Union Budget 2025 FAQs: ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ, ಕೇಂದ್ರ ಬಜೆಟ್‌ ಕುರಿತಾದ ಈ 10 ಅಂಶ ತಿಳ್ಕೊಂಡಿರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025 Faqs: ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ, ಕೇಂದ್ರ ಬಜೆಟ್‌ ಕುರಿತಾದ ಈ 10 ಅಂಶ ತಿಳ್ಕೊಂಡಿರಿ

Union Budget 2025 FAQs: ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ, ಕೇಂದ್ರ ಬಜೆಟ್‌ ಕುರಿತಾದ ಈ 10 ಅಂಶ ತಿಳ್ಕೊಂಡಿರಿ

Union Budget 2025 FAQs: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಮುಂಗಡ ಪತ್ರ ಮಂಡಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ದಿನಗಣನೆ ಶುರುವಾಗಿದೆ. ಸಾಮಾನ್ಯರಾಗಿ ನಾವು ಕೂಡ ಕೇಂದ್ರ ಬಜೆಟ್‌ ಬಗ್ಗೆ ತಿಳಿದಿರಬೇಕಾದ 10 ಅಂಶಗಳಿವು.

ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. (ಕಡತ ಚಿತ್ರ)
ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. (ಕಡತ ಚಿತ್ರ)

Union Budget 2025 FAQs: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಭಾಷಣಕ್ಕೆ ಸಿದ್ಧತೆ ನಡೆಸಿದ್ದು, ಕೇಂದ್ರ ಬಜೆಟ್‌ 2025 ಫೆ 1 ರಂದು ಮಂಡನೆಯಾಗಲಿದೆ. ಈಗಾಗಲೇ ಬಜೆಟ್‌ ಸಮಾಲೋಚನಾ ಸಭೆಗಳು ಕೂಡ ಪ್ರಗತಿಯಲ್ಲಿದೆ. ಕೇಂದ್ರ ಬಜೆಟ್ ಅಂದ್ರೆ ನಮಗೇನೂ ಅರ್ಥ ಆಗಲ್ಲ ಎಂಬುದು ಜನಸಾಮಾನ್ಯರು ವ್ಯಕ್ತಪಡಿಸುವ ಸಾಮಾನ್ಯ ಭಾವನೆ. ಆದರೆ, ಕೇಂದ್ರ ಬಜೆಟ್‌ನಲ್ಲಿ ಘೋ‍ಷಣೆಯಾಗುವ ಅನೇಕ ಅಂಶಗಳು ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವಂಥದ್ದು. ಈ ಹಂತದಲ್ಲಿ ಕೇಂದ್ರ ಬಜೆಟ್‌ಗೆ ಸಂಬಂಧಿಸಿ ಜನ ಸಾಮಾನ್ಯರಾಗಿ ನಾವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ.

ಕೇಂದ್ರ ಬಜೆಟ್ ಎಂದರೇನು, ಅದಕ್ಕೆ ಯಾಕೆ ಅಷ್ಟೊಂದು ಮಹತ್ವ?

ಕೇಂದ್ರ ಬಜೆಟ್ ಎನ್ನುವುದು ಮುಂಬರುವ ಆರ್ಥಿಕ ವರ್ಷಕ್ಕೆ ಸರ್ಕಾರವು ಪ್ರತಿ ವರ್ಷ ಫೆಬ್ರವರಿ 1ಕ್ಕೆ ಪ್ರಸ್ತುತಪಡಿಸುವ ಹಣಕಾಸು ಯೋಜನೆಯ ಮುನ್ನೋಟವಾಗಿದೆ. ಈ ಮುಂಗಡಪತ್ರ ದಾಖಲೆಗಳಲ್ಲಿ ಎರಡು ಮುಖ್ಯ ಭಾಗಗಳು ಮೊದಲನೇಯದು ಬಂಡವಾಳ ಬಜೆಟ್ ಮತ್ತು ಇನ್ನೊಂದು ಆದಾಯ ಬಜೆಟ್‌. ಇದು ಸರ್ಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಯೋಜಿತ ಚಿತ್ರಣವನ್ನು ದೇಶವಾಸಿಗಳಿಗೆ ಒದಗಿಸುತ್ತದೆ. ದೇಶದ ಆರ್ಥಿಕ ನೀತಿ, ತೆರಿಗೆ ಮತ್ತು ಸರ್ಕಾರದ ಖರ್ಚು ವೆಚ್ಚಗಳ ವಿವರವನ್ನು ಬಜೆಟ್‌ ಪ್ರಸ್ತುತಿ ಮಾಡುವ ಕಾರಣ ಅದರ ಪರಿಣಾಮ ಜನಸಾಮಾನ್ಯರ ಮೇಲೂ ಆಗುತ್ತದೆ. ಹಾಗಾಗಿ ಕೇಂದ್ರ ಬಜೆಟ್ ಮಹತ್ವದ್ದಾಗಿದೆ.

ಕೇಂದ್ರ ಬಜೆಟ್‌ 2025ರ ಬಗ್ಗೆ ತಿಳಿದುಕೊಂಡಿರಬೇಕಾದ 10 ಅಂಶಗಳು

1) ಕೇಂದ್ರ ಬಜೆಟ್ 2025 ಮಂಡನೆ ಯಾವಾಗ: ವಾಡಿಕೆಯಂತೆ ಹೇಳುವುದಾದರೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಸಂಸತ್‌ನಲ್ಲಿ ಕೇಂದ್ರ ಬಜೆಟ್ 2025 ಮಂಡಿಸಲಿದ್ದಾರೆ. ಈ ಬಗ್ಗೆ ಇನ್ನೂ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

2) ಆರ್ಥಿಕ ಸಮೀಕ್ಷೆ ಎಂದರೇನು: ಕೇಂದ್ರ ಬಜೆಟ್ 2025 ಮಂಡನೆಗೆ ಮೊದಲು ಸಂಸತ್ತಿನಲ್ಲಿ ವಾರ್ಷಿಕ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಇದನ್ನು ಬಜೆಟ್ ಮಂಡಿಸುವುದಕ್ಕೆ ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತದೆ. ಈ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಮತ್ತು ಅವರ ತಂಡ ಸಿದ್ದಪಡಿಸುತ್ತದೆ. ಇದು ಅರ್ಥ ವ್ಯವಸ್ಥೆಯ ಸ್ಥಿತಗತಿಯನ್ನು ಪ್ರಸ್ತುತಪಡಿಸುತ್ತದೆ. ಅದೇ ರೀತಿ ಬಜೆಟ್‌ ಹೇಗಿರಬಹುದು ಎಂಬುದರ ಮುನ್ನೋಟವನ್ನೂ ಒದಗಿಸುತ್ತದೆ.

3) ಕೇಂದ್ರ ಬಜೆಟ್ 2025 ಮಂಡಿಸುವುದು ಯಾರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಇದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಎಂಟನೇ ನೇರ ಬಜೆಟ್ ಆಗಿರಲಿದೆ. ಅದೇ ರೀತಿ ಮೋದಿ 3.0 ಸರ್ಕಾರದ ಎರಡನೇ ಬಜೆಟ್ ಆಗಿರಲಿದೆ. 2024ರಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಜುಲೈ 23 ರಂದು ಸರ್ಕಾರದ ಮೊದಲ ಬಜೆಟ್ ಮಂಡಿಸಲಾಯಿತು.

4) ಕೇಂದ್ರ ಬಜೆಟ್ ಅನ್ನು ಸಿದ್ಧಪಡಿಸುವುದು ಯಾರು: ಭಾರತದ ಹಣಕಾಸು ಸಚಿವಾಲಯವು ಕೇಂದ್ರ ಬಜೆಟ್ ಅನ್ನು ಸಿದ್ಧಪಡಿಸುತ್ತದೆ. ಹಣಕಾಸು ಸಚಿವರು ಕೇಂದ್ರ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯ ನೇತೃತ್ವ ವಹಿಸುತ್ತಾರೆ. ಕೇಂದ್ರ ಬಜೆಟ್ ಪ್ರತಿಯನ್ನು ಅಂತಿಮಗೊಳಿಸುವ ಮೊದಲು ವಿವಿಧ ಸಚಿವಾಲಯಗಳು, ಆರ್ಥಿಕ ತಜ್ಞರು ಮತ್ತು ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಮಾಡುತ್ತದೆ.

5) ಹಣಕಾಸು ಮಸೂದೆ ಎಂದರೇನು: ಹಣಕಾಸು ಮಸೂದೆಯು ಕೇಂದ್ರ ಬಜೆಟ್ ಮತ್ತು ಪೂರಕ ದಾಖಲೆಗಳನ್ನು ಒಳಗೊಂಡಿರುತ್ತದೆ. ಸಂವಿಧಾನದ 110 ನೇ ವಿಧಿಯಲ್ಲಿ ಈ ಬಗ್ಗೆ ವ್ಯಾಖ್ಯಾನವಿದ್ದು, ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಮಾಡಿದ ಪ್ರಸ್ತಾಪಗಳಿಗೆ ಶಾಸಕಾಂಗ ಬೆಂಬಲವನ್ನು ಪಡೆಯುವುದಕ್ಕಾಗಿ ಪ್ರತಿ ವರ್ಷ ಸಂಸತ್ತಿನಲ್ಲಿ ಮಂಡಿಸುವ ಮಸೂದೆ ಇದು ಎಂದು ವಿವರಿಸಲಾಗಿದೆ. ಸ್ಪೀಕರ್ ಒಮ್ಮೆ ಮಸೂದೆಯನ್ನು ಮನಿ ಬಿಲ್ ಎಂದು ಪ್ರಮಾಣೀಕರಿಸಿದ ನಂತರ, ಅದರ ಸ್ವರೂಪವನ್ನು ನ್ಯಾಯಾಲಯದಲ್ಲಿ, ಸಂಸತ್ತಿನ ಸದನಗಳಲ್ಲಿ ಅಥವಾ ರಾಷ್ಟ್ರಪತಿಗಳು ಸಹ ಪ್ರಶ್ನಿಸಲಾಗುವುದಿಲ್ಲ.

6) ಕೇಂದ್ರ ಬಜೆಟ್ 2025ರ ಆದ್ಯತಾ ವಲಯಗಳು: ಕೇಂದ್ರ ಬಜೆಟ್‌ 2025ರಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಮಹಿಳೆಯರು, ಮೂಲಸೌಕರ್ಯ, ರಕ್ಷಣಾ, ಡಿಜಿಟಲ್ ಎಕಾನಮಿ ಮುಂತಾದವು ಆದ್ಯತಾ ವಲಯದಲ್ಲಿ ಕಾಣಿಸಿಕೊಳ್ಳಬಹುದು. ಕೇಂದ್ರ ವಿತ್ತ ಸಚಿವರ ಭಾಷಣದಲ್ಲಿ ಸರ್ಕಾರದ ಆದ್ಯತಾ ವಲಯಗಳನ್ನು ಹೈಲೈಟ್ ಆಗುವುದು ವಾಡಿಕೆ. ಈ ವರ್ಷ ಡೈರೆಕ್ಟ್ ಟ್ಯಾಕ್ಸ್ ಕೋಡ್ 2025 ಅನ್ನು ಪರಿಚಯಿಸುವ ಸಾಧ್ಯತೆ ಇದೆ.

7) ನೇರ ಮತ್ತು ಪರೋಕ್ಷ ತೆರಿಗೆಗಳು ಎಂದರೇನು: ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುವುದು ತೆರಿಗೆಗಳ ಮೂಲಕ. ವಿಶೇಷವಾಗಿ ನೇರ ಮತ್ತು ಪರೋಕ್ಷ ತೆರಿಗೆಗಳು. ವ್ಯಕ್ತಿಗಳು ಮತ್ತು ನಿಗಮಗಳ ಮೇಲೆ ನೇರವಾಗಿ ವಿಧಿಸುವ ತೆರಿಗೆಗಳು ನೇರ ತೆರಿಗೆ ಎಂದು ಪರಿಗಣಿಸಲ್ಪಡುತ್ತದೆ. ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಳು ಮುಖ್ಯವಾದವು. ಇನ್ನು ಪರೋಕ್ಷ ತೆರಿಗೆ ಎಂದರೆ, ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ತೆರಿಗೆಗಳು. ಇವು ಪರೋಕ್ಷವಾಗಿ ಗ್ರಾಹಕರ ಮೇಲೆ ವಿಧಿಸುವ ತೆರಿಗೆಗಳು. ಆಮದು ಮಾಡುವ ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ಅಬಕಾರಿ ಸುಂಕ ಬೇರೆ ಇದೆ. ಅದು ಕೂಡ ಪರೋಕ್ಷ ತೆರಿಗೆ ವ್ಯಾಪ್ತಿಗೆ ಬರುತ್ತದೆ.

8) ವಿತ್ತೀಯ ಕೊರತೆ ಎಂದರೇನು?: ವಿತ್ತೀಯ ಕೊರತೆಯು ಸರ್ಕಾರವು ತನ್ನ ವೆಚ್ಚಗಳನ್ನು ಪೂರೈಸಲು ಪ್ರತಿ ವರ್ಷ ಸಾಲವನ್ನು ಪಡೆಯಬೇಕಾದ ಹಣವನ್ನು ಪ್ರತಿನಿಧಿಸುತ್ತದೆ. ಬಜೆಟ್ ಅಕೌಂಟಿಂಗ್ ಭಾಷೆಯಲ್ಲಿ, ಇದು ಸರ್ಕಾರದ ಒಟ್ಟು ಆದಾಯ ರಸೀದಿಗಳು (ತೆರಿಗೆ ಮತ್ತು ತೆರಿಗೆಯೇತರ) ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿದ ಸಾಲಗಳ ಮೇಲೆ ಗಳಿಸಿದ ವಸೂಲಾತಿಗಳು ಮತ್ತು ಬಡ್ಡಿಗಳಂತಹ ಬಂಡವಾಳ ರಸೀದಿಗಳ ನಡುವಿನ ವ್ಯತ್ಯಾಸವನ್ನು ಪ್ರತಿನಿಧಿಸುತ್ತದೆ.

9) ಸಾಮಾನ್ಯರು ಮತ್ತು ಉದ್ಯಮಗಳ ಮೇಲೆ ಪರಿಣಾಮ: ತೆರಿಗೆಗಳು, ಸಬ್ಸಿಡಿಗಳು ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿನ ಬದಲಾವಣೆಗಳ ಮೂಲಕ ಕೇಂದ್ರ ಬಜೆಟ್ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು. ಅದೇ ರೀತಿ, ಉದ್ಯಮ ವ್ಯವಹಾರಗಳಿಗೆ, ಇದು ಕಾರ್ಪೊರೇಟ್ ತೆರಿಗೆ ದರಗಳು, ಸಬ್ಸಿಡಿಗಳು, ನಿಯಂತ್ರಕ ಬದಲಾವಣೆಗಳು ಮತ್ತು ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ಉಪಕ್ರಮಗಳಂತಹ ನೀತಿಗಳ ಮೇಲೆ ಪ್ರಭಾವ ಬೀರಬಹುದು.

10) ಕೇಂದ್ರ ಬಜೆಟ್‌ 2025 ಡಿಜಿಟಲ್‌ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡುವುದೇ? ಕೇಂದ್ರ ಬಜೆಟ್‌ 2025ರಲ್ಲಿ ಡಿಜಿಟಲ್ ಇಂಡಿಯಾ ಮೂಲಸೌಕರ್ಯಕ್ಕೆ ಒತ್ತು ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಎಐ ಬಳಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹತ್ವದ ಯೋಜನೆ ಘೋಷಿಸುವ ಸಾಧ್ಯತೆ ಇದೆ. 5G ಮೂಲಸೌಕರ್ಯ, ಇ-ಆಡಳಿತ ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮಗಳನ್ನು ಬೆಂಬಲಿಸಲು ಡಿಜಿಟಲ್ ಮೂಲಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ಹಂಚಿಕೆಯನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.