Budget 2025: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025ರ ಕೇಂದ್ರ ಬಜೆಟ್ ಬಹಳ ಮುಖ್ಯ ಎಂದು ಹೇಳೋದಕ್ಕೆ 5 ಕಾರಣ
Budget 2025: ಎಲ್ಲರ ಗಮನವೂ ಈಗ ಕೇಂದ್ರ ಬಜೆಟ್ 2025ರ ಮೇಲೆ ನೆಟ್ಟಿದೆ. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಬಜೆಟ್ ಇದಾಗಿದ್ದು, ಬಹುಮತದ ಕೊರತೆಯಿಂದ ಅಸ್ಥಿರ ಜಾಗತಿಕ ಸನ್ನಿವೇಶದ ತನಕ ಹಲವು ಸವಾಲುಗಳಿವೆ. ಆದ್ದರಿಂದ ಈ ಸಲ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025ರ ಕೇಂದ್ರ ಬಜೆಟ್ ಬಹಳ ಮುಖ್ಯ ಎಂದು ಹೇಳೋದಕ್ಕೆ 5 ಕಾರಣಗಳಿವು.

Budget 2025: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ 1) ಪೂರ್ವಾಹ್ನ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 -26 ಅನ್ನು ಮಂಡಿಸಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಮಂಡಿಸುತ್ತಿರುವ 8ನೇ ಬಜೆಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರದ ಮೊದಲ ಪೂರ್ಣ ಬಜೆಟ್ ಕೂಡ ಹೌದು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯದೇ ಇದ್ದರೂ, ಎನ್‌ಡಿಎ ಮೈತ್ರಿಗೆ ಬಹುಮತ ಸಿಕ್ಕಿದ್ದು, ಈ ಮೈತ್ರಿ ಸರ್ಕಾರದ ಮೊದಲ ಬಜೆಟ್ 2024ರ ಜುಲೈ 23 ರಂದು ಮಂಡನೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಬಜೆಟ್ ಇದಾಗಿರುವ ಕಾರಣ ಬಹಳ ಪ್ರಾಮುಖ್ಯತೆ ಇದೆ. ಇದಕ್ಕೆ 5 ಕಾರಣಗಳು-
2025ರ ಕೇಂದ್ರ ಬಜೆಟ್ ಬಹಳ ಮುಖ್ಯ ಎಂದು ಹೇಳೋದಕ್ಕೆ 5 ಕಾರಣ
1) ಬಿಜೆಪಿಗೆ ಬಹುಮತ ಇಲ್ಲದೇ ಮಂಡನೆಯಾಗುತ್ತಿರುವ ಬಜೆಟ್: ಕೇಂದ್ರ ಬಜೆಟ್ 2025 ಎಂಬುದು ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲದೇ ಮಂಡನೆಯಾಗುತ್ತಿರುವ ಮೊದಲ ಪೂರ್ಣ ಬಜೆಟ್. 2024ರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. 240 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿತ್ತು. ಹಿಂದಿನ ಎರಡು ಚುನಾವಣೆಗಳಲ್ಲೂ 2014 ಮತ್ತು 2019ರಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇತ್ತು. ಹೀಗಾಗಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್ ಎಂಬ ಕಾರಣಕ್ಕೆ ಪ್ರಾಮುಖ್ಯವೆನಿಸಿದೆ.
2) ಮೋದಿ 3.0 ಯೂ ಟರ್ನ್: ಕೇಂದ್ರ ಸರ್ಕಾರವು 2024ರ ಜುಲೈ 23ರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಪಟ್ಟಿಯಿಲ್ಲದ ಸ್ವತ್ತುಗಳ ಮಾರಾಟದಿಂದ ದೀರ್ಘಕಾಲೀನ ಬಂಡವಾಳ ಲಾಭಗಳ (ಎಲ್‌ಟಿಸಿಜಿ) ತೆರಿಗೆಯ ಮೇಲಿನ ಸೂಚ್ಯಂಕದ ಪ್ರಯೋಜನಗಳನ್ನು ತೆಗೆದುಹಾಕುವ ಪ್ರಸ್ತಾವನೆಯನ್ನು ಆಗಸ್ಟ್ 6 ರಂದು ಹಿಂಪಡೆಯಿತು. ಕೇಂದ್ರ ಸರ್ಕಾರ ರೋಲ್ ಬ್ಯಾಕ್ ಮೋಡ್‌ಗೆ ಬಂದಿದೆ ಎಂದು ಪ್ರತಿಪಕ್ಷಗಳು ಟೀಕಿಸಿದವು. ಇದೇ ರೀತಿ ಇಂಡೆಕ್ಸೇಷನ್ ಸಂಬಂಧಿತ ಬಜೆಟ್ ಹೇಳಿಕೆಯನ್ನೂ ವಾಪಸ್ ಪಡೆದಿದೆ.
ನಿರ್ಮಲಾ ಸೀತಾರಾಮನ್ ತನ್ನ ಬಜೆಟ್‌ನಲ್ಲಿ 2024-25ರ ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್ ಮತ್ತು ಎಲ್‌ಟಿಸಿಜಿ ತೆರಿಗೆಯ (ಶೇಕಡ 20 ರಿಂದ ಶೇಕಡ 12.5ಕ್ಕೆ) ಸೂಚ್ಯಂಕದ ಪ್ರಯೋಜನಗಳನ್ನು ಹಿಂಪಡೆಯುವುದಾಗಿ ಘೋಷಿಸಿತು. ಮನೆ ಖರೀದಿದಾರರು ಮತ್ತು ರಿಯಲ್ ಎಸ್ಟೇಟ್ ಒತ್ತಡದ ಕಾರಣ ಸರ್ಕಾರ ಈ ನಿಲುವಿಗೆ ಬಂತು ಎಂದು ಹೇಳಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಎಲ್‌ಟಿಸಿಜಿ ತೆರಿಗೆ ಯಾವುದೇ ಇಂಡೆಕ್ಸೇಷನ್ ಪ್ರಯೋಜನವಿಲ್ಲದೇ ಶೇಕಡ 12.5 ಆಗಿ ಉಳಿದುಕೊಂಡಿದೆ. ಇದು 2024ರ ಜುಲೈ 23ರ ಮೊದಲು ಖರೀದಿಸಿದ ಆಸ್ತಿಗಳಿಗೆ ಅನ್ವಯ.
3) ಮಹಾಕುಂಭ ಕಾಲ್ತುಳಿತದ ಬಳಿಕದ ಮೊದಲ ಬಜೆಟ್: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನವರಿ 29ರಂದು ಕಾಲ್ತುಳಿತ ಉಂಟಾಗಿದ್ದು ಕನಿಷ್ಠ 30 ಜನ ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದರು. ಬಿಜೆಪಿ ನೇತೃತ್ವದ ಸರ್ಕಾರವು ಮಹಾಕುಂಭ ಮೇಳವನ್ನು ರಾಜಕೀಯಕ್ಕೆ ಬಳಸಿದೆ. ಸಾಮಾನ್ಯರ ತೆರಿಗೆ ಹಣದಲ್ಲಿ ವಿಐಪಿ ಸಂಸ್ಕೃತಿಯನ್ನು ಉತ್ತೇಜಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
4) ಜಾಗತಿಕ ಅಸ್ಥಿರ ಸನ್ನಿವೇಶ: 2014 ರಲ್ಲಿ, ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯನ್ನು ಗಮನಿಸಿದರೆ ಈಗ ನಿರೀಕ್ಷೆಗಳು ಕಡಿಮೆಯಾಗಿವೆ. 2019 ರಲ್ಲಿ, ಬಜೆಟ್ ಭರವಸೆಯೊಂದಿಗೆ ಬಂದಿತು. ಆದರೆ, ಅಸ್ಥಿರ ಮಾರುಕಟ್ಟೆಯ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಆಡಳಿತ ಬದಲಾವಣೆಯಾಗಿದ್ದು, ಡೊನಾಲ್ಡ್ ಟ್ರಂಪ್ ಜತೆಗಿನ ಸಂಬಂಧ, ಅನಿಶ್ಚಿತ ಜಾಗತಿಕ ಸನ್ನಿವೇಶದಲ್ಲಿ ರೂಪಾಯಿ ಅಪಮೌಲ್ಯೀಕರಣ ಮತ್ತು ಅನಿಶ್ಚಿತ ಜಾಗತಿಕ ಸನ್ನಿವೇಶ ಭಾರತದ ಅರ್ಥ ವ್ಯವಸ್ಥೆಗೆ ಸವಾಲೊಡ್ಡುವಂಥವು. ಭಾರತ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಈಗಾಗಲೇ ಬೆದರಿಕೆ ಹಾಕಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಬಜೆಟ್ 2025 ಮಂಡನೆಯಾಗುತ್ತಿದೆ.
5) ಪ್ರತಿಪಕ್ಷಗಳ ಬಲವೃದ್ಧಿ: 2014 ಮತ್ತು 2019ರ ಸನ್ನಿವೇಶಕ್ಕೆ ಹೋಲಿಸಿದರೆ ಕಾಲಾನುಕ್ರಮದಲ್ಲಿ ಪ್ರತಿಪಕ್ಷಗಳ ಬಲವರ್ಧನೆಯಾಗಿದೆ. ಕಾಂಗ್ರೆಸ್ ಪಕ್ಷ ಬಲವರ್ಧಿಸಿಕೊಂಡಿದ್ದು, ಮಿತ್ರ ಪಕ್ಷಗಳ ಜತೆಗೆ ಮೈತ್ರಿ ಕಾಪಾಡಿಕೊಂಡು ಮುನ್ನಡೆಯುತ್ತಿದೆ. ಬಿಜೆಪಿ ಸರ್ಕಾರ ವಿರುದ್ಧ ಸಂಘಟಿತ ರಾಜಕೀಯ ದಾಳಿಗಳನ್ನು ನಡೆಸುತ್ತಿರುವ ಕಾಂಗ್ರೆಸ್, ಆಡಳಿತ ನೀತಿಯನ್ನು ಟೀಕಿಸತೊಡಗಿದೆ. ರಾಹುಲ್ ಗಾಂಧಿ ನೇತೃತ್ವದ ಪ್ರತಿಪಕ್ಷಗಳು ಮೋದಿ ಸರ್ಕಾರ ಯಾವತ್ತಿದ್ದರೂ ಗೌತಮ್ ಅದಾನಿ ಪರ ಎಂಬ ಆರೋಪವನ್ನು ಮಾಡುತ್ತಲೇ ಬಂದಿವೆ. ಇದಲ್ಲದೇ, ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಕಡೆಗಣಿಸಿದ, ಸಂವಿಧಾನವನ್ನು ಕಡೆಗಣಿಸಿದ ಕುರಿತು ಸರ್ಕಾರವನ್ನು, ಸಚಿವರನ್ನು ಬಿಜೆಪಿ ನಾಯಕರ ಮೇಲೆ ಟೀಕಾ ಪ್ರಹಾರ ಮಾಡುತ್ತಲೇ ಬಂದಿದೆ. ಈ ಬಾರಿ ಕೇಂದ್ರ ಬಜೆಟ್ ಅಧಿವೇಶನದಲ್ಲೂ ಇದು ಪ್ರತಿಧ್ವನಿಸುವ ಸಾಧ್ಯತೆ ಇದೆ.

ವಿಭಾಗ