ಕೇಂದ್ರ ಬಜೆಟ್‌ 2024: ಫೆಬ್ರವರಿ 1ರ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರ ಟಾಪ್‌ 10 ನಿರೀಕ್ಷೆಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್‌ 2024: ಫೆಬ್ರವರಿ 1ರ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರ ಟಾಪ್‌ 10 ನಿರೀಕ್ಷೆಗಳು

ಕೇಂದ್ರ ಬಜೆಟ್‌ 2024: ಫೆಬ್ರವರಿ 1ರ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರ ಟಾಪ್‌ 10 ನಿರೀಕ್ಷೆಗಳು

Union budget 2025 expectations: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸುವ ಕೇಂದ್ರ ಬಜೆಟ್‌ ಕುರಿತು ಜನರಲ್ಲಿ ಸಾಕಷ್ಟು ನಿರೀಕ್ಷೆಗಳು ಇವೆ. ವಿಶೇಷವಾಗಿ ಆದಾಯ ತೆರಿಗೆ ಪಾವತಿದಾರರು ಯಾವೆಲ್ಲ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂಬ ವಿವರ ಪಡೆಯೋಣ.

ಕೇಂದ್ರ ಬಜೆಟ್‌ 2024: ಆದಾಯ ತೆರಿಗೆ ಪಾವತಿದಾರರ ಟಾಪ್‌ 10 ನಿರೀಕ್ಷೆಗಳು
ಕೇಂದ್ರ ಬಜೆಟ್‌ 2024: ಆದಾಯ ತೆರಿಗೆ ಪಾವತಿದಾರರ ಟಾಪ್‌ 10 ನಿರೀಕ್ಷೆಗಳು

ನಿರ್ಮಲಾ ಸೀತಾರಾಮನ್‌ ಇದೇ ಫೆಬ್ರವರಿ 1ರಂದು ಮಂಡಿಸಲಿರುವ ಬಜೆಟ್‌ ಕುರಿತಂತೆ ಜನ ಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳು ಇವೆ. ವೇತನ ಪಡೆಯುವ ತೆರಿಗೆ ಪಾವತಿದಾರರು ಕೂಡ ಬಜೆಟ್‌ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವೇತನ ಪಡೆಯುವ ತೆರಿಗೆ ಪಾವತಿದಾರರು ಕೇಂದ್ರ ಸರಕಾರಕ್ಕೆ ನೀಡುವ ತೆರಿಗೆ ಕೊಡುಗೆಗಳು ತುಸು ಹೆಚ್ಚೇ ಎನ್ನಬಹುದು. ಭಾರತದಲ್ಲಿ ಅತ್ಯುತ್ತಮ ಗಳಿಕೆ ಮಾಡುವ ಸಣ್ಣ ವ್ಯಾಪಾರಿಗಳು ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ಬೀದಿಬದಿಯಲ್ಲಿ ಪಾನಿಪುರಿ, ಬೇಲ್‌ಪುರಿ ಮಾರಾಟ ಮಾಡುವವರ ಆದಾಯ ವರ್ಷಕ್ಕೆ ಹತ್ತು ಹಲವು ಲಕ್ಷ ರೂಪಾಯಿ ಇರುತ್ತದೆ. ಆದರೆ, ಇವರು ಜಿಎಸ್‌ಟಿ ನೋಂದಣಿ ಮಾಡದೆ ಇರಬಹುದು. ಯಾವುದೇ ತೆರಿಗೆ ಪಾವತಿಸದೆ ತಮ್ಮ ಸಂಪತ್ತನ್ನು ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತ ಹೋಗಬಹುದು. ಆದರೆ, ವೇತನ ಪಡೆಯುವ ಉದ್ಯೋಗಿಗಳು ತಮ್ಮ ವೇತನ ತುಸು ತುಸು ಹೆಚ್ಚಾದಂತೆ ಸರಕಾರಕ್ಕೆ ಆದಾಯ ತೆರಿಗೆ ಹೆಚ್ಚು ಹೆಚ್ಚು ಕಟ್ಟುತ್ತಾ ಹೋಗುತ್ತಾರೆ. ಹದಿನೈದು ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುವವರು ಮೂರು ಲಕ್ಷ ರೂಪಾಯಿವರೆಗೆ ತೆರಿಗೆಯನ್ನು ಸರಕಾರಕ್ಕೆ ನೀಡಬೇಕು. ಈ ಸಂದರ್ಭದಲ್ಲಿ ಇವರ ನಿಜವಾದ ವೇತನ 12 ಲಕ್ಷ ರೂಪಾಯಿ ಆಗುತ್ತದೆ. ಉಳಿದ ಈ ಹಣವನ್ನು ವೆಚ್ಚ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಆ ತೆರಿಗೆ ಈ ತೆರಿಗೆ ಎಂದು ತೆರಿಗೆ ಪಾವತಿಸುತ್ತಲೇ ಖರ್ಚು ಮಾಡಬೇಕು. ಇದೇ ಕಾರಣಕ್ಕೆ ವೇತನ ಪಡೆಯುವ ತೆರಿಗೆ ಪಾವತಿದಾರರು, ಆದಾಯ ತೆರಿಗೆ ಪಾವತಿದಾರರು ಈ ಬಾರಿಯ ಕೇಂದ್ರ ಬಜೆಟ್‌ ಮೇಲೆ ತಮಗೆ ಏನಾದರೂ ಶುಭ ಸುದ್ದಿ ಇರಬಹುದು ಎಂದು ಕಾಯುತ್ತಿದ್ದಾರೆ. ಆದಾಯ ತೆರಿಗೆ ಪಾವತಿದಾರರ ಪ್ರಮುಖ ಹತ್ತು ನಿರೀಕ್ಷೆಗಳು ಈ ಮುಂದಿನಂತೆ ಇವೆ.

  1. ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ತೆರಿಗೆಗಳು: ಈಗ 15 ಲಕ್ಷ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವವರು ಶೇಕಡ 30ರಷ್ಟು ಆದಾಯ ತೆರಿಗೆ ಪಾವತಿಸಬೇಕು. ಈ ಕೇಂದ್ರ ಬಜೆಟ್‌ನಲ್ಲಿ ಹದಿನೈದು ಲಕ್ಷಕ್ಕೆ ಬದಲು 20 ಲಕ್ಷ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವವರಿಗೆ ಶೇಕಡ 30 ತೆರಿಗೆ ಎಂದು ಬದಲಾಯಿಸುವುದನ್ನು ವೇತನ ಪಡೆಯುವ ತೆರಿಗೆ ಪಾವತಿದಾರರು ನಿರೀಕ್ಷಿಸುತ್ತಿದ್ದಾರೆ.
  2. ಕಳೆದ ಬಜೆಟ್‌ನಲ್ಲಿ ಸ್ಟ್ರಾಂಡರ್ಡ್‌ ಡಿಡಕ್ಷನ್‌ ಅನ್ನು 50 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು. ಈ ಬಜೆಟ್‌ನಲ್ಲಿ ಇದನ್ನು 75 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಹೆಚ್ಚಿಸಿದರೆ ಹೊಸ ತೆರಿಗೆ ಪದ್ಧತಿ ಅನುಸರಿಸುವವರಿಗೆ ಹೆಚ್ಚು ಪ್ರಯೋಜನವಾಗಲಿದೆ.
  3. ಸರಕಾರ ಈಗ ಹೊಸ ತೆರಿಗೆ ಪದ್ಧತಿಗೆ ಉತ್ತೇಜನ ನೀಡುತ್ತಿದೆ. ಭವಿಷ್ಯದಲ್ಲಿ ಹಳೆ ತೆರಿಗೆ ಪದ್ಧತಿ ನೇಪತ್ಯಕ್ಕೆ ಸರಿಯಬಹುದು. ಈಗ ಹೊಸ ತೆರಿಗೆ ಪದ್ಧತಿಯಲ್ಲಿ ಬೇಸಿಕ್‌ ಎಕ್ಸಿಂಪ್ಷನ್‌ ಲಿಮಿಟ್‌ ಅಂದರೆ ಮೂಲ ವಿನಾಯಿತಿ ಮಿತಿ 3 ಲಕ್ಷ ರೂಪಾಯಿ ಇದೆ. ಇದನ್ನು ಈ ಬಾರಿಯ ಬಜೆಟ್‌ನಲ್ಲಿ 5 ಲಕ್ಷ ರೂಪಾಯಿಗೆ ಹೆಚ್ಚಿಸಬೇಕೆಂಬ ನಿರೀಕ್ಷೆ ವೇತನ ಪಡೆಯುವ ಆದಾಯ ತೆರಿಗೆ ಪಾವತಿದಾರರದ್ದು.
  4. ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಪಾವತಿದಾರರು ನಿರೀಕ್ಷಿಸುವ ಇನ್ನೊಂದು ವಿಷಯ income tax rebateಗೆ ಸಂಬಂಧಪಟ್ಟದ್ದು ಈಗ ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷ ರೂಪಾಯಿವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಆದಾಯ 7 ಲಕ್ಷ ರೂಪಾಯಿಗಿಂತ ಹೆಚ್ಚಾದರೆ ತೆರಿಗೆ ಪಾವತಿಸಬೇಕು. ಈ ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷ ರೂಪಾಯಿಗೆ ಈ ಬಜೆಟ್‌ನಲ್ಲಿ ಹೆಚ್ಚಿಸಬೇಕೆಂಬ ನಿರೀಕ್ಷೆಯಲ್ಲಿ ಆದಾಯ ತೆರಿಗೆ ಪಾವತಿದಾರರು ಇದ್ದಾರೆ.
  5. ಹಳೆಯ ತೆರಿಗೆ ಪದ್ಧತಿಯಲ್ಲಿ ಸೆಕ್ಷನ್‌ 80 ಸಿಯಡಿಯಲ್ಲಿ ಆದಾಯ ತೆರಿಗೆ ಕಡಿತ ಈಗ 1.5 ಲಕ್ಷ ರೂಪಾಯಿ ಇದೆ. ಇದನ್ನು 2014ರ ಬಳಿಕ ಪರಿಷ್ಕರಿಸಲಾಗಿಲ್ಲ. ಇದನ್ನು ಪರಿಷ್ಕರಿಸಬೇಕು. ಜತೆಗೆ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದವರಿಗೆ ಇಂತಹ ಆಯ್ಕೆ ಈಗ ಇಲ್ಲ. ಈ ವರ್ಷ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲೂ ಸೆಕ್ಷನ್‌ 80ಸಿ ಆದಾಯ ತೆರಿಗೆ ಕಡಿತ ನೀಡಬೇಕೆಂಬ ಕೋರಿಕೆ, ನಿರೀಕ್ಷೆ ಆದಾಯ ತೆರಿಗೆ ಪಾವತಿದಾರರಿಗೆ ಇದೆ.
  6. ನ್ಯಾಷನಲ್‌ ಪೆನ್ಷನ್‌ ಸ್ಕೀಮ್‌ (ರಾಷ್ಟ್ರೀಯ ಪಿಂಚಣಿ ಯೋಜನೆ)ಗೆ ಎಲ್ಲರೂ ಸೇರಬೇಕೆಂದು ಪ್ರೋತ್ಸಾಹಿಸಲಾಗುತ್ತಿದೆ. ಹಳೆ ತೆರಿಗೆ ಪದ್ಧತಿಯಲ್ಲಿ ಎನ್‌ಪಿಎಸ್‌ಗೆ 50 ಸಾವಿರ ರೂಪಾಯಿ ಹೆಚ್ಚುವರಿ ತೆರಿಗೆ ಪ್ರಯೋಜನ ಇದೆ. ಹೊಸ ತೆರಿಗೆ ಪದ್ಧತಿಗೂ ಈ ಹೆಚ್ಚುವರಿ ಪ್ರಯೋಜನ ನೀಡಬೇಕು.
  7. ಒಂದಿಷ್ಟು ಎಚ್‌ಆರ್‌ಎ ಪ್ರಯೋಜನಗಳನ್ನು ಆದಾಯ ತೆರಿಗೆ ಪಾವತಿದಾರರು ನಿರೀಕ್ಷಿಸುತ್ತಾರೆ. ಈಗ ಬೆಂಗಳೂರಿನಂತಹ ನಗರಗಳಲ್ಲಿ ಮನೆ ಬಾಡಿಗೆ ದರ ದುಬಾರಿಯಾಗಿದೆ. ಮನೆ ಬಾಡಿಗೆ ಭತ್ಯೆಯನ್ನು ಈಗಿನ ಶೇಕಡ 40ರಿಂದ ಶೇಕಡ 50ಕ್ಕೆ ಹೆಚ್ಚಿಸಬೇಕು.
  8. ಈಗ ಆರೋಗ್ಯ ಖರ್ಚು ವೆಚ್ಚಗಳು ಹೆಚ್ಚುತ್ತಿವೆ. ಆರೋಗ್ಯ ಪ್ರೀಮಿಯಂಗೆ 80 ಡಿ ವಿನಾಯಿತಿ ನೀಡಬೇಕೆಂಬ ನಿರೀಕ್ಷೆಯೂ ಆದಾಯ ತೆರಿಗೆ ಪಾವತಿದಾರರಲ್ಲಿ ಇದೆ.
  9. ಚಾರಿಟಿಗೆ ಉತ್ತೇಜನ ನೀಡಲು, ಬ್ಯಾಂಕ್‌ನಲ್ಲಿ ಹಣ ಉಳಿತಾಯ ಮಾಡಲು ಉತ್ತೇಜನ ನೀಡಲು ಸರಕಾರವು ಸೆಕ್ಷನ್‌ 80ಜಿ ಮತ್ತು ಸೆಕ್ಷನ್‌ 80ಟಿಟಿಎ ಪ್ರಯೋಜನಗಳನ್ನು ಹೊಸ ತೆರಿಗೆ ಪದ್ಧತಿಯಡಿ ನೀಡಬೇಕು.
  10. ಭಾರತದಲ್ಲಿ ರಿಯಲ್‌ ಎಸ್ಟೇಟ್‌ಗೆ ಉತ್ತೇಜನ ನೀಡಲು, ಮನೆ, ನಿವೇಶನ ಖರೀದಿಗೆ ಉತ್ತೇಜನ ನೀಡಲು ಸಾಕಷ್ಟು ಕೊಡುಗೆಗಳನ್ನು ಈ ಕೇಂದ್ರ ಬಜೆಟ್‌ನಲ್ಲಿ ಸರಕಾರ ನೀಡಬೇಕು. ಈಗ ವಸತಿ ಸ್ವತ್ತು ಖರೀದಿದಾರರಿಗೆ ವರ್ಷಕ್ಕೆ 2 ಲಕ್ಷ ರೂಪಾಯಿ ಕ್ಲೇಮ್‌ ಮಾಡಲು ಅವಕಾಶವಿದೆ. ಇದನ್ನು ಮೂರು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂಬ ನಿರೀಕ್ಷೆ ಇದೆ.

ಇದನ್ನೂ ಓದಿ: Budget 2025 Expectations: ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು, ಗಮನಸೆಳೆದ 7 ಅಂಶಗಳಿವು

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.