ್ಲಿದೆ.

Sat, 01 Feb 202511:19 AM IST

ರೈತರ ಬೇಡಿಕೆ ಈಡೇರಿಸದ ಕೇಂದ್ರ ಬಜೆಟ್ ನಿರಾಶಾದಾಯಕ: ಈಶ್ವರ ಖಂಡ್ರೆ

ಕೇಂದ್ರ ಬಜೆಟ್ ರೈತರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಬರಬೇಕು. ಇಂದು ಅನ್ನದಾತರ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಎಲ್ಲ ವಸ್ತುಗಳಿಗೂ ಎಂ.ಎಸ್.ಪಿ. ಇರುವಾಗ ರೈತರ ಕಷ್ಟಾರ್ಜಿತಕ್ಕೆ ನಿರ್ದಿಷ್ಟ ಬೆಲೆ ನೀಡುವ ಎಂ.ಎಸ್.ಪಿ. ಕಾಯಿದೆ ಬಗ್ಗೆ ಪ್ರಕಟಿಸದ ಬಜೆಟ್ ಇದಾಗಿದೆ. ರೈತರು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಸಾಲದ ಹೊರೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ ಎಂದೂ ತಿಳಿಸಿದ್ದಾರೆ.

Sat, 01 Feb 202511:10 AM IST

ಬಿಹಾರ ಚುನಾವಣೆಯ ಪ್ರಣಾಳಿಕೆಯಂತಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ ಎನಿಸುತ್ತಿದೆ. ಬಜೆಟ್‌ನಿಂದ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಬಿಹಾರ ಜನರ ಒಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಬೆಂಗಳೂರಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಈ ಬಜೆಟ್‌ನಿಂದ ಸಂಪೂರ್ಣ ನಿರಾಸೆ ಉಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಕಿಡಿಕಾರಿದ್ದಾರೆ.

Sat, 01 Feb 202510:58 AM IST

ಗೃಹ ಸಚಿವ ಡಾ. ಜಿ.ಪರಮೇಶ್ವರ ಪ್ರತಿಕ್ರಿಯೆ

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2025-26ನೇ ಸಾಲಿನ ಆಯ-ವ್ಯಯ, ದೇಶದಲ್ಲೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಅಭಿವೃದ್ಧಿಯಿಂದ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದೇಶದ ದಕ್ಷಿಣ ಭಾಗದ ರಾಜ್ಯಗಳ ಜನರ ತೆರಿಗೆಯ ಸಂಪತ್ತನ್ನು ಉತ್ತರ ಭಾರತ ರಾಜ್ಯಗಳ ಅಭಿವೃದ್ಧಿಗೆ ಸುರಿಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ನೀರಾವರಿ ಯೋಜನೆಗಳನ್ನು, ರೈತರ ಆದಾಯ ಹೆಚ್ಚಿಸುವಂಥ ಬಲಿಷ್ಟವಾದ ಯೋಜನೆಗಳನ್ನು ರೂಪಿಸಿಲ್ಲ. ಯುವಕರ ನಿರುದ್ಯೋಗ ಸಮಸ್ಯೆಗೆ ಪರಿಹಾರಗಳಿಲ್ಲ.

ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ಮೂವರು ಸಚಿವರಿದ್ದರು, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿನ ಮಹಾನಗರಗಳ ಸುರಕ್ಷತೆಗೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ನೀಡುವ ನಿರೀಕ್ಷೆಯು ಹುಸಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ಜನತೆಗೆ ಬಜೆಟ್‌ನಲ್ಲಿ ಮತ್ತೊಮ್ಮೆ ಮೋಸ ಮಾಡಿದೆ. ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.

Sat, 01 Feb 202510:22 AM IST

ಬಜೆಟ್‌ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಕೊಡುಗೆ ಇಲ್ಲ. ಮುಂಬರುವ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಗೆ ಹೆಚ್ಚು ಕೊಡುಗೆ ಕೊಡಲಾಗಿದೆ. ಹೆಚ್ಚೇನೂ ಪ್ರಯೋಜನ ಇಲ್ಲದ ಬಜೆಟ್‌ ಇದು. ನಮಗೆ ಖಾಳಿ ಚೊಂಬು ಕೊಡಲಾಗಿದೆ. ದೇಶದ ಹಿತದೃಷ್ಟಿಯಿಂದ ಅದರಲ್ಲೂ ಕರ್ನಾಟಕದ ಹಿತದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಆಗಿದೆ. ಇದು ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್. 50 ಲಕ್ಷದ 65,345 ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್‌ನ ಗಾತ್ರ ಕಡಿಮೆಯಾಗಿದೆ‌ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Sat, 01 Feb 202510:01 AM IST

ಜೆಪಿ ನಡ್ಡಾ ಪ್ರತಿಕ್ರಿಯೆ

ಕೇಂದ್ರ ಬಜೆಟ್ ಕುರಿತು, ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅತ್ಯಂತ ಸಮತೋಲಿತ, ಎಲ್ಲರನ್ನೂ ಒಳಗೊಂಡ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಬಜೆಟ್ ಆಗಿದೆ. ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯವನ್ನು ವೇಗಗೊಳಿಸುತ್ತದೆ. ಈ ಬಜೆಟ್ ಬಡವರು ಮತ್ತು ರೈತರ ಕಲ್ಯಾಣ, ಮಹಿಳೆಯರು ಮತ್ತು ಮಧ್ಯಮ ವರ್ಗದವರ ಉನ್ನತಿಯನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ

Sat, 01 Feb 202509:31 AM IST

ಬಜೆಟ್‌ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ

ಕೇಂದ್ರ ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಜೆಟ್‌ನಲ್ಲಿ ವಾರ್ಷಿಕ 12 ಲಕ್ಷ ರೂ.ಗಳವರೆಗಿನ ಆದಾಯವಿದ್ದರೆ ತೆರಿಗೆ ಪಾವತಿಸಬೇಕಿಲ್ಲ. ಎಲ್ಲಾ ಆದಾಯ ಗುಂಪುಗಳಿಗೆ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ಇದು ನಮ್ಮ ಮಧ್ಯಮ ವರ್ಗಕ್ಕೆ ಭಾರಿ ಪ್ರಯೋಜನ ನೀಡಲಿದೆ ಎಂದು ಹೇಳಿದ್ದಾರೆ.

Sat, 01 Feb 202509:10 AM IST

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಲು ಉತ್ತಮ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಸಮಾಜದ ಎಲ್ಲಾ ವರ್ಗಗಳ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಈ ಬಜೆಟ್ ಯುವಕರು, ಬಡವರು, ರೈತರು, ಮಹಿಳೆಯರು ಮತ್ತು ಸಮಾಜದ ಎಲ್ಲಾ ವಿಭಾಗಗಳು ಮತ್ತು ವಲಯಗಳ ಅಭಿವೃದ್ಧಿಯನ್ನು ಉತ್ತೇಜಿಸಲಿದೆ. ರಕ್ಷಣಾ ಸಚಿವಾಲಯಕ್ಕೆ 6.81 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಹಂಚಿಕೆ ಮಾಡಲಾಗಿದೆ. ಇದು ಕಳೆದ ವರ್ಷದ ಬಜೆಟ್ ಹಂಚಿಕೆಗಿಂತ ಸುಮಾರು ಶೇ. 9.5ರಷ್ಟು ಹೆಚ್ಚಾಗಿದೆ. ರಕ್ಷಣಾ ಪಡೆಗಳ ಆಧುನೀಕರಣವು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ 2025-26ರಲ್ಲಿ 1.80 ಲಕ್ಷ ಕೋಟಿ ರೂ.ಗಳ ಬಂಡವಾಳ ಹಂಚಿಕೆ ಮಾಡಲಾಗಿದೆ. ಇದು ನಮ್ಮ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Sat, 01 Feb 202508:40 AM IST

ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಅವರು ಮೂಲಸೌಕರ್ಯ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಇದು ಮೂಲಸೌಕರ್ಯ ಮತ್ತು ರಸ್ತೆ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಕೃಷಿ ವಲಯಕ್ಕೂ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ಸುಧಾರಣೆಯು ಮಧ್ಯಮ ವರ್ಗದ ಜನರಿಗೆ ಭಾರಿ ಪ್ರಯೋಜನವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Sat, 01 Feb 202508:26 AM IST

Union Budget 2025: ಇವುಗಳು ದುಬಾರಿ

ನೇಯ್ದ ಬಟ್ಟೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವು ಶೇಕಡಾ 10/20ರಿಂದ 20 ಅಥವಾ ಪ್ರತಿ ಕೆಜಿಗೆ 115ರೂ.ಗೆ (ಯಾವುದು ಹೆಚ್ಚು ಅದು) ಹೆಚ್ಚಾಗಲಿದೆ.

ಫ್ಲಾಟ್ ಪ್ಯಾನಲ್ ಡಿಸ್‌ಪ್ಲೇ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 10ರಿಂದ 20ಕ್ಕೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.

Sat, 01 Feb 202508:09 AM IST

Budget 2025 Live: ಬೈಕ್‌ ಬೆಲೆ ಇಳಿಕೆ

1600 ಸಿಸಿವರೆಗಿನ ಎಂಜಿನ್ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳಿಗೆ ಶೇಕಡಾ 50ರ ಬದಲು ಶೇಕಡಾ 40ರಷ್ಟು ಮೂಲ ಕಸ್ಟಮ್ಸ್ ಸುಂಕ ಮಾಡಲಾಗುತ್ತದೆ.

1600 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕುಗಳ ಮೂಲ ಕಸ್ಟಮ್ಸ್ ಸುಂಕ ಶೇಕಡಾ 50ರಿಂದ 30ಕ್ಕೆ ಇಳಿಕೆ. ಹೀಗಾಗಿ ಬೈಕ್‌ ಬೆಲೆ ಇಳಿಕೆಯಾಗಲಿದೆ.

ಕ್ರಸ್ಟ್ ಲೆದರ್ ಮೇಲಿನ ರಫ್ತು ಸುಂಕವನ್ನು ಶೇಕಡಾ 20ರಿಂದ ಶೂನ್ಯಕ್ಕೆ ಇಳಿಸಲಾಗಿದೆ.

ಪ್ಲಾಟಿನಂ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 25ರಿಂದ 6.4 ಕ್ಕೆ ಇಳಿಸಲಾಗುತ್ತಿದೆ.

ಹಡಗುಗಳನ್ನು ತಯಾರಿಸಲು ಕಚ್ಚಾ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಇನ್ನೂ 10 ವರ್ಷಗಳವರೆಗೆ ವಿನಾಯಿತಿ ನೀಡಲಾಗಿದೆ.

Sat, 01 Feb 202508:06 AM IST

Budget 2025 Live: ಇವುಗಳು ಅಗ್ಗ

ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು. ಹೀಗಾಗಿ ಇವು ಅಗ್ಗವಾಗಲಿದೆ.

ಇನ್ನೂ 37 ಔಷಧಿಗಳ ಮೇಲೆ ಮೂಲ ಕಸ್ಟಮ್ ಸುಂಕವನ್ನು ವಿನಾಯಿತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ.

ಕೋಬಾಲ್ಟ್ ಉತ್ಪನ್ನ, ಎಲ್ಇಡಿ, ಸತು, ಲಿಥಿಯಂ-ಐಯಾನ್ ಬ್ಯಾಟರಿ ಸ್ಕ್ರ್ಯಾಪ್ ಮತ್ತು 12 ನಿರ್ಣಾಯಕ ಖನಿಜಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲು ಕೇಂದ್ರ ಪ್ರಸ್ತಾಪಿಸಿದೆ.

ವೈಯರ್‌ಡ್‌ ಹೆಡ್‌ಸೆಟ್, ಮೈಕ್ರೊಫೋನ್ ಮತ್ತು ರಿಸೀವರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಮೂಲ ಕಸ್ಟಮ್ಸ್ ಸುಂಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೀಗಾಗಿ ಈ ವಸ್ತುಗಳು ಅಗ್ಗವಾಗಲಿದೆ.

Sat, 01 Feb 202507:44 AM IST

ಮಧ್ಯಮ ವರ್ಗದವರಿಗಾಗಿ ಬಜೆಟ್ :‌ಅಮಿತ್ ಶಾ

ಮಧ್ಯಮ ವರ್ಗದ ಜನರು ಯಾವಾಗಲೂ ಪ್ರಧಾನಿ ಮೋದಿಯವರ ಹೃದಯದಲ್ಲಿರುತ್ತಾರೆ. 12 ಲಕ್ಷ ರೂಪಾಯಿಯವರೆಗೆ ಆದಾಯ ಇದ್ದರೆ ಆದಾಯ ತೆರಿಗೆ ಶೂನ್ಯ. ಪ್ರಸ್ತಾವಿತ ತೆರಿಗೆ ವಿನಾಯಿತಿ ಮಧ್ಯಮ ವರ್ಗದ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವ ದೂರದೃಷ್ಟಿ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

Sat, 01 Feb 202507:33 AM IST

Budget 2025 Live: ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರಮುಖಾಂಶಗಳು

2047ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿ; ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜನೆ. ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿಶತದಷ್ಟು ಸಾಲಕ್ಕೆ ಅನುಮತಿ. ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲ ನೀಡಲು ತೀರ್ಮಾನ.

Sat, 01 Feb 202507:15 AM IST

Budget 2025 Live: ಎಚ್‌ಡಿ ದೇವೇಗೌಡ ಪ್ರತಿಕ್ರಿಯೆ

ಭಾರತದ ಮಾಜಿ ಪ್ರಧಾನಿ ಮತ್ತು ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ, ಕೇಂದೆ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವರು ಮಧ್ಯಮ ವರ್ಗ, ವೈದ್ಯಕೀಯ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರಯೋಜನ ಸಿಗುವಂತೆ ಹಲವಾರು ಉತ್ತಮ ಅಂಶಗಳನ್ನು ಘೋಷಿಸಿದ್ದಾರೆ. ನಾನು ಈ ಬಜೆಟ್ ಅನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

Sat, 01 Feb 202507:04 AM IST

Budget 2025 Live: ಹೊಸ ಆದಾಯ ತೆರಿಗೆ ಸ್ಲ್ಯಾಬ್ ವಿವರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಸ್ತಾವಿತ ಹೊಸ ತೆರಿಗೆ ಸ್ಲ್ಯಾಬ್‌ಗಳು ಹೀಗಿವೆ.

* 12 ಲಕ್ಷ ರೂಪಾಯಿವರೆಗಿನ ವೇತನದಿಂದ ಬರುವ ಆದಾಯಕ್ಕೆ ತೆರಿಗೆ ಇಲ್ಲ

* 4 ಲಕ್ಷದಿಂದ 8 ಲಕ್ಷದವರೆಗಿನ ಆದಾಯಕ್ಕೆ ಶೇ 5

* 8 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ 10

* 12 ಲಕ್ಷದಿಂದ 16 ಲಕ್ಷದವರೆಗಿನ ಆದಾಯಕ್ಕೆ ಶೇ 15

* 16 ಲಕ್ಷದಿಂದ 20 ಲಕ್ಷದವರೆಗಿನ ಆದಾಯಕ್ಕೆ ಶೇ 20

* 20 ಲಕ್ಷದಿಂದ 24 ಲಕ್ಷದರೆಗೆ ಶೇ 25

* 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ 30

Sat, 01 Feb 202506:57 AM IST

Budget 2025: ಯಾವ ವರ್ಷ ಎಷ್ಟು ಆದಾಯಕ್ಕೆ ತೆರಿಗೆ ವಿನಾಯ್ತಿ ಸಿಕ್ಕಿತ್ತು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ವೇತನದಾರ ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. 12 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಘೋಷಿಸುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಖುಷಿ ಕೊಟ್ಟಿದ್ದಾರೆ. ಆದಾಯ ತೆರಿಗೆ ವಿನಾಯ್ತಿ ಘೋಷಣೆ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕೇಂದ್ರ ಸರ್ಕಾರವು ಆದಾಯ ತೆರಿಗೆಯ ಮಿತಿ ಸಡಿಲಗೊಳಿಸಿತ್ತು.

* 2005: ಆದಾಯ ಮಿತಿ 1 ಲಕ್ಷಕ್ಕೆ ಏರಿಕೆ

* 2012: ಆದಾಯ ಮಿತಿ 2 ಲಕ್ಷಕ್ಕೆ ಏರಿಕೆ

* 2014: ಆದಾಯ ಮಿತಿ 2.25 ಲಕ್ಷಕ್ಕೆ ಏರಿಕೆ

* 2019: ಆದಾಯ ಮಿತಿ 5 ಲಕ್ಷಕ್ಕೆ ಏರಿಕೆ

* 2023: ಆದಾಯ ಮಿತಿ 7 ಲಕ್ಷಕ್ಕೆ ಏರಿಕೆ

* 2024: ಆದಾಯ ಮಿತಿಯನ್ನು 12 ಲಕ್ಷಕ್ಕೆ ಏರಿಸುವುದಾಗಿ ಘೋ‍ಷಿಸಲಾಗಿದೆ

Sat, 01 Feb 202506:47 AM IST

Income Tax: ತೆರಿಗೆ ಸುಧಾರಣೆ ಮೂಲಕ ಮಧ್ಯಮ ವರ್ಗದಲ್ಲಿ ನೆಮ್ಮದಿಯ ಭಾವ ಮೂಡಿಸಲು ವಿತ್ತ ಸಚಿವರ ಪ್ರಯತ್ನ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ಸುಧಾರಣೆ ಪ್ರಸ್ತಾವಗಳ ಕುರಿತು ಬಜೆಟ್ ಭಾಷಣದ ವೇಳೆ ಗಮನ ಸೆಳೆದರು. ತೆರಿಗೆ ಕುರಿತು ಅವರ ಹೇಳಿಕೆಗಳ ಮುಖ್ಯಾಂಶಗಳು ಹೀಗಿವೆ.

* ಹಿರಿಯ ನಾಗರಿಕರಿಗೆ 1 ಲಕ್ಷದ ವರೆಗೆ ಟಿಡಿಎಸ್ ವಿನಾಯಿತಿ

* ಮಧ್ಯಮ ವರ್ಗವನ್ನೇ ಕೇಂದ್ರೀಕರಿಸಿದ ತೆರಿಗೆ ಸುಧಾರಣೆ

* ಟಿಡಿಎಸ್ ಮತ್ತು ಟಿಸಿಎಸ್ ವಿಧಾನದಲ್ಲಿ ಸುಧಾರಣೆ. ಟಿಸಿಎಸ್‌ 7 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ

* ತೆರಿಗೆದಾರರಿಗೆ ಮಾಹಿತಿ ನೀಡಬೇಕಾದ ಒತ್ತಡ ಕಡಿಮೆ ಮಾಡಲು ಪ್ರಯತ್ನ

* ಸರಳವಾಗಿ ವಹಿವಾಟು ನಡೆಸಲು ಅವಕಾಶ

* ಉದ್ಯೋಗ ಮತ್ತು ಹೂಡಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವ ಪ್ರಯತ್ನ

Sat, 01 Feb 202506:45 AM IST

12 ಲಕ್ಷ ಆದಾಯದವರೆಗೆ ತೆರಿಗೆ ಇಲ್ಲ

12 ಲಕ್ಷದವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆ ಇಲ್ಲ ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆ ಮಾಡಿದ್ದಾರೆ,

Sat, 01 Feb 202506:42 AM IST

Budget 2025 Live: ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರಮುಖಾಂಶಗಳು

ಕೆವೈಸಿ ನಿಯಮಗಳ ಸರಳೀಕರಣ. ಪೋಸ್ಟ್ ಬ್ಯಾಂಕ್ ಸೇವೆಗಳ ವಿಸ್ತರಣೆ. ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆಗೆ ಕ್ರಮ. ವಿಮಾ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ. ಸ್ವಸಹಾಯ ಸಂಘಗಳಿಗೆ ಗ್ರಾಮೀಣ ಕ್ರೆಡಿಟ್ ಕಾರ್ಡ್. ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲು.

Sat, 01 Feb 202506:40 AM IST

ಕಸ್ಟಮ್ಸ್ ಸುಂಕದಿಂದ ಕ್ಯಾನ್ಸರ್ ಔಷಧಿಗಳಿಗೆ ಸಂಪೂರ್ಣ ವಿನಾಯಿತಿ

ಕ್ಯಾನ್ಸರ್ ಅಥವಾ ಇತರ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೇಂದ್ರ ಸರ್ಕಾರ ಶುಭಸುದ್ದಿ ಕೊಟ್ಟಿದೆ. ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದ ಔಷಧಿಗಳ ಪಟ್ಟಿಗೆ 36 ಔಷಧಗಳನ್ನು ಸೇರಿಸಲು ಪ್ರಸ್ತಾಪಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Sat, 01 Feb 202506:27 AM IST

Income Tax: ಆದಾಯ ತೆರಿಗೆಯಲ್ಲಿ ಮಹತ್ವ ಘೋಷಣೆ, ಶೀಘ್ರ ಹೊಸ ನಿಯಮ

ಪ್ರತಿ ವರ್ಷ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ಹಣಕಾಸು ಸಚಿವರು ಏನು ಹೇಳುತ್ತಾರೆ ಎನ್ನುವ ಬಗ್ಗೆ ತಿಳಿಯಲು ಇಡೀ ದೇಶ ಕಾತರದಿಂದ ಕಾಯುತ್ತಿರುತ್ತದೆ. ಈ ವರ್ಷ ಈ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ವಿತ್ತ ಸಚಿವರು ಹೆಚ್ಚೇನೂ ಮಾಹಿತಿ ನೀಡಿಲ್ಲ. ಆದರೆ ಮುಂದಿನ ವಾರದಲ್ಲಿ ಆದಾಯ ತೆರಿಗೆ ಕುರಿತು ಹೊಸ ವಿಧೇಯಕ ಮಂಡಿಸಲಾಗುವುದು. ಆದಾಯ ತೆರಿಗೆಯ ಹೊಸ ನಿಯಮ ಘೋಷಿಸಲಾಗುವುದು. ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಜನರನ್ನು ಮೊದಲು ನಂಬುತ್ತಾರೆ. ನಂತರ ಅಪ್‌ಡೇಟ್ ಆಗಿರುವ ಮಾಹಿತಿಗಳನ್ನು ಪರಿಶೀಲಿಸಲಿದ್ದಾರೆ ಎಂದು ಭರವಸೆ ನೀಡಿದರು. ಬಜೆಟ್ ಭಾಷಣದ ಈ ಘೋ‍ಷಣೆಯು ಆದಾಯ ತೆರಿಗೆ ನಿಯಮಗಳ ಸುಧಾರಣೆ ಮತ್ತು ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಆದಾಯ ತೆರಿಗೆ ಸಂಗ್ರಹ ದೃಷ್ಟಿಯಿಂದ ಮಹತ್ವದ ಕ್ರಮ ಎನಿಸಿದೆ.

Sat, 01 Feb 202506:25 AM IST

Budget 2025 Live: ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರಮುಖಾಂಶಗಳು

ಪ್ರವಾಸೋಧ್ಯಮಕ್ಕೆ ಒತ್ತು– ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 50 ಪ್ರವಾಸಿ ತಾಣಗಳ ಉತ್ತೇಜನ. ಹೋಟೆಲ್ ನಿರ್ಮಾಣ ಹಾಗೂ ಇತರ ಮೂಲಸೌಕರ್ಯಕ್ಕೆ ಒತ್ತು; ಮುದ್ರಾ ಯೋಜನೆ ಮೂಲಕವೂ ಪ್ರವಾಸಿ ತಾಣಗಳ ಅಭಿವೃದ್ಧಿ. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಖಾಸಗಿ ಪಾಲುದಾರಿಕೆ.

Sat, 01 Feb 202506:24 AM IST

Budget 2025 Live: ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರಮುಖಾಂಶಗಳು

220 ಹೊಸ ಊರುಗಳಿಗೆ ಉಡಾನ್ ವಿಮಾನಯಾನ ಸೌಲಭ್ಯ. 10 ವರ್ಷಗಳಲ್ಲಿ 4 ಕೋಟಿ ಪ್ರಯಾಣಿಕರನ್ನು ಹೆಚ್ಚಿಸುವ ಗುರಿ. ಉಡಾನ್ ಯೋಜನೆಯಿಂದ 1.5 ಕೋಟಿ ಮಧ್ಯಮ ವರ್ಗಗಳಿಗೆ ಅನುಕೂಲ. ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ.

Sat, 01 Feb 202506:24 AM IST

Budget 2025 Live: ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರಮುಖಾಂಶಗಳು

ಜಲ ಜೀವನ್ ಯೋಜನೆ 2028ರವರೆಗೆ ವಿಸ್ತರಣೆ. ಗ್ರಾಮೀಣ ಭಾಗದಲ್ಲಿ ಶೇ.100ರಷ್ಟು ಕುಡಿಯುವ ನೀರು ಪೂರೈಕೆ ಗುರಿ. ಶೇ.80ರಷ್ಟು ಗ್ರಾಮೀಣ ಭಾಗ ಹೊಂದಿರುವ ಭಾರತ. ಗ್ರಾಮೀಣ ಭಾಗದಲ್ಲಿ ನಲ್ಲಿ ನೀರು ಯೋಜನೆ.

Sat, 01 Feb 202506:23 AM IST

Budget 2025 Live: ನಿರ್ಮಲಾ ಸೀತಾರಾಮನ್‌ ಬಜೆಟ್‌ ಪ್ರಮುಖಾಂಶಗಳು

ನಗರಾಭಿವೃದ್ಧಿಗೆ 1ಲಕ್ಷ ಕೋಟಿ ರೂ. ವಿಶೇಷ ಅನುದಾನ. ವಿಕಸಿತ ಭಾರತಕ್ಕೆ ನ್ಯೂಕ್ಲಿಯರ್ ಎನರ್ಜಿ ಮಿಷನ್. 2047ರ ವೇಳೆಗೆ ಅಣು ವಿದ್ಯುತ್ ಉತ್ಪಾದನೆ ಹೆಚ್ಚಳ. ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಹೆಚ್ಚಳ. 2 ವರ್ಷಗಳಲ್ಲಿ 100 ಗಿಗಾ ವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ. ಸಣ್ಣ ರಿಯಾಕ್ಟರ್ ಸಂಶೋಧನೆಗೆ 20 ಸಾವಿರ ಕೋಟಿ ಅನುದಾನ.

Sat, 01 Feb 202506:22 AM IST

Budget 2025 Live: ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ

ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. "ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲು ನಾನು ಪ್ರಸ್ತಾಪಿಸುತ್ತೇನೆ" ಎಂದು ಬಜೆಟ್‌ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದರು.

Sat, 01 Feb 202506:19 AM IST

Budget 2025 Live: ವಿಮಾ ಕ್ಷೇತ್ರದಲ್ಲಿ ಶೇ 100 ರಷ್ಟು ವಿದೇಶಿ ಹೂಡಿಕೆಗೆ ಅವಕಾಶ

ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಇದ್ದ ಮಿತಿಗೆ ಸಂಪೂರ್ಣ ವಿನಾಯ್ತಿ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು. ಹಣಕಾಸು ಪರಿಸ್ಥಿತಿ ಮತ್ತು ಸುಧಾರಣೆಯ ಕುರಿತು ವಿವರಿಸುವ ಸಂದರ್ಭದಲ್ಲಿ ಈ ಘೋಷಣೆ ಮಾಡಿದರು.

Sat, 01 Feb 202506:14 AM IST

Budget 2025 Live: ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, 500 ಕೋಟಿ ಅನುದಾನ

ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಅಗತ್ಯ ಮತ್ತು ಮಹತ್ವ ಅರಿತಿರುವ ಕೇಂದ್ರ ಸರ್ಕಾರವು ಈ ಕ್ಷೇತ್ರಕ್ಕೆ ವಿಶೇಷ ಅನುದಾನ ಒದಗಿಸಲು ಮುಂದಾಗಿದೆ. ತಮ್ಮ ಬಜೆಟ್ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವ ನಿರ್ಮಲಾ ಸೀತಾರಾಮನ್, 'ಶಿಕ್ಷಣ ಕ್ಷೇತ್ರದಲ್ಲಿ ಎಐ ಉತ್ಕೃಷ್ಟತಾ ಕೇಂದ್ರ' (Centre for Excellence in AI for education) ಸ್ಥಾಪನೆಗೆ 500 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದರು.

Sat, 01 Feb 202506:13 AM IST

Budget 2025 Live: ಅರ್ಬನ್ ಚಾಲೆಂಜ್ ಫಂಡ್

ನಗರಗಳನ್ನು ಬೆಳವಣಿಗೆಯ ಕೇಂದ್ರಗಳನ್ನಾಗಿ ಮಾಡುವ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು 1 ಲಕ್ಷ ಕೋಟಿ ರೂ.ಗಳ 'ಅರ್ಬನ್ ಚಾಲೆಂಜ್ ಫಂಡ್ʼ ಸ್ಥಾಪಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Sat, 01 Feb 202506:13 AM IST

Budget 2025 Live: ಭಾರತವನ್ನು ಜಾಗತಿಕ ಆಟಿಕೆಗಳ ಕೇಂದ್ರವಾಗಿಸುವ ಯೋಜನೆ

ಭಾರತವನ್ನು ಜಾಗತಿಕ ಆಟಿಕೆಗಳ ಕೇಂದ್ರವನ್ನಾಗಿ ಮಾಡುವ ಯೋಜನೆಯ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ 2025ರಲ್ಲಿ ಘೋಷಿಸಿದ್ದಾರೆ. ಮೇಡ್‌ ಇನ್‌ ಇಂಡಿಯಾ ಬ್ರ್ಯಾಂಡ್‌ ಅನ್ನು ಪ್ರತಿನಿಧಿಸುವಂತಹ ಉತ್ತಮ ಗುಣಮಟ್ಟದ ಆಟಿಕೆಗಳನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

Sat, 01 Feb 202506:06 AM IST

Budget 2025 Live: ವೈದ್ಯಕೀಯ ಶಿಕ್ಷಣಕ್ಕೆ ಒತ್ತು, 10 ಸಾವಿರ ಸೀಟ್‌ಗಳ ಸೇರ್ಪಡೆ

ದೇಶದಲ್ಲಿ ವೈದ್ಯರಿಗೆ ಇರುವ ಬೇಡಿಕೆ ಗಮನಿಸಿರುವ ಸರ್ಕಾರ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ. ಬಜೆಟ್ ಭಾಷಣದಲ್ಲಿ ಈ ಕುರಿತು ವಿವರ ನೀಡಿರುವ ನಿರ್ಮಲಾ ಸೀತಾರಾಮನ್, ವೈದ್ಯಕೀಯ ಶಿಕ್ಷಣ ಕಾಲೇಜುಗಳಲ್ಲಿ 10 ಸಾವಿರ ಸೀಟ್‌ಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು ಎಂದು ಘೋಷಿಸಿದರು.

Sat, 01 Feb 202506:02 AM IST

Budget 2025 Live: ನವೋದ್ಯಮ, ಹೊಸ ತಲೆಮಾರಿನ ಉದ್ಯಮಿಗಳಿಗಾಗಿ ವಿಶೇಷ ನಿಧಿ ಘೋಷಣೆ

ಯುವಜನರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ನವೋದ್ಯಮಗಳಿಗೆ ಉತ್ತೇಜನ ನೀಡಲು ಹೊಸ ನಿಧಿಯೊಂದನ್ನು ಸ್ಥಾಪಿಸುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಪ್ರಸ್ತಾಪ ಮುಂದಿಟ್ಟರು. ಹೊಸದಾಗಿ 'ಫಂಡ್ ಆಫ್ ಫಂಡ್ಸ್‌ ಫಾರ್ ಸ್ಟಾರ್ಟ್‌ಅಪ್ಸ್' (Fund of Funds for Startups) ಆರಂಭಿಸುವುದಾಗಿ ಘೋಷಿಸಿದರು. ಈ ಉದ್ದೇಶಕ್ಕಾಗಿ ಹಾಲಿ ಚಾಲ್ತಿಯಲ್ಲಿರುವ 10 ಸಾವಿರ ಕೋಟಿ ಸರ್ಕಾರ ಅನುದಾನಕ್ಕೆ ಇನ್ನೂ 10 ಸಾವಿರ ಹೆಚ್ಚುವರಿಯಾಗಿ ಒದಗಿಸುವ ಭರವಸೆ ನೀಡಿದರು. ಇದರ ಜೊತೆಗೆ ಮಹಿಳೆಯರು ಮತ್ತು ಪರಿಶಿಷ್ಟು ಜಾತಿ / ವರ್ಗದವರು ಆರಂಭಿಸುವ ಮೊದಲ ಉದ್ಯಮಗಳಿಗೆ ವಿಶೇಷ ನೆರವು ನೀಡುವುದಾಗಿ ಘೋಷಿಸಿದರು.

Sat, 01 Feb 202505:41 AM IST

Union Budget 2025 live updates: 'ದೇಶಮಂಟಿ ಮಟ್ಟಿ ಕಾದು' ಎಂದ ನಿರ್ಮಲಾ ಸೀತಾರಾಮನ್

ಖ್ಯಾತ ತೆಲುಗು ಕವಿ, ಸಮಾಜ ಸುಧಾರಕ ವೆಂಕಟ ಅಪ್ಪಾರಾವ್ ಗುರ್ಜಾಡ್ ಅವರ 'ದೇಶಮಂಟಿ ಮಟ್ಟಿ ಕಾದು ಮನುಷಲು'(ದೇಶ ಅಂದ್ರೆ ಮಣ್ಣಲ್ಲ, ಮನುಷ್ಯರು) ಸಾಲನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಆರಂಭದಲ್ಲಿಯೇ ನೆನಪಿಸಿಕೊಂಡರು. ವಿತ್ತ ಸಚಿವರ ಭಾಷಣ ಆರಂಭಿಸುವ ಹೊತ್ತಿಗೆ ಸಂಸತ್ತಿನಲ್ಲಿ ಗದ್ದಲ ಇತ್ತಾದರೂ ನಂತರ ಎಲ್ಲ ಸದಸ್ಯರು ಮೌನವಾಗಿ ಭಾಷಣ ಆಲಿಸಲು ಮುಂದಾದರು. ಆರಂಭದಲ್ಲಿ ಕೃಷಿ ಕ್ಷೇತ್ರದ ಯೋಜನೆಗಳ ಬಗ್ಗೆ ಸಚಿವೆ ವಿವರ ಒದಗಿಸಿದರು.

Sat, 01 Feb 202505:39 AM IST

ಕೇಂದ್ರ ಬಜೆಟ್‌ 2025 ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್

  • ಮುಂದಿನ 5 ವರ್ಷ 'ಸಬ್‌ ಕಾ ವಿಕಾಸ್‌'ಗಾಗಿ ದೂರದೃಷ್ಟಿಯ ಬಜೆಟ್‌.
  • ಉತ್ಪಾದನೆ ಕಡಿಮೆ ಇರುವ ನೂರು ಜಿಲ್ಲೆಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ.
  • ಪ್ರಧಾನ ಮಂತ್ರ ಧನ್‌ ಧಾನ್ಯ ಕೃಷಿ ಯೋಜನೆ

Sat, 01 Feb 202505:37 AM IST

ಕೇಂದ್ರ ಬಜೆಟ್‌ ಮಂಡನೆ ಆರಂಭಿಸಿದ ನಿರ್ಮಲಾ ಸೀತಾರಾಮನ್

ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ ಮಂಡನೆ ಆರಂಭಿಸಿದ್ದಾರೆ. ಪ್ರತಿಪಕ್ಷಗಳ ಗದ್ದಲದ ನಡುವೆ ಸೀತಾರಾಮನ್‌ ಮಂಡನೆ ಆರಂಭಿಸಿದ್ದಾರೆ.

Sat, 01 Feb 202505:30 AM IST

ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ

2025-26ನೇ ಸಾಲಿನ ಕೇಂದ್ರ ಬಜೆಟ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ ಆರಂಭವಾಗಲಿದೆ.

Sat, 01 Feb 202505:26 AM IST

ಕೇಂದ್ರ ಬಜೆಟ್‌ 2025: ಸಿಹಿ ತಿನ್ನಿಸಿದ ರಾಷ್ಟ್ರಪತಿ

ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಗೆ ಸಿದ್ಧವಾಗುತ್ತಿರುವ ಸಮಯದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಕೇಂದ್ರ ಹಣಕಾಸು ಸಚಿವೆಯ ಬಾಯಿಗೆ ದಹಿ ಚೀನಿ (ಸಕ್ಕರೆ ಮತ್ತು ಮೊಸರು) ನೀಡಿದ್ದಾರೆ. ಬಜೆಟ್‌ ಮಂಡನೆಗೆ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವ ಸಮಯದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಈ ರೀತಿ ಮಾಡಲಾಗುತ್ತದೆ. ಈ ಮೂಲಕ ಬಜೆಟ್‌ಗೆ ಶುಭ ಹಾರೈಸಲಾಗುತ್ತದೆ. ಈ ಸಂದರ್ಭದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಕೂಡ ಉಪಸ್ಥಿತರಿದ್ದರು. ಹಣಕಾಸು ಸಚಿವರು ಬಜೆಟ್ ಪ್ರಸ್ತಾವನೆಗಳ ರೂಪರೇಷೆಗಳ ಕುರಿತು ರಾಷ್ಟ್ರಪತಿಗಳೊಂದಿಗೆ ನಿರ್ಮಲಾ ಸೀತಾರಾಮನ್‌ ಚರ್ಚಿಸಿದ್ದಾರೆ.

Sat, 01 Feb 202504:33 AM IST

ಕೇಂದ್ರ ಬಜೆಟ್‌ 2025: ಸಂಸತ್ತಿಗೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಆಗಮಿಸಿದ್ದಾರೆ. ಸದನದಲ್ಲಿ ಬೆಳಗ್ಗೆ 11 ಗಂಟೆಗೆ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

Sat, 01 Feb 202504:29 AM IST

ಕೇಂದ್ರ ಬಜೆಟ್‌ 2025: ದುಲಾರಿ ದೇವಿ ಉಡುಗೊರೆಯ ಸೀರೆ

ಕೇಂದ್ರ ಬಜೆಟ್‌ ದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಜೊತೆಗೆ ಅವರ ಸೀರೆಯೂ ಗಮನ ಸೆಳೆಯುತ್ತದೆ. ಈ ಬಾರಿ ಕೆನೆ ಬಣ್ಣದ ಮಧುಬನಿ ಸೀರೆ ಉಟ್ಟಿರುವ ನಿರ್ಮಲಾ ಅವರು ಕೆಂಪು ಬಣ್ಣದ ಬ್ಲೌಸ್ ತೊಟ್ಟಿದ್ದಾರೆ. 8ನೇ ಬಜೆಟ್ ಮಂಡಿಸಲಿರುವ ಆಕೆ ಕಳೆದ ಬಾರಿ ಬಿಹಾರಕ್ಕೆ ಭೇಟಿ ನೀಡಿದಾಗ ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಉಡುಗೊರೆ ರೂಪದಲ್ಲಿ ಈ ಸೀರೆಯನ್ನು ನೀಡಿದ್ದರು, ಮಾತ್ರವಲ್ಲ ಬಜೆಟ್ ದಿನ ಈ ಸೀರೆ ಧರಿಸುವಂತೆ ಮನವಿ ಮಾಡಿದ್ದರು.

Sat, 01 Feb 202504:19 AM IST

ಕೇಂದ್ರ ಬಜೆಟ್‌ 2025: ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್‌ 2025 ಮಂಡನೆಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

Sat, 01 Feb 202504:08 AM IST

ಬಜೆಟ್‌ 2025:‌ ನಿರ್ಮಲಾ ಸೀತಾರಾಮನ್ ಸೀರೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಮಂಡನೆ ದಿನ ಧರಿಸಿರುವ ಸೀರೆ ಗಮನ ಸೆಳೆದಿದೆ. ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿಯ ಅವರಿಗೆ ಗೌರವಾರ್ಥವಾಗಿ ಈ ಸೀರೆಯನ್ನು ಧರಿಸಿದ್ದಾರೆ. ದುಲಾರಿ ದೇವಿ 2021ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು.

Sat, 01 Feb 202503:46 AM IST

ಬಜೆಟ್‌ 2025:‌ ಹಣಕಾಸು ಸಚಿವಾಲಯದಿಂದ ಹೊರಟ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯದಿಂದ ಹೊರಟಿದ್ದಾರೆ. ಸಂಸತ್ತಿನಲ್ಲಿ ಟ್ಯಾಬ್ ಮೂಲಕ ಕೇಂದ್ರ ಬಜೆಟ್‌ 2025 ಅನ್ನು ಅವರು ಮಂಡಿಸಲಿದ್ದಾರೆ.

Sat, 01 Feb 202503:35 AM IST

ಬಜೆಟ್‌ 2025: ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ನೇರಪ್ರಸಾರ ವಿಡಿಯೋ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸತತ 8ನೇ ಬಜೆಟ್‌ ಮಂಡಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ, ಟ್ಯಾಕ್ಸ್ ವಿನಾಯಿತಿ, ರೈತ ಪರ ಯೋಜನೆ, ಮಧ್ಯಮ ವರ್ಗಕ್ಕೆ ಕೊಡುಗೆ ಸೇರಿದಂತೆ ವಿವಿಧ ನಿರೀಕ್ಷೆಗಳು ಈ ಬಾರಿಯ ಬಜೆಟ್ ಮೇಲಿವೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಬಜೆಟ್ ನ ನೇರಪ್ರಸಾರದ ವಿಡಿಯೋ ಇಲ್ಲಿದೆ.

Sat, 01 Feb 202503:26 AM IST

Union Budget 2025 Live Updates: ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ನಿರ್ಮಲಾ ಸೀತಾರಾಮನ್

ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದಾರೆ.

Sat, 01 Feb 202503:10 AM IST

Union Budget 2025 Live Updates: ಯಾವುದೇ ನಿರೀಕ್ಷೆ ಇಲ್ಲ ಎಂದ ಪ್ರಿಯಾಂಕ್‌ ಖರ್ಗೆ

ಈ ಬಜೆಟ್‌ನಿಂದ ವೈಯಕ್ತಿಕವಾಗಿ ನನಗೆ ಯಾವುದೇ ನಿರೀಕ್ಷೆಗಳಿಲ್ಲ. ನಾವು 10 ವರ್ಷಗಳಿಗೂ ಹೆಚ್ಚು ಕಾಲ ಮೋದಿಜಿಯವರ ಮಾಸ್ಟರ್‌ಸ್ಟ್ರೋಕ್, 'ಮೋದಿನಾಮಿಕ್ಸ್' ಅನ್ನು ನೋಡಿದ್ದೇವೆ. ನಿರುದ್ಯೋಗ, ಸಂಸತ್ತಿನ ಬಾಗಿಲಲ್ಲೇ ರೈತರ ಪ್ರತಿಭಟನೆ ಮಾತ್ರ ನೋಡಿದ್ದೇವೆ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ, ಇವೆಲ್ಲವೂ ಕಾಗದದ ಮೇಲೆಯೇ ಉಳಿದಿವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Sat, 01 Feb 202502:33 AM IST

Union Budget 2025 Live Updates: ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ

ಕೇಂದ್ರ ಬಜೆಟ್‌ ಮಂಡನೆಗೂ ಮುಂಚಿತವಾಗಿ, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಪರಿಷ್ಕರಿಸಿವೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ದರವನ್ನು 7 ರೂ.ನಷ್ಟು ಕಡಿಮೆ ಮಾಡಲಾಗಿದೆ. ದೆಹಲಿಯಲ್ಲಿ, 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಇಂದಿನಿಂದ 1797 ರೂಪಾಯಿ ಆಗಲಿದೆ.

Sat, 01 Feb 202502:23 AM IST

Union Budget 2025 Live Updates: 'ಜನಸಾಮಾನ್ಯರ ಬಜೆಟ್‌'

ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಯುವಕರು, ಮಹಿಳೆಯರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಡುವ ನಿರೀಕ್ಷೆ ಇದೆ. ಇದು ಖಂಡಿತವಾಗಿಯೂ ಜನಸಾಮಾನ್ಯರ ಬಜೆಟ್ ಆಗಿರುತ್ತದೆ. ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಖಂಡಿತವಾಗಿಯೂ ಹೊಸದೇನಾದರೂ ಇರುತ್ತದೆ ಎಂದು ನಟ ಮತ್ತು ಬಿಜೆಪಿ ಶಾಸಕ ಆಕಾಶ್ ದಸ್ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

Sat, 01 Feb 202502:09 AM IST

Union Budget 2025 Live Updates: ಆರ್ಥಿಕ ಸಮೀಕ್ಷೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಶುಕ್ರವಾರ (ಜ.31) ಮಂಡಿಸಿದ ಆರ್ಥಿಕ ಸಮೀಕ್ಷೆಯ ಪ್ರಕಾರ, 2025-26ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.3 ಶೇಕಡದಿಂದ 6.8 ಶೇಕಡದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

Sat, 01 Feb 202501:40 AM IST

Union Budget 2025 Live Updates: ಆದಾಯ ತೆರಿಗೆ ವಿನಾಯಿತಿ ನಿರೀಕ್ಷಿಸಬಹುದೇ?

ವೇತನದಾರರ ವರ್ಗಕ್ಕೆ 2025-26ರ ಕೇಂದ್ರ ಬಜೆಟ್‌ನಿಂದ ಶುಭಸುದ್ದಿ ಸಿಗುವ ನಿರೀಕ್ಷೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಬಳ ಪಡೆಯುವ ವರ್ಗಕ್ಕೆ ಗಮನಾರ್ಹ ಪರಿಹಾರವನ್ನು ಘೋಷಿಸುವ ನಿರೀಕ್ಷೆಯಿದೆ. ಸುದ್ದಿ ಸಂಸ್ಥೆ ಎಎನ್‌ಐ ವರದಿ ಪ್ರಕಾರ, ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ಮಧ್ಯಮ ವರ್ಗದ ತೆರಿಗೆದಾರರ ಚಿಂತೆಯನ್ನು ಪರಿಹರಿಸಲು ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಹೆಚ್ಚಿಸಲು ಮತ್ತು ಪ್ರಮಾಣಿತ ಕಡಿತವನ್ನು (standard deduction) ಹೆಚ್ಚಿಸಲು ಸರ್ಕಾರವು ಪರಿಗಣಿಸುತ್ತಿದೆ.

Sat, 01 Feb 202504:09 AM IST

Union Budget 2025 Live Updates: ಕೇಂದ್ರ ಬಜೆಟ್‌ ಮಂಡನೆ ದಿನ ಭಾರತೀಯ ಷೇರು ಮಾರುಕಟ್ಟೆ ತೆರೆದಿರುತ್ತಾ?

ವಾರಾಂತ್ಯದಲ್ಲಿ ಸಾಮಾನ್ಯವಾಗಿ ಮುಚ್ಚಲ್ಪಡುವ ಭಾರತೀಯ ಷೇರು ಮಾರುಕಟ್ಟೆ, ಇಂದು ಫೆಬ್ರುವರಿ 1ರಂದು ಎಂದಿನಂತೆ ವಹಿವಾಟು ನಡೆಸಲಿವೆ. ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಲಿಮಿಟೆಡ್‌ನ ಸುತ್ತೋಲೆ ಪ್ರಕಾರ, ಮಾರುಕಟ್ಟೆ ಸಮಯವು ಬೆಳಗ್ಗೆ 9:15ರಿಂದ ಆರಂಭವಾಗಿ ಮಧ್ಯಾಹ್ನ 3:30ರವರೆಗೆ ಇರುತ್ತದೆ ಎಂದು ದೃಢಪಡಿಸಿದೆ. ನಿಯಮಿತ ವ್ಯಾಪಾರ ಸಮಯಗಳು ಅನ್ವಯವಾಗುತ್ತವೆ.

ಇನ್ನಷ್ಟು ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Sat, 01 Feb 202512:51 AM IST

Union Budget 2025 Live Updates: ಎರಡು ಹಂತಗಳಲ್ಲಿ ಬಜೆಟ್‌ ಅಧಿವೇಶನ

ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರ ಶುಕ್ರವಾರದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಆರಂಭವಾಯಿತು. ಬಜೆಟ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ಜನವರಿ 31ರಂದು ಆರಂಭವಾದ ಮೊದಲ ಹಂತದಲ್ಲಿ ಇಂದು (ಫೆಬ್ರುವರಿ 1) ಮಂಡನೆಯಾಗುವ ಕೇಂದ್ರ ಬಜೆಟ್ ಅನ್ನು ಒಳಗೊಂಡಿದೆ. ಇದು ಫೆಬ್ರವರಿ 13 ರಂದು ಮುಕ್ತಾಯಗೊಳ್ಳುತ್ತದೆ. ಅಧಿವೇಶನದ ಎರಡನೇ ಹಂತವು ಮಾರ್ಚ್ 10ರಂದು ಪ್ರಾರಂಭವಾಗಿ ಏಪ್ರಿಲ್ 4ರಂದು ಮುಕ್ತಾಯಗೊಳ್ಳುತ್ತದೆ ಏಂದು ಸಂಸತ್ತಿನ ಬುಲೆಟಿನ್ ತಿಳಿಸಿದೆ.

Fri, 31 Jan 202503:57 PM IST

Union Budget 2025 Live Updates: ಬಜೆಟ್‌ ಡಾಕ್ಯುಮೆಂಟ್

ಬಜೆಟ್ ಪ್ರತಿಗಳ (Budget 2025 documents) ಡಿಜಿಟಲ್ ಪ್ರತಿಗಳನ್ನು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.inನಲ್ಲಿ ಪಡೆಯಬಹುದು. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬಜೆಟ್‌ ದಾಖಲೆ ಪ್ರತಿಗಳು ಲಭ್ಯವಿರುತ್ತದೆ.

Fri, 31 Jan 202503:55 PM IST

Union Budget 2025 Live Updates: ಲೋಕಸಭೆಯ ನಂತರ ರಾಜ್ಯಸಭೆಯ ಮುಂದೆ ಬಜೆಟ್

ಬಜೆಟ್ ಭಾಷಣದ ಸಮಯದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮುಂಬರುವ ಹಣಕಾಸು ವರ್ಷದ ಬಜೆಟ್ ಹಂಚಿಕೆ ಮತ್ತು ಆದಾಯದ ನಿರೀಕ್ಷೆಗಳನ್ನು ವಿವರಿಸುತ್ತಾರೆ. ಕೆಳಮನೆಯಲ್ಲಿ ಬಜೆಟ್‌ ಭಾಷಣದ ನಂತರ, ಬಜೆಟ್ ದಾಖಲೆಯನ್ನು ರಾಜ್ಯಸಭೆಯ ಮುಂದಿಡಲಾಗುತ್ತದೆ.

Fri, 31 Jan 202503:47 PM IST

Union Budget 2025 Live Updates: ಕೇಂದ್ರ ಬಜೆಟ್‌ ನೇರಪ್ರಸಾರ

ಕೇಂದ್ರ ಬಜೆಟ್ ಮಂಡನೆಯನ್ನು ಸಂಸತ್‌ನ ಅಧಿಕೃತ ವಾಹಿನಿ ಸಂಸದ್ ಟಿವಿ ಮತ್ತು ಭಾರತ ಸರ್ಕಾರದ ದೂರದರ್ಶನ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಲ್ಲೂ ಕೇಂದ್ರ ಬಜೆಟ್ ಮಂಡನೆಯ ನೇರ ಪ್ರಸಾರ ಇರಲಿದೆ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ “@htkannada” ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.

Fri, 31 Jan 202503:47 PM IST

Union Budget 2025 Live Updates: ಕೇಂದ್ರ ಬಜೆಟ್ 2025 ದಿನಾಂಕ, ಸಮಯ ಮತ್ತು ಸ್ಥಳ

ಸಂಸತ್‌ನ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರುವಾಗಿದ್ದು, ಫೆಬ್ರುವರಿ 1ರಂದು ಸಂಸತ್‌ನಲ್ಲಿ ಕೇಂದ್ರ ಬಜೆಟ್ 2025-26 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಾರೆ. ಲೋಕಸಭೆಯಲ್ಲಿ ಫೆಬ್ರುವರಿ 1ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ.

Fri, 31 Jan 202503:47 PM IST

Union Budget 2025 Live Updates: ಕೇಂದ್ರ ಬಜೆಟ್ ಎಂದರೇನು?

ಕೇಂದ್ರ ಬಜೆಟ್‌ ಎಂಬುದು ಮುಂಬರುವ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31) ಭಾರತ ಸರ್ಕಾರದ ಖರ್ಚು ವೆಚ್ಚ ಮತ್ತು ಅದಾಯಗಳ ಪ್ರಸ್ತಾವನೆಯ ಕಡತ. ಸರಳವಾಗಿ ಹೇಳಬೇಕು ಎಂದರೆ ವಾರ್ಷಿಕ ಹಣಕಾಸು ಹೇಳಿಕೆ. 2019ರಿಂದ ಸರ್ಕಾರದ ಹಣಕಾಸಿನ, ಖರ್ಚು, ಆದಾಯ ಮತ್ತು ಆರ್ಥಿಕ ನೀತಿಗಳನ್ನು ಬಜೆಟ್ ಪ್ರತಿಯಲ್ಲಿ ಸೇರಿಸಲಾಗಿದೆ. ಇದನ್ನು ಬಹಿ-ಖಾತಾ ಎಂದು ಕರೆಯಲಾಗುತ್ತಿದೆ.

ಹಂಚಿಕೊಳ್ಳಲು ಲೇಖನಗಳು

  • twitter