ಕೇಂದ್ರ ಬಜೆಟ್ 2025: ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸುವ ಸಾಧ್ಯತೆ
New Income Tax Bill: ಕೇಂದ್ರ ಸರ್ಕಾರವು ಈ ಸಲದ ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು ಹೊಸ ಮಸೂದೆ ಆಗಿರಲಿದ್ದು, ಗಾತ್ರದಲ್ಲಿ ಈಗಿರುವ ಕಾಯ್ದೆಯ ಶೇಕಡ 60 ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

New Income Tax Bill: ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು ಪ್ರಸ್ತುತ ಐ-ಟಿ ಕಾನೂನನ್ನು ಸರಳೀಕರಿಸಲು ಪ್ರಯತ್ನಿಸುತ್ತದೆ. ಅದನ್ನು ಸರಳವಾಗಿ ಗ್ರಹಿಸಲು ಅನುಕೂಲವಾಗುವಂತೆ ಮತ್ತು ಪುಟಗಳ ಸಂಖ್ಯೆಯನ್ನು ಸುಮಾರು 60 ಪ್ರತಿಶತದಷ್ಟು ಕಡಿಮೆ ಮಾಡಲಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಜುಲೈನಲ್ಲಿ ಬಜೆಟ್ ಮಂಡಿಸಿದಾಗ ಆರು ದಶಕಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯಿದೆ 1961 ರ ಸಮಗ್ರ ಪರಿಶೀಲನೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಪ್ರಕಟಿಸಿದ್ದರು.
ಬಜೆಟ್ ಅಧಿವೇಶನದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಸಾಧ್ಯತೆ
"ಹೊಸ ಆದಾಯ ತೆರಿಗೆ ಕಾನೂನನ್ನು ಸಂಸತ್ತಿನ ಈ ಸಲದ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲಾಗುವುದು. ಇದು ಹೊಸ ಕಾನೂನಾಗಿರುತ್ತದೆ ಮತ್ತು ಅಸ್ತಿತ್ವದಲ್ಲಿರುವ ಕಾಯಿದೆಗೆ ತಿದ್ದುಪಡಿಯಲ್ಲ. ಪ್ರಸ್ತುತ, ಕರಡು ಕಾನೂನನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ ಮತ್ತು ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಸಂಸತ್ತಿನಲ್ಲಿ ಅದನ್ನು ಮಂಡಿಸುವ ಸಾಧ್ಯತೆಯಿದೆ" ಎಂದು ಮೂಲವೊಂದು ತಿಳಿಸಿರುವುದಾಗಿ ಪಿಟಿಐ ವರದಿ ಹೇಳಿದೆ.
ಆದಾಯ ತೆರಿಗೆ ಕಾಯಿದೆ 1961 ರ ಸಮಗ್ರ ಪರಿಶೀಲನೆಗಾಗಿ ಸೀತಾರಾಮನ್ ಅವರ ಬಜೆಟ್ ಘೋಷಣೆಯ ಅನುಸಾರ, ಕೇಂದ್ರೀಯ ನೇರ ತೆರಿಗೆ ಮಂಡಳಿಯು ಕಾಯಿದೆ ಪರಿಶೀಲನೆಯ ಮೇಲ್ವಿಚಾರಣೆಗೆ ಆಂತರಿಕ ಸಮಿತಿಯನ್ನು ಸ್ಥಾಪಿಸಿತು. ಕಾಯಿದೆಯನ್ನು ಸಂಕ್ಷಿಪ್ತಗೊಳಿಸಿ, ಸ್ಪಷ್ಟ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುವಂತೆ ಮರುರೂಪಿಸಲು ಪ್ರಯತ್ನಿಸಲಾಗುತ್ತಿದೆ. ಇದು ವಿವಾದಗಳು, ದಾವೆಗಳನ್ನು ಕಡಿಮೆ ಮಾಡುತ್ತದೆ.ತೆರಿಗೆದಾರರಿಗೆ ಹೆಚ್ಚಿನ ತೆರಿಗೆ ನಿಶ್ಚಿತತೆಯನ್ನು ಒದಗಿಸುತ್ತದೆ. ಅಲ್ಲದೆ, ಕಾಯಿದೆಯ ವಿವಿಧ ಅಂಶಗಳನ್ನು ಪರಿಶೀಲಿಸಲು 22 ವಿಶೇಷ ಉಪಸಮಿತಿಗಳನ್ನು ಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಮಾಹಿತಿ ಮತ್ತು ಸಲಹೆಗಳನ್ನು ಭಾಷೆಯ ಸರಳೀಕರಣ, ದಾವೆ ಕಡಿತ, ಅನುಸರಣೆ ಕಡಿತ ಮತ್ತು ಅನಗತ್ಯ/ಬಳಕೆಯಲ್ಲಿಲ್ಲದ ನಿಬಂಧನೆಗಳು ಎಂಬ ನಾಲ್ಕು ವಿಭಾಗಗಳಲ್ಲಿ ಆಹ್ವಾನಿಸಲಾಗಿತ್ತು. ಕಾಯಿದೆಯ ಪರಿಶೀಲನೆಯ ಮೇಲೆ ಆದಾಯ ತೆರಿಗೆ ಇಲಾಖೆಯು ಮಧ್ಯಸ್ಥಗಾರರಿಂದ 6,500 ಸಲಹೆಗಳನ್ನು ಸ್ವೀಕರಿಸಿದೆ.
ಆದಾಯ ತೆರಿಗೆ ಕಾಯಿದೆಯ ಗಾತ್ರ ಶೇ 60ರಷ್ಟು ಕಡಿತ
ಆದಾಯ ತೆರಿಗೆ ಕಾಯಿದೆ, 1961, ಇದು ನೇರ ತೆರಿಗೆಗಳನ್ನು ವಿಧಿಸುವುದರೊಂದಿಗೆ ವ್ಯವಹರಿಸುತ್ತದೆ - ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಭದ್ರತಾ ವಹಿವಾಟು ತೆರಿಗೆ, ಉಡುಗೊರೆ ಮತ್ತು ಸಂಪತ್ತು ತೆರಿಗೆ ಜೊತೆಗೆ -- ಪ್ರಸ್ತುತ ಸುಮಾರು 298 ವಿಭಾಗಗಳು ಮತ್ತು 23 ಅಧ್ಯಾಯಗಳನ್ನು ಹೊಂದಿದೆ. ಈ ಪೈಕಿ ಅಗತ್ಯ ಇಲ್ಲದ ನಿಬಂಧನೆಗಳು ಮತ್ತು ಅಧ್ಯಾಯಗಳನ್ನು ಕಡಿಮೆ ಮಾಡಲಾಗುತ್ತದೆ. ಅದೇ ರೀತಿ, ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ಅಳಿಸಲಾಗುತ್ತದೆ. ಶೇಕಡ 60 ಗಾತ್ರ ಇಳಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜನವರಿ 31 ರಿಂದ ಏಪ್ರಿಲ್ 4ರ ತನಕ ಕೇಂದ್ರ ಬಜೆಟ್ ಅಧಿವೇಶನ
ಮುಂಬರುವ ಕೇಂದ್ರ ಬಜೆಟ್ ಅಧಿವೇಶನವು ಜನವರಿ 31 ರಿಂದ ಏಪ್ರಿಲ್ 4ರ ತನಕ ನಡೆಯಲಿದೆ. ಮೊದಲ ಅವಧಿ ಜನವರಿ 31 ರಿಂದ ಫೆಬ್ರವರಿ 13ರ ತನಕ ನಡೆಯಲಿದೆ. ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಇದಾಗಿ, 2024-25ರ ಆರ್ಥಿಕ ಸಮೀಕ್ಷೆ ಪ್ರಕಟವಾಗಲಿದೆ. ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2025-26 ಮಂಡನೆಯಾಗಲಿದೆ. ಮಾರ್ಚ್ 10 ರಿಂದ ಏಪ್ರಿಲ್ 4 ರಂದು ಬಜೆಟ್ ಅಧಿವೇಶನದ ಎರಡನೇ ಅವಧಿ ನಡೆಯಲಿದೆ.

ವಿಭಾಗ