Budget 2025 Expectations: ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು, ಗಮನಸೆಳೆದ 7 ಅಂಶಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2025 Expectations: ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು, ಗಮನಸೆಳೆದ 7 ಅಂಶಗಳಿವು

Budget 2025 Expectations: ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು, ಗಮನಸೆಳೆದ 7 ಅಂಶಗಳಿವು

Union Budget 2025 Expectations: ಕೇಂದ್ರ ಬಜೆಟ್ 2025 ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಸಲ ಬಜೆಟ್ ಮಂಡಿಸುವುದಕ್ಕೆ ಸಿದ್ಧರಾಗುತ್ತಿದ್ದಾರೆ. ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗತೊಡಗಿವೆ. ಗಮನಸೆಳೆದ 7 ನಿರೀಕ್ಷೆಗಳ ಕಡೆಗೊಂದು ನೋಟ ಇಲ್ಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಕೇಂದ್ರ ಬಜೆಟ್ 2025ರಲ್ಲಿ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿವೆ.

Union Budget 2025 Expectations: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 8ನೇ ಬಜೆಟ್‌ ಮಂಡನೆಗೆ ಸಜ್ಜಾಗುತ್ತಿದ್ದಾರೆ. ಹಣದುಬ್ಬರದ ಪರಿಣಾಮ ಜನಜೀವನದ ಮೇಲಾಗಿದ್ದು, ಆಹಾರ ಪದಾರ್ಥ, ವಿಶೇಷವಾಗಿ ತರಕಾರಿ ಸೇರಿ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಜನರನ್ನು ಕಂಗಾಲು ಮಾಡಿದೆ. ಹೀಗಾಗಿ ಜನಸಾಮಾನ್ಯರು, ಕೇಂದ್ರ ಬಜೆಟ್‌ ಮೂಲಕ ಇದಕ್ಕೆ ಪರಿಹಾರವೇನಾದರೂ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ. ಹಣದುಬ್ಬರ ಪ್ರಮಾಣಕ್ಕೆ ಸರಿಯಾಗಿ ವೇತನ ಹೆಚ್ಚಳವಾಗುತ್ತಿಲ್ಲ. ವೇತನ ಹೆಚ್ಚಳ ಪ್ರಮಾಣಕ್ಕೂ ಹಣುಬ್ಬರ ಪ್ರಮಾಣಕ್ಕೂ ಹೊಂದಿಕೆ ಇಲ್ಲದ ಕಾರಣ ಸೀಮಿತ ಆದಾಯ ಹೊಂದಿರುವ ಕುಟುಂಬಗಳು ಬಹಳ ಸಂಕಷ್ಟ ಎದುರಿಸುತ್ತಿವೆ. ಇನ್ನೊಂದೆಡೆ, ಉದ್ಯೋಗಾವಕಾಶಗಳು ಕಡಿಮೆಯಾಗಿರುವುದು ಕೂಡ ಜನಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜನರು ಖರ್ಚು ಮಾಡುವುದನ್ನು ಕಡಿಮೆ ಮಾಡಿದ್ದಾರೆ, ಕಾರ್ಪೊರೇಟ್ ವಲಯದ ಗಳಿಕೆಯ ಮೇಲೂ ಇದು ಪರಿಣಾಮ ಬೀರಿದೆ. ಆದ್ದರಿಂದ ಕೇಂದ್ರ ಬಜೆಟ್ ಮೂಲಕ ಜನಸಾಮಾನ್ಯರು ಈ ಬಾರಿ ನಿರೀಕ್ಷಿಸುವ ಅಂಶಗಳಿವು.

ಕೇಂದ್ರ ಬಜೆಟ್ 2025; ಜನಸಾಮಾನ್ಯರ 7 ಸಾಮಾನ್ಯ ನಿರೀಕ್ಷೆಗಳಿವು

1) ತೆರಿಗೆ ವಿನಾಯಿತಿ: ಕೇಂದ್ರ ಬಜೆಟ್ ಅಂತ ಬಂದಾಗ ಜನ ಸಾಮಾನ್ಯರು ಮೊದಲು ನಿರೀಕ್ಷಿಸುವುದು ತೆರಿಗೆ ವಿನಾಯಿತಿ. ಆದಾಯ ತೆರಿಗೆ ಸ್ಲ್ಯಾಬ್‌ಗಳ ಮಿತಿಯಲ್ಲಿ ಏರಿಕೆ ಮತ್ತು ವಿನಾಯಿತಿಗಳನ್ನು ಜನ ನಿರೀಕ್ಷಿಸುತ್ತಿದ್ದಾರೆ. ಇದು ಈಡೇರಿದರೆ, ಜನರ ಬಳಿ ಖರ್ಚು ಮಾಡುವುದಕ್ಕೆ ಹಣ ಓಡಾಡುತ್ತೆ. ಇದಲ್ಲದೇ ತೆರಿಗೆ ಸಲ್ಲಿಕೆಗೆ ಪ್ರಕ್ರಿಯೆ ಇನ್ನಷ್ಟು ಸರಳವಾಗಬೇಕು, ಸಕಾಲಿಕ, ನಿಖರ ಫೈಲಿಂಗ್ ಮಾಡುವುದಕ್ಕೆ ಪ್ರೋತ್ಸಾಹ ಸಿಗಬೇಕು ಎಂಬ ನಿರೀಕ್ಷೆಯೂ ಇದೆ.

2) ಹಣದುಬ್ಬರ ನಿಯಂತ್ರಣ: ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ನಿರಂತರ ಹೆಚ್ಚಳವು ಜನಸಾಮಾನ್ಯರ ಪಾಲಿಗೆ ಕಳವಳಕಾರಿಯಾಗಿದೆ. ಮುಖ್ಯವಾಗಿ ಅಗತ್ಯ ಉತ್ಪನ್ನಗಳ ಮೇಲೆ ಹಣದುಬ್ಬರವನ್ನು ನಿಯಂತ್ರಿಸುವ ಕ್ರಮಗಳನ್ನು ನಿರೀಕ್ಷಿಸಲಾಗಿದೆ. ಸಾಮಾನ್ಯ ಜನರು ದೈನಂದಿನ ಜೀವನ ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಕೈಗೆಟುಕುವ ನೀತಿಗಳನ್ನು ನಿರೀಕ್ಷಿಸುತ್ತಿದ್ದಾರೆ.

3) ಸ್ವಂತ ಮನೆ ಕನಸು ನನಸು ಮಾಡುವುದು: ಜನಸಾಮಾನ್ಯರು ಸ್ವಂತ ಮನೆ ಹೊಂದುವ ಕನಸು ನನಸು ಮಾಡುವುದಕ್ಕೆ ಸಾಧ್ಯವಾಗದಂತೆ ಸೈಟು, ಮನೆ ನಿರ್ಮಾಣ ವೆಚ್ಚ ಏರಿಕೆಯಾಗುತ್ತಲೇ ಇದೆ. ಹಣದುಬ್ಬದರ ಪರಿಣಾಮ ಇದರ ಮೇಲೂ ಆಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಯಲ್ಲಿದ್ದರೂ, ಎಲ್ಲರಿಗೂ ಮನೆ ಎಂಬ ಘೋಷಣೆ ಇನ್ನೂ ನನಸಾಗಿಲ್ಲ. ಹೀಗಾಗಿ, ಕಡಿಮೆ ಬಡ್ಡಿದರದ ಮನೆ ಸಾಲ ಸಿಗುವಂತೆ, ತೆರಿಗೆ ವಿನಾಯಿತಿಗೆ ಯೋಜನೆ ಘೋಷಿಸುವುದನ್ನು, ಬಜೆಟ್ ಸ್ನೇಹಿ ಮನೆ ನಿರ್ಮಿಸಿಕೊಡುವುದಕ್ಕೆ ಉಪಕ್ರಮಗಳನ್ನೂ ಜನಸಾಮಾನ್ಯರು ನಿರೀಕ್ಷಿಸುತ್ತಿದ್ದಾರೆ.

4) ಎಲ್ಲರಿಗೂ ಆರೋಗ್ಯ ಸೇವೆ: ಕೋವಿಡ್ ಸಂಕಷ್ಟದ ಬಳಿಕ ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ಕೈಗೆಟುಕದ ವಿಚಾರವಾಗಿ ಉಳಿದಿದೆ. ಆರೋಗ್ಯ ಮೂಲಸೌಕರ್ಯಕ್ಕೆ ಸರ್ಕಾರ ಉತ್ತೇಜನ ನೀಡಿದೆ. ಬಡತನ ರೇಖೆಗಿಂತ ಕೆಳಗಿನವರು ಮತ್ತು ವಯೋವೃದ್ಧರಿಗೆ 5 ಲಕ್ಷ ರೂಪಾಯಿ ತನಕದ ಚಿಕಿತ್ಸೆ ಉಚಿತ ಮಾಡಿದ್ದರೂ, ಅದು ಈಗಿನ ಸನ್ನಿವೇಶದಲ್ಲಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹೀಗಾಗಿ ಹೆಚ್ಚಿನದನ್ನು ಜನಸಾಮಾನ್ಯರು ನಿರೀಕ್ಷಿಸುತ್ತಿದ್ದಾರೆ.

5) ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ: ದೇಶದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದು ಅಗತ್ಯ. ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ವಿದ್ಯಾರ್ಥಿವೇತನ ಅನುದಾನ ಮತ್ತು ಹಣವನ್ನು ಸಾಮಾನ್ಯ ಮನುಷ್ಯ ನಿರೀಕ್ಷಿಸುತ್ತಾನೆ. ಮಕ್ಕಳ ಶಿಕ್ಷಣ ಶುಲ್ಕವೇ ದೊಡ್ಡ ಹೊರೆಯಾಗಿ ಕುಳಿತಿರುವಾಗ ಅವರಿಗೆ ಸರಿಯಾದ ಶಿಕ್ಷಣ ನೀಡುವುದು ಹೇಗೆ ಎಂಬುದು ಜನಸಾಮಾನ್ಯರ ಎದುರು ಇರುವ ಸವಾಲು. ಸರಿಯಾದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗದೆ ಇದ್ದರೆ ದೇಶದ ಬೆಳವಣಿಗೆಯೂ ಕಷ್ಟ ಸಾಧ್ಯ. ಹೀಗಾಗಿ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಸೂಕ್ತ ಉಪಕ್ರಮ, ಯೋಜನೆಗಳನ್ನು ಜನ ಸಾಮಾನ್ಯರು ನಿರೀಕ್ಷಿಸುತ್ತಿದ್ದಾರೆ.

6) ಮೂಲಸೌಕರ್ಯ ಅಭಿವೃದ್ಧಿ: ಸುಧಾರಿತ ಮೂಲಸೌಕರ್ಯವು ಜೀವನದ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಜನಸಾಮಾನ್ಯರು ರಸ್ತೆಗಳು, ಸಾರ್ವಜನಿಕ ಸಾರಿಗೆ ಮತ್ತು ಉಪಯುಕ್ತತೆಗಳ ಮೇಲೆ ಹೆಚ್ಚಿನ ವೆಚ್ಚವನ್ನು ನಿರೀಕ್ಷಿಸುತ್ತಾರೆ. ಉತ್ತಮ ಮೂಲಸೌಕರ್ಯಗಳು ದೈನಂದಿನ ಜೀವನವನ್ನು ಹೆಚ್ಚಿಸುವುದು ಮಾತ್ರವಲ್ಲ. ಇದು ಸಂಪರ್ಕ ಮತ್ತು ಪ್ರಯಾಣವನ್ನು ಸುಧಾರಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

7) ಸಾಮಾಜಿಕ ಭದ್ರತಾ ಯೋಜನೆ: ವಯಸ್ಸಾದ ನಿರುದ್ಯೋಗಿಗಳು ಮತ್ತು ಹಿಂದುಳಿದವರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸುವುದು ನ್ಯಾಯಯುತ ಸಮಾಜಕ್ಕೆ ಅತ್ಯಗತ್ಯ. ಅಸ್ತಿತ್ವದಲ್ಲಿರುವ ಸಾಮಾಜಿಕ ಭದ್ರತಾ ಕ್ರಮಗಳನ್ನು ವಿಸ್ತರಿಸುವುದರ ಕಡೆಗೆ ಗಮನಹರಿಸಬೇಕು. ಜನಸಂಖ್ಯೆಯ ಅತ್ಯಂತ ದುರ್ಬಲ ವರ್ಗಗಳನ್ನು ಗುರುತಿಸಿ ಅವರ ಅಗತ್ಯಗಳನ್ನು ಪೂರೈಸುವ ಕಡೆಗೂ ಸರ್ಕಾರ ಗಮನಹರಿಸಬೇಕು.

ಒಟ್ಟಿನಲ್ಲಿ ಈ ಸಲದ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಅಂಶಗಳನ್ನು ಪರಿಗಣಿಸಬೇಕು ಎಂಬ ಆಶಯ ಜನಸಾಮಾನ್ಯರದ್ದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.