Union budget 2025: ಕೇಂದ್ರ ಬಜೆಟ್‌ 2025ರಲ್ಲಿ ಆದಾಯ ತೆರಿಗೆ ವಿಚಾರದಲ್ಲಿ ಉದ್ಯೋಗಿಗಳು ನಿರೀಕ್ಷಿಸುವ 5 ವಿನಾಯಿತಿಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025: ಕೇಂದ್ರ ಬಜೆಟ್‌ 2025ರಲ್ಲಿ ಆದಾಯ ತೆರಿಗೆ ವಿಚಾರದಲ್ಲಿ ಉದ್ಯೋಗಿಗಳು ನಿರೀಕ್ಷಿಸುವ 5 ವಿನಾಯಿತಿಗಳಿವು

Union budget 2025: ಕೇಂದ್ರ ಬಜೆಟ್‌ 2025ರಲ್ಲಿ ಆದಾಯ ತೆರಿಗೆ ವಿಚಾರದಲ್ಲಿ ಉದ್ಯೋಗಿಗಳು ನಿರೀಕ್ಷಿಸುವ 5 ವಿನಾಯಿತಿಗಳಿವು

Union budget 2025: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಕೇಂದ್ರ ಮುಂಗಡಪತ್ರ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈ ನಡುವೆ, ಕೇಂದ್ರ ಬಜೆಟ್‌ 2025ರಲ್ಲಿ ಆದಾಯ ತೆರಿಗೆ ವಿಚಾರದಲ್ಲಿ ಉದ್ಯೋಗಿಗಳು ಹಲವು ವಿನಾಯಿತಿಗಳನ್ನು ನಿರೀಕ್ಷಿಸುತ್ತಿದ್ದಾರೆ. ಈ ಪೈಕಿ ಪ್ರಮುಖವೆನಿಸುವ 5 ವಿನಾಯಿತಿಗಳ ವಿವರ ಇಲ್ಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ತಿಂಗಳು ಮಂಡಿಸಲಿರುವ ಕೇಂದ್ರ ಬಜೆಟ್‌ 2025ರಲ್ಲಿ ಉದ್ಯೋಗಿಗಳು ನಿರೀಕ್ಷಿಸುವ 5 ಆದಾಯ ತೆರಿಗೆ ವಿನಾಯಿತಿಗಳಿವು. (ಸಾಂಕೇತಿಕ ಚಿತ್ರ)
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ತಿಂಗಳು ಮಂಡಿಸಲಿರುವ ಕೇಂದ್ರ ಬಜೆಟ್‌ 2025ರಲ್ಲಿ ಉದ್ಯೋಗಿಗಳು ನಿರೀಕ್ಷಿಸುವ 5 ಆದಾಯ ತೆರಿಗೆ ವಿನಾಯಿತಿಗಳಿವು. (ಸಾಂಕೇತಿಕ ಚಿತ್ರ)

Union budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2025 ಮಂಡಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಸಲದ ಬಜೆಟ್‌fನಲ್ಲಿ ಆದಾಯ ತೆರಿಗೆ ಸಂಬಂಧಿಸಿ ಕೆಲವು ಉಪಕ್ರಮಗಳು ಜಾರಿಗೊಳಿಸಿದರೆ ಅದು ವೇತನದಾರರ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಆದಾಯ ತೆರಿಗೆ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಹಣದುಬ್ಬರ ಏರಿಕೆ ನಡುವೆ ಆದಾಯ ತೆರಿಗೆ ಬರೆಯ ಆತಂಕವೂ ವೇತದಾರರನ್ನು ಕಾಡತೊಡಗಿದೆ. ಚಾಲ್ತಿಯಲ್ಲಿರುವ ಚರ್ಚೆಗೆ ಅನುಗುಣವಾಗಿ ಮುಂಬೈ ಮೂಲದ ತೆರಿಗೆ ಮತ್ತು ಹೂಡಿಕೆ ತಜ್ಞ ಬಲವಂತ್ ಜೈನ್ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ಸಂಸ್ಥೆ ಮಿಂಟ್ ಜತೆಗೆ ದೂರವಾಣಿ ಮೂಲಕ ಮಾತನಾಡಿದ್ದು, ಈ ಸಲದ ಬಜೆಟ್‌ನಲ್ಲಿ ವೇತದಾರರು ನಿರೀಕ್ಷಿಸಬಹುದಾದ 5 ನಿರ್ಣಾಯಕ ತೆರಿಗೆ ಬದಲಾವಣೆಗಳನ್ನು ಪಟ್ಟಿಮಾಡಿದ್ದಾರೆ. ಅದಕ್ಕೂ ಮೊದಲ ಹೊಸ ಆದಾಯ ತೆರಿಗೆ ದರ ವಿವರ ತಿಳಿಯೋಣ.

ಹೊಸ ಆದಾಯ ತೆರಿಗೆಯಲ್ಲಿ ತೆರಿಗೆ ದರ ವಿವರ ಹೀಗಿದೆ

1) - 3 ಲಕ್ಷ ರೂಪಾಯಿ ತನಕ ತೆರಿಗೆ ಇಲ್ಲ: ನಿಮ್ಮ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಒಳಗೆ ಇದ್ದರೆ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.

2) 3 ರಿಂದ 7 ಲಕ್ಷ ರೂ ತನಕ ಶೇ 5: ನಿಮ್ಮ ವಾರ್ಷಿಕ ಆದಾಯವು 3,00,001 ರೂಪಾಯಿಯಿಂದ 7 ಲಕ್ಷ ರೂಪಾಯಿ ತನಕ ಇದ್ದರೆ ನೀವು 3 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇ 5 ರಷ್ಟು ಆದಾಯ ತೆರಿಗೆ ಪಾವತಿಸಬೇಕು

3) 7 ರಿಂದ 10 ಲಕ್ಷ ರೂ ತನಕ ಶೇ 10: ನಿಮ್ಮ ವಾರ್ಷಿಕ ಆದಾಯವು 7,00,001 ರೂಪಾಯಿಯಿಂದ 10,00,000 ರೂಪಾಯಿ ತನಕ ಇದ್ದರೆ, ನೀವು 7 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇ 10 ಆದಾಯ ತೆರಿಗೆ ಪಾವತಿಸಬೇಕು

4) 10 ರಿಂದ 12 ಲಕ್ಷ ರೂ ತನಕ ಶೇ 15: ನಿಮ್ಮ ವಾರ್ಷಿಕ ಆದಾಯವು 10,00,001 ರೂಪಾಯಿಯಿಂದ 12,00,000 ರೂಪಾಯಿ ತನಕ ಇದ್ದರೆ, ನೀವು 10,00,000 ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇ 15 ತೆರಿಗೆ ಪಾವತಿಸಬೇಕು.

5) 12 ರಿಂದ 15 ಲಕ್ಷ ರೂ ತನಕ ಶೇ 20: ನಿಮ್ಮ ವಾರ್ಷಿಕ ಆದಾಯವು 12,00,001 ರೂಪಾಯಿಯಿಂದ 15,00,000 ರೂಪಾಯಿ ತನಕ ಇದ್ದರೆ, ನೀವು 12,00,000 ರೂಪಾಯಿ ಮೇಲ್ಪಟ್ಟ ಆದಾಯಕ್ಕೆ ಶೇಕಡ 20 ತೆರಿಗೆ ಪಾವತಿಸಬೇಕು

6) 15 ಲಕ್ಷ ರೂಪಾಯಿ ಮೇಲ್ಪಟ್ಟು ಶೇ 30: ನಿಮ್ಮ ವಾರ್ಷಿಕ ಆದಾಯವು 15,00,000 ರೂಪಾಯಿ ಮೇಲ್ಪಟ್ಟಿದ್ದರೆ ನೀವು 15,00,000 ರೂಪಾಯಿ ಮೇಲಿನ ಆದಾಯಕ್ಕೆ ಶೇ 30 ಆದಾಯ ತೆರಿಗೆ ಪಾವತಿಸಬೇಕು.

ಕೇಂದ್ರ ಬಜೆಟ್ 2025: ನೀವು ನಿರೀಕ್ಷಿಸಬಹುದಾದ 5 ಆದಾಯ ತೆರಿಗೆ ಬದಲಾವಣೆಗಳಿವು

ಕೇಂದ್ರ ಬಜೆಟ್ 2025 ಮಂಡನೆಗೆ ದಿನಗಣನೆ ಶುರುವಾಗಿದೆ. ವಿಶೇಷವಾಗಿ ಆದಾಯ ತೆರಿಗೆ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದೆ. ಆದಾಯ ತೆರಿಗೆ ಬಹುಸಂಖ್ಯಾತರ ಮೇಲೆ ಪರಿಣಾಮ ಬೀರುವುದೇ ಇದಕ್ಕೆ ಕಾರಣ. ತೆರಿಗೆ ಮತ್ತು ಹೂಡಿಕೆ ತಜ್ಞ ಬಲವಂತ್ ಜೈನ್ ಅವರು ಪಟ್ಟಿ ಮಾಡಿದ 5 ವಿಚಾರಗಳ ವಿವರ ಹೀಗಿದೆ

1) ಆದಾಯ ತೆರಿಗೆ ಸ್ಲ್ಯಾಬ್ ದರ: ತೆರಿಗೆದಾರರಿಗೆ ಹೆಚ್ಚು ಆಕರ್ಷಕವಾಗಿಸಲು ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಮೂಲಕ ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಇನ್ನಷ್ಟು ಉತ್ತೇಜಿಸಬಹುದು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಸರ್ಕಾರ ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸಬಹುದು ಎಂಬ ಮಾತು ಕೇಳಿಬರುತ್ತಿದೆ. "ಆಡಳಿತವನ್ನು ಹೆಚ್ಚು ಪ್ರಗತಿಪರ ಮತ್ತು ಆರ್ಥಿಕತೆಯ ಸ್ಥಿತಿಗೆ ಅನುಗುಣವಾಗಿ ನಿರ್ವಹಿಸುವುದಕ್ಕಾಗಿ, ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯದ ಮಟ್ಟಗಳಿಗೆ ಶೇ 30 ತೆರಿಗೆ ದರವನ್ನು ಅನ್ವಯಿಸುವುದರಿಂದ ಅನುಕೂಲವಿದೆ" ಎಂದು ತೆರಿಗೆ ತಜ್ಞ ಬಲವಂತ್ ಜೈನ್ ಹೇಳಿದ್ದಾರೆ.

2) ಹಿರಿಯ ನಾಗರಿಕರಿಗೆ ವಿಶೇಷ ತೆರಿಗೆ ಸ್ಲ್ಯಾಬ್‌: ಹೊಸ ತೆರಿಗೆ ಸ್ಲ್ಯಾಬ್‌ಗಳು ವಯಸ್ಸಿನ ಹೊರತಾಗಿ ಎಲ್ಲ ತೆರಿಗೆದಾರರಿಗೆ ಏಕರೂಪವಾಗಿರುತ್ತದೆ. "ಆದಾಗ್ಯೂ, ಸರ್ಕಾರವು ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಿಭಿನ್ನ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಬೇಕು, ವಿಶೇಷವಾಗಿ ಹಿರಿಯ ನಾಗರಿಕರಿಗೆ. ಉದಾಹರಣೆಗೆ, ಹಿರಿಯ ನಾಗರಿಕರಿಗೆ (60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ) ಹೆಚ್ಚಿನ ವಿನಾಯಿತಿ ಮಿತಿ ಅಥವಾ ಕಡಿಮೆ ತೆರಿಗೆ ದರಗಳನ್ನು ನೀಡಬಹುದು, ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ" ಬಲವಂತ್ ಜೈನ್ ಹೇಳಿದರು. ಹಳೆಯ ತೆರಿಗೆ ಪದ್ಧತಿಯಲ್ಲಿ, ಹಿರಿಯ ನಾಗರಿಕರಿಗೆ ಮೂಲ ವಿನಾಯಿತಿ ಮಿತಿ 3 ಲಕ್ಷ ರೂಪಾಯಿ, ಅತಿ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿ ಇತ್ತು.

3) ಸ್ಟ್ಯಾಂಡರ್ಡ್‌ ಡಿಡಕ್ಷನ್‌: ಸಂಬಳ ಪಡೆಯುವ ವ್ಯಕ್ತಿಗಳಿಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಅಥವಾ ಪ್ರಮಾಣಿತ ಕಡಿತವನ್ನು ಹೆಚ್ಚಿಸಬೇಕು ಎಂಬ ಬಗ್ಗೆಯೂ ಚರ್ಚೆ ಇದೆ. ಪ್ರಮಾಣಿತ ಕಡಿತವು ಸಂಬಳದ ನೌಕರರು ಮತ್ತು ಪಿಂಚಣಿದಾರರ ಅವರ ಆದಾಯವನ್ನು ಲೆಕ್ಕಿಸದೆ, ಅವರ ತೆರಿಗೆಯ ಆದಾಯದ ಮೇಲೆ ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ 50,000 ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ 75,000 ರೂಪಾಯಿ ಇದೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ವ್ಯಕ್ತಿಯ ಆದಾಯದ ನಿರ್ದಿಷ್ಟ ಅನುಪಾತಕ್ಕೆ ಲಿಂಕ್ ಮಾಡಬೇಕು. ಗರಿಷ್ಠ 1 ಲಕ್ಷ ರೂಪಾಯಿ ಮಿತಿ ಇರಿಸಬೇಕು. ಇದು ಪ್ರಮಾಣಿತ ಕಡಿತಕ್ಕೆ ಸಂಬಳ-ಆಧಾರಿತ ಹೊಂದಾಣಿಕೆಗಳನ್ನು ಸಕ್ರಿಯಗೊಳಿಸುತ್ತದೆ. ಹೆಚ್ಚು ಆದಾಯ ಗಳಿಸುವವರಿಗೆ ಸಹಕಾರಿಯಾಗುತ್ತದೆ ಎಂದು ಬಲವಂತ ಜೈನ್ ಶಿಫಾರಸು ಮಾಡಿದ್ದಾರೆ.

4) ಚಿನ್ನದ ಮೇಲೆ ಆಮದು ಸುಂಕ: ವ್ಯಾಪಾರ ಕೊರತೆಯ ಕುರಿತಾದ ಕಾಳಜಿಗೆ ಪೂರಕವಾಗಿ ಮತ್ತು ಅತಿಯಾದ ಆಮದುಗಳನ್ನು ಕಡಿಮೆ ಮಾಡಲು ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಬಹುದು.

"ದೇಶೀಯವಾಗಿ, ಚಿನ್ನದ ಆಮದುಗಳನ್ನು ತಡೆಗಟ್ಟಲು ಮತ್ತು ವ್ಯಾಪಾರ ಕೊರತೆಯನ್ನು ಪರಿಹರಿಸಲು ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಭಾರತ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಬಹುದು ಎಂಬ ಆತಂಕವಿದೆ. ಅಂತಹ ಕ್ರಮವು ಬೆಲೆ ಹೊಂದಾಣಿಕೆಗಳಿಗೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಸಂಭವನೀಯ ವ್ಯತ್ಯಾಸಕ್ಕೆ ಕಾರಣವಾಗಬಹುದು" ಎಂದು ಎಸ್‌ಎಸ್‌ ವೆಲ್ತ್‌ಸ್ಟ್ರೀಟ್‌ನ ಸ್ಥಾಪಕ ಸಚ್‌ದೇವ್‌ ಸುಗಂಧ ಹೇಳಿದರು.

ಭಾರತವು ಪ್ರಸ್ತುತ ಚಿನ್ನದ ಮೇಲೆ 6 ಪ್ರತಿಶತ ಆಮದು ತೆರಿಗೆಯನ್ನು ವಿಧಿಸುತ್ತದೆ. ಕೇಂದ್ರ ಬಜೆಟ್ 2024 ರಲ್ಲಿ ಚಿನ್ನದ ಮೇಲಿನ ಆಮದು ತೆರಿಗೆಯನ್ನು 15 ಪ್ರತಿಶತದಿಂದ 6 ಪ್ರತಿಶತಕ್ಕೆ ಇಳಿಸಲಾಗಿತ್ತು. ಇದು ಜುಲೈ 24ರಿಂದ ಜಾರಿಗೆ ಬಂದಿದೆ.

5) ಸೆಕ್ಷನ್ 80 ಸಿ ವಿನಾಯಿತಿ: ಕಾಲಾನುಕ್ರಮದಲ್ಲಿ ಕನಿಷ್ಠ ಹೆಚ್ಚಳವನ್ನು ಕಂಡಿರುವ ಸೆಕ್ಷನ್ 80C ಕಡಿತದ ಮಿತಿಯು ತೆರಿಗೆ ತಜ್ಞರ ನಡುವೆ ಚರ್ಚೆಯ ವಿಷಯವಾಗಿದೆ. 2003 ರಲ್ಲಿ, ಸೆಕ್ಷನ್ 80 ಸಿ ಅಡಿಯಲ್ಲಿ ಗರಿಷ್ಠ ಕಡಿತವು 1 ಲಕ್ಷ ರೂಪಾಯಿ ಇದ್ದದ್ದನ್ನು 2014ರಲ್ಲಿ 1.5 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು, ಆದರೆ ಈ ಹೆಚ್ಚಳವು ಹಣದುಬ್ಬರಕ್ಕೆ ಅನುಗುಣವಾಗಿ ಸಾಕಾಗಲಿಲ್ಲ.

ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ತೆರಿಗೆದಾರರ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆಯೊಂದಿಗೆ, ಸೆಕ್ಷನ್ 80 ಸಿ ಮಿತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಮತ್ತು ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು ಅದನ್ನು 3.5 ಲಕ್ಷ ರೂಪಾಯಿಗೆ ಹೆಚ್ಚಿಸಬಹುದು. ಸೆಕ್ಷನ್ 80 ಸಿ ವಿನಾಯಿತಿ ಮಿತಿ 1.5 ಲಕ್ಷ ರೂಪಾಯಿಯಲ್ಲಿ ಪಿಪಿಎಫ್‌, ಇಎಲ್‌ಎಸ್‌ಎಸ್‌, ಜೀವ ವಿಮೆ ಪ್ರೀಮಿಯಂ ಹೂಡಿಕೆ ಮುಂತಾದವಷ್ಟೇ ಇರಲಿ. ಗೃಹ ಸಾಲದ ಬಡ್ಡಿ ಕಡಿತಗಳನ್ನು ಸೆಕ್ಷನ್ 80 ಸಿ ಅಡಿಯಲ್ಲಿ ಸಂಯೋಜಿಸಬಾರದು ಎಂದು ಬಲವಂತ ಜೈನ್ ಹೇಳಿದ್ದಾರೆ.

ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಇನ್ನಷ್ಟು ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಗಮನಿಸಿ: ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆಯಾ ವ್ಯಕ್ತಿಗಳ ವ್ಯಕ್ತಿಗತ ಅಭಿಪ್ರಾಯವಾಗಿದ್ದು, ಅದನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅವರ ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.